ಕರಾವಳಿ ಟಾಪ್ ನ್ಯೂಸ್
* ಉಡುಪಿ: ಸಾಲಕೇಳಿ 4 ಲಕ್ಷ ಕಳೆದುಕೊಂಡ ಯುವತಿ!
* ಬಂಟ್ವಾಳ: ಪೊಲೀಸರಿಂದ ತಪ್ಪಿಸಿಕೊಂಡ ಗಾಂಜಾ ಮಾರಾಟಗಾರರು
* ಪುತ್ತೂರು: ಡಿವೈಡರ್ ಏರಿ ಬಂದ ಕಾರು: ಏನಾಯ್ತು ಘಟನೆ!
* ಕಡಬ: ಅರಣ್ಯ ಪ್ರದೇಶ ಒತ್ತುವರಿ; ಅರಣ್ಯ ಅಧಿಕಾರಿಗಳಿಂದ ತೆರವು.
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಮಣಿಪಾಲದ ಬೇಬಿ ನಾಯಕ್ ಎನ್ನುವ ಮಹಿಳೆಗೆ, ಕಳೆದೆರಡು ದಿನಗಳ ಹಿಂದೆ ಕರೆಯೊಂದು ಬಂದಿದ್ದು, ಕರೆಯನ್ನು ಸ್ವೀಕರಿಸಿ ಇಟ್ಟ ಕೆಲವೇ ಹೊತ್ತಿನಲ್ಲಿ ಆ್ಯಪ್ ವೊಂದು ಇನ್ ಸ್ಟಾಲ್ ಆಗಿದೆ. ತಕ್ಷಣ ಅಪರಿಚಿತ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಎಂದು ಬಂದಿದ್ದು, ಬೇಬಿ ಅವರ ಬ್ಯಾಂಕ್ ಖಾತೆಯಿಂದ ನೋಡು ನೋಡುತ್ತಿದ್ದಂತೆ ಹಂತಹಂತವಾಗಿ 4,31,697 ರೂಪಾಯಿ ಬೇರೊಂದು ಖಾತೆಗೆ ವರ್ಗಾವಣೆಯಾಗಿದೆ. ಕರೆ ಮಾಡಿದವರು ಮೊದಲಿಗೆ ಐಸಿಐಸಿಐ ಬ್ಯಾಂಕ್ ನ ಹೆಸರಿನಲ್ಲಿ ಕ್ರೆಡಿಟ್ ಕೊಡುವುದಾಗಿ ನಂಬಿಸಿದರು, ಎಂದು ಬೇಬಿ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬಂಟ್ವಾಳ: ಪೊಲೀಸರಿಂದ ತಪ್ಪಿಸಿಕೊಂಡ ಗಾಂಜಾ ಮಾರಾಟಗಾರರು
ಬಂಟ್ವಾಳ: ಗಾಂಜಾವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭದಲ್ಲಿ, ಪೊಲೀಸರನ್ನು ಕಂಡ ಆರೋಪಿಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು, ಪರಾರಿಯಾದ ಘಟನೆ ನಂದಾವರ ರೈಲ್ವೆ ಹಳಿಯ ಬಳಿ ನಡೆದಿದೆ. ಮಂಗಳೂರು ಭಾಗದಿಂದ ಬರುತ್ತಿರುವ ಬೊಲೆರೋ ವಾಹನದಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಇಲಾಖೆಯ ಉಪ ಆಯುಕ್ತರ ನಿರ್ದೇಶನದಂತೆ, ಬಂಟ್ವಾಳದ ಅಬಕಾರಿ ಇನ್ಸ್ಪೆಕ್ಟರ್ ಆಗಿರುವ ಲಕ್ಷ್ಮಣ್ ಅವರು ಕಾರ್ಯಪ್ರವೃತ್ತರಾದರು. ಲಕ್ಷ್ಮಣ್ ಅವರು ಆ ಮಾರ್ಗದಲ್ಲಿ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ, ಗಾಂಜಾವನ್ನು ಸಾಗಿಸುತ್ತಿದ್ದ ವಾಹನವನ್ನು, ಆರೋಪಿಯಾಗಿರುವ ಚಾಲಕನು ಪೊಲೀಸರು ತಡೆದರೂ ನಿಲ್ಲಿಸದೆ, ಅಜಾಗರೂಕತೆಯಿಂದ ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಕೂಡಲೇ ಅಬಕಾರಿ ತಂಡವು ಬೊಲೆರೋವನ್ನು ಬೆನ್ನತ್ತಿದರೂ, ಆರೋಪಿಯು ಪಾಣೆಮಂಗಳೂರು ಹಳೆ ಸೇತುವೆಯ ಮಾರ್ಗವಾಗಿ ತೆರಳಿ, ನಂದಾವರ ರೈಲ್ವೆ ಹಳಿಯ ಬಳಿ ಖಾಲಿ ಜಾಗವೊಂದರಲ್ಲಿ ನಿಲ್ಲಿಸಿ, ನಾಪತ್ತೆಯಾಗಿದ್ದಾನೆ. ಆರೋಪಿಯ ವಿರುದ್ಧ ಪೊಲೀಸರು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
* ಪುತ್ತೂರು: ಡಿವೈಡರ್ ಏರಿ ಬಂದ ಕಾರು
ಪುತ್ತೂರು: ಕಾಣಿಯೂರು ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು, ಎದುರಿಗೆ ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದು, ಡಿವೈಡರ್ ಏರಿ, ದೇವರ ಕಟ್ಟೆಗೆ ಬಡಿದ ಘಟನೆ ದರ್ಬೆಯ ಅಶ್ವತ್ಥ ಕಟ್ಟೆಯ ಬಳಿ ಶುಕ್ರವಾರ ನಡೆದಿದೆ. ಇದರ ಪರಿಣಾಮವಾಗಿ ಬೈಕ್ ನಲ್ಲಿದ್ದ ಇಬ್ಬರಿಗೆ ಮತ್ತು ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
* ಕಡಬ: ಅರಣ್ಯ ಪ್ರದೇಶ ಒತ್ತುವರಿ; ಅರಣ್ಯ ಅಧಿಕಾರಿಗಳಿಂದ ತೆರುವು
ಕಡಬ: ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತದ ಆದೇಶದ ಮೇರೆಗೆ, ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶವನ್ನು ಕಡಬ ತಾಲ್ಲೂಕಿನ ಏನೆಕಲ್ಲು ಗ್ರಾಮದಲ್ಲಿ ಅತಿಕ್ರಮಿಸಿರುವುದನ್ನು ಶುಕ್ರವಾರ ತೆರುವುಗೊಳಿಸಲಾಯಿತು. ಇಲ್ಲಿನ ಕುಮಾರ್ ಎಂಬ ವ್ಯಕ್ತಿಯು 1.44 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡು ಕಟ್ಟಡ ಕೃಷಿ ಮಾಡಿರುವ ಕುರಿತು, ವ್ಯಕ್ತಿಯೊಬ್ಬರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ತನಿಖೆ ನಡೆಸಿ, ಅರಣ್ಯ ಇಲಾಖೆಗೆ ಸೂಚನೆ ನೀಡಿದರು. ಮಂಗಳೂರು ವೃತ್ತ ಸಿಸಿಎಫ್ ಅವರ ಆದೇಶದಂತೆ ಸುಳ್ಯ ಎಸಿಎಫ್, ಪಂಜಾ ವಲಯದ ಅರಣ್ಯಾಧಿಕಾರಿಗಳು ದೂರಿನ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದಂತೆ ಕುಮಾರ್ ಅವರಿಗೆ ಅರಣ್ಯ ಇಲಾಖೆಗೆ ಏಳು ದಿನಗಳ ಒಳಗಾಗಿ ಜಾಗವನ್ನು ಬಿಟ್ಟು ಕೊಡುವಂತೆ ಸೂಚಿಸಲಾಗಿತ್ತು. ಅವರು ಬಿಟ್ಟುಕೊಡದಿದ್ದಲ್ಲಿ ಪಂಜಾ ವಲಯದ ಅರಣ್ಯಾಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಿಸಿಎಫ್ ಆದೇಶ ನೀಡಿತ್ತು. ಈ ಕಾರಣದಿಂದ ಶುಕ್ರವಾರ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿದರು.







