ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವರ್ಡ್ಪ್ರೆಸ್ ಕ್ಯಾಂಪಸ್ ಕನೆಕ್ಟ್
– 120 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ
– 2 ದಿನಗಳ ತರಬೇತಿ ಶಿಬಿರ: ವಿದ್ಯಾರ್ಥಿಗಳಿಗೆ ವೆಬ್ ಜ್ಞಾನ
NAMMUR EXPRESS NEWS
ಕುಂದಾಪುರ : ವರ್ಡ್ಪ್ರೆಸ್ ಉಡುಪಿ ಸಮುದಾಯದ ಸಹಯೋಗದಲ್ಲಿ, ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು, ಕುಂದಾಪುರದಲ್ಲಿ ಅಕ್ಟೋಬರ್ 3 ಮತ್ತು 4ರಂದು ಎರಡು ದಿನಗಳ “ವರ್ಡ್ಪ್ರೆಸ್ ಕ್ಯಾಂಪಸ್ ಕನೆಕ್ಟ್” ಶಿಬಿರವು ಯಶಸ್ವಿಯಾಗಿ ನೆರವೇರಿತು. ಕಂಪ್ಯೂಟರ್ ಸೈನ್ಸ್ ವಿಭಾಗದ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದ ಈ ಶಿಬಿರದಲ್ಲಿ, ವರ್ಡ್ಪ್ರೆಸ್ ಬಳಸಿ ವೆಬ್ಸೈಟ್ ನಿರ್ಮಾಣದ ಪ್ರಾಯೋಗಿಕ ತರಬೇತಿಯನ್ನು ನೀಡಲಾಯಿತು.
ಪ್ರತಿದಿನ 60 ವಿದ್ಯಾರ್ಥಿಗಳಂತೆ ವಿಭಾಗಿಸಲಾಗಿದ್ದ ಈ ತರಬೇತಿಯಲ್ಲಿ, ವಿನ್ಯಾಸದ ಮೂಲ ಅಂಶಗಳಿಂದ ಹಿಡಿದು ಪ್ರಕಟಣೆ ಹಂತದವರೆಗೆ — ವರ್ಡ್ಪ್ರೆಸ್ನ ಸಂಪೂರ್ಣ ಕಾರ್ಯವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಶುಭಕರಾಚಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳು ಮುಕ್ತ ತಂತ್ರಜ್ಞಾನಗಳ ಸಹಾಯದಿಂದ ಹೊಸ ಸೃಜನಾತ್ಮಕ ಪ್ರಯತ್ನಗಳಿಗೆ ಕೈಹಾಕಬೇಕು ಎಂದು ಪ್ರೇರೇಪಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಗಣೇಶ್ ಕೆ. ಅವರ ಮಾರ್ಗದರ್ಶನದಲ್ಲಿ ವಿಜಯಲಕ್ಷ್ಮಿ ಎನ್. ಶೆಟ್ಟಿ, ಶ್ರೀ ರಾಮಚಂದ್ರ ಆಚಾರಿ, ಹಾಗೂ ಶ್ರೀಮತಿ ಚೇತನಾ (ಕಾರ್ಯಕ್ರಮ ಸಂಯೋಜಕಿ) ಅವರು ಶ್ರಮಿಸಿದರು. ವರ್ಡ್ಪ್ರೆಸ್ ಉಡುಪಿ ತಂಡದಿಂದ ಶಶಿಕಾಂತ್ ಶೆಟ್ಟಿ (ಸ್ಥಾಪಕ, SabWeb), ಕೆ. ಕೀರ್ತಿ ಪ್ರಭು (ಸೀನಿಯರ್ ಟೆಸ್ಟರ್, QualityKiosk, ಮುಂಬೈ), ಹಾಗೂ ವಿ. ಗೌತಮ್ ನಾವಡ (ಸ್ಥಾಪಕ ಮತ್ತು ನಿರ್ದೇಶಕ, ForthFocus) ಶಿಬಿರವನ್ನು ಮುನ್ನಡೆಸಿದರು. ಕಾರ್ಯಕ್ರಮದ ನಿರ್ವಹಣೆಗೆ ಓಂಕಾರ ಉಡುಪ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, Kotisoft Solutions, ಕೋಟೇಶ್ವರ), ಮಂಜುನಾಥ ಎಂ. ಎಂ. (ಸ್ಥಾಪಕ, Yuktha Digitals, ತೀರ್ಥಹಳ್ಳಿ), ಹಾಗೂ ಚಂದನಾ ಜಿ. ಎಂ. (ಕಾರ್ಯನಿರ್ವಹಣಾ ನಿರ್ವಾಹಕಿ, ForthFocus) ಅವರು ಸಹಕಾರ ನೀಡಿದರು.
