ಕರಾವಳಿ ಟಾಪ್ 10 ನ್ಯೂಸ್
* ಬಂಟ್ವಾಳ: ಕಾಣೆಯಾದ ಆಟೋ ಚಾಲಕ
* ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
* ಉಳ್ಳಾಲ: ಮಾದಕ ವಸ್ತು ಸೇವನೆ; ಆರೋಪಿ ಪೊಲೀಸರಿಗೆ ಸೆರೆ
* ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರರ ಅಕ್ರಮ ಕೂಟ
* ಕುಂದಾಪುರ: ರಾತ್ರೋರಾತ್ರಿ ಹಣ ಲಪಟಾಯಿಸಿದ ಅನಾಮಿಕರು
* ಪುತ್ತೂರು: ಮೇಯಲು ಬಿಟ್ಟ ಎರಡು ಆಡುಗಳ ಕಳುವು
* ಕಡಬ: ಬೃಹತ್ ನೀರಿನ ಟ್ಯಾಂಕ್ ತೆರವು
* ಕಾಪು: ಅಪಾಯಕಾರಿಯಾಗಿವೆ ಹೊಂಡಮಯ ರಸ್ತೆಗಳು
* ಕಾರ್ಕಳ: ಸರ್ಕಾರಿ ಬಸ್ ಗಳಿಗಾಗಿ ಬೇಡಿಕೆ
* ಹೆಬ್ರಿ: ತಂತಿ ಬೇಲಿಗೆ ಸಿಲುಕಿದ್ದ ಚಿರತೆಯ ರಕ್ಷಣೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಹಳೆ ಸೇತುವೆಯ ಬಳಿ ಆಟೋವನ್ನು ನಿಲ್ಲಿಸಿ, ಚಾಲಕ ನಾಪತ್ತೆಯಾಗಿರುವ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ. ನಾಪತ್ತೆಯಾಗಿರುವ ಆಟೋ ಚಾಲಕ ಮಾರ್ನಬೈಲು ನಿವಾಸಿ ಪ್ರೀತಮ್ ಲೋಬೋ ಎಂಬ ಮಾಹಿತಿ ಲಭಿಸಿದೆ. ಬುಧವಾರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ಬ್ಯಾಟರಿ ಚಾಲಿತ ಆಟೋವನ್ನು ಪಾಣೆಮಂಗಳೂರಿನ ಹಳೆ ಸೇತುವೆಯ ಮೇಲೆ ನಿಲ್ಲಿಸಿ, ಕಣ್ಮರೆಯಾಗಿದ್ದಾರೆ. ಇದರಿಂದಾಗಿ ಸ್ಥಳೀಯರಿಂದ ಆಟೋ ಚಾಲಕ ನೇತ್ರಾವತಿ ನದಿಗೆ ಹಾರಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ. ಬಂಟ್ವಾಳದ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸೇತುವೆಯ ಕೆಳಗೆ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಶೋಧನಾ ಕಾರ್ಯವನ್ನು ನಡೆಸಿದ್ದಾರೆ.
* ಸುಳ್ಯ: ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಸುಳ್ಯ: ಬಸ್ ತಂಗುದಾಣದಲ್ಲಿ ಕುಳಿತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ, ಮುರುಳ್ಯ ಗ್ರಾಮದ ನಿಂತಿಕಲ್ಲು ಜಂಕ್ಷನ್ ಬಳಿ, ಕಳೆದೆರಡು ದಿನಗಳ ಹಿಂದೆ ನಡೆದಿತ್ತು. ಆರೋಪಿಯಾದ ಪಂಜಿಬಿಲದ ಗಿರಿಧರ್ ರೈ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಿರಿಧರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ.
* ಉಳ್ಳಾಲ: ಮಾದಕ ವಸ್ತು ಸೇವನೆ; ಆರೋಪಿ ಪೊಲೀಸರಿಗೆ ಸೆರೆ
ಉಳ್ಳಾಲ: ಸಾರ್ವಜನಿಕ ಸ್ಥಳದಲ್ಲಿ ಯಾವುದೋ ಮಾದಕ ವಸ್ತುವನ್ನು ಸೇವಿಸಿ, ಸಾರ್ವಜನಿಕರಿಗೆ ತೊಂದರೆಯಾಗುವಂತೆ ನಡೆದುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ, ಸೋಮೇಶ್ವರ ಗ್ರಾಮದ ದ್ವಾರಕನಗರದಲ್ಲಿ ನಡೆದಿದೆ. ಆರೋಪಿಯನ್ನು ಭರತ್ ರಾಜ್ ಎಂದು ಗುರುತಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್ಐ ಆಗಿರುವ ಸಂತೋಷ್ ಕುಮಾರ್ ಅವರು ಬಂಧಿಸಿ, ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಮಾದಕ ವಸ್ತು ಸೇವಿಸಿರುವುದು ದೃಢಪಟ್ಟಿದೆ.
