ಕರಾವಳಿ ಟಾಪ್ 10 ನ್ಯೂಸ್
ಉಡುಪಿ, ದಕ್ಷಿಣಕನ್ನಡ ಜಿಲ್ಲೆ ಕ್ರೈಂ ನ್ಯೂಸ್
* ಮಂಗಳೂರು: ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು
* ಪುತ್ತೂರು: ರಾಸಾಯನಿಕ ಮಿಶ್ರಣ; ಮೀನುಗಳ ಸಾವು
* ಬಂಟ್ವಾಳ: ವೇಶ್ಯಾವಾಟಿಕೆ ದಂಧೆ; ಆರೋಪಿಗಳ ಬಂಧನ
* ಮೂಡಬಿದರೆ: ಕಸಾಯಿ ಖಾನೆ ಮೇಲೆ ದಾಳಿ
* ಬೆಳ್ತಂಗಡಿ: ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಕಛೇರಿಗೆ ಭೇಟಿ
* ಕುಂದಾಪುರ: ಅಕ್ರಮ ಮರಳು ಸಾಗಾಟದ ಮೇಲೆ ಪೊಲೀಸರ ದಾಳಿ
* ಕಾಪು: ಎರಡು ಬೈಕ್ ಗಳ ನಡುವೆ ಅಪಘಾತ
* ಕಾರ್ಕಳ: 13 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಪತ್ತೆ
* ಉಡುಪಿ: ಬಸ್ ಮತ್ತು ಬೈಕ್ ನ ನಡುವೆ ಅಪಘಾತ; ವ್ಯಕ್ತಿ ಸಾವು
* ಕಡಬ: ವಾಟ್ಸಾಪ್ ಹ್ಯಾಕ್ ಮೂಲಕ ಹಣದ ವಂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ, ನಗರದ ವಿವಿಧ ಭಾಗಗಳಲ್ಲಿ ಪೊಲೀಸರು ತನಿಖೆ ನಡೆಸಿ, ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಬೈಕಂಪಾಡಿಯ ನೋಯಲ್ ಪಿಯೂಷ್ ಡಿಸೋಜಾ, ಕೊಂಚಾಡಿಯ ಉದಿತ್, ಶಕ್ತಿನಗರದ ಜಿತೇಶ್ ಮತ್ತು ವರುಣ್ ಸಾಲಿಯಾನ್ ವಿರುದ್ಧ ಮಂಗಳವಾರ ಮತ್ತು ಬುಧವಾರಗಳಂದು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
* ಪುತ್ತೂರು: ರಾಸಾಯನಿಕ ಮಿಶ್ರಣ; ಮೀನುಗಳ ಸಾವು
ಪುತ್ತೂರು: ರಾಸಾಯನಿಕ ಮಿಶ್ರಣ ಮತ್ತು ಸಿಮೆಂಟ್ ಕಾಂಕ್ರೀಟ್ ನ ಮಿಶ್ರಣವನ್ನು, ದುಷ್ಕರ್ಮಿಗಳು ಹೊಳೆ ನೀರಿಗೆ ಎಸೆದಿರುವ ಘಟನೆ, ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 77ರ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣುಗುಂಡಿಯಲ್ಲಿ ನಡೆದಿದೆ. ಪರಿಣಾಮವಾಗಿ ಮೀನುಗಳು ಸತ್ತು, ಹೊಳೆಯ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ, ಈ ಸಂದರ್ಭದಲ್ಲಿ ಉಳಿದಿರುವ ಕಾಂಕ್ರೀಟ್ ಮಿಶ್ರಣವನ್ನು ಹೊಳೆಗೆ ಸುರಿದಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ನೀರು ಹೊಳೆಯ ಪಕ್ಕದ ಕೃಷಿ ತೋಟಗಳಿಗೆ ಹರಿದುಹೋಗುವುದರಿಂದ ಕೃಷಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ.
