ಕರಾವಳಿ ಟಾಪ್ ನ್ಯೂಸ್
* ಕುಂದಾಪುರ: ಮೂವರು ಮಕ್ಕಳು ನೀರುಪಾಲು!
* ಉಡುಪಿ: ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
* ಬಂಟ್ವಾಳ: ಕಾರ್ ದುರಸ್ತಿ ಮಾಡುತ್ತಿದ್ದಾಗ ಮತ್ತೊಂದು ಕಾರು ಢಿಕ್ಕಿ; ವ್ಯಕ್ತಿ ಸಾವು
* ಮಂಗಳೂರು: ವಿಮಾನ ನಿಲ್ದಾಣದಲ್ಲಿ ಗಾಂಜಾ ಪತ್ತೆ
* ಬೆಳ್ತಂಗಡಿ: ಮದನ್ ಬುಗುಡಿ ಪೊಲೀಸ್ ಠಾಣೆಗೆ ಹಾಜರ್
•ಸುಳ್ಯ: ಜಲಪಾತ ನೋಡಲು ತೆರಳಿದ ಯುವಕ ವಿದೇಶದಲ್ಲಿ ಸಾವು
* ಮೂಡಬಿದರೆ: ಗ್ಯಾಂಗ್ ರೇಪ್ ಗೆ ಯತ್ನ; ಪೊಲೀಸರಿಂದ ಹೆಣ್ಣು ಮಕ್ಕಳ ರಕ್ಷಣೆ
* ಪುತ್ತೂರು: ಮಗುವಿನ ಗಂಟಲಲ್ಲಿ ಕಾಡಿಗೆ ಡಬ್ಬಿ; ಶಸ್ತ್ರಚಿಕಿತ್ಸೆ ಇಲ್ಲದೆ ಹೊರತೆಗೆದ ವೈದ್ಯರು
* ಉಳ್ಳಾಲ: ಅಪರಿಚಿತ ಶವ ಪತ್ತೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಕಿರಿಮಂಜೇಶ್ವರ ಗ್ರಾಮದ, ಹೊಸ ಹಿತ್ಲು ಕಡಲ ತೀರಕ್ಕೆ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ, ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಮೂವರು ನೀರು ಪಾಲಾದ ಘಟನೆ ಮಂಗಳವಾರದಂದು ನಡೆದಿದೆ. ನೀರಿನ ಪಾಲಾದ ಮಕ್ಕಳನ್ನು ಸಂಕೇತ್, ಸೂರಜ್ ಮತ್ತು ಆಶಿಶ್ ಎಂದು ಗುರುತಿಸಲಾಗಿದ್ದು, ಮೂವರು ಸ್ಥಳೀಯರು ಎನ್ನುವ ಸಂಗತಿ ತಿಳಿದುಬಂದಿದೆ. ನೀರುಪಾಲಾಗಿದ್ದ ಮೂವರ ಮೃತದೇಹ ಕೂಡ ಪತ್ತೆಯಾಗಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
* ಉಡುಪಿ: ರಸ್ತೆ ಸಾರಿಗೆ ಕಛೇರಿ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ
ಉಡುಪಿ: ಮಂಗಳವಾರದಂದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಉಡುಪಿ ಜಿಲ್ಲೆಯ ರಸ್ತೆ ಸಾರಿಗೆ ಕಛೇರಿಯ ಅಧಿಕಾರಿಯಾದ ಲಕ್ಷ್ಮೀನಾರಾಯಣ ನಾಯಕ ಅವರ ಆದಾಯ ಮತ್ತು ಆಸ್ತಿಯ ನಡುವಿನ ಅಸಮತೋಲನ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಲಕ್ಷ್ಮೀನಾರಾಯಣ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿದ್ದು, ಉಡುಪಿಯಲ್ಲಿ ಆರ್ ಟಿ ಓ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇವಲ ಲಕ್ಷ್ಮೀನಾರಾಯಣ ಅವರು ನೆಲೆಸಿರುವ ನಿವಾಸದ ಮೇಲೆ ಅಷ್ಟೇ ಅಲ್ಲದೆ, ಅವರಿಗೆ ಸಂಬಂಧಿಸಿದ ಕಿನ್ನಿಮೂಲ್ಕಿ ಪ್ರದೇಶದಲ್ಲಿರುವ ಫ್ಲ್ಯಾಟ್, ಕುಮಟಾ ಮತ್ತು ಉಡುಪಿ ತಾಲ್ಲೂಕಿನ ಪಡಅಲೆಯೂರು ಗ್ರಾಮಗಳಲ್ಲಿ ವಾಸವಾಗಿರುವ ಅವರ ಬಂಧುಗಳ ಮನೆಯಲ್ಲೂ ಶೋಧನಾ ಕಾರ್ಯ ನಡೆಸಿದ್ದಾರೆ. ಅಧಿಕಾರಿಗಳು ಲಕ್ಷ್ಮೀನಾರಾಯಣ ಅವರ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಬಂಟ್ವಾಳ: ಕಾರ್ ದುರಸ್ತಿ ಮಾಡುತ್ತಿದ್ದಾಗ ಮತ್ತೊಂದು ಕಾರು ಢಿಕ್ಕಿ; ವ್ಯಕ್ತಿ ಸಾವು
ಬಂಟ್ವಾಳ: ಬೋಳಂತೂರು ನಿವಾಸಿ ಜಬ್ಬಾರ್ ಅವರು ಕಾರು ದುರಸ್ತಿ ಮಾಡುತ್ತಾ ಕುಳಿತಿದ್ದ ಸಂದರ್ಭದಲ್ಲಿ, ಮತ್ತೊಂದು ಕಾರು ಬಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಬಿ.ಸಿ. ರಸ್ತೆಯ ಗಾಣದಪಡ್ಪುವಿನಲ್ಲಿ ಮಂಗಳವಾರದಂದು ನಡೆದಿದೆ. ಜಬ್ಬಾರ್ ಅವರು ಗಾಣದಪಡ್ಪುವಿನ ಶಿವಗಣೇಶ್ ಎನ್ನುವ ಹೆಸರಿನ ಬ್ಯಾಟರಿ ಅಂಗಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಾಹನಗಳ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ನಿನ್ನೆಯ ದಿನ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ಸಂದರ್ಭದಲ್ಲಿ, ವೇಣೂರು ಮೂಲದ ಮತ್ತೊಂದು ಕಾರ್ ನ ಚಾಲಕ ಬಂಟ್ವಾಳ ಬೈಪಾಸ್ ಕಡೆಯಿಂದ ಬಂದು, ಜಬ್ಬಾರ್ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಿಂದಾಗಿ ಜಬ್ಬಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಗಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಬ್ಬಾರ್ ಮೃತಪಟ್ಟರು. ಅಪಘಾತಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಂಗಳೂರು: ವಿಮಾನ ನಿಲ್ದಾಣದಲ್ಲಿ ಗಾಂಜಾ ಪತ್ತೆ
ಮಂಗಳೂರು: ವಿಮಾನದಲ್ಲಿ ಗಾಂಜಾವಿದೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತನಿಖೆ ನಡೆಸಿ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬೈಯಿಂದ ಮಂಗಳೂರಿನ ಬಜಪೆ ವಿಮಾನ ನಿಲ್ದಾಣಕ್ಕೆ ಶಂಕರ ನಾರಾಯಣ ಪೊದ್ದಾರ್ ಕಳೆದೆರಡು ದಿನಗಳ ಹಿಂದೆ, ಸಂಜೆ ಆರು ಮೂವತ್ತರ ವಿಮಾನದಲ್ಲಿ, ಗಾಂಜಾ ಸಹಿತ ಆಗಮಿಸಿದ್ದಾನೆ. ಆರೋಪಿಯನ್ನು ಸೆರೆಹಿಡಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನ ಬ್ಯಾಗ್ ಅನ್ನು ಪರಿಶೀಲಿಸಿದಾಗ, 512 ಗ್ರಾಂ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಬಳಿಕ ಆತನನ್ನು ಬಜಪೆ ಪೊಲೀಸರ ವಶಕ್ಕೆ ನೀಡಲಾಯಿತು.