* ಬೆಳ್ತಂಗಡಿ: ಸೌಜನ್ಯ ಪರ ಹೋರಾಟಗಾರರ ಅಕ್ರಮ ಕೂಟ
ಬೆಳ್ತಂಗಡಿ: ಸರ್ಕಾರದ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದನ್ನು ಪೊಲೀಸ್ ಇಲಾಖೆಯು ನಿರಾಕರಿಸಿದ್ದರೂ, ಪುನಃ ಕಳೆದೆರಡು ದಿನಗಳ ಹಿಂದೆ ಸೌಜನ್ಯ ಪರ ಹೋರಾಟಗಾರರು ಮಿನಿ ವಿಧಾನಸೌಧದ ಬಳಿ ಅಕ್ರಮ ಕೂಟ ಸೇರಿ, ಸಾರ್ವಜನಿಕರಿಗೆ ತೊಂದರೆ ನೀಡಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯಾಳ ತಾಯಿ ಕುಸುಮಾವತಿ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ, ಪ್ರದೀಪ್ ಕುಲಾಲ್, ಶ್ರೀನಿವಾಸ್ ಗೌಡ, ರವೀಂದ್ರ ಶೆಟ್ಟಿ, ಪ್ರಸನ್ನ ರವಿ, ಉದಯ ಪ್ರಸಾದ್, ವೆಂಕಪ್ಪ ಕೋಟ್ಯಾನ್, ತನುಷ್ ಶೆಟ್ಟಿ, ಮೋಹನ್ ಶೆಟ್ಟಿ, ಜಯರಾಮ್ ಗೌಡ, ಸಂತೋಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಕುಲಾಲ್, ನಾರಾವಿ ವಿಜಯ್, ರವೀಂದ್ರ ಶೆಟ್ಟಿ ಮುಡಿಪು, ಶಶಿಕಲಾ ಶೆಟ್ಟಿ, ಪೂಜಾಶ್ರೀ ಧರ್ಮಸ್ಥಳ, ಟಿಕ್ಕಿ ರವಿ ಮತ್ತು ಇತರರ ವಿರುದ್ಧ ಬೆಳ್ತಂಗಡಿ ಪೊಲೀಸರು ಸ್ವಯಂ ಪ್ರೇರಿತರಾಗಿ ಬಿಎನ್ಎಸ್ 189 (2), 19೦, 285, 57 ಕರ್ನಾಟಕ ಪೊಲೀಸ್ ಆ್ಯಕ್ಟ್ 1963 31 (೦), 103ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ಕುಂದಾಪುರ: ರಾತ್ರೋರಾತ್ರಿ ಹಣ ಲಪಟಾಯಿಸಿದ ಅನಾಮಿಕರು
ಕುಂದಾಪುರ: ಯಾವುದೇ ಮಾಹಿತಿಗಳನ್ನು ಪಡೆಯದೆ, ಮಧ್ಯರಾತ್ರಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ ಘಟನೆ ತೆಕ್ಕಟೆಯಲ್ಲಿ ನಡೆದಿದೆ. ಭಾರತ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ವಾಸವಾಗಿರುವ ರಮೇಶ್ ಮರಕಾಲ ಅವರ ಯೂನಿಯನ್ ಬ್ಯಾಂಕ್ ಖಾತೆಯಿಂದ, ಐಎಂಪಿಸಿ ಮೂಲಕ ಸುಮಾರು 90,೦೦೦ ರೂಪಾಯಿ ಹಣ ಡ್ರಾ ಮಾಡಲಾಗಿದೆ. ಯಾವುದೇ ಒಟಿಪಿಯನ್ನು ಪಡೆಯದೆ, ಯಾವುದೇ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳದೆ, ನಿದ್ದೆಯಲ್ಲಿದ್ದ ಕಾರಣ, ಮೊಬೈಲ್ ಸಹ ಬಳಸದಿದ್ದರೂ ಕೂಡ ಈ ರೀತಿ ನಡೆದಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೈಬರ್ ವಂಚನೆಯ ದೂರನ್ನು ದಾಖಲಿಸಲಾಗಿದೆ. ಕದ್ದ ಹಣವು ಕೊಲ್ಕತ್ತಾದ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವ ಮಾಹಿತಿ ತಿಳಿದುಬಂದಿದೆ.
