ಇರಾನ್ನಲ್ಲಿ ಕೊಪ್ಪದ ಗಡಿಕಲ್ ಸಮೀಪದ ಯುವಕ ಪತ್ತೆ!
– ಡಾ.ಆರತಿ ಕೃಷ್ಣ, ರಾಮಸ್ವಾಮಿ, ಕೋಟಾ ಅವರ ಸಹಾಯ ಹಸ್ತ
– ದುಬೈನಲ್ಲಿ ಸಿಲುಕಿಕೊಂಡಿರುವ ತೀರ್ಥಹಳ್ಳಿ ವರ್ತಕರ ಸಂಘದ ಅಧ್ಯಕ್ಷ ಚೈತನ್ಯಜವಳಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಇರಾನ್ ದೇಶದ ಮರ್ಚಂಟ್ ನೇವಿಯಲ್ಲಿ ತರಬೇತಿಗೆ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ ಯುವಕ ನಿಶ್ಚಿತ್ ಸುರಕ್ಷಿತವಾಗಿದ್ದಾನೆ ಎಂದು ತಿಳಿದುಬಂದಿದೆ. ಇರಾನ್ ಯುದ್ಧ ಆರಂಭಗೊಂಡ ಬಳಿಕ ಆತ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರು ಆತಂಕಕ್ಕೊಳಗಾಗಿ ಸರಕಾರದ ನೆರವು ಕೋರಿದ್ದರು.
ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿಳಿದು ವಿದ್ಯಾರ್ಥಿಯ ಪತ್ತೆಗೆ ಕಾರ್ಯ ಪ್ರವೃತ್ತರಾದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಿದ್ದು, ವಿದ್ಯಾರ್ಥಿ ಸುರಕ್ಷಿತವಾಗಿರುವುದನ್ನು ಖಚಿತ ಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ನಾಯಕರಾದ ರಾಮಸ್ವಾಮಿ ಅವರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಮುಕಾಂತರ ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದರು. ಇದೀಗ ಕುಟುಂಬ ನಿರಾಳವಾಗಿದೆ.
ಸಂಪರ್ಕಕ್ಕೆ ಸಿಗದೆ ನಾಪತ್ತೆ: ಕುಟುಂಬದ ಕಣ್ಣೀರು!
ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿಕಲ್ ಸಮೀಪದ ಗಣಪತಿಕಟ್ಟೆಯ ನಿವಾಸಿ ಮಹೇಶ್ ಎಂಬುವರ ಪುತ್ರ ನಿಶ್ಚಿತ್, ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದನು. 8 ದಿನಗಳ ಹಿಂದೆ ತಂದೆಗೆ ಫೋನ್ ಮಾಡಿದ್ದ ನಿಶ್ಚಿತ್ ಬಳಿಕ ಸಂಪರ್ಕ ಸಿಗಲಿಲ್ಲ. ಕುವೈತ್ ಹೋಗುವುದಾಗಿ ಹೇಳಿದ್ದ ನಿಶ್ಚಿತ್ ಇದೀಗ ಕಣ್ಮರೆಯಾಗಿದ್ದು, ಮಗನ ಸಂಪರ್ಕ ಸಿಗದೆ ಪೋಷಕರು ಕಂಗಾಲಾಗಿದ್ದರು.ವಿಷಯ ತಿಳಿದು ಇಂದು ನಿಶ್ಚಿತ್ ಮನೆಗೆ ತೆರಳಿದ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾದ ಎಸ್ ಎನ್ ರಾಮಸ್ವಾಮಿ ಶೆಟ್ಟಿಗದ್ದೆಯವರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಿಷಯ ತಿಳಿಸಿದರು.
