ಕರಾವಳಿ ಟಾಪ್ ನ್ಯೂಸ್
• ಬಂಟ್ವಾಳ:ಅಪರಿಚಿತ ವ್ಯಕ್ತಿಯಿಂದ ಅಪ್ರಾಪ್ತ ವಯಸ್ಕನ ಮೇಲೆ ಹಲ್ಲೆ
• ಪುತ್ತೂರು: ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದ ಮಾರುತಿ ಓಮ್ನಿ
• ಸುಳ್ಯ: ಬಾಲಕಿ ನಂಬಿಸಿ ಗರ್ಭವತಿಯನ್ನಾಗಿಸಿದ ಆರೋಪಿ ಬಿಡುಗಡೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬಂಟ್ವಾಳ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ನಡೆದಿದೆ. ವಾಮದಪದವಿನಲ್ಲಿರುವ ಹೊಟೇಲ್ ವೊಂದರಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯು ತನ್ನ ಸ್ನೇಹಿತರೊಂದಿಗೆ ತಿಂಡಿ ತಿನ್ನುತ್ತಿದ್ದ ಸಮಯದಲ್ಲಿ, ಪಕ್ಕದ ಮೇಜಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ವಿನಾಕಾರಣ ಆತನಿಗೆ ಅವಾಚ್ಯ ಶಬ್ದಗಳಿಂದ ಬೈದು, ಗಲಾಟೆ ಪ್ರಾರಂಭಿಸಿ, ಬಳಿಕ ಹಲ್ಲೆ ಕೂಡ ನಡೆಸಿದ್ದಾನೆ.ಈ ವಿಚಾರವನ್ನು ಹಲ್ಲೆಗೊಳಗಾದ ವಿದ್ಯಾರ್ಥಿಯ ಸಹೋದರನಾದ ಶರತ್ ಅವರಿಗೆ, ಅವರ ಸ್ನೇಹಿತರು ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಶರತ್ ಅವರು ಸ್ಥಳಕ್ಕೆ ಧಾವಿಸಿದ್ದು, ಅಷ್ಟರೊಳಗೆ ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶರತ್ ಅವರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
• ಪುತ್ತೂರು: ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದ ಮಾರುತಿ ಓಮ್ನಿ
ಪುತ್ತೂರು: ಮಾರುತಿ ಓಮ್ನಿಯೊಂದು ನಿಲ್ಲಿಸಿದ್ದ ಕಾರಿಗೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಪರಿಣಾಮವಾಗಿ ಕಾರು ಚಾಲಕ ಗಾಯಗೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಗಾಯಗೊಂಡ ಸಲಿಮುದ್ದೀನ್ “ಕಳೆದೆರಡು ದಿನಗಳ ಹಿಂದೆ ಮಾರುತಿ ಓಮ್ನಿಯನ್ನು ಚಾಲಕರಾದ ಶ್ರೀನಿವಾಸರಾವ್ ಅವರು ಶಾಂತಿಗೋಡು ಕಡೆಯಿಂದ ಪುರುಷರಕಟ್ಟೆಯ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನರಿಮೊಗರು ಗ್ರಾಮದ ಕೃಷ್ಣಡ್ರೈವಿಂಗ್ ಸ್ಕೂಲ್ ಎನ್ನುವಲ್ಲಿ ಓಮ್ನಿಯನ್ನು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದುದರ ಪರಿಣಾಮವಾಗಿ ಶಾಂತಿಗೋಡು ಕಡೆಯಿಂದ ಪುರುಷರಕಟ್ಟೆಯ ಕಡೆಗೆ ಚಲಾಯಿಸಿಕೊಂಡು ತಂದು ನಿಲ್ಲಿಸಿದ್ದ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಇದರಿಂದಾಗಿ ನನಗೆ ಎದೆಗೆ ಗುದ್ದಿರುವ ರೀತಿಯಲ್ಲಿ ಗಾಯವಾಗಿದೆ ” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಲಿಮುದ್ದೀನ್ ಅವರು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಸುಳ್ಯ: ಬಾಲಕಿಯನ್ನು ನಂಬಿಸಿ ಗರ್ಭವತಿಯನ್ನಾಗಿಸಿದ ಆರೋಪಿ ಬಿಡುಗಡೆ
ಸುಳ್ಯ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಗರ್ಭವತಿಯನ್ನಾಗಿಸಿದ ಘಟನೆ ನಡೆದಿದೆ. ಪೈಚಾರಿಕ ಬಾತಿಷ್ ಎನ್ನುವ ವ್ಯಕ್ತಿಯು ಬಾಲಕಿಗೆ ಮದುವೆಯಾಗುವ ಭರವಸೆ ನೀಡಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಗರ್ಭವತಿಯನ್ನಾಗಿಸಿದ್ದಾನೆ. ಶಾಲೆಯಲ್ಲಿ ಕೌನ್ಸಿಲಿಂಗ್ ನಡೆಸಿದ ಸಂದರ್ಭದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ತಪಾಸಣೆ ಮಾಡಿಸಿದಾಗ ಗರ್ಭವತಿಯಾಗಿರುವ ವಿಚಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬಾತಿಷ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಎನ್ನಲಾಗಿದೆ. ಇದೀಗ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯ ಮತ್ತು ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವ ಸಂಗತಿ ತಿಳಿದುಬಂದಿದೆ.