* ಬಂಟ್ವಾಳ: ವೇಶ್ಯಾವಾಟಿಕೆ ದಂಧೆ; ಆರೋಪಿಗಳ ಬಂಧನ
ಬಂಟ್ವಾಳ: ವಸತಿ ಸಮುಚ್ಚಯವೊಂದರ ಮೂರನೇ ಮಹಡಿಯಲ್ಲಿ, ಹೊರ ರಾಜ್ಯಗಳಿಂದ ಹುಡುಗಿಯರನ್ನು ಕರೆಸಿಕೊಂಡು, ವೇಶ್ಯಾವಾಟಿಕೆ ನಡೆಸುತ್ತಿದ್ದ ಘಟನೆ ಕಣ್ಣೂರಿನ ದಯಾಂಬು ಎನ್ನುವಲ್ಲಿ ನಡೆದಿದೆ. ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಕ್ಷಿಣ ವಲಯದ ಎಸಿಪಿ ವಿಜಯ್ ಕ್ರಾಂತಿ ಅವರು ದಾಳಿ ನಡೆಸಿದ್ದು, ಉತ್ತರ ಪ್ರದೇಶ ಮೂಲದ ಯುವತಿಯನ್ನು ರಕ್ಷಿಸಿದ್ದು, ಕೆಲವರನ್ನು ಬಂಧನಕ್ಕೆ ಒಳಪಡಿಸಿದ್ದಾರೆ. ಆರೋಪಿಗಳನ್ನು ಬಂಟ್ವಾಳದ ಪುದು ನಿವಾಸಿ ಹಸೀನಾ, ಬದ್ರಿಯಾ ನಗರದ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಕಾಂಡಮ್ ಹಾಗೂ ಎರಡು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
* ಮೂಡಬಿದರೆ: ಕಸಾಯಿಖಾನೆ ಮೇಲೆ ದಾಳಿ
ಮೂಡಬಿದರೆ: ಪೊಲೀಸರು ಪ್ರತ್ಯೇಕ ಕಾರ್ಯಚರಣೆಯ ಮೂಲಕ ಮೂಡಬಿದರೆ ಹಾಗೂ ಸೂರತ್ಕಲ್ ನಲ್ಲಿ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೂಡಬಿದರೆಯ ಗುಂಟಾಲ್ ಕಟ್ಟೆಯಲ್ಲಿ ಜಲೀಲ್ ಬೆಟ್ಟು ಎಂಬಾತನ ಮನೆಯ ಹಿಂಭಾಗದಲ್ಲಿ ದನಗಳನ್ನು ಕಡಿದು, ಮಾಂಸ ಮಾಡಿ, ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಜಲೀಲ್, ಸಾಹಿಲ್, ಸೊಹೇಲ್, ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಅವರನ್ನು ಬಂಧಿಸುವ ನಿಟ್ಟಿನಲ್ಲಿ, ಮೂಡಬಿದರೆ ಪೊಲೀಸ್ ನಿರೀಕ್ಷಕರಾದ ಸಂದೇಶ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಪಿಎಸ್ಐ ಕೃಷ್ಣಪ್ಪ, ಅಖಿಲ್ ಅಹಮದ್, ನಾಗರಾಜ್ ಅವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಕ್ರಮವಾಗಿ ನಡೆಸುತ್ತಿದ್ದ ಚಟುವಟಿಕೆಯ ಸ್ಥಳದಲ್ಲಿ ಪೊಲೀಸರು ಮೂರು ದನಗಳನ್ನು ರಕ್ಷಿಸಿದ್ದು, 50 ಕೆಜಿ ದನದ ಮಾಂಸ ಮತ್ತು ಅದನ್ನು ವಿಲೇವಾರಿ ಮಾಡಲು ಬಳಸಿದ ಪರಿಕರಗಳನ್ನು, ಮಾಂಸ ತೆಗೆದುಕೊಂಡು ಹೋಗಲು ಬಂದ ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೆಳ್ತಂಗಡಿ: ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಕಛೇರಿಗೆ ಭೇಟಿ
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ಐಟಿ ಮುಖ್ಯಸ್ಥರಾದ ಪ್ರಣವ್ ಮೊಹಂತಿ ಅವರು ಬುಧವಾರದಂದು ಎಸ್ಐಟಿ ಕಚೇರಿಗೆ ಭೇಟಿ ನೀಡಿದ್ದು, ಪ್ರಕರಣ ಕುರಿತು ಅಧಿಕಾರಿಗಳು ನಡೆಸಿದ ತನಿಖೆಯ ವಿಚಾರವಾಗಿ ಸಭೆ ನಡೆಸಿದರು. ಇದುವರೆಗೂ ನಡೆದ ತನಿಖೆಯ ವರದಿಯಲ್ಲಿನ ಮಾಹಿತಿಯನ್ನು ಸಂಗ್ರಹಿಸಿ, ಮುಂದಿನ ತನಿಖೆಯ ಕುರಿತು ತಿಳಿಸಲಿದ್ದಾರೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗದ ಕೆಲವರ ಕುರಿತು ಯಾವ ರೀತಿಯ ನಿರ್ಧಾರ ಕೈಗೊಳ್ಳಬೇಕೆನ್ನುವುದು ಚರ್ಚೆಗೊಳಪಟ್ಟಿತು. ಹಾಗೆಯೇ ಮುಂದೆ ಯಾವ ರೀತಿಯ ವಿಚಾರಣೆಗಳನ್ನು ನಡೆಸಬಹುದು ಎನ್ನುವುದರ ಕುರಿತು ಮಾತುಕತೆ ನಡೆಸಲಾಯಿತು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.