ಅವರು ಇಂಡಿಯನ್ ಎಂಬೆಸಿಗೆ ಸಂಪರ್ಕ ಮಾಡಿ ನಿಶ್ಚಿತ್ ಬಗ್ಗೆ ವಿಚಾರಿಸಿದಾಗ ನಿಶ್ಚಿತ್ ಇರಾನ್ ಬಿಟ್ಟು ನಾಲ್ಕು ದಿನ ಆಗಿದೆ ಕುವೈತ್ ಗೆ ಹೋಗುವ ಹಡಗಿನಲ್ಲಿ ಹೋಗ್ತಾ ಇದ್ದಾನೆ ಸಮುದ್ರ ಮಧ್ಯ ಹಡಗು ನಿಂತಿರುವುದರಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ ಎಂದರು. ಈ ವಿಷಯದಲ್ಲಿ ಆಸಕ್ತಿವಹಿಸಿ ಕಾರ್ಯನಿರ್ವಹಿಸಿದ ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ರಾಮಸ್ವಾಮಿ ಶೆಟ್ಟಿಗದ್ದೆಯವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಯುದ್ಧಪೀಡಿತ ದುಬೈನಲ್ಲಿ ಸಿಲುಕಿಕೊಂಡಿರುವ ತೀರ್ಥಹಳ್ಳಿ ವರ್ತಕರ ಸಂಘದ ಅಧ್ಯಕ್ಷ ಚೈತನ್ಯಜವಳಿ..
ತೀರ್ಥಹಳ್ಳಿಯ ವರ್ತಕರ ಸಂಘದ ಅಧ್ಯಕ್ಷರಾಗಿರುವ ಚೈತನ್ಯಜವಳಿ 10 ದಿನಗಳ ಹಿಂದೆ ಕುಟುಂಬ ಸಮೇತರಾಗಿ ದುಬೈ ಪ್ರವಾಸ ತೆರಳಿದ್ದರು. ಅವರು ಮೊನ್ನೆ ಹಿಂದಿರುಗಬೇಕಾಗಿತ್ತು. ಅಮೇರಿಕಾ ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ದುಬೈ ದೇಶವನ್ನು ಆವರಿಸಿರುವ ಹಿನ್ನೆಲೆಯಲ್ಲಿ ದುಬೈನಿಂದ ಭಾರತಕ್ಕೆ ಬರುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಾಸವಾಗಿ ಚೈತನ್ಯ ಜವಳಿ, ಕುಟುಂಬ ಹಿಂದಿರುಗಬೇಕಾಗಿದ್ದ ವಿಮಾನ ರದ್ದಾಗಿ ಅವರು ಅಲ್ಲಿಯೇ ಉಳಿಯಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
ಮಾರ್ಚ್ 8ನೇ ತಾರೀಕಿನಂದು ಅವರ ಕುಟುಂಬಕ್ಕೆ ಹಿಂದಿರುಗುವ ವಿಮಾನ ಲಭ್ಯವಾಗುವ ನಿರೀಕ್ಷೆ ಇದೆ. ಚೈತನ್ಯ ಜವಳಿ ಕುಟುಂಬ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿದ್ದು ಕ್ಷೇಮವಾಗಿದ್ದಾರೆ. ದುಬೈನಲ್ಲಿ ಆಹಾರ ಪದಾರ್ಥ ಸೇರಿ ಎಲ್ಲಾ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿದ್ದು ಈ ರೀತಿ ಅಲ್ಲಿ ಸಿಲುಕಿಕೊಂಡಿರುವ ಅನೇಕ ಕುಟುಂಬಗಳು ತೀವ್ರ ರೀತಿಯ ಸಂಕಷ್ಟಕ್ಕೆ ಸಿಲುಕಿವೆ… ದುಬೈನಲ್ಲಿ ವಾಸವಾಗಿರುವ ಜವಳಿ ಕುಟುಂಬದ ಅಚಿಂತ್ಯ ಜವಳಿ ಪ್ರತಿನಿತ್ಯ ಮಿಸೈಲ್ ಶೆಲ್ ಗಳು ದುಬೈನಲ್ಲಿ ಬಂದು ಬೀಳುತ್ತಿವೆ. ಅವುಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ನಾವು ರಸ್ತೆ ಬದಿಯ ಕಟ್ಟಡಗಳಲ್ಲಿ ಮಲಗುತ್ತಿದ್ದೇವೆ ಮಿಸೈಲ್ ಕಂಡು ಬಂದಾಗ ರಸ್ತೆಗೆ ಬಂದು ನಿಲ್ಲುತ್ತಿದ್ದೇವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ .








