ಕರಾವಳಿ ಟಾಪ್ ನ್ಯೂಸ್
* ಬೆಳ್ತಂಗಡಿ: ಪೊಲೀಸರ ನಡೆಗೆ ಪ್ರತಿಭಟನಾಕಾರರ ಆಕ್ರೋಶ
* ಸುಳ್ಯ: ಪ್ರಯಾಣಿಕರು ಇಳಿಯುವ ಸ್ಥಳದಲ್ಲಿ ಬಸ್ ನ ಬಾಗಿಲು ತೆರೆಯದ ಚಾಲಕ
* ಪುತ್ತೂರು: ಮಧ್ಯಾಹ್ನದ ಸಮಯದಲ್ಲಿ ಅಂಗಡಿಯೊಳಗೆ ನುಗ್ಗಿ ಕಳ್ಳತನ
* ಕುಂದಾಪುರ: ಅಂದರ್ ಬಾಹರ್ ಜುಗಾರಿ ಅಡ್ಡೆ ಮೇಲೆ ದಾಳಿ
* ಕಾರ್ಕಳ: ಚರಂಡಿಗೆ ಉರುಳಿದ ಕಾರ್
* ಮಂಗಳೂರು: ಮಾದಕ ದ್ರವ್ಯ ಸೇವನೆ; ಆರೋಪಿಗಳ ಬಂಧನ
* ಉಡುಪಿ: ಸ್ಕೂಟರ್ ಮತ್ತು ಕಾರ್ ನಡುವೆ ಢಿಕ್ಕಿ
* ಬೈಂದೂರು: ವೈಯಕ್ತಿಕ ಕಾರಣದಿಂದ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ
* ಉಳ್ಳಾಲ: ರಸ್ತೆ ದಾಟುತ್ತಿದ್ದ ಪಾದಾಚಾರಿ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಬೆಳ್ತಂಗಡಿ: ಪೊಲೀಸರ ನಡೆಗೆ ಪ್ರತಿಭಟನಾಕಾರರ ಆಕ್ರೋಶ
ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಹೋದ ಸಂದರ್ಭದಲ್ಲಿ, ಪೊಲೀಸರು ಕಾವಲು ನಿಂತ ಘಟನೆ ಸೋಮವಾರದಂದು ನಡೆದಿದೆ. ನ್ಯಾಯ ಒದಗಿಸಬೇಕೆಂದು ಸೌಜನ್ಯ ಪರ ಹೋರಾಟಗಾರರು ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಲು ತೆರಳಿದ್ದರು. ಈ ಸಮಯದಲ್ಲಿ ತಹಶೀಲ್ದಾರರು ತಮ್ಮ ಕಛೇರಿಯಲ್ಲಿ ಇರಲಿಲ್ಲ. ಹೋರಾಟಗಾರ್ತಿಯೊಬ್ಬರು ಕರೆ ಮಾಡಿ ಕೇಳಿದಾಗ “ನಾನು ರಜೆಯಲ್ಲಿದ್ದೇನೆ ಮತ್ತು ನೀವು ಅಪಾಯಿಂಟ್ಮೆಂಟ್ ತೆಗೆದುಕೊಂಡು ಬಂದಿಲ್ಲ” ಎಂದು ತಿಳಿಸಿದ್ದಾರೆ. ಇದರಿಂದ ಹೋರಾಟಗಾರರು ಆಕ್ರೋಶಗೊಂಡಿದ್ದಾರೆ. “ಮನವಿ ಸಲ್ಲಿಸಲು ಬರಲು ಕೂಡ ಹೋರಾಟಗಾರರು ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರಬೇಕೇ?” ಎಂದು ಅವರು ಮಾಧ್ಯಮಗಳ ಮುಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಉಪತಹಶೀಲ್ದಾರರು ಕೂಡ ಇರದೇ, ಕೋಣೆಗೆ ಬೀಗ ಹಾಕಿದ್ದರಿಂದ, ಮನವಿಯನ್ನು ಟಪಾಲು ವಿಭಾಗದಲ್ಲಿ ಸಲ್ಲಿಸಿ ಬಂದರು ಎನ್ನಲಾಗಿದೆ. ಹಾಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ ಕಾರಣಕ್ಕೆ ಹೋರಾಟಗಾರರು ಬೇಸರ ವ್ಯಕ್ತಪಡಿಸಿದ್ದು “ನಾವು ನ್ಯಾಯ ಕೇಳಲು ಬಂದಿರುವುದು ಅಷ್ಟೇ. ಯಾವುದೇ ರೀತಿಯ ಹಲ್ಲೆ ನಡೆಸಲು ಅಲ್ಲ. ನಮ್ಮನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ. ನಮ್ಮದು ಶಾಂತಿಯುತ ಹೋರಾಟ ಅದನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ತಹಶೀಲ್ದಾರರು ಗೈರಾಗಿರುವ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಳ್ಳುತ್ತೇವೆ” ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದಕ್ಕೂ ಮೊದಲು ಮಹೇಶ್ ಶೆಟ್ಟಿ ತಿಮರೋಡಿ ಪರ ಹೋರಾಟ ಮಾಡಲು ಅನುಮತಿ ಪಡೆದಿದ್ದು, ಅದನ್ನು ನಿರಾಕರಿಸಲಾಗಿತ್ತು ಎನ್ನುವ ಸಂಗತಿ ತಿಳಿದುಬಂದಿದೆ.
* ಸುಳ್ಯ: ಪ್ರಯಾಣಿಕರು ಇಳಿಯುವ ಸ್ಥಳದಲ್ಲಿ ಬಸ್ ನ ಬಾಗಿಲು ತೆರೆಯದ ಚಾಲಕ
ಸುಳ್ಯ: ಸ್ವಯಂ ಚಾಲಿತ ಬಾಗಿಲನ್ನು ಹೊಂದಿರುವ, ಸುಳ್ಯ ಮತ್ತು ಕೊಯನಾಡು ನಡುವಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನ ಚಾಲಕ, ಪ್ರಯಾಣಿಕರು ಇಳಿಯಬೇಕಾದ ಜಾಗದಲ್ಲಿ ಬಸ್ ಅನ್ನು ನಿಲ್ಲಿಸದೆ, ಬಾಗಿಲನ್ನು ತೆರೆಯದೆ ಸತಾಯಿಸಿದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ. ಕೊಯನಾಡಿನಿಂದ ಸುಳ್ಯಕ್ಕೆ ಬರುತ್ತಿದ್ದ ಸಮಯದಲ್ಲಿ ಕೂಡ ಇದೇ ರೀತಿ ವರ್ತಿಸಿದ್ದಾನೆ. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡು, ಪುತ್ತೂರು ಹಾಗೂ ಸುಳ್ಯ ನಿಗಮದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಕ್ಷಣ ಪ್ರಯಾಣಿಕರ ಮನವಿಗೆ ಸ್ಪಂದಿಸಿದ ಇಲಾಖಾಧಿಕಾರಿಗಳು, ಚಾಲಕನಾದ ಗಫರ್ ನಿಗೆ ಶಿಕ್ಷೆಯ ರೂಪದಲ್ಲಿ ಮಾರ್ಗ ಮಧ್ಯದಲ್ಲಿಯೇ ಬಸ್ ನಿಂದ ಇಳಿಸಿ, ಮತ್ತೊಂದು ಬಸ್ ಗೆ ನಿಯೋಜಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ.
