ಸುಣ್ಣದ ಡಬ್ಬಿ ನುಂಗಿದ ನಾಗರಹಾವಿಗೆ ಆಪರೇಷನ್!
– 15 ದಿನಗಳ ಕಾಲ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟ ವೈದ್ಯರು
– ನಾಗರ ಹಾವಿಗೆ ಮರು ಜೀವ ಕೊಟ್ಟ ಡಾಕ್ಟರ್!
– ಬೀದಿ ನಾಯಿ ದಾಳಿ ಮಾಡಿ 25 ಕುರಿ ಕೊಂದವು!
NAMMUR EXPRESS NEWS
ಬಂಟ್ವಾಳ: ಸುಣ್ಣದ ಡಬ್ಬಿ ನುಂಗಿದ್ದ ನಾಗರ ಹಾವಿಗೆ ಯಶಸ್ವಿ ಚಿಕಿತ್ಸೆ ಮಾಡಿ ಕಾಡಿಗೆ ಬಿಟ್ಟ ಅಪರೂಪದ ಘಟನೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದಲ್ಲಿ ನಡೆದಿದೆ.
ಅಲಂಪುರಿ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಸಮೀಪದ ಮನೆಯೊಂದರ ಬಳಿ ಗಾಯಗೊಂಡು ಪತ್ತೆಯಾಗಿದ್ದ ನಾಗರ ಹಾವೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಗುಣಮುಖಗೊಳಿಸಿ ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ಏನಿದು ಘಟನೆ?:
ಅಲಂಪುರಿ ನಿವಾಸಿ ವಸಂತಿ ಅವರ ಮನೆ ಬಳಿಯ ಬಿಲವೊಂದರಲ್ಲಿ ಜೂ.6ರಂದು ನಾಗರ ಹಾವೊಂದು ಪತ್ತೆಯಾಗಿದ್ದು, ಹೊರಗೆ ಬರಲು ಸಾಧ್ಯವಾಗದೆ ಒದ್ದಾಡುತ್ತಿತ್ತು. ಅವರು ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ತಿಳಿಸಿದ್ದರು. ಬಳಿಕ ಅವರು ಹಾವನ್ನು ಬಿಲದಿಂದ ಹೊರಗೆ ತೆಗೆದಿದ್ದು, ಆದರೆ ಅದರ ಹೊಟ್ಟೆ ಹಾಗೂ ಕುತ್ತಿಗೆಗೆ ಗಾಯವಾಗಿತ್ತು. ಕಿರಣ್ ಅವರು ಅದನ್ನು ಮಂಗಳೂರಿಗೆ ಕೊಂಡು ಹೋಗಿ ಪಶುವೈದ್ಯ ಡಾ.ಯಶಸ್ವಿ ಅವರ ಬಳಿ ತೋರಿಸಿದರು.ಪರೀಕ್ಷಿಸಿದ ವೈದ್ಯರು ಪ್ರಾರಂಭದಲ್ಲಿ ಹರಿದ ಚರ್ಮಕ್ಕೆ ಹೊಲಿಗೆ ಹಾಕಿದ್ದು, ಆದರೂ ಅದರ ಹೊಟ್ಟೆಯಲ್ಲಿ ಏನೋ ಇದೆ ಎಂದು ಸಂಶಯಗೊಂಡು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಗ ಹೊಟ್ಟೆಯೊಳಗೆ ಸುಣ್ಣ ತುಂಬುವ ಪ್ಲಾಸ್ಟಿಕ್ ಪತ್ತೆಯಾಗಿದ್ದು, ಅದನ್ನು ಯಶಸ್ವಿಯಾಗಿ ಹೊರಗೆ ತೆಗೆಯಲಾಗಿದೆ.
ಡಾ.ಯಶಸ್ವಿಯವರು ಹಾವನ್ನು ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ಹಾಗೂ ರಕ್ಷಕ ಮನೋಜ್ ಅವರ ನೆರವಿನಿಂದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.
ಬೀದಿ ನಾಯಿಗಳ ದಾಳಿಗೆ 25 ಕುರಿಗಳು ಬಲಿ!
ಹೊಸನಗರ ತಾಲೂಕು ರಿಪ್ಪಿನಪೇಟೆ ಅರಸಾಳು ಸಮೀಪ ಮಾಣಿಕೆರೆ ಗ್ರಾಮದಲ್ಲಿ ಬುಧವಾರ ಬೀದಿನಾಯಿಗಳ ದಾಳಿಗೆ ವೇಲಾಯದನ್ ಅವರಿಗೆ ಸೇರಿದ ಸುಮಾರು 25 ಕುರಿಗಳು ಬಲಿಯಾಗಿವೆ. ಮನೆಯ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಬೀದಿ ನಾಯಿಗಳ ಹಿಂಡು ಸಿಕ್ಕ ಸಿಕ್ಕ ಕುರಿಗಳನ್ನು ಕಚ್ಚಲು ಆರಂಭಿಸಿವೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವ ವೇಳೆಗೆ ನಾಯಿಗಳು ಓಡಿ ಹೋಗಿವೆ. ಆದರೆ ಅಷ್ಟರಲ್ಲಾಗಲೇ ನಾಯಿಗಳು ಸುಮಾರು 25 ಕುರಿಗಳನ್ನು ಕಚ್ಚಿ ಸಾಯಿಸಿವೆ.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023