* ಬೆಳ್ತಂಗಡಿ: ಮದನ್ ಬುಗುಡಿ ಪೊಲೀಸ್ ಠಾಣೆಗೆ ಹಾಜರ್
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಟ್ಟಿರುವ ಗಿರೀಶ್ ಮಟ್ಟಣ್ಣನವರ್ ನಿಂದ ಪರಿಚಯಿಸಲ್ಪಟ್ಟ ಮದನ್ ಬುಗುಡಿ, ಮಂಗಳವಾರದಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಗಿರೀಶ್ ಮಟ್ಟಣ್ಣನವರ್ ಈತನನ್ನು ಯೂಟ್ಯೂಬ್ ಮೂಲಕ ಮಾನವ ಹಕ್ಕು ಆಯೋಗದ ಅಧಿಕಾರಿ ಎಂದು ಸುಳ್ಳು ಮಾಹಿತಿಯೊಂದಿಗೆ ಪರಿಚಯಿಸಿದ್ದ. ಇದರಿಂದಾಗಿ ಮಾನವ ಹಕ್ಕು ಆಯೋಗದ ಪ್ರಾಮಾಣಿಕತೆಗೆ ಕಳಂಕ ತರಲು ಯತ್ನಿಸಲಾಗಿದೆ ಎಂದು, ಬೆಳ್ತಂಗಡಿಯ ಪ್ರವೀಣ್.ಕೆ.ಆರ್ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ 100/2025ರಂತೆ ಕಾಲಂ 204, 319 (2), 353(2), 3(5) ರ ಅನ್ವಯ ಮದನ್ ಬುಗುಡಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು, ಮದನ್ ಬುಗುಡಿಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿ, ನಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ವರದಿಯನ್ನು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಠಾಣೆಗೆ ಹಾಜರಾಗಿರುವ ಮದನ್ ಬುಗುಡಿ “ಹುಬ್ಬಳ್ಳಿಯಲ್ಲಿ ರೌಡಿಶೀಟರ್ ಆಗಿರುವ ನನ್ನನ್ನು ಗಿರೀಶ್ ಮಟ್ಟಣ್ಣನವರ್ ಮಾಧ್ಯಮಗಳಿಗೆ ಯಾಕೆ ಈ ರೀತಿ ಪರಿಚಯಿಸಿದರು ಎನ್ನುವುದು ತಿಳಿದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
* ಸುಳ್ಯ: ಜಲಪಾತ ನೋಡಲು ತೆರಳಿದ ಯುವಕ ವಿದೇಶದಲ್ಲಿ ಸಾವು
ಸುಳ್ಯ: ಸುಬ್ರಹ್ಮಣ್ಯ ಸಮೀಪದ ನಡುಗಲ್ಲು ಕಲ್ಲಾಜೆಯ ನಿವಾಸಿ ನಂದನ್ ಎನ್ನುವವರು, ಮಾರಿಷಸ್ ನಲ್ಲಿ ಡಿಪ್ಲೋಮಾ ಇನ್ ಹಾಸ್ಪಿಟಾಲಿಟಿ ಆ್ಯಂಡ್ ಟೂರಿಸಂ ವಿಷಯದಲ್ಲಿ ಶಿಕ್ಷಣ ಪಡೆಯುತ್ತಿದ್ದು, ಜಲಪಾತವೊಂದನ್ನು ನೋಡಲು ತೆರಳಿದ ಸಮಯದಲ್ಲಿ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ಮೃತಪಟ್ಟ ಘಟನೆ ನಡೆದಿದೆ. ನಂದನ್ ಅವರ ಮೃತದೇಹವನ್ನು ಮರಿಷಸ್ ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಂದನ್ ಅವರ ಸೋದರಮಾವ ಸತ್ಯನಾರಾಯಣ ಭಟ್ ಅವರು ಆತನ ಮೃತದೇಹವನ್ನು ಅಲ್ಲಿನ ಸರ್ಕಾರದ ನಿಯಮಾನುಸಾರ, ಇಲ್ಲಿನ ಸರ್ಕಾರದ ಸಹಾಯದಿಂದ ಹುಟ್ಟೂರಿಗೆ ತರಿಸುವಂತೆ, ಆತನ ತಂದೆ ತಾಯಿಗಳ ಪರವಾಗಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿಯವರು ಕೇಂದ್ರ ಸಚಿವರಾದ ಜೈ ಶಂಕರ್ ಅವರಿಗೆ ಮನವಿ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ ಅವರು ಕೂಡ ಕೇಂದ್ರ ಸರಕಾರಕ್ಕೆ ಈ ಕುರಿತು ಮಾಹಿತಿ ನೀಡಿ, ವ್ಯವಸ್ಥೆಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
* ಮೂಡಬಿದರೆ: ಗ್ಯಾಂಗ್ ರೇಪ್ ಗೆ ಯತ್ನ; ಪೊಲೀಸರಿಂದ ಹೆಣ್ಣು ಮಕ್ಕಳ ರಕ್ಷಣೆ
ಮೂಡಬಿದರೆ: ನಿಡ್ಡೋಡಿ ಕಲ್ಲುಕುಮೆರು ಎನ್ನುವ ಪ್ರದೇಶದಲ್ಲಿ ಗ್ಯಾಂಗ್ ರೇಪ್ ನಡೆಯುವ ಸಂಭವವಿದ್ದ ಬೆನ್ನಲ್ಲೇ, ತಕ್ಷಣ ಕಾರ್ಯಾಚರಣೆಯ ಮೂಲಕ ಮೂಡಬಿದರೆಯ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದ ತಂಡ ಅದನ್ನು ತಪ್ಪಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಈ ಮೂಲಕ ಇಬ್ಬರು ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಸ್ಥಳೀಯ ಮಹೇಶ್, ಬಜಪೆಯ ಶ್ರೀಕಾಂತ್, ಕಟೀಲಿನ ಯಜ್ಞೇಶ್, ಮೂಲ್ಕಿಯ ದಿಲೀಪ್ ಎಂದು ಗುರುತಿಸಲಾಗಿದೆ. ಮಹೇಶ್ ಆಟೋ ಚಾಲಕನಾಗಿದ್ದು, ಕೆಲವು ದಿನಗಳ ಹಿಂದೆ ತನ್ನ ಆಟೋದಲ್ಲಿ ಪ್ರಯಾಣಿಸಿದ ಅಪ್ರಾಪ್ತ ಹುಡುಗಿಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು, ಸಂದೇಶಗಳ ಮೂಲಕವೇ ಪ್ರೀತಿಯನ್ನು ವ್ಯಕ್ತಪಡಿಸಿ, ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಅಕ್ಟೋಬರ್ ಏಳರಂದು ಆಕೆಯನ್ನು ಕಿನ್ನಿಗೋಳಿಗೆ ಬರುವಂತೆ ತಿಳಿಸಿದ್ದಾನೆ. ಅಪ್ರಾಪ್ತ ಹುಡುಗಿ ತನ್ನ ಗೆಳತಿಯನ್ನು ಕರೆದುಕೊಂಡು ಕಿನ್ನಿಗೋಳಿಗೆ ತೆರಳಿದ್ದಾಳೆ. ಅಲ್ಲಿಂದ ಮಹೇಶ್ ಇಬ್ಬರನ್ನೂ ಆಟೋದಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದು, ಗೆಳತಿಯನ್ನು ಮನೆಯ ವರಾಂಡದಲ್ಲಿ ಕೂರಿಸಿ, ಅಪ್ರಾಪ್ತ ಹುಡುಗಿಯನ್ನು ಕೋಣೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಅಕ್ಟೋಬರ್ 