ವಿದ್ಯಾರ್ಥಿಗಳ ಉತ್ಸಾಹ ಖುಷಿಕೊಟ್ಟಿದೆ..
“ಒಮ್ಮೆ ನಾವು ಕಲಿತಿದ್ದ ತರಗತಿಗಳಲ್ಲೇ ಮತ್ತೆ ನಿಂತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಅವಕಾಶ ಸಿಕ್ಕಾಗ ಅದು ಮನಸ್ಸಿಗೆ ಹತ್ತಿರವಾದ ಕ್ಷಣವಾಗಿತ್ತು. ವಿದ್ಯಾರ್ಥಿಗಳ ಉತ್ಸಾಹ ಹಾಗೂ ಕಲಿಯುವ ಹಂಬಲ ನೋಡಿ ಕಾಲೇಜು ದಿನಗಳು ಮತ್ತೆ ನೆನಪಾದವು,”
– ಕೆ. ಕೀರ್ತಿ ಪ್ರಭು, ಸೀನಿಯರ್ ಟೆಸ್ಟರ್, QualityKiosk, ಮುಂಬೈ .
“ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಅರಿವು ಜೊತೆಗೆ ಸೃಜನಾತ್ಮಕತೆ ಕೂಡ ಕಾಣಿಸಿತು. ಈ ಶಿಬಿರವು ಕೇವಲ ತಾಂತ್ರಿಕ ತರಬೇತಿ ಅಲ್ಲ — ಹೊಸ ಆಲೋಚನೆಗಳಿಗೆ ಬಾಗಿಲು ತೆರೆಯುವ ಪ್ರಯತ್ನ,
– ಮಂಜುನಾಥ ಎಂ. ಎಂ., ಸ್ಥಾಪಕ, Yuktha Digitals, ತೀರ್ಥಹಳ್ಳಿ
120 ಹೊಸ ವೆಬ್ ನಿರ್ಮಾಣದ ಸಾಧನೆ
ಎರಡು ದಿನಗಳ ತರಬೇತಿ ಶಿಬಿರದ ಅಂತ್ಯದಲ್ಲಿ ವಿದ್ಯಾರ್ಥಿಗಳಿಂದ ನಿರ್ಮಿಸಲಾದ 120 ಹೊಸ ವೆಬ್ಸೈಟ್ಗಳು ಆನ್ಲೈನ್ನಲ್ಲಿ ಪ್ರಕಟಗೊಂಡವು. ಇದು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಮುಕ್ತ ಕಲಿಕೆಯ ಮನೋಭಾವಕ್ಕೆ ಜೀವಂತ ಸಾಕ್ಷಿಯಾಯಿತು. ವರ್ಡ್ಪ್ರೆಸ್ ಉಡುಪಿ ತಂಡವು ಭಂಡಾರ್ಕಾರ್ಸ್ ಕಾಲೇಜು ಆಡಳಿತ ಹಾಗೂ ಅಧ್ಯಾಪಕರಿಗೆ ಆತಿಥ್ಯ ಮತ್ತು ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದ ತಿಳಿಸಿದೆ








