ಎನಿತು ಇನಿತು ಕನ್ನಡ ನುಡಿಯು…
ಮನವನು ತಣಿಸುವ ಮೋಹನ ಸುಧೆಯೂ…
ಕನ್ನಡ ರಾಜ್ಯೋತ್ಸವ… ನಮ್ಮೆಲ್ಲರ ಮನೆ ಮನೆ ಉತ್ಸವ..!
– ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ಕಟ್ಟೋಣ… ಕನ್ನಡ ಬೆಳೆಸೋಣ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಎನಿತು ಇನಿತು ಕನ್ನಡ ನುಡಿಯು ಮನವನು ತಣಿಸುವ ಮೋಹನ ಸುಧೆಯೂ…ಕನ್ನಡದ ಮಣ್ಣು ಎಲ್ಲರಿಗೂ ಹೆಮ್ಮೆ.
ಕರುನಾಡಿಗೆ ನವೆಂಬರ್ 1 ಉದಯದ ದಿನ. ಈ ನಾಡಿನ ಹಬ್ಬಕ್ಕೆ ಇಡೀ ಕರುನಾಡು ಸಂಭ್ರಮದಲ್ಲಿದೆ.
ಮಂತ್ರ ಕಣ ಶಕ್ತಿ ಕಣ ತಾಯಿ ಕಣ ಎಂದು ಕುವೆಂಪುರ ಹೊಗಳಿಕೆಗೆ ಪಾತ್ರವಾದ ನಾಡು ನುಡಿ ನಮ್ಮದು. ಅಂತಹ ಪಾವನ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ಕನ್ನಡಿಗನು ಧನ್ಯ.
ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದಾದ ವಿಶ್ವ ಲಿಪಿಗಳ ರಾಣಿ ಎಂದು ಆಚಾರ್ಯ ವಿನೋಬಾ ಭಾವೆ ಅವರಿಂದ ಕರೆಸಿಕೊಂಡ ಕನ್ನಡ ಭಾಷೆಗೆ ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಹಲವು ಪ್ರಥಮತೆಗಳಿಗೆ ಸಾಕ್ಷಿಯಾದ ಭಾಷೆ ಮತ್ತು ನಾಡು ನಮ್ಮದು. ರಾಜ ಮಹಾರಾಜರು, ಋಷಿ ಮುನಿಗಳು, ದಾಸ ಶ್ರೇಷ್ಠರು, ಕವಿ ಪುಂಗವರುಗಳಿಂದ ಶ್ರೀಮಂತಗೊಂಡ ನೆಲ. 1973ರಲ್ಲಿ ಮೈಸೂರು ರಾಜ್ಯ ಎಂದಿದ್ದ ನಮ್ಮ ನಾಡು ಕರ್ನಾಟಕ ಎಂದು ಮರುನಾಮಕರಣಗೊಂಡಿತು. ಆ ಸವಿ ನೆನಪಿಗೆ ಪ್ರತಿ ವರ್ಷ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತೇವೆ. ಆದರೆ ಇಂತಹ ಭವ್ಯ ನಾಡಿನಲ್ಲಿ ವಾಸಿಸುತ್ತಿರುವ ನಾವು ನಮ್ಮ ಭವ್ಯ ಪರಂಪರೆ ಸಂಸ್ಕೃತಿ ಭಾಷೆಯ ಮಹತ್ವ ಎಲ್ಲವನ್ನು ಗಾಳಿಗೆ ತೂರಿ ನಮ್ಮದೇ ನೆಲದಲ್ಲಿ ನಮ್ಮದೇ ಭಾಷೆಯನ್ನ ಮೂಲೆಗುಂಪಾಗಿಸುತ್ತಾ ಸ್ವತಃ ನಾವೇ ಅನಾಥರಾಗುತ್ತಿದ್ದೇವೆ.
ಎಕ್ಕಡ ಎನ್ನಡಗಳ ನಡುವೆ ಸಿಕ್ಕ ನನ್ನ ಕನ್ನಡ ತನ್ನ ಉಳಿವಿಗಾಗಿ ಗೋಗರೆಯುತ್ತಿದೆ. ಡ್ಯಾಡಿ ಮಮ್ಮಿ ಬೋ ಸಂಸ್ಕೃತಿಗಳ ನಡುವೆ ಕನ್ನಡದ ಅಪ್ಪ ಅಮ್ಮ ಅಣ್ಣ ಅಕ್ಕ ಎಲ್ಲೋ ಕಳೆದು ಹೋದೆಂತಿದೆ. ಹೀಗೆ ದೂರವಾಗುತ್ತಿರುವುದು ಸಂಬಂಧಗಳು ಮಾತ್ರವಲ್ಲ ನಮ್ಮ ಸಂಸ್ಕೃತಿಯ ತಿಯು ಸಹ.