13ರಂದು ಮನೆಯನ್ನು ಶುಚಿಗೊಳಿಸಲು ನೆರವಾಗುವಂತೆ ಕೇಳಿಕೊಂಡು, ಅಪ್ರಾಪ್ತ ಹುಡುಗಿ ಮತ್ತು ಆಕೆಯ ಗೆಳತಿಯನ್ನು ಪುನಃ ತನ್ನ ಮನೆಗೆ ಕರೆಸಿಕೊಂಡಿದ್ದಾನೆ. ಈ ಬಾರಿಯೂ ಮಹೇಶ್ ಹುಡುಗಿಯ ಮೇಲೆ ಮತ್ತೊಮ್ಮೆ ಅತ್ಯಾಚಾರವೆಸಗಿದ್ದು, ಆತನ ಸ್ನೇಹಿತರಾದ, ಇತರ ಆರೋಪಿಗಳಾದ ಶ್ರೀಕಾಂತ್, ದಿಲೀಪ್ ಮತ್ತು ಯಜ್ಞೇಶ್ ಆಕೆಯ ಮೇಲೆ ಅತ್ಯಾಚಾರವೆಸಗಲು ತಮ್ಮ ಸಮಯಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಮೂಡಬಿದರೆ ಪೊಲೀಸರು ಮಹೇಶ್ ಮನೆಯ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ನಡೆದ ಸಂಗತಿಯನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
* ಪುತ್ತೂರು: ಮಗುವಿನ ಗಂಟಲಲ್ಲಿ ಕಾಡಿಗೆ ಡಬ್ಬಿ; ಶಸ್ತ್ರಚಿಕಿತ್ಸೆ ಇಲ್ಲದೆ ಹೊರತೆಗೆದ ವೈದ್ಯರು
ಪುತ್ತೂರು: ಬೆಂಗಳೂರಿನಲ್ಲಿ ವಾಸವಾಗಿದ್ದು, ಮೂಲತಃ ನೆಹರುನಗರದ ನಿವಾಸಿಯಾದ ಮಂಜು ಮತ್ತು ವಿಶಾಲಾಕ್ಷಿ ದಂಪತಿಯ ಒಂದುವರೆ ವರ್ಷದ ಮಗು ಆರ್ಯನ್, ಕಳೆದ ವರ್ಷ ಜುಲೈ ತಿಂಗಳ ಸಮಯದಲ್ಲಿ ಕಾಡಿಗೆ ಡಬ್ಬಿಯೊಂದನ್ನು ನುಂಗಿದ್ದು, ಅದು ಹೊರತೆಗೆಯಲಾಗದೇ ಗಂಟಲಲ್ಲೇ ಸಿಲುಕಿಕೊಂಡಿತ್ತು. ಮೇಲ್ನೋಟಕ್ಕೆ ಅದು ಯಾರಿಗೂ ಗೋಚರಿಸುತ್ತಿರಲಿಲ್ಲ. ಇದರಿಂದಾಗಿ ಮಗುವಿಗೆ ಊಟ ಮಾಡಲು ತೊಂದರೆಯಾಗುತ್ತಿತ್ತು. ಅಲ್ಲದೆ ಮಗು ಅಮ್ಮ ಎನ್ನುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾತನಾಡುತ್ತಿರಲಿಲ್ಲ. ಹೀಗಾಗಿ ತಂದೆ ತಾಯಿಗಳಿಗೆ ಮಗು ಏನೋ ನುಂಗಿದೆ ಎನ್ನುವ ಅನುಮಾನ ಮೂಡಿತ್ತು. ಬೆಂಗಳೂರು ಸೇರಿದಂತೆ ವಿವಿಧ ವೈದ್ಯರಲ್ಲಿ ತೋರಿಸಿದ್ದು, ಸ್ಕ್ಯಾನಿಂಗ್ ನಲ್ಲಿಯೂ ಕೂಡ ಕಾಡಿಗೆ ಡಬ್ಬ ಗಂಟಲಲ್ಲಿರುವುದು ಕಂಡುಬಂದಿಲ್ಲ. ಪರೀಕ್ಷಿಸಿದ ವೈದ್ಯರು ಕೇವಲ ಕೆಮ್ಮು ಮತ್ತು ಕಫಕ್ಕೆ ಔಷಧಿ ನೀಡುತ್ತಿದ್ದರೆ ಹೊರತು, ಯಾವುದೇ ರೀತಿಯ ಶಾಶ್ವತ ಪರಿಹಾರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಗು ಮತ್ತು ಅದರ ತಂದೆ ತಾಯಿಗಳು ಕೂಡ ವರ್ಷಗಳ ಕಾಲ ಸಾಕಷ್ಟು ಸಂಕಷ್ಟವನ್ನು