ವಿಶ್ವನಾಥ್ ಗದ್ದೆಮನೆ ಸಾರಥ್ಯದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಸ್ಥಿತ್ವಕ್ಕೆ
* ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸಲು ಕೆಲಸ ಮಾಡುವ ಸಮಿತಿ
* ಗೌರವಾಧ್ಯಕ್ಷರಾಗಿ ರಾಮಸ್ವಾಮಿ ಶೆಟ್ಟಿಗದ್ದೆ ಆಯ್ಕೆ: ಏನಿದು ಒಕ್ಕೂಟ?
* ಶೃಂಗೇರಿ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಗುರಿ: ವಿಶ್ವನಾಥ್
* ರಾಜಕೀಯ ರಹಿತ ಸಂಘ, ಯಾವ ಪಕ್ಷದವರೂ ಸೇರಬಹುದು
NAMMMUR EXPRESS NEWS :
ಎನ್. ಆರ್.ಪುರ: ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಾಜ ಸೇವಕ, ವಕೀಲರು, ಉದ್ಯಮಿ ವಿಶ್ವನಾಥ್ ಗದ್ದೆಮನೆ ಸಾರಥ್ಯದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಸ್ಥಿತ್ವಕ್ಕೆ ಬಂದಿದೆ.
ನ.16 ರಂದು ಎನ್ ಆರ್ ಪುರ ತಾಲೂಕಿನ ಗದ್ದೆಮನೆಯ ತಮ್ಮ ಮನೆಯಲ್ಲಿ ನಡೆದ ರೈತರ ಸಭೆಯಲ್ಲಿ ತಮ್ಮ ಕನಸಿನ ನೂತನ ಒಕ್ಕೂಟವನ್ನು ಅಸ್ಥಿತ್ವಕ್ಕೆ ತರುವ ಘೋಷಣೆ ಮಾಡಿದರು. ಅಲ್ಲದೆ ಪ್ರತಿ ಗ್ರಾಮದಲ್ಲಿ ಈ ಜನ ಸೇವೆ ಕೆಲಸ ಮಾಡಲು ತಯಾರಿ ಬಗ್ಗೆ ಮಾಹಿತಿ ನೀಡಿದರು.
* ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಏಕೆ..? ಹೇಗೆ ಕೆಲಸ ಮಾಡುತ್ತೆ?
ಕ್ಷೇತ್ರದ ರೈತರ ಒತ್ತುವರಿ,94ಸಿ,94ಸಿಸಿ,ವಿದ್ಯುತ್,ಜಮೀನಿನ ಸಮಸ್ಯೆಗಳ,ಕಾಡು ಪ್ರಾಣಿಗಳ ಹಾವಳಿ ಕುರಿತು ರೈತರಿಗೆ ನೆರವಾಗಲು ಸೂಕ್ತ ಕಾನೂನು ಸಲಹೆ ಒದಗಿಸಿ ರೈತರ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಕ್ಷೇತ್ರ ಮಟ್ಟದ ನೂತನ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಅಸ್ಥಿತ್ವಕ್ಕೆ ಬಂದಿದೆ. ಈ ಒಕ್ಕೂಟ ರೈತರು ಮತ್ತು ಸರ್ಕಾರದ ನಡುವೆ ಸಂಪರ್ಕ ಕಲ್ಪಿಸುವ, ರೈತರು, ಮಲೆನಾಡಿಗರ ಜ್ವಲಂತ ಸಮಸ್ಯೆಗಳನ್ನು ನ್ಯಾಯಲಯಗಳಲ್ಲಿ ಹೋರಾಟ ಮಾಡುವ ಕೆಲಸ ಮಾಡಲಿದೆ.
* ಒಕ್ಕೂಟ ಹೇಗೆ ಇರಲಿದೆ?
