ಖಾಸಗಿ ಚಾನಲ್ ವಿರುದ್ದ ಕಿಮ್ಮನೆ 5 ಕೋಟಿ ಕೇಸ್!?
– ಕಿಮ್ಮನೆ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಖ್ಯಾತ ಚಾನಲ್ ನಿರೂಪಕ?
– ಕುಕ್ಕರ್ ಬಾಂಬ್ ಬ್ಲಾಸ್ಟ್ ಆರೋಪಿ ಜತೆ ಹೆಸರು ತಳಕು ಹಾಕಿದ್ದಕ್ಕೆ ಕಿಡಿ
NAMMUR EXPRESS NEWS
ಶಿವಮೊಗ್ಗ: ಸುಳ್ಳು ವರದಿ ಪ್ರಸಾರ ಮಾಡಿದ ಖಾಸಗಿ ಚಾನಲ್ ಒಂದರ ನಿರೂಪಕನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಐದು ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಖಾಸಗಿ ಚಾನಲ್ ಒಂದರ ನಿರೂಪಕ ಅಜಿತ್ ಹನುಮಕ್ಕನವರ್ ತಮ್ಮ ಮೇಲೆ ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ತಾವು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಕಚೇರಿಯನ್ನು ವ್ಯಕ್ತಿಯೊಬ್ಬರಿಂದ ಹಲವು ವರ್ಷಗಳ ಹಿಂದೆಯೇ ಬಾಡಿಗೆಗೆ ಪಡೆದಿದ್ದೆವು. ಈ ಬಾಡಿಗೆಗೆ ಸಂಬಂಧಿಸಿದಂತೆ ಎಲ್ಲಾ ಒಪ್ಪಂದಗಳನ್ನು ನೊಂದಣಿ ಕೂಡ ಮಾಡಿಸಲಾಗಿದೆ. ಈಗ ಕುಕ್ಕರ್ ಬ್ಲಾಸ್ಟ್ ಘಟನೆಗೆ ಸಂಬಂಧಿಸಿದಂತೆ ನನ್ನನ್ನು ಆರೋಪಿಯೊಂದಿಗೆ ಸಂಬಂಧವಿದೆ ಮತ್ತು ವ್ಯವಹಾರವಿದೆ ಎಂದು ಸುದ್ದಿಯಲ್ಲಿ ಬಿತ್ತರಿಸಿದ್ದಾರೆ ಎಂದರು.
ಪಕ್ಷದ ಕಚೇರಿಗಾಗಿ ಬಾಡಿಗೆ ನೀಡಿದ್ದ ಮಾಲೀಕನ ಪುತ್ರ ಕುಕ್ಕರ್ ಬ್ಲಾಸ್ಟ್ ಪ್ರಕರಣ ಪ್ರಮುಖ ಆರೋಪಿ ಶಾರೂಖ್ ಆಗಿದ್ದಾನೆ. ಆದರೆ ಆ ಬಾಡಿಗೆ ನೀಡಿದ್ದ ಮಾಲೀಕ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆ. ಬಾಡಿಗೆಗೆ ನೀಡಿದ ಮಾತ್ರಕ್ಕೆ ಆತನೊಂದಿಗೆ ಹೇಗೆ ಸಂಬಂಧವಿರುತ್ತದೆ ಮತ್ತು ಯಾವ ವ್ಯವಹಾರವಿದೆ ಎಂದು ಅವರು ಸ್ಪಷ್ಟೀಕರಣ ನೀಡಬೇಕು.
ಇದಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸಾಕ್ಷಿಯೂ ಇಲ್ಲದೆ ಈ ರೀತಿಯಲ್ಲಿ ತಪ್ಪು ಸಂದೇಶ ಬೀರುವ ಮತ್ತು ಅಶಾಂತಿಗೆ ಕಾರಣವಾಗುವ ಸುದ್ದಿಯನ್ನು ಬಿತ್ತರಿಸಿರುವುದು ಪ್ರಚೋದನಕಾರಿಯಾಗಿದೆ ಎಂದರು.