* ಪುತ್ತೂರು: ಮಧ್ಯಾಹ್ನದ ಸಮಯದಲ್ಲಿ ಅಂಗಡಿಯೊಳಗೆ ನುಗ್ಗಿ ಕಳ್ಳತನ
ಪುತ್ತೂರು: ಅಂಗಡಿಯ ಮಾಲೀಕರು ಮಧ್ಯಾಹ್ನದ ಸಮಯದಲ್ಲಿ ಶೌಚಾಲಯಕ್ಕೆ ಹೋಗಿ ಬರುವುದರೊಳಗಾಗಿ, ಅಂಗಡಿಯಲ್ಲಿ ಇರಿಸಿದ್ದ ಹಣ ಕಳುವಾದ ಘಟನೆ, ಸೋಮವಾರದಂದು ಗುಂಡಿಜೆ ಟ್ರೇಡರ್ಸ್ ನಲ್ಲಿ ನಡೆದಿದೆ. ಮಾಲೀಕರು ಅಂಗಡಿಯ ಶಟರ್ ಅನ್ನು ತೆರೆದಿಟ್ಟು, ಹಣವನ್ನು ಇರಿಸಿದ ಡ್ರಾವರ್ ಗೆ ಬೀಗ ಹಾಕಿ, ಅಂಗಡಿಯ ಹಿಂಭಾಗದಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬರುವ ಹೊತ್ತಿಗೆ ಡ್ರಾವರ್ ಮುರಿದು ಬಿದ್ದಿದ್ದು, ಅದರಲ್ಲಿ ಇರಿಸಿದ್ದ ಐದು ಲಕ್ಷ ರೂಪಾಯಿಯಷ್ಟು ಹಣ ಕಳ್ಳತನವಾಗಿದೆ. ಅಂಗಡಿಯೊಳಗೆ ಸಿ ಸಿ ಕ್ಯಾಮೆರಾ ಇದ್ದರೂ, ಅದನ್ನು ರಿಚಾರ್ಜ್ ಮಾಡಿಸದ ಕಾರಣ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ ಹೊರಗೆ ಹಾಕಲಾದ ಸಿಸಿ ಕ್ಯಾಮೆರಾದ ಸ್ವಿಚ್ ಕೂಡ ಆಫ್ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ವಾಣಿಜ್ಯ ಸಂಕಿರ್ಣದಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳನ್ನು ಬಾಡಿಗೆಗೆ ನೀಡಲಾಗಿದ್ದು, ಒಂದು ಸಿಸಿ ಕ್ಯಾಮೆರಾ ಕೂಡ ಅಳವಡಿಸಿಲ್ಲ, ಪ್ರತಿಯೊಂದು ಅಂಗಡಿಯ ಎದುರಿಗೆ ನಿಂತು ಕಾವಲು ಕಾಯುವುದೇ ಪೊಲೀಸರ ಕೆಲಸವಲ್ಲ, ಸಾರ್ವಜನಿಕರು ಕೂಡ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿರಹಿತ ಕಾರ್ಯನಿರ್ವಹಣೆಯಿಂದಾಗಿ ಈ ರೀತಿಯ ಸನ್ನಿವೇಶ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
* ಕುಂದಾಪುರ: ಅಂದರ್ ಬಾಹರ್ ಜುಗಾರಿ ಅಡ್ಡೆ ಮೇಲೆ ದಾಳಿ
ಕುಂದಾಪುರ: ಹಣವನ್ನು ಪಣವಾಗಿಟ್ಟು ಇಸ್ಪೀಟ್ ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ, ಕಾವ್ರಾಡಿ ಗ್ರಾಮದ ಮರಾಸಿ ರಸ್ತೆಯಲ್ಲಿರುವ ಹಾಡಿಯಲ್ಲಿ ನಡೆದಿದೆ. ಆರೋಪಿಗಳಾದ ಅನಿಲ್, ಪೂರ್ಣೇಶ್, ರಘು ಮತ್ತು ಯೋಗೀಶ್ ಅವರನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಜುಗಾರಿ ಆಟಕ್ಕೆ ಬಳಸಿದ ಇಸ್ಪೀಟ್ ಎಲೆಗಳನ್ನು, 2480 ರೂಪಾಯಿ ನಗದು ಹಣವನ್ನು ಇನ್ನಿತರ ಕೆಲವು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರ್ಕಳ: ಚರಂಡಿಗೆ ಉರುಳಿದ ಕಾರ್
