ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
– ನಿದ್ದೆಗಣ್ಣಲ್ಲಿ ನಡು ರಾತ್ರಿ ಮಗುವನ್ನು ಕಾಪಾಡಿತು ಶಕ್ತಿ
– ಕುಂದಾಪುರದ ದಬ್ಬೆಕಟ್ಟೆ ಎಂಬಲ್ಲಿ ನಡೆದ ಘಟನೆ
NAMMUR EXPRESS NEWS
ಕುಂದಾಪುರ: ನಡು ರಾತ್ರಿ 3 ಗಂಟೆಗೆ ನಿದ್ದೆಗಣ್ಣಲ್ಲೇ ಮನೆಯಿಂದ ಹೊರಬಿದ್ದ ಮಗುವೊಂದು ರಸ್ತೆಗೆ ಬಂದಿದ್ದು, ಅದನ್ನು ಕೊರಗಜ್ಜನೇ ಅಪಾಯದಿಂದ ಪಾರು ಮಾಡಿದ್ದಾನೆ ಎಂದು ನಂಬಿರುವ ಘಟನೆ ಈಗ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಕೆದೂರಿನ ದಬ್ಬೆಕಟ್ಟೆ ಎಂಬಲ್ಲಿ ಇರುವ ಕಾರಣಿಕದ ಕೊರಗಜ್ಜ ಕ್ಷೇತ್ರದ ಸಮೀಪ ಈ ಪವಾಡ ನಡೆದಿದೆ. ಮಗು ಮನೆಯಿಂದ ಸುಮಾರು 3 ಕಿಮಿ ನಡೆದು ಬಳಿಕ ಕೊರಗಜ್ಜ ದೇವಾಲಯದ ಬಳಿ ನಿಂತಿದ್ದು ಚಾಲಕನೊಬ್ಬ ಬಾಲಕಿಯನ್ನು ರಕ್ಷಿಸಿದ್ದಾನೆ.
ನಡೆದಿದ್ದೇನು..?
ಮನೆಯೊಂದರ ಐದು ವರ್ಷದ ಪುಟ್ಟ ಹೆಣ್ಣುಮಗು ರಾತ್ರಿ ಮೂರು ಗಂಟೆಯ ಹೊತ್ತಿಗೆ ಮನೆಯಿಂದ ಹೊರಬಂದು ರಾತ್ರಿ ನಿದ್ದೆಗಣ್ಣಿನಲ್ಲಿ ನಡೆದು ಕೊರಗಜ್ಜ ದೇಗುಲದ ಬಳಿ ಸಾಗಿದೆ. ಈ ಮಗು ಮನೆಯಿಂದ ಅದು ಹೇಗೆ ಹೊರಬಿತ್ತೋ ಗೊತ್ತಿಲ್ಲ. ಅಪ್ಪ ಅಮ್ಮನಿಗೆ ಗೊತ್ತಾಗದಂತೆ, ಯಾರಿಗೂ ಸಣ್ಣ ಸದ್ದೂ ಆಗದಂತೆ, ಹಾಸಿಗೆಯಲ್ಲಿ ಮಲಗಿದ್ದ ಆ ಮಗು ಎದ್ದು ನಡೆಯುತ್ತಾ ಹೊರಟಿತ್ತು. ಎಲ್ಲಿಯೂ ಯಾರಿಗೂ ಗೊತ್ತಾಗಲಿಲ್ಲ. ಮನೆಯ ಅಂಗಳ ದಾಟಿದ ಮಗು ಅಲ್ಲೇ ಒಳರಸ್ತೆಯಲ್ಲಿ ನಡೆದುಕೊಂಡು ಹೋಗಿ ವಾಹನಗಳು ಸಂಚರಿಸುವ ರಸ್ತೆಯ ಬದಿಗೆ ಬಂದಿದೆ. ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಕೊರಗಜ್ಜನ ಗುಡಿ ಇದೆ. ಆ ಗುಡಿಗೆ ಹೋಗುವ ದಾರಿ ತೋರಿಸುವ ನಾಮ ಫಲಕದ ಪಕ್ಕದಲ್ಲಿ ಬಂದು ಈ ಮಗು ನಿಂತಿತ್ತು. ಅಚ್ಚರಿ ಎಂದರೆ ಮನೆಯಿಂದ ಆ ಜಾಗಕ್ಕೆ ಮೂರು ಕಿ.ಮೀ ಅಂತರವಿದೆ. ಆ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವಿಶ್ವ ಎಂಬವರಿಗೆ ಮಗು ಕಂಡಿತು.
