ಶಾರದಾಂಬೆ ಮಡಿಲಿನ ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರ!
– ನಕ್ಸಲೆಟ್ ಹೆಸರಿನಲ್ಲಿ ಸರ್ಕಾರದ ಅನುದಾನ ನಿರ್ಲಕ್ಷ
– ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ
– ದಶಕಗಳ ಜನರ ಮನವಿಗೆ ಬೆಲೆಯೇ ಇಲ್ಲ
ನಮ್ಮೂರ್ ಪ್ರಾಬ್ಲಮ್
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರಕಲ್ ಗ್ರಾಮದ ಕಿಗ್ಗ ಊರಿನಿಂದ ಚೆಟ್ಟುಗುಣಿ ಗ್ರಾಮಕ್ಕೆ ಹೋಗುವ ಕಾಲುಸಂಕ ಇಂದಿಗೂ ಜನರ ಬದುಕಿನ ನಾಡಿಯಾಗಿದೆ.
ದಶಕಗಳಿಂದ ಈ ಮಾರ್ಗದ ದುರಸ್ತಿ ಬೇಡಿಕೆಗಳನ್ನು ಗ್ರಾಮಸ್ಥರು ಶಾಸಕರವರೆಗೂ ತಲುಪಿಸಿದರೂ, ಪ್ರತಿಸಾರಿ ಹಿಂತಿರುಗುವ ಉತ್ತರ ಅದು ನಕ್ಸಲೇಟು ಪ್ರದೇಶ, ಅಭಿವೃದ್ಧಿ ಸಾಧ್ಯವಿಲ್ಲ! ಎಂದು ನಿರ್ಲಕ್ಷದಿಂದ ಉತ್ತರ ಕೊಡುತ್ತಿದ್ದಾರೆ.
ಗ್ರಾಮದಲ್ಲಿ 30 ಮನೆಗಳಿದ್ದು ಆದರೆ ಜನರ ಹೋರಾಟ ಮತ್ತು ತಾಳ್ಮೆ ಕಟ್ಟೆಈಗ ಒಡೆಯುತ್ತಿದೆ. ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ರೋಗಿಗಳು ಇದೇ ದುಸ್ಥಿತಿಯ ಕಾಲುಸಂಕದ ಮೇಲೆ ನಡೆಯಬೇಕಾದ ಪರಿಸ್ಥಿತಿ ಇನ್ನೂ ಮುಂದುವರಿದಿದೆ.
ಕಲ್ಲು ಮಣ್ಣು ಮಿಶ್ರಿತ, ಮಳೆಗಾಲದಲ್ಲಿ ಹಾದಿಯೇ ಮಾಯವಾಗುವ ಈ ಮಾರ್ಗವು, ಇಂದು ಮಾನವ ಹಕ್ಕುಗಳನ್ನೇ ಪ್ರಶ್ನಿಸುವ ಮಟ್ಟಕ್ಕೇರಿದೆ.
ಶಾಸಕರು ಹಾಗೂ ಜನ ನಾಯಕರು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ, ನಮ್ಮ ಕಷ್ಟ ಕೇಳುವವರು ಯಾರು? ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿ ಬಾರಿ ಹೋರಾಟದ ಮನವಿ, ಮನವಿಯ ಬಳಿಕದ ಮೌನ, ಇವೇ ಚೆಟ್ಟುಗುಣಿಯ ದಿನಚರಿ. ನಾವು ಮತ ಹಾಕಿ ಏನು ಪ್ರಯೋಜನ? ಬದಲಾವಣೆ ಇಲ್ಲದಿದ್ದರೆ ಮತವಿಲ್ಲ ಎಂಬ ಘೋಷಣೆಯೊಂದಿಗೆ ಈ ಬಾರಿ ಚುನಾವಣಾ ಬಹಿಷ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಚೆಟ್ಟುಗುಣಿ ಗ್ರಾಮದ ಪರಿಸ್ಥಿತಿ ಕೇಳೋರಿಲ್ಲ
ಚೆಟ್ಟುಗುಣಿ ಗ್ರಾಮದ ಪರಿಸ್ಥಿತಿ ಅಭಿವೃದ್ಧಿಯೆಂಬ ಶಬ್ದಕ್ಕೆ ನಾಚಿಕೆ ತರಿಸುತ್ತದೆ. ಇಲ್ಲಿಯವರೆಗೂ ರಸ್ತೆ ಇಲ್ಲ, ಸಾರಿಗೆ ಇಲ್ಲ, ಕುಡಿಯುವ ನೀರಿನ ಸರಬರಾಜಿಲ್ಲ, ನೆಟ್ವರ್ಕ್ ಸಂಪರ್ಕವಿಲ್ಲ. ಮಳೆ ಬಂದರೆ ಶಾಲಾ ಮಕ್ಕಳು ತರಗತಿಗೆ ಹೋಗದೆ ಮನೆಬದಿಯಲ್ಲಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅನಾರೋಗ್ಯ ಬಂದರೆ ಮೈಲ್ಗಟ್ಟಲೆ ನಡೆದು ಆಸ್ಪತ್ರೆಗೆ ತಲುಪಬೇಕು. ಇಂತಹ ಸ್ಥಿತಿಯಲ್ಲಿ, ಸರ್ಕಾರದ ಯೋಜನೆಗಳು, ಬೃಹತ್ ಘೋಷಣೆಗಳು ಎಲ್ಲವೂ ಕಾಗದದ ಅಕ್ಷರಗಳಷ್ಟೇ.
