ಉಡುಪಿ ಲಕ್ಷದೀಪೋತ್ಸವ ಸಂಭ್ರಮ ಶುರು!
* ನ. 16ರ ವರೆಗೆ ನಿತ್ಯ ಲಕ್ಷದೀಪೋತ್ಸವ
* ನ.13ರಂದು ಮಹಾಪೂಜೆ ಬಳಿಕ ತುಳಸಿ ಪೂಜೆ
* ರಾತ್ರಿ ಆಕರ್ಷಕ ತೆಪ್ಪೋತ್ಸವ
NAMMUR EXPRESS NEWS
ಉಡುಪಿ: ಶ್ರೀಕೃಷ್ಣಮಠದಲ್ಲಿ ನ. 13ರಂದು ಉತ್ಥಾನ ದ್ವಾದಶಿಯಂದು ಬೆಳಗ್ಗೆ ತುಳಸೀಪೂಜೆ, ಸಂಜೆ ಕ್ಷೀರಾಬ್ಧಿ ಪೂಜೆ, ತೆಪ್ಪೋತ್ಸವ ಸಹಿತ ಲಕ್ಷದೀಪೋತ್ಸವ, ವಾರ್ಷಿಕ ರಥೋತ್ಸವ ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಆರಂಭಗೊಂಡಿತು. ಸಂಜೆ ಮಧ್ವ ಸರೋವರದ ಮಧ್ಯದ ಮಂಟಪದಲ್ಲಿ ಕ್ಷೀರಾಬ್ಧಿ ಅರ್ಘ್ಯವನ್ನು ನೀಡಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಪೂಜೆಯನ್ನು ನೆರವೇರಿಸಿದರು. ಅಪರಾಹ್ನ ರಥಬೀದಿಯಲ್ಲಿ ಅಳವಡಿಸಿದ ದಳಿಗಳ ಮೇಲೆ ಗೋಮಯವನ್ನು ಇಟ್ಟು ಅದರ ಮೇಲೆ ಹಣತೆ ಇಡುವ ಮುಹೂರ್ತವನ್ನು ಸ್ವಾಮೀಜಿಯವರು ನಡೆಸಿದರು. ರಾತ್ರಿ ಆಕರ್ಷಕ ತೆಪ್ಪೋತ್ಸವ ನಡೆಯಿತು. ತೆಪ್ಪವನ್ನು ಪಾರ್ಥಸಾರಥಿ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷವಾಗಿತ್ತು. ಇದೇ ವೇಳೆ ರಥಬೀದಿ, ಮಧ್ವಸರೋವರದಲ್ಲಿ ಸಾವಿರಾರು ಹಣತೆಗಳ ದೀಪಗಳು ಕಂಗೊಳಿಸಿದವು. ತೆಪ್ಪೋತ್ಸವದ ಬಳಿಕ ರಥೋತ್ಸವ ನಡೆಯಿತು. ಚಾತುರ್ಮಾಸ್ಯವ್ರತ ಮುಗಿದ ಬಳಿಕ ಇದೇ ಮೊದಲ ಉತ್ಸವವಾಗಿದ್ದು, ಉತ್ಸವ ಮೂರ್ತಿಗಳನ್ನು ರಥದಲ್ಲಿರಿಸಿ ರಥೋತ್ಸವ ನಡೆಯಿತು.
ಇನ್ನು 8 ತಿಂಗಳ ಕಾಲ ಶ್ರೀಕೃಷ್ಣಮುಖ್ಯಪ್ರಾಣ ದೇವರಿಗೆ ಉತ್ಸವಗಳು ನಡೆಯಲಿವೆ. ರಥೋತ್ಸವ ನಡೆಯುವಾಗ ರಥಬೀದಿಯಲ್ಲಿ ತುಳಸೀ ಸಂಕೀರ್ತನೆ ತಂಡದಿಂದ ತುಳಸೀಕಟ್ಟೆಯ ಮಾದರಿಯನ್ನು ಇರಿಸಿಕೊಂಡು ಭಗವನ್ನಾಮ ಸಂಕೀರ್ತನೆ ನಡೆಯಿತು. ಇದೇ ಸಂದರ್ಭ ಒಂದು ತಿಂಗಳಿಂದ ನಡೆಯುತ್ತಿದ್ದ ಪಶ್ಚಿಮಜಾಗರ ಪೂಜೆ, ನಾಲ್ಕು ತಿಂಗಳಿಂದ ನಡೆಯುತ್ತಿದ್ದ ಚಾತುರ್ಮಾಸ್ಯವ್ರತದ ವಿಶೇಷ ಆಹಾರಕ್ರಮ ಮುಕ್ತಾಯಗೊಂಡು ಸಹಜ ಆಹಾರಕ್ರಮ ಆರಂಭಗೊಂಡಿತು.
ಬೆಳಗ್ಗೆ ಪುತ್ತಿಗೆ ಸ್ವಾಮೀಜಿಯವರು ಮಹಾಪೂಜೆ ಬಳಿಕ ತುಳಸಿ ಪೂಜೆಯನ್ನು ನಡೆಸಿದರು. ನ. 16ರ ವರೆಗೆ ನಿತ್ಯ ಲಕ್ಷದೀಪೋತ್ಸವ ನಡೆಯಲಿದೆ. ಏಕಾದಶಿ ಪ್ರಯುಕ್ತ ಮಂಗಳವಾರ ರಾತ್ರಿ ಸುಧೀಂದ್ರ ಆಚಾರ್ಯ ಹೆಜಮಾಡಿಯವರಿಂದ ಜಾಗರಣ ಉಪನ್ಯಾಸ ನಡೆಯಿತು.