ಅವರು ಕಾರಿನ ವೇಗವನ್ನು ಸ್ವಲ್ಪ ತಗ್ಗಿಸಿ ಸ್ವಲ್ಪ ಮುಂದೆ ಹೋಗಿ ನಿಂತರು. ಮಗುವಿಗೆ ಬಟ್ಟೆ ಕೂಡಾ ಹಾಕಿರಲಿಲ್ಲ. ಬದಲಿಗೆ ಎರಡೂ ಕೈಗಳನ್ನು ಮೇಲೆತ್ತಿ ಜೋರಾಗಿ ಅಳುತ್ತಿತ್ತು. ಹಾಗಂತ ಒಮ್ಮೆಗೇ ಕಾರಿನಿಂದ ಇಳಿದು ಬಂದು ನೋಡುವಷ್ಟು ಧೈರ್ಯ ವಿಶ್ವ ಅವರಿಗೂ ಬರಲಿಲ್ಲ. ಯಾಕೆಂದರೆ ಈ ಭಾಗದಲ್ಲಿ ರಾತ್ರಿಯ ಹೊತ್ತು ಯಾವ್ಯಾವುದೋ ದುಷ್ಟ ಶಕ್ತಿಗಳು ಬೇರೆ ಬೇರೆ ರೂಪದಲ್ಲಿ ಕಾಣಿಸಿಕೊಂಡು ಹೆದರಿಸುತ್ತವೆ ಎಂಬ ನಂಬಿಕೆ ಇದೆ. ಅದಕ್ಕಿಂತಲೂ ಹೆಚ್ಚಾಗಿ ಈ ರೀತಿಯ ದಾರಿಯ ಬಳಿಯಲ್ಲಿ ಮಗುವನ್ನು ಬಿಟ್ಟು ಅದನ್ನು ವಿಚಾರಿಸಲು ಹೋದಾಗ ಹೊಡೆದು ಕೊಲ್ಲುವ, ದರೋಡೆ ಮಾಡುವ, ಕಾರು ಅಪಹರಿಸುವ ಘಟನೆಗಳೂ ನಡೆಯಬಹುದು ಎಂಬ ಆತಂಕ ಸಹಜವಾಗಿಯೇ ಇರುತ್ತದೆ. ಸಾಲದ್ದಕ್ಕೆ ದಬ್ಬೆಕಟ್ಟೆ ಎನ್ನುವುದು ಮನೆಗಳಿದ್ದರೂ ಒಂದು ರೀತಿಯ ಕಾಡು ಪ್ರದೇಶ.
ವಿಶ್ವ ಅವರು ಈ ಎಲ್ಲ ವಿಚಾರಗಳನ್ನು ಗಮನಿಸಿ ಎರಡು ಮನಸ್ಸು ಮಾಡಿದರಾದರೂ ತಕ್ಷಣವೇ ಅಲ್ಲೇ ಇರುವ ಗುಡಿಯ ಕೊರಗಜ್ಜನನ್ನು ನೆನಪಿಸಿಕೊಂಡರು. ನಂಬಿದವರಿಗೆ ಅಭಯ ನೀಡುವ, ಕಷ್ಟದಲ್ಲಿರುವವರ ರಕ್ಷಣೆ ಮಾಡುವ ಕೊರಗಜ್ಜನ ಮೇಲೆ ನಂಬಿಕೆ ಇಟ್ಟು ಮಗುವಿನ ಬಳಿಗೆ ಹೋಗೇ ಬಿಡುವುದು ಎಂದು ತೀರ್ಮಾನಿಸಿದರು. ಹಾಗೆ ಕಾರಿನಿಂದ ಇಳಿದು ನಾಮಫಲಕದ ಬಳಿಗೆ ಹೋದರು. ಆಗ ಮಗು ಇನ್ನಷ್ಟು ಜೋರಾಗಿ ಅಳಲು ಶುರು ಮಾಡಿತು. ವಿಶ್ವ ಅವರು ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಿ ಕೇಳಿದಾಗ ತನಗೇ ಗೊತ್ತಿಲ್ಲದಂತೆ ನಡೆದುಕೊಂಡು ಬಂದಿದ್ದಾಗಿ ಹೇಳಿತು.
ಆಗ ವಿಶ್ವ ಅವರು ಅಲ್ಲೇ ಇದ್ದ ಮನೆಯ ಕಡೆಗೆ ಹೋಗಿ ಅಲ್ಲಿದ್ದವರನ್ನು ಎಬ್ಬಿಸಿ ವಿಷಯ ತಿಳಿಸಿದರು. ಆಗ ಅವರು ಬಂದು ಮಗು ಯಾರದ್ದು ಎಂದು ಗುರುತಿಸಿದರು. ಆ ಜಾಗದಿಂದ ಮಗುವಿನ ಮನೆಗೆ ಮೂರು ಕಿ.ಮೀ. ದೂರವಿತ್ತು. ಕೊನೆಗೆ ಮಗುವಿನ ಮನೆಗೆ ಹೋಗಿ ವಿಷಯ ತಿಳಿಸಲಾಯಿತು. ಅವರು ಬಂದು ಕಣ್ಣೀರು ಹಾಕುತ್ತಲೇ ದೇವರಂತೆ ಬಂದು ಕಾಪಾಡಿದಿರಿ ಮಗುವನ್ನು ಎಂದು ಹೇಳಿದರು. ಆಗ ವಿಶ್ವ ಅವರು ನಾನು ಕೂಡಾ ನಿಲ್ಲಿಸುತ್ತಿರಲಿಲ್ಲ. ನಂಗೂ ಭಯವಾಗಿತ್ತು. ಆದರೆ, ಕೊರಗಜ್ಜನ ಮೇಲೆ ನಂಬಿಕೆ ಇಟ್ಟು ಕಾರಿನಿಂದ ಇಳಿದೆ. ಕೊರಗಜ್ಜನೇ ಈ ಮಗುವಿಗೆ ದಾರಿ ತೋರಿಸಿದ್ದು, ನಾನಲ್ಲ ಎಂದು ಹೇಳಿದರು. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಮತ್ತೆ ಕೊರಗಜ್ಜನ ಪವಾಡ ಎಲ್ಲರಲ್ಲೂ ಮತ್ತಷ್ಟು ನಂಬಿಕೆ ಹೆಚ್ಚಿಸಿದೆ.
ಇದನ್ನೂ ಓದಿ : ಛೇ.. ಎಂಥಾ ನೀಚ ಕೃತ್ಯ…ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿ ಗ್ಯಾಂಗ್ ರೇಪ್!
HOW TO APPLY : NEET-UG COUNSELLING 2023