* ಪುತ್ತೂರು: ಮೇಯಲು ಬಿಟ್ಟ ಎರಡು ಆಡುಗಳ ಕಳುವು
ಪುತ್ತೂರು: ಆಡುಗಳನ್ನು ಕದಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ, ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಬಜತ್ತೂರು ಗ್ರಾಮದ ವಳಾಲುವಿನಲ್ಲಿ ನಡೆದಿದೆ. ರಮೇಶ್ ಎನ್ನುವವರು ತಮ್ಮ ಆಡುಗಳನ್ನು ಹೆದ್ದಾರಿ ಪಕ್ಕದಲ್ಲಿದ್ದ ಬಯಲಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ, ಕಾರಿನಲ್ಲಿ ಬಂದ ಕೆಲವರು, ಎರಡು ಆಡುಗಳನ್ನು ಕದ್ದು, ಕಾರಿನಲ್ಲಿ ಹಾಕುತ್ತಿದ್ದರು. ಆಗ ಆಡುಗಳು ಚೀರಿಕೊಂಡಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ, ಅನುಮಾನಗೊಂಡು ವಿಚಾರಿಸಿದಾಗ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ. ಬಳಿಕ ಆ ವ್ಯಕ್ತಿ ಸ್ಥಳೀಯರ ಸಹಾಯದಿಂದ, ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಡಬ: ಬೃಹತ್ ನೀರಿನ ಟ್ಯಾಂಕ್ ತೆರವು
ಕಡಬ: ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ, 1996ರಲ್ಲಿ ನಿರ್ಮಾಣವಾಗಿದ್ದ, ಸುಮಾರು 50,000 ಲೀಟರ್ ನಷ್ಟು ನೀರನ್ನು ತುಂಬಿಸುವಷ್ಟು ಸಾಮರ್ಥ್ಯ ಹೊಂದಿದ್ದ ಬೃಹತ್ ನೀರಿನ ಟ್ಯಾಂಕ್ ಅನ್ನು, ಸಾರ್ವಜನಿಕರ ಒತ್ತಾಸೆಯ ಮೇರೆಗೆ ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಜನತಾ ಕಾಲೋನಿಯ ಆಸುಪಾಸಿನ ಸುಮಾರು 40ಕ್ಕೂ ಹೆಚ್ಚು ಮನೆಗಳಿಗೆ ನೀರನ್ನು ಪೂರೈಸುತ್ತಿದ್ದ ಈ ಟ್ಯಾಂಕ್ ಮಳೆಯ ತೀವ್ರತೆಯಿಂದಾಗಿ, ಮಣ್ಣು ಸಡಿಲಗೊಂಡು ಕುಸಿಯುವ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಒಂದು ವೇಳೆ ಟ್ಯಾಂಕ್ ಮೇಲಿನಿಂದ ಬಿದ್ದರೆ, ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗುವ, ಇಲ್ಲವೇ ಸುತ್ತಮುತ್ತಲು ಓಡಾಡುವ ಜನರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ, ಸ್ಥಳೀಯರು ಟ್ಯಾಂಕ್ ಅನ್ನು ತೆರವುಗೊಳಿಸುವಂತೆ ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿಗೆ ಮನವಿಯನ್ನು ಸಲ್ಲಿಸಿದ್ದರು. ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಅಪಾಯದ ಮುನ್ಸೂಚನೆಯನ್ನು ಅರಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳ ಪರಿಶೀಲನೆಯನ್ನು ನಡೆಸಿ, ಟೆಂಡರ್ ಕರೆದು, ಕಳೆದ ತಿಂಗಳು ಟ್ಯಾಂಕ್ ಅನ್ನು ತೆರವುಗೊಳಿಸುವ ಕಾರ್ಯವನ್ನು ನಿಯಮಾವಳಿಗಳ ಪ್ರಕಾರ ಪ್ರಾರಂಭಿಸಿತು. ಯಾವುದೇ ಮನೆಗಳಿಗೆ ಹಾನಿಯಾಗದ ರೀತಿಯಲ್ಲಿ, ಯಶಸ್ವಿಯಾಗಿ ಟ್ಯಾಂಕ್ ಅನ್ನು ತೆರುವುಗೊಳಿಸಿದ್ದು, ಈ ಮೂಲಕ ಸ್ಥಳೀಯರ ಆತಂಕ ನಿವಾರಣೆಯಾಗಿದೆ.