ಕಾರ್ಕಳ: ವಾಹನಕ್ಕೆ ಸ್ಥಳಾವಕಾಶವನ್ನು ಕೊಡಲು ಹೋಗಿ, ಕಾರೊಂದು ಚರಂಡಿಗೆ ಉರುಳಿದ ಘಟನೆ ಕಾಬೆಟ್ಟುವಿನಲ್ಲಿ ನಡೆದಿದೆ. ಬೈಪಾಸ್ ರಸ್ತೆಯಿಂದ ಕಾಬೆಟ್ಟು ಕಡೆಗೆ ತೆರಳುತ್ತಿದ್ದ ಕಾರು, ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡಲು ಹೋದ ಸಂದರ್ಭದಲ್ಲಿ, ಈ ರೀತಿ ಸಂಭವಿಸಿದೆ. ಚರಂಡಿ ಹುಲ್ಲಿನಿಂದ ಆವೃತವಾಗಿರುವ ಕಾರಣ ಚಾಲಕನ ಗಮನಕ್ಕೆ ಬರಲಿಲ್ಲ ಎನ್ನಲಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಪುರಸಭಾ ವ್ಯಾಪ್ತಿಗೆ ಒಳಪಡುವ ಈ ಚರಂಡಿಯ ಸ್ವಚ್ಛತೆಯ ಕುರಿತು, ಸಂಬಂಧಿತ ವ್ಯಕ್ತಿಗಳು ಗಮನಹರಿಸದಿದ್ದ ಕಾರಣ ಅಪಘಾತ ಸಂಭವಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
* ಮಂಗಳೂರು: ಮಾದಕ ದ್ರವ್ಯ ಸೇವನೆ; ಆರೋಪಿಗಳ ಬಂಧನ
* ಮಂಗಳೂರು: ಮಾದಕ ವಸ್ತುಗಳ ಸೇವನೆಗೆ ಸಂಬಂಧಿಸಿದಂತೆ, ಕಳೆದೆರಡು ದಿನಗಳ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಶೇಡಿಗುರಿ ಈರಿ ಮೈದಾನದ ಸಮೀಪದ, ಸಾರ್ವಜನಿಕ ರಸ್ತೆಯೊಂದರ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಸಿಗರೇಟ್ ಸೇದುತ್ತಾ ನಿಂತಿದ್ದು, ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಾದಕ ದ್ರವ್ಯವನ್ನು ಸಿಗರೇಟಿನೊಳಗೆ ತುಂಬಿಸಿ, ಸೇದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಅವರನ್ನು ತಪಾಸಣೆಗೆ ಒಳಪಡಿಸಿದಾಗ ಅವರು ನೀಡಿದ ಹೇಳಿಕೆ ದೃಢಪಟ್ಟಿದೆ. ಆರೋಪಿಗಳನ್ನು ಅಶೋಕ ನಗರದ ಕುಂದರ್ ಕಾಂಪೌಂಡ್ ನಿವಾಸಿ ಶರತ್ ಕುಮಾರ್ ಮತ್ತು ಸುಲ್ತಾನ್ ಬತ್ತೇರಿ ಅಪಾರ್ಟ್ ಮೆಂಟ್ ನ ನಿವಾಸಿಯಾದ ಮಂಜುನಾಥ ಸಂಗಪ್ಪಾ ನಾಗೂರು ಎಂದು ಗುರುತಿಸಲಾಗಿದೆ. ಇಬ್ಬರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಡುಪಿ: ಸ್ಕೂಟರ್ ಮತ್ತು ಕಾರ್ ನಡುವೆ ಢಿಕ್ಕಿ
ಉಡುಪಿ: ಭಾನುವಾರದಂದು ನಡೆದ ರಸ್ತೆ ಅಪಘಾತದಲ್ಲಿ, ಶಿರ್ವ ಪೊಲೀಸ್ ಠಾಣೆಯ ಎಎಸ್ಐ ಆದ ಸುದೇಶ್ ಶೆಟ್ಟಿ ಅವರ ಪುತ್ರಿ, ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಸ್ಪರ್ಶ ಅವರು ಸಾವನ್ನಪ್ಪಿದ ಘಟನೆ, ನಿಟ್ಟೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಡಿಪೋ ಬಳಿ ನಡೆದಿದೆ. ಭಾನುವಾರ ರಾತ್ರಿ ಉಡುಪಿ ಮತ್ತು ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಕೇಶ್ ಎನ್ನುವ ವ್ಯಕ್ತಿಯು, ಕಾರನ್ನು ಸಂತೆಕಟ್ಟೆ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು, ಅದೇ ಕಡೆಗೆ ಬರುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದರು. ಪರಿಣಾಮವಾಗಿ ಸ್ಕೂಟರ್ ನಲ್ಲಿದ್ದ ಸ್ಪರ್ಶ ಮತ್ತು ಆಕೆಯ ತಾಯಿ ಶರ್ಮಿಳಾ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶರ್ಮಿಳಾ ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದ್ದು, ಸ್ಪರ್ಶ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಹಿನ್ನೆಲೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೈಂದೂರು: ವೈಯಕ್ತಿಕ ಕಾರಣದಿಂದಾಗಿ ಕಾಲೇಜ್ ವಿದ್ಯಾರ್ಥಿ ಆತ್ಮಹತ್ಯೆ