* ಕುಂದಾಪುರ: ಅಕ್ರಮ ಮರಳು ಸಾಗಾಟದ ಮೇಲೆ ಪೊಲೀಸರ ದಾಳಿ
ಕುಂದಾಪುರ: ಕೋಟ ಪೊಲೀಸರಿಗೆ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಸೀತಾನದಿಯ ಹೊಳೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರದೇಶದ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ಓಡಿ ಹೋಗಿದ್ದು, ಅವರನ್ನು ಗಣೇಶ್ ಶೆಟ್ಟಿ ಮತ್ತು ಚೇತನ್ ನಾಯ್ಕ ಎಂದು ಗುರುತಿಸಲಾಯಿತು. ಮರಳುಗಾರಿಕೆಗೆ ಉಪಯೋಗಿಸಿದ ಪರಿಕರಗಳನ್ನು ವಶಪಡಿಸಿಕೊಂಡ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
* ಕಾಪು: ಎರಡು ಬೈಕ್ ಗಳ ನಡುವೆ ಅಪಘಾತ
ಕಾಪು: ಸರಕಾರಿ ಗುಡ್ಡೆ ನಿವಾಸಿ ನವೀನ್ ಪ್ರಕಾಶ್ ಡಿಸೋಜಾ ಅವರು ತಮ್ಮ ಬೈಕಿನಲ್ಲಿ, ಸರಕಾರಿ ಗುಡ್ಡೆಯಿಂದ ಸಲ್ಪಾ ಡೆವಲಪರ್ಸ್ ಕಡೆಗೆ ತೆರಳುತ್ತಿದ್ದ ಸಮಯದಲ್ಲಿ, ಅಚ್ಚಡ ನಾಗಬನ ಕಡೆಯಿಂದ ಬಂದ ಬುಲೆಟ್ ವೊಂದು ಢಿಕ್ಕಿ ಹೊಡೆದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಗುದ್ದಿದ ರಭಸಕ್ಕೆ ನವೀನ್ ಪ್ರಕಾಶ್ ಡಿಸೋಜ ಅವರು ಬೈಕಿನಿಂದ ರಸ್ತೆಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ರೋಷನ್ ಡಿಸೋಜಾ ಮತ್ತು ಸ್ಥಳೀಯರು ನವೀನ್ ಡಿಸೋಜಾ ಅವರನ್ನು ಉಪಚರಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರ್ಕಳ: 13 ವರ್ಷಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿ ಪತ್ತೆ
ಕಾರ್ಕಳ: ಮುಂಡ್ಕೂರಿನ ಖಾಸಗಿ ಕಾಲೇಜುವೊಂದರಲ್ಲಿ, ಪ್ರಥಮ ಪಿಯುಸಿ ಓದುತ್ತಿದ್ದ ಅನಂತ ಕೃಷ್ಣ ಪ್ರಭು ಎನ್ನುವ ಯುವಕ, 13 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಹೋಗಿಬರುವುದಾಗಿ ತಿಳಿಸಿ, ಮರಳಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನಂತ ಕೃಷ್ಣ ಪ್ರಭು ಅವರ ತಂದೆ ಪ್ರಭಾಕರ ಪ್ರಭು ಅವರು ಪೊಲೀಸರಿಗೆ ದೂರು ನೀಡಿದ್ದರು. ಕಾರ್ಕಳದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದಕ್ಕಾಗಿ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿ, ವಿವಿಧ ರೀತಿಯಲ್ಲಿ ತನಿಖೆ ನಡೆಸಿ, ಅಂತಿಮವಾಗಿ ಅನಂತ ಕೃಷ್ಣ ಬೆಂಗಳೂರಿನಲ್ಲಿರುವುದು ಖಚಿತಪಡಿಸಿಕೊಂಡು, ಅಲ್ಲಿಗೆ ತೆರಳಿ, ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಭು ಡಿ.ಟಿ, ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಸುದರ್ಶನ್ ದೊಡ್ಮನಿ, ಉಡುಪಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಣ್ಣ ಶಿರಗುಂಪಿ, ಸಿಬ್ಬಂದಿಗಳಾದ ಇಮ್ರಾನ್, ಚೇತನ್, ಸಂತೋಷ್ ದೇವಾಡಿಗ, ಮಲ್ಲಯ್ಯ ಹಿರೇಮಠ ಪಾಲ್ಗೊಂಡಿದ್ದರು. ಮನೆಯನ್ನು ಬಿಟ್ಟು ಬಂದಿರುವ ಕುರಿತು ಅನಂತ ಕೃಷ್ಣ ಅವರನ್ನು ವಿಚಾರಿಸಿದಾಗ, “ಅಂದು ನಾನು ಪ್ರಥಮ ಪಿಯುಸಿ ಓದುತ್ತಿದ್ದಾಗ ಅನುತ್ತೀರ್ಣನಾಗಿದ್ದು, ಮನೆಯಲ್ಲಿ ವಿಷಯ ತಿಳಿಸಲು ಭಯವಾಗಿ, ಊರನ್ನು ಬಿಟ್ಟು ಬೆಂಗಳೂರಿಗೆ ಹೋಗಿ ನೆಲೆಸಿದ್ದೆ” ಎಂದು ತಿಳಿಸಿದ್ದಾರೆ.