* ಕಾಪು: ಅಪಾಯಕಾರಿಯಾಗಿವೆ ಹೊಂಡಮಯ ರಸ್ತೆಗಳು
ಕಾಪು: ಅಪಾಯದ ಸ್ಥಿತಿಯಲ್ಲಿರುವ ಹೊಂಡಮಯ ರಸ್ತೆಗೆ ಡಾಂಬರೀಕರಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕುರ್ಕಾಲು ಗ್ರಾಮ ಪಂಚಾಯಿತಿಯ ಸುಭಾಷ್ ನಗರದ ಜಂಕ್ಷನ್ ನಿಂದ, ಬಿಜಂಟ್ಲದಿಂದ ಕುಂಜಾರಗಿರಿ ಪಾಜಕ ಕ್ಷೇತ್ರವನ್ನು ಸಂಪರ್ಕಿಸುವ, ಸುಮಾರು ಮೂರು ಕಿಲೋಮೀಟರ್ ನಷ್ಟು ಉದ್ದವಾಗಿರುವ ಪ್ರಮುಖ ರಸ್ತೆಯೇ ಹೊಂಡ ಗುಂಡಿಗಳಿಂದ ಕೂಡಿದ್ದು, ಮಧ್ವಾಚಾರ್ಯರ ಪಾಜಕ ಕ್ಷೇತ್ರ, ಕುಂಜಾರುಗಿರಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀಪರಶುರಾಮ ದೇವಸ್ಥಾನ, ಆಯುಷ್ ಇಲಾಖೆಯ ಆಯುಷ್ ಚಿಕಿತ್ಸಾಲಯ, ಬಿಜಂಟ್ಲ ಸರ್ಕಾರಿ ಶಾಲೆ ಮೊದಲಾದ ಕಡೆಗಳಿಗೆ ತೆರಳುವ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಗುಂಡಿಗಳಲ್ಲಿ ಮಳೆಯ ನೀರು ನಿಲ್ಲುವ ಕಾರಣ, ವಾಹನಗಳಲ್ಲಿ ಬರುವವರಿಗೆ ಕತ್ತಲಿನಲ್ಲಿ ಕಾಣಿಸದೆ ಅಪಾಯಗಳು ಎದುರಾಗುತ್ತಿವೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿರುವ ಸಾಗರ್ ಎಲ್ ಜಿ ಅವರು “ರಸ್ತೆಯಲ್ಲಿ ಇರುವ ಹೊಂಡ ಗುಂಡಿಗಳ ಸಮಸ್ಯೆ ಕುರಿತ ವಿಚಾರ ನಮ್ಮ ಗಮನಕ್ಕೆ ಬಂದಿದೆ, ಈ ಹಿನ್ನೆಲೆಯಲ್ಲಿ ಪರಿಶೀಲನೆಯನ್ನು ನಡೆಸಲಾಗುತ್ತಿದ್ದು, ಕಳೆದ ಬಾರಿ ದೇವಸ್ಥಾನದ ಬಳಿ ಡಾಂಬರೀಕರಣ ಮಾಡಲಾಗಿದೆ. ರಸ್ತೆಗಳ ಡಾಂಬರೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಮಂಜೂರುಗೊಂಡ ಬಳಿಕ, 15 ದಿನಗಳ ಒಳಗಾಗಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು”. ಎಂದು ತಿಳಿಸಿದ್ದಾರೆ.
* ಕಾರ್ಕಳ: ಸರ್ಕಾರಿ ಬಸ್ ಗಳಿಗಾಗಿ ಬೇಡಿಕೆ.