ಅನುಭವಿಸಿದರು. ಕಳೆದೆರಡು ದಿನಗಳ ಹಿಂದೆ ಪುತ್ತೂರಿನ ನೆಹರುನಗರದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ ವಿಶಾಲಾಕ್ಷಿ ಅವರು, ಮಗುವಿನ ಕಫ ಮತ್ತು ಕೆಮ್ಮಿನ ಚಿಕಿತ್ಸೆಗೆಂದು ಮಕ್ಕಳ ತಜ್ಞರಾದ ಡಾ/ ಅರ್ಚನಾ ಕರಿಕ್ಕಳ ಅವರ ಬಳಿ ಬಂದ ಸಮಯದಲ್ಲಿ, ಡಾ/ ಅರ್ಚನಾ ಅವರಿಗೂ ಮಗುವಿನ ಗಂಟಲಲ್ಲಿ ಯಾವುದೋ ಮತ್ತು ಸಿಲುಕಿಕೊಂಡಿರುವ ಅನುಮಾನ ಬಂದಿದೆ. ತಮ್ಮ ಅನುಮಾನವನ್ನು ಪರಿಹರಿಸಿಕೊಳ್ಳಲು, ಮಗುವನ್ನು ಇಎನ್ ಟಿ ತಜ್ಞರಾದ ಡಾ/ ರಾಮಮೋಹನ ಅವರ ಬಳಿ ಕಳುಹಿಸಿದ್ದಾರೆ. ಅವರಿಗೂ ಯಾವುದೋ ವಸ್ತು ಗಂಟಲಲ್ಲಿರುವುದು ಖಚಿತವಾಗಿದ್ದು, ಚಿಕಿತ್ಸೆ ನೀಡಿದ ಬಳಿಕ ತಮ್ಮ ಕೈಯಿಂದಲೇ ಮಗುವಿನ ಗಂಟಲಲ್ಲಿದ್ದ ವಸ್ತುವನ್ನು ನಿಧಾನವಾಗಿ ಹೊರ ತೆಗೆದಿದ್ದಾರೆ. ಅದು ಕಾಡಿಗೆ ಡಬ್ಬಿ ಎನ್ನುವುದು ನಂತರ ಬೆಳಕಿಗೆ ಬಂದಿದೆ. ಮಗು ಕ್ಷೇಮವಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.
* ಉಳ್ಳಾಲ: ಅಪರಿಚಿತ ಶವ ಪತ್ತೆ
ಉಳ್ಳಾಲ: ಸ್ಥಳೀಯ ವ್ಯಕ್ತಿಯೊಬ್ಬರು ಮಂಗಳವಾರ ಮಧ್ಯಾಹ್ನ, ನಿರ್ಜನ ಪ್ರದೇಶದ ಬಸ್ ನಿಲ್ದಾಣದ ಸಮೀಪ ತಮ್ಮ ಬೈಕ್ ಅನ್ನು ಇಡಲು ಹೋದ ಸಮಯದಲ್ಲಿ, ಅಪರಿಚಿತ ಮೃತದೇಹವೊಂದು ಪತ್ತೆಯಾಗಿರುವ ಘಟನೆ, ಬಾಳೆಪುಣಿ ಗ್ರಾಮದ ಮುದಂಗಾರು ಕಟ್ಟೆ ಎನ್ನುವಲ್ಲಿ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೊಣಾಜೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೃತದೇಹ ಪಾತೂರಿನ ಮೊಹಮ್ಮದ್ ನಿಯಾಫ್ ಅವರದ್ದು ಎನ್ನುವ ಸಂಗತಿ ತಿಳಿದುಬಂದಿದೆ. ಮೊಹಮ್ಮದ್ ನಿಯಾಫ್ ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಕಳೆದ ವರ್ಷ ಮಹಿಳೆಯೊಬ್ಬರ ಸರ ಕಿತ್ತು, ಪರಾರಿಯಾದ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಮೃತದೇಹದ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ ನಿಲ್ದಾಣದಲ್ಲಿ ಅಧಿಕ ಪ್ರಮಾಣದಲ್ಲಿ ಮಣ್ಣು ಬಿದ್ದಿರುವುದರಿಂದ ಆತ ಸಿಡಿಲು ಬಡಿದು ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.