ಆತ್ಮೀಯರೇ ನಮಗೆ ನೆನಪಿರಲಿ ಭಾರತ ದೇಶದಲ್ಲಿ ಹಿಂದಿ ಭಾಷೆಯನ್ನ ಹೊರತುಪಡಿಸಿದರೆ ಅತಿ ಹೆಚ್ಚು ಸಾಹಿತ್ಯ ಕ್ಷೇತ್ರದ ಉತ್ಕೃಷ್ಟ ಪ್ರಶಸ್ತಿಯಾದ ಜ್ಞಾನಪೀಠವನ್ನು ಪಡೆದುಕೊಂಡದ್ದು ನಮ್ಮ ಕನ್ನಡ ಭಾಷೆ ಸುಮಾರು 8 ಕವಿಗಳು ಈ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ….ಅಡಿಗರು, ಬೇಂದ್ರೆ, ಕಾರಂತ್, ಕುವೆಂಪು, ಮಾಸ್ತಿಯಂತಹ ಸರಸ್ವತಿ ಪುತ್ರರಿಂದ ಪ್ರಜ್ವಲಿಸಿದ ಕನ್ನಡ. ಎಂಥಾ ಶ್ರೀಮಂತ ಸಾಹಿತ್ಯದ ಕೃಷಿಯು ಕನ್ನಡ ಭಾಷೆಯಲ್ಲಿ ನಡೆದಿದೆ, ಕರ್ನಾಟಕದ ನೆಲದಲ್ಲಾಗಿದೆ ಎಂಬುದರ ಬಗ್ಗೆ ಇಂದಿನ ಕನ್ನಡಿಗರಿಗೆ ಅಂದಾಜು ಸಹ ಇಲ್ಲದಿರುವುದು ದುರಂತ. ವಿಶ್ವ ಸಾಹಿತ್ಯದಲ್ಲಿ ಜಗತ್ತಿನ ಬೇರೆ ಯಾವ ಭಾಷೆಯಲ್ಲಿಯೂ ಕೂಡ ಕಂಡುಬರದ ವಿಶಿಷ್ಟವಾದ ಶರಣ ಸಾಹಿತ್ಯ ಅಥವಾ ವಚನ ಸಾಹಿತ್ಯ ಕಂಡುಬರುವಂತಹದು ಕೇವಲ ನಮ್ಮ ಕನ್ನಡ ನೆಲದಲ್ಲಿ ಕನ್ನಡ ಸಾಹಿತ್ಯದಲ್ಲಿ ಮಾತ್ರ. ಇದು ಕನ್ನಡಿಗರ ಪಾಲಿನ ಹೆಮ್ಮೆಯ ಸಂಗತಿ. ಕರ್ನಾಟಕದ ಆಡಳಿತ ಭಾಷೆ ಕನ್ನಡ ಆದರೆ ಇದೇ ನಾಡಿನಲ್ಲಿ ” ಇಂದು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲ್ಪಡುತ್ತಿವೆ. ಕನ್ನಡಿಗರ ಆಮಂತ್ರಣ ಪತ್ರಿಕೆಗಳು ಇಂಗ್ಲೀಷಲ್ಲಿ ಅಚ್ಚಾಗುತ್ತವೆ. ಇಂಗ್ಲಿಷ್ ಮಿಶ್ರಿತ ಕನ್ನಡವನ್ನೆ ಶುದ್ಧ ಕನ್ನಡವೆಂದು ಭಾವಿಸುವ ಅವಿವೇಕಿಗಳ ನಡುವೆ ನಾವಿಂದು ಬದುಕುತ್ತಿದ್ದೇವೆ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಕಿಂಚಿತ್ತೂ ಮನ್ನಣೆ ಇಲ್ಲ.ಕನ್ನಡ ಮಕ್ಕಳಿಗೆ ಅವಕಾಶ ವಂಚಿತ ಭಾವ, ಉದ್ಯೋಗದಲ್ಲಿಯೂ ಮಲತಾಯಿ ಧೋರಣೆ, ಹಿಂದಿ ಹೇರಿಕೆ, ಇಂಗ್ಲೀಷಿನ ಅನಿವಾರ್ಯ ಕಲಿಕೆ ಕನ್ನಡ ನಾಡಲ್ಲಿ ಕನ್ನಡಿಗರೇ ನಿರುದ್ಯೋಗಿಗಳು..”
