ಕಾಡಾನೆ ದಾಳಿ ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ
* ಕಾಡಾನೆ ದಾಳಿಗೆ ಮೃತಪಟ್ಟಿದ್ದ ಹರೀಶ್ ಹಾಗೂ ಉಮೇಶ್
* ಇಬ್ಬರನ್ನು ಕೊಂದ ಕಾಡಾನೆ ಪತ್ತೆ, ಸೆರೆಗೆ ಆದೇಶ
NAMMMUR EXPRESS NEWS
ಶೃಂಗೇರಿ: ತಾಲೂಕಿನ ಕೆರೆಕಟ್ಟೆ ಗ್ರಾ ಪಂ ಯ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ನಿಷ್ಕ್ರಿಯತೆಯ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಮೃತರ ಕುಟುಂಬಗಳಿಗೆ ನ್ಯಾಯ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರು ಅರಣ್ಯ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಅರಣ್ಯ ಇಲಾಖೆ ವನ್ಯಜೀವಿ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ದೂರಿದರು. ಡಿ.ಎಫ್.ಓ ಜನರ ವಿಶ್ವಾಸ ಕಳೆದುಕೊಂಡಿದ್ದು,ಪ್ರಾಣಿಗಳಿಗೆ ಹಾನಿಯಾದರೆ ಕಾನೂನು ಕ್ರಮ ತೆಗೆದುಕೊಳ್ಳುವ ಸರ್ಕಾರ, ಮನುಷ್ಯ ಜೀವಕ್ಕೆ ಯಾವುದೇ ಬೆಲೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
* ಮೃತರ ಕುಟುಂಬಕ್ಕೆ ಪರಿಹಾರ ಚೆಕ್ ವಿತರಣೆ
ಸ್ಥಳಕ್ಕಾಗಮಿಸಿದ ಡಿ ಸಿ,ಎಸ್ಪಿ,ಅರಣ್ಯ ಇಲಾಖೆಯ ಅಧಿಕಾರಿಗಳು,ಶಾಸಕ ಟಿ ಡಿ ರಾಜೇಗೌಡ ಪ್ರತಿಭಟನಾ ನಿರತರ ಅಹವಾಲು ಕೇಳಿ ಮೃತರ ಕುಟುಂಬಕ್ಕೆ ಸರ್ಕಾರ ನಿಗದಿಪಡಿಸಿದ 20 ಲಕ್ಷ ಹಾಗೂ ಶಾಸಕ ರಾಜೇಗೌಡ ವತಿಯಿಂದ 1ಲಕ್ಷ ಹಾಗೂ ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಅವರಿಂದ ಎರಡು ಕುಟುಂಬಕ್ಕೆ ತಲಾ 50,000 ಸಾವಿರ ಪರಿಹಾರವನ್ನು ನೀಡಿದ್ದಾರೆ. ಜೊತೆಗೆ ಎರಡು ಕುಟುಂಬಗಳಿಗೆ 2ಲಕ್ಷ ಪರಿಹಾರದಲ್ಲಿ 4000 ದಂತೆ ಪ್ರತಿ ತಿಂಗಳು ನೀಡಲಾಗುತ್ತದೆ.
* ಇಬ್ಬರನ್ನು ಕೊಂದ ಕಾಡಾನೆ ಪತ್ತೆ, ಸೆರೆಗೆ ಆದೇಶ
ದಾಳಿ ಮಾಡಿದ ನಿನ್ನೆ ರಾತ್ರಿ 7:30 ರ ಸುಮಾರಿಗೆ ದಾಳಿ ಮಾಡಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿರುವ ಶೀರ್ಲು ಎಂಬಲ್ಲಿ ಬಸ್ ಸ್ಟಾಪ್ನ ಪಕ್ಕದಲ್ಲಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದರು ಆದರೆ ಕಾಡಿನೊಳಗೆ ಆನೆ ಹೋಗಿದ್ದು,ಬೆಳಗಿನ ಜಾವ ಶೀರ್ಲು ಗ್ರಾಮದ ಪ್ರದೀಪ್ರವರ ತೋಟಕ್ಕೆ ನುಗ್ಗಿ ಅಡಿಕೆ,ಬಾಳೆ ಬೆಳೆ ನಾಶ ಮಾಡಿದೆ.
ಪ್ರತಿಭಟನೆ ಸಮಯದಲ್ಲಿ ಸೇರಿದ್ದ ಪ್ರತಿಭಟನಾಕಾರರು ದಾಳಿ ಮಾಡಿದ ಕಾಡಾನೆಯನ್ನು ಸೆರೆಹಿಡಿಯುವಂತೆ ಸರ್ಕಾರವನ್ನು ಆಗ್ರಹಿಸಿದ್ದರು,ಅದರಂತೆ ನಿನ್ನೆ ರಾತ್ರಿಯೇ ಕಾಡಾನೆ ಸೆರೆಗೆ ಆದೇಶಿಸಿದ್ದು,ಬೆಳಿಗ್ಗೆ ಅರವಳಿಕೆ ತಜ್ಞನರ ತಂಡ ಆಗಮಿಸಿದ್ದು,ದುಬಾರೆ ಹಾಗೂ ಸಕ್ರೇಬೈಲಿನಿಂದ ಕುಮ್ಕಿ ಆನೆಗಳು ಬರಬೇಕಿದೆ.ಆನೆಗಳು ಸಂಜೆ ಹೊತ್ತಿಗೆ ಬರುವ ನಿರೀಕ್ಷೆಯಿದ್ದು ನಂತರ ಕಾರ್ಯಚರಣೆ ಪ್ರಾರಂಭವಾಗಲಿದೆ,ಅಷ್ಟರೊಳಗೆ ಕಾಡಾನೆ ಇನ್ನೆಲ್ಲಿ ದಾಳಿ ಮಾಡಿ ಅವಾಂತರ ಸೃಷ್ಠಿಸಿ,ಬಲಿ ಪಡೆಯತ್ತೋ ಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.