ಕಾರ್ಕಳ: ಕಳೆದ ಕೆಲವು ವರ್ಷಗಳಿಂದ ಕಾರ್ಕಳ ಮತ್ತು ಹೆಬ್ರಿ ತಾಲ್ಲೂಕುಗಳ ಗ್ರಾಮೀಣ ಪ್ರದೇಶದಲ್ಲಿ, ಸರ್ಕಾರಿ ಬಸ್ ಗಳ ಚಾಲನೆಗೆ ಸಂಬಂಧಿಸಿದಂತೆ ಬೇಡಿಕೆಗಳು ತೀವ್ರಗೊಂಡಿವೆ. ಆದರೆ ಸಾರಿಗೆ ವ್ಯವಸ್ಥೆಯ ಕುಂದು ಕೊರತೆಯ ಕುರಿತು ಚರ್ಚಿಸುವ ಮತ್ತು ಬೇಡಿಕೆಗಳನ್ನು ಅನುಷ್ಠಾನಗೊಳಿಸಲು ಸಭೆಯನ್ನು ನಡೆಸದಿರುವುದು ಪ್ರಯಾಣಿಕರ ಬಯಕೆಗೆ ತಣ್ಣೀರು ಎರಚಿದಂತಾಗಿದೆ. ಈ ಹಿಂದೆ ಸಾರ್ವಜನಿಕರು ಮನವಿ ಸಲ್ಲಿಸಿದಾಗ ಪಳ್ಳಿ – ಕಣಂಜಾರು ಸೇರಿದಂತೆ, ಕೆಲವು ಮಾರ್ಗಗಳಲ್ಲಿ ಸರ್ಕಾರಿ ಬಸ್ ಗಳ ಸಂಚಾರಕ್ಕೆ ಆಕ್ಷೇಪಣೆ ವ್ಯಕ್ತವಾಗಿತ್ತು. ಹೀಗಾಗಿ ಹೊಸ ಬಸ್ ಮಾರ್ಗಗಳ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಪ್ರಾದೇಶಿಕ ಸಾರಿಗೆ ಕಛೇರಿ ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿ, ಅದನ್ನು ಪೂರ್ಣಗೊಳಿಸಿತ್ತು. ಆದರೆ ಸಮೀಕ್ಷೆಯ ಫಲಿತಾಂಶ ಮತ್ತು ಎರಡೂ ಕಛೇರಿಗಳ ನಿರ್ಧಾರ ಏನೆಂಬುದು ಕೂಡ ಇನ್ನೂ ತಿಳಿದುಬಂದಿಲ್ಲ ಎನ್ನುವುದು ಸಾರ್ವಜನಿಕರ ಆಕ್ಷೇಪಣೆಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾರ್ಕಳದ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಅವರು “ಆರ್ ಟಿಎ ಸಭೆಯನ್ನು ನಡೆಸದ ಹಿನ್ನೆಲೆಯಲ್ಲಿ ಸಾರ್ವಜನಿಕರ ಮನವಿಯನ್ನು ಅನುಷ್ಠಾನಗೊಳಿಸಲು ವಿಳಂಬವಾಗುತ್ತಿದೆ, ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಶೀಘ್ರದಲ್ಲೇ ಆರ್ ಟಿಎ ಸಭೆಯನ್ನು ನಡೆಸಿ, ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ” ಎಂದು ತಿಳಿಸಿದ್ದಾರೆ.
* ಹೆಬ್ರಿ: ತಂತಿ ಬೇಲಿಗೆ ಸಿಲುಕಿದ ಚಿರತೆಯ ರಕ್ಷಣೆ
ಹೆಬ್ರಿ: ಆಹಾರದ ಹುಡುಕಾಟದಲ್ಲಿ ಗ್ರಾಮೀಣ ಪ್ರದೇಶಕ್ಕೆ ಆಗಮಿಸಿದ ಚಿರತೆಯು, ತಂತಿ ಬೇಲಿಗೆ ಸಿಲುಕಿದ ಘಟನೆ, ಕಳೆದೆರಡು ದಿನಗಳ ಹಿಂದೆ ಮುದ್ರಾಡಿ ಗ್ರಾಮದ ಬರ್ಸ್ ಬೆಟ್ಟು ಎನ್ನುವಲ್ಲಿ ನಡೆದಿದೆ. ಇದನ್ನು ಗಮನಿಸಿದ ಸಮೀಪದಲ್ಲಿದ್ದ ಮನೆಯವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರಿನ ವೈದ್ಯರ ತಂಡದೊಂದಿಗೆ ಆಗಮಿಸಿದ, ಕಾರ್ಕಳ ಮತ್ತು ಹೆಬ್ರಿ ವಲಯದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿರತೆಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ, ತಂತಿ ಬೇಲಿಯಿಂದ ಹೊರತಂದು, ಬಳಿಕ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ತಲುಪಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ವಲಯ ಅರಣ್ಯ ಇಲಾಖೆಯ ಅಧಿಕಾರಿಯಾದ ಶ್ರೀಧರ್ ಮತ್ತು ಸಿಬ್ಬಂದಿಗಳು, ಹೆಬ್ರಿ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಮಂಗಳೂರಿನ ವೈದ್ಯರಾದ ಮೇಘನಾ ಮತ್ತವರ ತಂಡ ಹಾಜರಿದ್ದರು.







