ಕಳಸ – ಹೊರನಾಡು ರಸ್ತೆ: ಗುಂಡಿಗಳದ್ದೇ ಸಾಮ್ರಾಜ್ಯ!
* ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿರುವ ರಾಜ್ಯ ಹೆದ್ದಾರಿ
* ಪ್ರವಾಸಿಗರ ಬೇಸರ: ಹೆದ್ದಾರಿ ದುರಸ್ತಿಗೆ ಪ್ರಸ್ತಾವ ಸಲ್ಲಿಕೆ
* ನಯನಾ ಮೋಟಮ್ಮ: ಈ ಸಮಸ್ಯೆ ಯಾಕಮ್ಮ..!?
NAMMMUR EXPRESS NEWS
ಕಳಸ: ಕಳಸ ಪಟ್ಟಣದಿಂದ ಹೊರನಾಡು ಸಂಪರ್ಕ ಕಲ್ಪಿಸುವ ಸುಮಾರು 7 ಕಿ.ಮೀ ದೂರದ ರಸ್ತೆಯು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಅತಿ ಹೆಚ್ಚಿನ ಪ್ರವಾಸಿಗರು ಬರುವ ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆಯ ಸ್ಥಿತಿ ಗ್ರಾಮೀಣ ರಸ್ತೆಗಳಿಗಿಂತ ಕೆಟ್ಟದಾಗಿದೆ. ಹೊಂಡಗುಂಡಿಗಳಿಂದ ಕೂಡಿದ್ದು ಅಪಘಾತಗಳಿಗೆ ಆಹ್ವಾನ ಕೊಟ್ಟಂತಿದೆ. ಅತೀ ಹೆಚ್ಚು ಪ್ರವಾಸಿಗರು ಬರುವ ಈ ಭಾಗ ಇದೀಗ ಸೌಲಭ್ಯ ಇಲ್ಲದೆ ಜನ ಪರದಾಟ ನಡೆಸುವಂತಾಗಿದೆ.
ಕಳೆದ ಮಳೆಗಾಲ ಹೀಗೆ ಆಗಿತ್ತು.. ಆದ್ರೂ ಕೇಳೋರಿಲ್ಲ..!
ಕಳೆದ ವರ್ಷದ ಮಳೆಗಾಲದಲ್ಲೇ ಈ ರಸ್ತೆ ಗುಂಡಿಮಯವಾಗಿತ್ತು. ರಸ್ತೆ ಪಕ್ಕದ ಚರಂಡಿ ನಿರ್ವಹಣೆ ಮಾಡಿದ ಪರಿಣಾಮ,ನಿರ್ವಹಣೆ ಇಲ್ಲದೇ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ವರ್ಷ ಈಗಲೇ ಮಳೆ ವಿಪರೀತವಿದ್ದು, ಇನ್ನೂ ಮಳೆಗಾಲವಿಡೀ ಈ ರಸ್ತೆಯನ್ನು ಹೇಗೆ ಬಳಸುವುದು ಎಂಬುದೇ ಚಿಂತೆ ಆಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಪ್ರವಾಸಿಗರ ಬೇಸರ: ಹೆದ್ದಾರಿ ದುರಸ್ತಿಗೆ ಪ್ರಸ್ತಾವ ಸಲ್ಲಿಕೆ
ಹೊರನಾಡು ಕ್ಷೇತ್ರ ದೇಶದಲ್ಲೇ ಪ್ರಸಿದ್ದಿ ಪಡೆದ ಧಾರ್ಮಿಕ ಕ್ಷೇತ್ರವಾಗಿದ್ದು,ಆದರೆ ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾತ್ರ ಏಕೆ ಇಷ್ಟು ಕೆಟ್ಟದಾಗಿದೆ ಎಂದು ಅರ್ಥ ಆಗುತ್ತಿಲ್ಲ. ಸಂಬಂಧಪಟ್ಟವರು ಏಕೆ ಇಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೊರನಾಡು ಅನ್ನಪೂರ್ಣ ದೇಗುಲದ ಬಳಿ ರಸ್ತೆ ಅವ್ಯವಸ್ಥೆ
ಕಳಸ – ಹೊರನಾಡು ರಸ್ತೆ ಅನೇಕ ಪ್ರದೇಶಗಳಲ್ಲಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಕಸ ವಿಲೇವಾರಿ ಘಟಕದ ಬಳಿ ರಸ್ತೆಯು ಚರಂಡಿಗೆ ಕುಸಿಯುತ್ತಿದ್ದು,ಹೆಬ್ಬಾಳೆ ನೂತನ ಸೇತುವೆ ತಿರುವಿನಲ್ಲಿ ರಸ್ತೆಗೆ ಸಾಕಷ್ಟು ಹಾನಿಯಾಗಿದೆ. ದಾರಿಮನೆಯಿಂದ ಹೆಬ್ಬಾಳೆವರೆಗೂ ರಸ್ತೆ ಮೇಲಿನ ಡಾಂಬರ್ ಕಾಣೆಯಾಗಿದ್ದು, ಹೊರನಾಡು ಗ್ರಾಮ ಪಂಚಾಯ್ತಿ ಕಛೇರಿ ಬಳಿ ಸುಮಾರು 100 ಮೀ ನಷ್ಟು ಉದ್ದ ರಸ್ತೆಯಲ್ಲಿ ಕೆರೆಯಂತಹ ಗುಂಡಿಗಳಾಗಿವೆ. ಇಷ್ಟೆಲ್ಲಾ ಅವ್ಯವಸ್ಥೆಯಾಗಿದ್ದರೂ ಕೂಡ ಪಿಡಬ್ಲ್ಯುಡಿ ಇಲಾಖೆ ಯಾಕೆ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳಸ-ಹೊರನಾಡು ಹೆದ್ದಾರಿ ದುರಸ್ಥಿ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಚೆನ್ನಯ್ಯ ಅವರು ತಿಳಿಸಿದ್ದಾರೆ.
ನಯನಾ ಮೋಟಮ್ಮ: ಈ ಸಮಸ್ಯೆ ಯಾಕಮ್ಮ..!?
ಶಾಸಕಿ ನಯನಾ ಮೋಟಮ್ಮ ಅವರು ಹೊರನಾಡು ರಸ್ತೆ ಮರು ಡಾಂಬರೀಕರಣಕ್ಕೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯದಲ್ಲೇ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತಿವೆ.
ಆದಷ್ಟು ಬೇಗ ಈ ರಸ್ತೆಯು ನವೀಕರಣಗೊಂಡು ಶ್ರೀಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಅಲ್ಲಿನ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಮುಕ್ತವಾಗಲಿ ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಕಳಕಳಿ. ಈ ಬಗ್ಗೆ ಅಧಿಕಾರಿಗಳು, ಜನ ನಾಯಕರು ತಕ್ಷಣ ಗಮನಿಸಬೇಕಿದೆ.