ಜನರ ತಾಳ್ಮೆಗೆ ಪರೀಕ್ಷೆ ಮಾಡಿದ ರಾಜಕಾರಣಿಗಳು!
ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಕಚೇರಿ, ಮತ್ತು ಶಾಸಕರ ಮನೆಬಾಗಿಲಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಜನರ ತಾಳ್ಮೆ ಇದೀಗ ಕೋಪಕ್ಕೆ ತಿರುಗಿದೆ. ಅಭಿವೃದ್ಧಿಯ ಹೆಸರು ಹೇಳುತ್ತಾ ಮತ ಬೇಡುವವರು, ನಮ್ಮ ಕಾಲುಸಂಕದ ಮೇಲಾದರೂ ನಡೆದು ನೋಡಲಿ ಎಂಬ ಸಿಡಿಲುಪದಗಳು ಚೆಟ್ಟುಗುಣಿ ನಿವಾಸಿಗಳಲ್ಲಿ ಕೇಳಿಬರುತ್ತಿದೆ.
ಬುಡಕಟ್ಟು ಬದುಕು, ನಾಳೆಯ ಕನಸು?
ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲೆಡೆ 5G ತಂತ್ರಜ್ಞಾನ ಬೆಳೆಯುತ್ತಿದೆ, ಚೆಟ್ಟುಗುಣಿಯ ಜನರು ಇನ್ನೂ 2G ಬದುಕು ನಡೆಸುತ್ತಿದ್ದಾರೆ. ನೀರಿನ ಹನಿಗೂ, ದಾರಿಯ ಕಲ್ಲಿಗೂ ಹೋರಾಟ. ಆಡಳಿತದ ದೃಷ್ಟಿಯಲ್ಲಿ ನಕ್ಸಲೆಟ್ ಪ್ರದೇಶ ಎಂಬ ಹೆಸರಿನಲ್ಲಿ ಅಭಿವೃದ್ಧಿ ನಿಷೇಧದ ಫಲವಾಗಿ ಈ ಗ್ರಾಮಸ್ಥರು ಬುಡಕಟ್ಟು ಸಮುದಾಯಗಳಂತೆಯೇ ಬದುಕು ನಡೆಸಬೇಕಾದ ಪರಿಸ್ಥಿತಿಯಲ್ಲಿದ್ದಾರೆ.
ರಾಜಕಾರಣಿಗಳ ಮೌನ, ಜನರ ಘೋಷಣೆ
ಶೃಂಗೇರಿ ಶಾಸಕರು ಸೇರಿದಂತೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದ ಬೇಸತ್ತ ಗ್ರಾಮಸ್ಥರು, ಈಗ “ಮತವಿಲ್ಲ” ಎಂಬ ಶಸ್ತ್ರವನ್ನು ಆಯ್ದುಕೊಂಡಿದ್ದಾರೆ. ನಮ್ಮ ಹಾದಿ ಸರಿಪಡಿಸದವರೆಗೂ ಮತ ಹಾಕುವುದಿಲ್ಲ ಎಂಬ ಸ್ಪಷ್ಟ ನಿಲುವಿನಿಂದ ಚುನಾವಣಾ ಬಣ್ಣಕ್ಕೆ ಕಪ್ಪು ಸವರಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಚೆಟ್ಟುಗುಣಿ ಗ್ರಾಮವು ಇಂದು ಒಂದು ಪ್ರಶ್ನೆ ಎತ್ತುತ್ತಿದೆ. ನಮ್ಮ ಕಷ್ಟಕ್ಕೆ ಯಾರ ಉತ್ತರ?
ಜನರ ಕಣ್ಣೀರು ಒಣಗುವ ಮುನ್ನ, ಸರ್ಕಾರ ಮತ್ತು ಶಾಸಕರು ನಿಜವಾದ ಅಭಿವೃದ್ಧಿಯ ಹಾದಿ ತೋರಿಸುವ ಸಮಯ ಬಂದಿದೆ.ಇಂದು ಚೆಟ್ಟುಗುಣಿ ಎನ್ನುವ ಈ ಚಿಕ್ಕ ಹಳ್ಳಿಯ ಕೂಗು, ನಾಳೆ ರಾಜ್ಯದ ನಾಚಿಕೆಗಾಗಬಹುದು. ಆಡಳಿತ ಅಧಿಕಾರಿಗಳೇ ಎಚ್ಚರ.!