ಆ ಚಾನಲ್ ನಿರೂಪಕ ಇಂತಹ ಕೆಲಸ ಬಿಟ್ಟು ಭಿಕ್ಷೆ ಬೇಡುವುದು ಲೇಸು. ಈ ರೀತಿಯ ಸುದ್ದಿ ಮಾಡಿದರೆ ವೇತನ ಹೆಚ್ಚಿಸುತ್ತಾರೆ ಎಂದು ಅಂದುಕೊಂಡಿರಬಹುದು. ಬಿಜೆಪಿಯ ವಕ್ತಾರನಂತೆ ಆತ ಮಾತನಾಡುತ್ತಿರುತ್ತಾನೆ. ಸರಿಯಾಗಿ ವಿಚಾರಿಸದೆ ಕೋಟ್ಯಂತರ ಜನರು ನೋಡುತ್ತಿರುವ ಚಾನಲ್ನಲ್ಲಿ ಇಂತಹ ಸುದ್ದಿ ಬಿತ್ತರಿಸುತ್ತಿರುವುದರಿಂದ ನನಗೆ ಮಾನಹಾನಿಯಾಗಿದೆ. ಸಾರ್ವಜನಿಕರ ಬಳಿಯೇ ಹಣವನ್ನು ಸಂಗ್ರಹಿಸಿ 5 ಕೋಟಿ ರೂ.ಗಳ ಮಾನನಷ್ಟವನ್ನು ಅವರ ವಿರುದ್ಧ ಹೂಡುತ್ತೇನೆ. ಪಕ್ಷವು ಕೂಡ ಪ್ರತ್ಯೇಕವಾಗಿ ನ್ಯಾಯಾಲಯಕ್ಕೆ ದೂರು ದಾಖಲಿಸುತ್ತದೆ ಎಂದರು. ರಾಜೀವ್ ಚಂದ್ರಶೇಖರ್ ಈ ಚಾನಲ್ ಮಾಲೀಕರಾಗಿದ್ದಾರೆ. ಇವರು ಇದನ್ನು ಗಮನಿಸಬೇಕು ಮತ್ತು ಇಂತಹ ಸುದ್ದಿ ಪ್ರಸಾರ ಮಾಡಿದ ನಿರೂಪಕನ ವಿರುದ್ಧ ಕ್ರಮ ಕೈಗೊಂಡು ಆತನನ್ನು ವಾಹಿನಿಯಿಂದ ವಜಾ ಮಾಡಬೇಕು ಮತ್ತು ಆತ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸುಳ್ಳು ಸುದ್ದಿಯ ಹಿಂದೆ ಸ್ಥಳೀಯ ಶಾಸಕರ ಕೈವಾಡವಿರಬಹುದು ಎಂಬ ಶಂಕೆ ಇದೆ. ಇಂತಹ ವಾಹಿನಿಗಳು ಉದ್ದೇಶಪೂರ್ವಕವಾಗಿ ಈ ರೀತಿಯ ದೇಶದ್ರೋಹದ ಸುದ್ದಿಗಳನ್ನು ಬಿತ್ತರಿಸುತ್ತವೆ. ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಮಣಿಪುರ ಹತ್ತಿ ಉರಿಯುತ್ತಿದೆ. ಆ ಬಗ್ಗೆ ಅವರು ಮಾತನಾಡುವುದಿಲ್ಲ. ಹಿಂದೂಗಳ ವಿರುದ್ಧ ಹಿಂದೂಗಳೇ ಗಲಾಟೆ ಮಾಡುವಾಗ ತುಟಿ ಪಿಟಿಕ್ಕೆನ್ನುವುದಿಲ್ಲ. ಧರ್ಮಗಳನ್ನು ಅಡ್ಡ ತರುತ್ತಾರೆ. ಬೇಡವಾದ ವಿಷಯಗಳನ್ನು ದಿನಗಟ್ಟಲೆ ಪ್ರಸಾರ ಮಾಡುತ್ತಾರೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಕಲಗೋಡು ರತ್ನಾಕರ್, ಎಸ್.ಪಿ. ದಿನೇಶ್, ಹೆಚ್.ಸಿ ಯೋಗೇಶ್, ದೇವಿಕುಮಾರ್, ವಿಜಯಕುಮಾರ್, ಅಮರನಾಥ ಶೆಟ್ಟಿ, ರಮೇಶ್ ಹೆಗಡೆ ಇನ್ನಿತರರಿದ್ದರು.
ಇದನ್ನೂ ಓದಿ : ತೀರ್ಥಹಳ್ಳಿ ಹುಡುಗನ ಅನುಮಾನಾಸ್ಪದ ಸಾವು!
HOW TO APPLY : NEET-UG COUNSELLING 2023