ಬೈಂದೂರು: ವಿದ್ಯಾಭ್ಯಾಸದ ವಿಚಾರವಾಗಿ ಮನನೊಂದು ಕಾಲೇಜು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ, ಕಳೆದೆರಡು ದಿನಗಳ ಹಿಂದೆ ನಾವುಂದದಲ್ಲಿ ನಡೆದಿದೆ. ನಾವುಂದ ನಿವಾಸೆಯಾದ ಸ್ಕಂದ ಎಸ್ ಎಸ್ ಎಲ್ ಸಿ ವರೆಗೆ ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ಪದವಿ ಪೂರ್ವ ವಿದ್ಯಾಭ್ಯಾಸಕ್ಕಾಗಿ ಅವನನ್ನು ಪೋಷಕರು ಬೆಂಗಳೂರಿನ ಕಾಲೇಜಿಗೆ ಸೇರಿಸಿದ್ದರು. ದೀಪಾವಳಿ ಹಬ್ಬದ ರಜೆಗೆಂದು ಆಗಮಿಸಿದ್ದ ಸ್ಕಂದ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಇಷ್ಟವಿಲ್ಲವೆಂದು ಪೋಷಕರಿಗೆ ತಿಳಿಸಿದ್ದಾನೆ. ಹಬ್ಬದ ರಜೆ ಮುಗಿದರೂ ಬೆಂಗಳೂರಿಗೆ ಹಿಂತಿರುಗಲು ಮನಸ್ಸು ಮಾಡಲಿಲ್ಲ. ಅಲ್ಲದೆ ಎರಡು ಮೂರು ಬಾರಿ ನಿಗದಿಪಡಿಸಿದ್ದ ಬಸ್ ಟಿಕೆಟ್ ಅನ್ನು ರದ್ದುಪಡಿಸಿದ್ದ. ಇದರಿಂದ ಬೇಸತ್ತ ತಂದೆ ತಾಯಿಗಳು, ಆತನ ಭವಿಷ್ಯದ ಕುರಿತು ಸಾಕಷ್ಟು ಬುದ್ಧಿ ಮಾತು ಹೇಳಿದ್ದರು. ಇದರಿಂದಾಗಿ ಮಾನಸಿಕವಾಗಿ ನೊಂದ ಸ್ಕಂದ, ತನ್ನ ಕೋಣೆಯಲ್ಲಿನ ಫ್ಯಾನಿಗೆ ಚೂಡಿದಾರದ ವೆಲನ್ನು ಕಟ್ಟಿ, ನೇಣು ಬಿಗಿದುಕೊಂಡಿದ್ದಾನೆ. ಇದನ್ನು ಗಮನಿಸಿದ ಪೋಷಕರು ತಕ್ಷಣ ಸ್ಕಂದನನ್ನು ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿದ ಬಳಿಕ ತಿಳಿದು ಬಂದ ಸಂಗತಿ ಎಂದರೆ, ಸ್ಕಂದನನ್ನು ಆಸ್ಪತ್ರೆಗೆ ಕರೆ ತರುವ ಮೊದಲೇ, ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಉಳ್ಳಾಲ: ರಸ್ತೆ ದಾಟುತ್ತಿದ್ದ ಪಾದಾಚಾರಿ ಸಾವು
ಉಳ್ಳಾಲ: ರಸ್ತೆ ದಾಟುತ್ತಿದ್ದ ಸಮಯದಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ, ಪಾದಾಚಾರಿಯೊಬ್ಬರು ಮೃತಪಟ್ಟ ಘಟನೆ, ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ತೊಕ್ಕೊಟ್ಟು ಮೇಲ್ಸೇತುವೆಯ ಬಳಿ ನಡೆದಿದೆ. ಸೋಮೇಶ್ವರ ಗ್ರಾಮದ ರಾಮಚಂದ್ರ ಎನ್ನುವವರು ಮದುವೆ ಸಮಾರಂಭವೊಂದನ್ನು ಮುಗಿಸಿ, ಮೇಲ್ಸೇತುವೆಯ ಬಳಿ ಉಳ್ಳಾಲದ ಬಸ್ಸಿನಿಂದ ಇಳಿದು, ಹೆದ್ದಾರಿಯನ್ನು ದಾಟುತ್ತಿದ್ದಾಗ, ಮಂಗಳೂರಿನ ಕಡೆಗೆ ತೆರಳುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ರಾಮಚಂದ್ರ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯನ್ನು ತಲುಪುವ ಮೊದಲೇ ಮಾರ್ಗಮಧ್ಯದಲ್ಲೇ ಅವರು ಸಾವನ್ನಪ್ಪಿದರು ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.