* ಉಡುಪಿ: ಬಸ್ ಮತ್ತು ಬೈಕ್ ನಡುವೆ ಅಪಘಾತ; ವ್ಯಕ್ತಿ ಸಾವು
ಉಡುಪಿ: ಕಲ್ಸಂಕ ಅಂಬಾಗಿಲು ಮಾರ್ಗವಾಗಿ ಬರುತ್ತಿದ್ದ ಬೈಕ್, ಸುಬ್ರಹ್ಮಣ್ಯ ನಗರದ ಕಡೆಗೆ ತೆರಳಲು ರವಿ ಪೂಜಾರಿ ಅವರು ತಿರುವು ಪಡೆದುಕೊಂಡ ಸಮಯದಲ್ಲಿ, ಕುಂದಾಪುರದಿಂದ ಉಡುಪಿಯ ಕಡೆಗೆ ಹೋಗುತ್ತಿದ್ದ ಬಸ್ ಢಿಕ್ಕಿ ಹೊಡೆದ ಘಟನೆ ಅಂಬಾಗಿಲು ಜಂಕ್ಷನ್ ಬಳಿ ನಡೆದಿದೆ. ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ರಸ್ತೆಗೆ ಬಿದ್ದು, ಬಸ್ ಅಡಿಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡು, ತೀವ್ರ ರಕ್ತಸ್ರಾವವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿ ಪೂಜಾರಿ ಮೃತಪಟ್ಟಿದ್ದಾರೆ.
* ಕಡಬ: ವಾಟ್ಸಾಪ್ ಹ್ಯಾಕ್ ಮೂಲಕ ಹಣದ ವಂಚನೆ
ಕಡಬ: ವಾಟ್ಸಾಪ್ ಹ್ಯಾಕ್ ಮಾಡುವ ಮೂಲಕ, ಯುವಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ, ಕಡಬದಲ್ಲಿ ನಡೆದಿದೆ. ಅಜ್ಜನ ವಾಟ್ಸಾಪ್ ಹ್ಯಾಕ್ ಮಾಡಿ, ಮೊಮ್ಮಗನ ವಾಟ್ಸಪ್ ಗೆ ‘ಪಿಎಂ ಕಿಸಾನ್ ಯೋಜನಾ
ಆ್ಯಪ್’ ಎಂಬ ಹೆಸರಿನ ಫೈಲ್ ಕಳಿಸಿದ್ದಾರೆ. ಅದನ್ನು ನಿಜವೆಂದು ನಂಬಿ ಯುವಕ ಫೈಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ, ಇನ್ಸ್ಟಾಲ್ ಮಾಡಿಕೊಂಡಿದ್ದಾರೆ. ನಂತರ ಯುವಕನ ಸಿಮ್ ಕಾರ್ಡ್ ನೆಟ್ ವರ್ಕ್ ಸರಿಯಾಗಿರದ ಹಿನ್ನೆಲೆಯಲ್ಲಿ, ಹೊಸ ಸಿಮ್ ಕಾರ್ಡ್ ಖರೀದಿಸಿದ್ದಾರೆ. ಕಳೆದ ವಾರ ಪೇಟಿಎಂ ಅನ್ನು ಪರಿಶೀಲಿಸಿದಾಗ, ಅವರ ಖಾತೆಯಲ್ಲಿ ಕೇವಲ 414 ರೂಪಾಯಿ ಮಾತ್ರ ಇರುವುದು ಬೆಳಕಿಗೆ ಬಂದಿದೆ. ಅಕ್ಟೋಬರ್ ಒಂದು ಮತ್ತು ಎರಡು ರಂದು ರಜೆಯಿದ್ದ ಕಾರಣ, ಮೂರರಂದು ಬ್ಯಾಂಕ್ ಗೆ ತೆರಳಿ ಪರಿಶೀಲಿಸಿ ನೋಡಿದಾಗ, ಯುಪಿಐ ಮೂಲಕ ಹಣ ವರ್ಗಾವಣೆಯಾಗಿದ್ದು, ಪಾಸ್ ಬುಕ್ ಎಂಟ್ರಿ ಮಾಡಿ ನೋಡಿದಾಗ ಯುವಕನ ಖಾತೆಯಿಂದ ಹಣ ಹಂತ ಹಂತವಾಗಿ ಕಡಿಮೆಗೊಂಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯುವಕ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಹಣದ ವಂಚನೆಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.







