ಅಡಿಕೆ ಕಥೆ ಮುಗಿಯಿತಾ..?..ಮುಂದೇನು..?
– ಭಾರತದಲ್ಲಿ ಪಾನ್ ಮಸಾಲಾ ಬ್ಯಾನ್ ಸಾಧ್ಯತೆ
– ಇತ್ತ ಅಡಿಕೆಗೆ ರೋಗ ಹಿನ್ನೆಲೆ ಅಡಿಕೆ ಮರಗಳ ಸಾವು
ಮಲೆನಾಡು/ ಕರಾವಳಿ: ವಿಶ್ವ ಅರೋಗ್ಯ ಸಂಸ್ಥೆ ಇತ್ತೀಚಿನ ಅಧ್ಯಯನದ ಪ್ರಕಾರ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಕಣಗಳು ಪತ್ತೆಯಾದ ಕಾರಣ ಅಡಿಕೆ ನಿಷೇಧ ಮಾಡುವ ಬಗ್ಗೆ ಅನುಮಾನ ಹೆಚ್ಚಿದೆ. ಇದರಿಂದ ಬೆಳಗಾರರ ಬದುಕು ತೂಗುಕತ್ತಿಯಲ್ಲಿ ನಿಂತಿದೆ.
ಅಧ್ಯಯನವಾಗಿ ನಿಷೇಧ ಹೇರದೆ ಇದ್ದರೆ ರೈತರು ಸೇಫ್. ಇಲ್ಲವಾದಲ್ಲಿ ರೈತರ ಬದುಕು ಬೀದಿಗೆ ಬೀಳಲಿದೆ. ಈ ಬಗ್ಗೆ ಅಡಿಕೆ ಸಂಶೋಧನಾ ಕೇಂದ್ರಗಳು, ಜನ ನಾಯಕರು ಗಮನಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದ 10 ವರ್ಷದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಮರ ಸಂಪೂರ್ಣ ಹೋಗುತ್ತಿದೆ. ಇನ್ನು ಮರ ಇದ್ದರು ಫಸಲು ಇಲ್ಲವಾಗಿದೆ. ಎಲೆಚುಕ್ಕಿ, ಹಳದಿ, ಕೊಳೆ ರೋಗಕ್ಕೆ ತುತ್ತಾಗಿ ರೈತರು ಲಕ್ಷ ಲಕ್ಷ ಹಣ ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು ಈಗ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ದೇಶದ ಆಸ್ತಿ ಎನ್ನುವ ರಾಜಕಾರಣಿಗಳು ಪರ್ಯಾಯ ಮಾರ್ಗದ ಬಗ್ಗೆ ಚಿಂತನೆ ಮಾಡಬೇಕಿದೆ.
2026ರ ಏಪ್ರಿಲ್ ಒಳಗೆ ಭಾರತದಲ್ಲಿ ಪಾನ್ ಮಸಾಲಾ ಬ್ಯಾನ್?
ಕೇಂದ್ರ ಸರ್ಕಾರ ಏಪ್ರಿಲ್ 2026ರ ಒಳಗೆ ಇಡೀ ದೇಶಾದ್ಯಂತ ಸಿಗರೇಟ್ ಮತ್ತು ಪಾನ್ ಮಸಾಲಾವನ್ನು ನಿಷೇಧಿಸಲು ಪ್ಲಾನ್ ಮಾಡಿದೆ ಎನ್ನಲಾಗಿದೆ. ಈಗಾಗಲೇ ಒಡಿಶಾದಲ್ಲಿ ಇವುಗಳನ್ನು ನಿಷೇಧಿಸಲಾಗಿದ್ದು, ಇದೇ ಮಾದರಿಯನ್ನು ಇಡೀ ಭಾರತದಲ್ಲಿ ಜಾರಿಗೆ ತರಬಹುದು ಎನ್ನಲಾಗುತ್ತಿದೆ. ಇದು ಜಾರಿಯಾದರೆ ಕ್ಯಾನ್ಸರ್ ಮುಕ್ತ ಭಾರತದ ಕನಸಿಗೆ ದೊಡ್ಡ ಬಲ ಸಿಗಲಿದೆ. ಆದರೆ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಕಣಗಳು ಇಲ್ಲ ಎಂಬುದನ್ನು ವಿಜ್ಞಾನಿಗಳು ದೃಢಪಡಿಸಿದರೆ ಅಡಿಕೆ ರೈತರು ಬಚಾವ್ ಅಗಲಿದ್ದಾರೆ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ರೋಗಕ್ಕೆ ಮದ್ದು ಕಂಡು ಹಿಡಿಯದ ಸರ್ಕಾರ!?
10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಡಿಕೆ ಬೆಳೆ ಬೆಳೆಯಲಾಗುತ್ತದೆ. ಬಹುತೇಕ 80% ರೈತರು ಅಡಿಕೆ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೆ ಅಲ್ಲಿನ ವಹಿವಾಟು ಕೂಡ ಅಡಿಕೆ ಮೇಲೆ ಡಿಪೆಂಡ್ ಆಗಿದೆ. ಆದರೆ ಒಂದು ಕಡೆ ಅಡಿಕೆ ಬ್ಯಾನ್ ಸುದ್ದಿ ಮತ್ತೊಂದು ಕಡೆ ಅಡಿಕೆಗೆ ರೋಗ ವಹಿವಾಟು ಮೇಲೆ ಕರಿ ನೆರಳು ಬೀರಿದೆ.








