ಕರಾವಳಿ ಟಾಪ್ ನ್ಯೂಸ್
• ಬೈಂದೂರು: ನಗದು, ಚಿನ್ನಾಭರಣ ಕಳುವು
• ಪುತ್ತೂರು: ಅವೈಜ್ಞಾನಿಕ ತಡೆಗೋಡೆ ನಿರ್ಮಾಣ; ನ್ಯಾಯಾಲಯದಿಂದ ತಡೆಯಾಜ್ಞೆ
• ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ವಿಚಾರಣೆ ಮುಂದೂಡಿಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೈಂದೂರು: ನಗದು, ಚಿನ್ನಾಭರಣ ಕಳುವು
• ಬೈಂದೂರು: ಹಗಲು ಹೊತ್ತಿನಲ್ಲೇ ಕಳ್ಳರು ಮನೆಗೆ ನುಗ್ಗಿ ನಗದು, ಚಿನ್ನಾಭರಣ ಕಳುವು ಮಾಡಿರುವ ಘಟನೆ ಪಟವಾಲ್ ಹೌಸ್ ಎನ್ನುವವರ ಮನೆಯಲ್ಲಿ ನಡೆದಿದೆ. ಮನೆಯಲ್ಲಿ ಪರಮೇಶ್ವರ ಪಟವಾಲ್ ಅವರ ಮಗ, ಸೊಸೆ ಮತ್ತು ಇಬ್ಬರು ಮಕ್ಕಳು ವಾಸವಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಹೊಂಚು ಹಾಕಿದ್ದಾರೆ. ಅಲ್ಲದೆ ಹಂಚಿನ ಮನೆಯಾದ ಕಾರಣ ಖದೀಮರಿಗೆ ಮನೆಯ ಬೀಗ ಮುರಿದು, ಒಳನುಗ್ಗಲು ಸುಲಭವಾಯಿತು ಎನ್ನಲಾಗಿದೆ.
ಮನೆಯ ಸುತ್ತಮುತ್ತ ಮನೆಗಳಿದ್ದರೂ ಜನನಿಬಿಡ ಪ್ರದೇಶವಾಗಿರುವ ಕಾರಣ ಹಾಗೂ ಮನೆಯ ಬಗ್ಗೆ ತಿಳಿದುಕೊಂಡವರೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. 20 ಪವನ್ ಚಿನ್ನ ಹಾಗೂ 2 ಲಕ್ಷ ರೂಪಾಯಿ ನಗದು ಹಣ ಕಳುವಾಗಿದೆ ಎಂದು ಅಂದಾಜಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಆಗಮಿಸಿದ ಶ್ವಾನದಳ, ಬೆರಳಚ್ಚು ತಂಡ, ಬೈಂದೂರು ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದರು. ಶ್ವಾನದಳವು ಮನೆಯ ಪಕ್ಕದ ರಸ್ತೆಯವರೆಗೂ ತೆರಳಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಪುತ್ತೂರು: ಅವೈಜ್ಞಾನಿಕ ತಡೆಗೋಡೆ ನಿರ್ಮಾಣ ನ್ಯಾಯಾಲಯದಿಂದ ತಡೆಯಾಜ್ಞೆ
ಪುತ್ತೂರು: ಕೃಷಿಭೂಮಿಯ ಪಕ್ಕದಲ್ಲಿ, ಲೇಔಟ್ ಮಾಡುವ ಸಂದರ್ಭದಲ್ಲಿ, ಅವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿರುವ ಘಟನೆ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಬೇರಿಕೆಯಲ್ಲಿ ಲೇಔಟ್ ಮಾಡುವಾಗ ಸಮೀಪದಲ್ಲಿದ್ದ ಚಂದ್ರಾವತಿ ಮತ್ತವರ ಮಕ್ಕಳ ಕೃಷಿ ತೋಟಗಳಿಗೆ ಹಾನಿಯುಂಟಾಗಿದೆ. ಪರಿಣಾಮವಾಗಿ 300ಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಉದ್ಯಮಿಯ ವಿರುದ್ಧ ವಕೀಲರಾದ ನಾಗೇಶ್ ಶರ್ಮ ಅವರ ಮುಖಾಂತರ ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಪುತ್ತೂರು 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ ಸಿ ನ್ಯಾಯಾಲಯವು ಕಾನೂನುಬದ್ಧ ಯೋಜನೆಯಿಲ್ಲದೆ, ಅವೈಜ್ಞಾನಿಕ ತಡೆಗೋಡೆಯಿಂದಾಗಿ ನೈಸರ್ಗಿಕ ಮಳೆ ನೀರು ಅಥವಾ ಒಳಚರಂಡಿ ಮಾರ್ಗಗಳಿಗೆ ಅಡಚಣೆಯುಂಟಾಗಿರುವ ಕಾರಣ ಪಕ್ಕದ ಕೃಷಿಭೂಮಿಗೂ ಹಾನಿಯುಂಟಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಲೇಔಟ್ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿದೆ.
• ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದ ವಿಚಾರಣೆ ಮುಂದೂಡಿಕೆ
ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರ ಧರ್ಮಸ್ಥಳ ದೇಗುಲವನ್ನು ಸಂತ್ರಸ್ತರು ಎಂದು ಪರಿಗಣಿಸಬೇಕೆಂದು ಹಾಗೂ ಅದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿ ಫೆಬ್ರವರಿ 5ರಂದು ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ನಡೆಯಬೇಕಿದ್ದ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ.
ಧರ್ಮಸ್ಥಳ ಪರ ವಕೀಲರಾದ ಸಿ.ವಿ.ನಾಗೇಶ್ ಹಾಗೂ ಎಸ್ಐಟಿ ಪರವಾಗಿ ವಕೀಲರಾದ ದಿವ್ಯರಾಜ್ ಹೆಗ್ಡೆ ವಾದವನ್ನು ಮಂಡಿಸಿದ್ದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರಾದ ರಾಜೇಂದ್ರ ಪ್ರಸಾದ್ ಅವರು ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿದ್ದರು. ಆದರೆ ನ್ಯಾಯಾಧೀಶರು ರಜೆಯಲ್ಲಿದ್ದ ಹಿನ್ನೆಲೆಯಲ್ಲಿ ಯಾವುದೇ ವಾದ ಮಂಡನೆಯಾಗಿರಲಿಲ್ಲ. ಈ ನಡುವೆ ಧರ್ಮಸ್ಥಳದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ವಕೀಲರಿಗೆ ವಾದ ಮಂಡನೆಗೆ ಅವಕಾಶವಿದೆ ಎಂದು ಹೇಳಲಾಗಿತ್ತು.
ಈ ಕಾರಣಕ್ಕಾಗಿ ಎಸ್ಐಟಿ ಪರ ವಕೀಲರಾದ ದಿವ್ಯರಾಜ್ ಹೆಗ್ಡೆ, ಧರ್ಮಸ್ಥಳ ಕ್ಷೇತ್ರದ ಪರ ವಕೀಲರಾದ ಮಹೇಶ್ ಕಜೆ, ಧರ್ಮಸ್ಥಳಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದವರ ಪರವಾಗಿ ವಾಸು ಪೂಜಾರಿ, ಎಸ್ಐಟಿ ಸೈಮನ್, ಡಿವೈಎಸ್ಪಿ ಲೋಕೇಶ್, ಪ್ರಮುಖ ಆರೋಪಿ ಚಿನ್ನಯ್ಯ ಹಾಜರಿದ್ದರು. ಆದರೆ, ಮಾರ್ಚ್ 5ರ ಗುರುವಾರದಂದು ಕೂಡ ವಿಚಾರಣೆ ನಡೆಯಲಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಅಲ್ಲದೆ ಮಾರ್ಚ್ 25ರ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಖಾಯಂ ನ್ಯಾಯಾಧೀಶರು ಆಗಮಿಸುವ ಸಾಧ್ಯತೆ ಇರುವ ಕಾರಣ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.