ಕರ್ನಾಟಕದಲ್ಲಿ ಕನ್ನಡಿಗರ ಸಹಭಾಗಿತ್ವದ ಕಾರ್ಯಕ್ರಮಗಳಲ್ಲಿ ಇಂಗ್ಲೀಷ್ ಹಿಂದಿಯದ್ದೇ ಮೇಲುಗೈ. ಕನ್ನಡ ಯಾರಿಗೂ ಕಾಣದ ಹಾಗೆ ಕೊನೆಯ ಸಾಲಿನಲ್ಲಿ ಸಣ್ಣ ಬರಹಗಳಲ್ಲಿ ಕಂಡುಬರುತ್ತಿರುತ್ತದೆ ಇದು ಕನ್ನಡದ ಸದ್ಯದ ಸ್ಥಿತಿ ಸತ್ಯ ಸ್ಥಿತಿ! ಕೆಲಸವನ್ನರಸಿ ಕರುನಾಡಿಗೆ ಬರುವ ಅನ್ಯ ಭಾಷಿಕರನ್ನ ಮೆಚ್ಚಿಸುವ ಭರದಲ್ಲಿ ನಮ್ಮ ಕನ್ನಡವನ್ನ ಅವರಿಗೆ ಕಲಿಸುವ ಅನಿವಾರ್ಯತೆ ಸೃಷ್ಟಿಸದೆ ಅವರ ಭಾಷೆಯಲ್ಲಿಯೇ ವ್ಯವಹರಿಸಿ ಕನ್ನಡ ಇಲ್ಲಿಯ ವ್ಯವಹಾರಿಕ ಭಾಷೆಯೆಂಬದನ್ನೇ ನಾವು ಮರೆಸುತ್ತಿದ ದೇವೆ. ನಮ್ಮ ಕನ್ನಡ ಪ್ರೇಮ ನವೆಂಬರ್ ಒಂದರಂದು ಹಾಕುವ ಸಾಮಾಜಿಕ ಜಾಲತಾಣಗಳಲ್ಲಿನ ಸ್ಟೇಟಸ್ ಸ್ಟೋರಿಗಳಿಗಷ್ಟೇ ಸೀಮಿತವಾಗುತ್ತಿದೆ. ಜೈ ಕನ್ನಡಾಂಬೆ ಎಂದು ಕನ್ನಡಮ್ಮನನ್ನ ತಟ್ಟಿ ಮಲಗಿಸಿದರೆ ಮತ್ತೆ ನಾವು ಕನ್ನಡಿಗರೆಂದು ನೆನಪಾಗಿ ಕನ್ನಡತನ ಜಾಗೃತವಾಗುವುದು ಇನ್ನೊಂದು ವರ್ಷದ ನವೆಂಬರ್ 1 ಬಂದಾಗಲೇ. ಕನ್ನಡ ನಾಡಿನಲ್ಲಿ ರಾಣಿಯಾಗಿ ಮೆರೆಯಬೇಕಿದ್ದ ಕನ್ನಡ ಇಂದು ರಾಜ್ಯದಲ್ಲಿ ಉಳಿದುಕೊಳ್ಳುವುದೇ ಕಷ್ಟ ಸಾಧ್ಯವೆನ್ನುವಂತಹ ಸ್ಥಿತಿ ಇದೆ.ವಿಶ್ವದ ಅತಿ ವೈಜ್ಞಾನಿಕ ಭಾಷೆಗಳಲ್ಲಿ ಒಂದು ಎಂದು ಭಾಷಾ ತಜ್ಞರಿಂದ ಹೊಗಳಿಸಿಕೊಂಡ ಭಾಷೆ ಇಂದು ತನ್ನದೇ ನಾಡಿನಲ್ಲಿ ತಬ್ಬಲಿಯಾಗುತ್ತಿದೆ. ನಾಡು ನುಡಿಯ ಬಗೆಗೆನ ಕಾಳಜಿ ಮತ್ತು ತುಂಬು ಗೌರವ ಎಲ್ಲಿಯವೆರೆಗೆ ನಮ್ಮಲ್ಲಿ ಒಡಮೂಡುವುದಿಲ್ಲವೋ ಅಲ್ಲಿಯವರೆಗೂ ಕನ್ನಡ ಮತ್ತು ಕನ್ನಡಿಗರು ತನನದೇ ನೆಲದಲ್ಲಿ ನಿತ್ಯವೂ ಅನಾಥಪ್ರಜ್ಞೆಯಲ್ಲಿಯೇ ಬಸವಳಿಯುವುದು..ಹಾಂ ಮೈ ಕೊಡವಿ ಮೇಲೇಳಿ ಕನ್ನಡಕ್ಕಾಗಿ ಕಿರು ಬೆರಳಾದರು ಎತ್ತಲು ತಯಾರಾಗಿ ಕನ್ನಡಮ್ಮನ ಋಣವ ತೀರಿಸೋಣ..
ಲೇಖನ
ಪೂಜಾ ತೀರ್ಥಹಳ್ಳಿ
ಪಿಇಎಸ್ ಪಿಯು ಕಾಲೇಜು,
ಹನುಮಂತ ನಗರ, ಬೆಂಗಳೂರು