ಕ್ಷೇತ್ರದಲ್ಲಿನ ಪ್ರತಿ ಗ್ರಾಮದಿಂದ ಒಬ್ಬೊಬ್ಬ ಪ್ರತಿನಿಧಿ ಇರಲಿದ್ದು, ಆ ಪ್ರತಿನಿಧಿಗಳಿಂದ ಆಯಾ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರದ ಅರಣ್ಯ ಇಲಾಖೆ,ಕಂದಾಯ ಇಲಾಖೆಯ ಅವೈಜ್ಞಾನಿಕ ಯೋಜನೆಗಳು,ಆದೇಶಗಳ ವಿರುದ್ಧ ಸಮಿತಿಯ ಮುಖಾಂತರ ಕಾನೂನು ರೀತಿಯಲ್ಲಿ ಹೋರಾಟ ಮಾಡುವ, ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ.
ರೈತರ ಸಮಸ್ಯೆಗಳಿಗೆ ಕಾನೂನಡಿಯಲ್ಲಿ ಹೋರಾಟ ಮಾಡಲು ವಕೀಲರ ಅಗತ್ಯವಿದ್ದಲ್ಲಿ ವಕೀಲರನ್ನು ಸಮಿತಿಯೇ ನೇಮಿಸಿ ಆ ವಕೀಲರ ಶುಲ್ಕವನ್ನು ಸಮಿತಿಯೇ ನೋಡಿಕೊಳ್ಳುವುದು. ಸರ್ಕಾರದಿಂದ ರೈತರಿಗೆ ಯಾವುದೇ ಅನ್ಯಾಯವಾಗಬಾರದು ಆದ್ದರಿಂದ ಈ ಎಲ್ಲಾ ಹೋರಾಟಗಳಿಗೆ ತಗುಲುವ ಸಂಪೂರ್ಣ ವೆಚ್ಚವನ್ನು ಸಮಿತಿಯೇ ಭರಿಸಿ ಪರಿಹಾರ ಒದಗಿಸಲಿದೆ. ಈ ನಿಟ್ಟಿನಲ್ಲಿ ಒಕ್ಕೂಟ ಮೊದಲ ಹೆಜ್ಜೆ ಇಟ್ಟಿದೆ. ಎಲ್ಲರ ಸಹಕಾರ ಅಗತ್ಯ ಎಂದು ವಿಶ್ವನಾಥ ಗದ್ದೆಮನೆ ಅವರು ಮನವಿ ಮಾಡಿದರು.
ಅಡಿಕೆ ರೋಗ, ರೈತರ ಸಮಸ್ಯೆ ಬಗ್ಗೆ ದನಿ
ಸದ್ಯ ಮಲೆನಾಡಿನ ಅಡಿಕೆ ಬೆಳೆಗೆ ತಗುಲಿರುವ ರೋಗಗಳ ಬಗ್ಗೆ ಪರಿಹಾರ ಕಂಡುಹಿಡಿಯಲು ಸಮಿತಿಯ ಮುಖಾಂತರ ವಿಜ್ಞಾನಿಗಳನ್ನು ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸುವುದು.
ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದ ರೈತರ ಪುನರ್ವಸತಿ ಯೋಜನೆಯಲ್ಲಿ ಅಗತ್ಯ ಕಾನೂನು ಹೋರಾಟ ನಡೆಸುವ ಸಲುವಾಗಿ ಅಲ್ಲಿನ ನಿವಾಸಿಗಳಿಂದ ದಾಖಲೆಗಳ ಮಾಹಿತಿ ಕಲೆಹಾಕಿ ಅಗತ್ಯ ಕ್ರಮ ಕೈಗೊಳ್ಳುವುದು. ಮೊದಲ ಮೂರು ವರ್ಷಗಳ ಕಾಲ ಸಮಿತಿಯು ಅಧ್ಯಕ್ಷರು,ಗೌರವಾಧ್ಯಕ್ಷರ ನೇತೃತ್ವದಲ್ಲಿ ಪ್ರತಿ ಗ್ರಾಮದಿಂದ ನಿಯೋಜಿತರಾದ ಪ್ರತಿನಿಧಿಗಳನ್ನು ಕಾರ್ಯದರ್ಶಿಗಳನ್ನಾಗಿ ಮಾಡಿಕೊಂಡು ಯಾವುದೇ ರಾಜಕೀಯ ಮಾಡದೇ ನಮ್ಮ ಕೈಲಾದ ಸಹಾಯವನ್ನು ರೈತರು,ಆರೋಗ್ಯ,ಶೈಕ್ಷಣಿಕ ಮಾಡಲು ಹೊರಟಿರುವುದಾಗಿ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಗದ್ದೆಮನೆ ತಿಳಿಸಿದರು.
* ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಗುರಿ
ಇಷ್ಟು ಸಮಯವಾದರೂ ಕ್ಷೇತ್ರದಲ್ಲೊಂದು ಸುಸಜ್ಜಿತ ಆಸ್ಪತ್ರೆಯ ವ್ಯವಸ್ಥೆಯಿಲ್ಲದೇ,ಇರುವ ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯವನ್ನೂ ಒದಗಿಸದೆ ನಡೆಸಲಾಗುತ್ತಿದೆ.ಆದ್ದರಿಂದ ಏನೇ ಸಮಸ್ಯೆಗಳಾದರೂ ಜನರು ಶಿವಮೊಗ್ಗ ಅಥವಾ ಮಣಿಪಾಲಿಗೆ ಹೋಗುವಂತಾಗಿದೆ,ಇದನ್ನು ಗಮನಿಸಿ ವಿಶ್ವನಾಥ್ ಗದ್ದೆಮನೆ ಚಾರಿಟೆಬಲ್ ಟ್ರಸ್ಟ್ ಮುಖಾಂತರ ಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಪರಿಕರಗಳ ಕಿಟ್ ವಿತರಿಸಲಾಗಿದ್ದು, ಮುಂದೆ ಸೂಕ್ತ ಸ್ಥಳ ಗುರುತಿಸಿ ಎಲ್ಲರಿಗೂ ಉಪಯೋಗುವಾಗುವಂತರ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಲಾಗಿದೆ,ಆದಷ್ಟು ಬೇಗ ಈ ಕೆಲಸಕ್ಕೆ ಚಾಲನೆ ನೀಡಲಾಗುವುದು.
ರಾಜಕೀಯ ರಹಿತ ಸಂಘ, ಯಾವ ಪಕ್ಷದವರೂ ಸೇರಬಹುದು ಎಂದು ವಿಶ್ವನಾಥ್ ಗದ್ದೆಮನೆ ಮಾಹಿತಿ ನೀಡಿದರು.
ಸಭೆಯಲ್ಲಿ ರೈತ ನಾಯಕರು, ಮುಖಂಡರು , ವಕೀಲರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಗೌರವ ಅಧ್ಯಕ್ಷರಾದ ರಾಮಸ್ವಾಮಿ ಶೆಟ್ಟಿಗದ್ದೆ ಮಾತನಾಡಿ, ಇದೊಂದು ಹೊಸ ಕಲ್ಪನೆ. ಈ ಮೂಲಕ ರೈತ ಹೋರಾಟ ಮಾಡಲಾಗುವುದು. ಇಲ್ಲಿ ಯಾವುದೇ ಪಕ್ಷ ರಾಜಕೀಯ ಇಲ್ಲ ಎಂದರು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ,ಗೌರವಾಧ್ಯಕ್ಷರಾದ ರಾಮಸ್ವಾಮಿ ಶೆಟ್ಟಿಗದ್ದೆ,ವಕೀಲರಾದ ಸಂತೋಷ್ ಸೇರಿದಂತೆ ವಿವಿಧ ರೈತ ಸಂಘದ ಪ್ರಮುಖರು,ರೈತ ಮುಖಂಡರು,ರೈತರು ಉಪಸ್ಥಿತರಿದ್ದರು.








