ತಾಲೂಕಿನಲ್ಲಿ ಯೂರಿಯಾಗೆ ಎಂಆರ್ಪಿಗಿಂತ ಹೆಚ್ಚಿನ ಬೆಲೆ,ರೈತರ ಆಕ್ರೋಶ
* ತಹಶೀಲ್ದಾರ್ ಮುಖಾಂತರ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ
* ಇಲಾಖೆ ಅಧಿಕಾರಿಗಳ ನಿರ್ದೇಶನದಂತೆ 266.50 ರೂ.ಬೆಲೆಯ ಗೊಬ್ಬರ 300 ರೂ.ಗೆ ಮಾರಾಟ
NAMMMUR EXPRESS NEWS
ಶೃಂಗೇರಿ: ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಎಂಆರ್ಪಿ ಗಿಂತ ಅಧಿಕ ಬೆಲೆಯನ್ನು ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕರಿಗೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಯೂರಿಯಾ ಗೊಬ್ಬರದ ದರವು 266.50 ರೂ. ಆದರೆ ಗೊಬ್ಬರ ಮಾರಾಟಗಾರರು 300 ರೂ. ಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
* ಕೃಷಿ ಇಲಾಖೆಯ ಅಧಿಕಾರಿಗಳ ಸೂಚನೆ ಮೇರೆಗೆ 300 ರೂ.ಗೆ ಮಾರಾಟ
ಅಧಿಕ ದರ ನಿಗದಿಗೊಳಿಸಿ ಮಾರಾಟವಾಗುತ್ತಿರುವ ಬಗ್ಗೆ ಅಂಗಡಿಯವರಲ್ಲಿ ಕೇಳಿದಾಗ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು 300 ರೂ ಗಳಿಗೆ ಮಾರಾಟ ಮಾಡಿ ಎಂದು ನಮಗೆ ಹೇಳುತ್ತಿದ್ದು,ಈ ಹೆಚ್ಚಿನ ದರವು ಲಾರಿ ಬಾಡಿಗೆಯಾಗಿ ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ ಎಂಬ ವಿಷಯ ಗೊತ್ತಾಗಿದೆ.
ತಾಲೂಕಿನಲ್ಲಿ ಕೃಷಿ ಇಲಾಖೆ ಅಧಿಕಾರಿಗಳ ರೀತಿಯ ಸೂಚನೆಯಿಂದ ರೈತರಿಗಾಗುತ್ತಿರುವ ನಷ್ಟವನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡು ಮುಂದೆ ಈ ರೀತಿ ಆಗದಂತೆ ತಡೆದು ರೈತರಿಗೆ ನ್ಯಾಯಯುತವಾದ ಬೆಲೆಯಲ್ಲಿ ಗೊಬ್ಬರವನ್ನು ಮಾರಾಟ ಮಾಡಬೇಕೆಂದು ರೈತರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಹಾಗೂ ಈಗ ರೈತರ ಬಳಿ ಪಡೆದ ಹೆಚ್ಚುವರಿ ಹಣ ವಾಪಸ್ ಕೊಡಬೇಕಾಗಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾನೊಳ್ಳಿ ಚಂದ್ರಶೇಖರ್, ಬಂಡ್ಲಾಪುರ ಶ್ರೀಧರ್ ರಾವ್, ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.








