
ಬಿ.ಎಸ್.ಎನ್.ಎಲ್ ನೆಟ್ವರ್ಕ್ ಅವಾಂತರ!
– ಹೊದಲದಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ..ಯಾವ ಕೆಲಸವೂ ಆಗುತ್ತಿಲ್ಲ
– ಬ್ಯಾಂಕ್, ಗ್ರಾಮ ಪಂಚಾಯಿತಿಯಲ್ಲಿ ಸರ್ವರ್ ಸಮಸ್ಯೆ
– ಮಲ್ನಾಡಲ್ಲಿ ಬಿಎಸ್ಎನ್ಎಲ್ ಸಮಸ್ಯೆ ಕೇಳೋರು ಯಾರು?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಜನರು ಪರದಾಡುವಂತಾಗಿದೆ. ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದ ಕಾರಣ ಬ್ಯಾಂಕು, ಗ್ರಾಮ ಪಂಚಾಯಿತಿ ಸೇರಿ ಅನೇಕ ಸರ್ಕಾರಿ ಕಚೇರಿಗಳ ಕೆಲಸ ಆಗುತ್ತಿಲ್ಲ. ಇದರಿಂದ ಜನತೆ ದಿನವಿಡಿ ಸರ್ಕಾರಿ ಕಚೇರಿಗಳ ಮುಂದೆ ಪರದಾಡುವಂತಾಗಿದೆ. ಇನ್ನು ನೆಟ್ವರ್ಕ್ ಸಮಸ್ಯೆ ಇರುವುದರಿಂದ ಜನರಿಗೆ ಯಾವುದೇ ತುರ್ತು ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ಆರೋಗ್ಯ ಸಮಸ್ಯೆಗಳಾದಾಗ ಜೀವ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬಿಎಸ್ಎನ್ಎಲ್ ತೀರ್ಥಹಳ್ಳಿ ಕಚೇರಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆ ಹರಿದಿಲ್ಲ.
ಕಳೆದ ವರ್ಷ ಮುರಿದು ಬಿದ್ದಿದ್ದ ಟವರ್!
ಇನ್ನೂ ಕಳೆದ ವರ್ಷ ಟವರ್ ಮುರಿದು ಬಿದ್ದಿದ್ದು, ಆ ಟವರ್ ಅನ್ನು ಸರಿಪಡಿಸಲಾಗಿದೆ. ಆದರೆ ಅದರ ತಂತ್ರಜ್ಞಾನ ಹಾಗೂ ನಿರ್ವಹಣೆ ವ್ಯವಸ್ಥೆಯನ್ನು ಬಿಎಸ್ಎನ್ಎಲ್ ನೋಡಿಕೊಳ್ಳುತ್ತಿಲ್ಲ. ಇದರಿಂದಾಗಿ ಗ್ರಾಹಕರು ಕಷ್ಟಪಡುವಂತಾಗಿದೆ. ಹೀಗಾಗಿ ಗ್ರಾಮಸ್ಥರು ಹೋರಾಟದ ಹಾದಿ ತುಳಿಯಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಚೇರಿ ಮುತ್ತಿಗೆ ನಿರ್ಧಾರಕ್ಕೆ ಸಿದ್ಧತೆ
ಬಿಎಸ್ಎನ್ಎಲ್ ನೆಟ್ವರ್ಕ್ ಸಿಗದ ಕಾರಣ ವಿದ್ಯಾರ್ಥಿಗಳು, ವರ್ಕ್ ಫ್ರಮ್ ಹೋಂ ಕೆಲಸದಲ್ಲಿರುವವರು ಹಾಗೂ ಸರ್ಕಾರಿ ಅಧಿಕಾರಿಗಳು ಪಟ್ಟಣವನ್ನು ಆಶ್ರಯಿಸಬೇಕಾಗಿದೆ. ಇದರಿಂದಾಗಿ ಅವರ ದುಡಿಮೆಯ ಅರ್ಧ ಭಾಗವನ್ನು ವ್ಯಯ ಮಾಡುವಂತಾಗಿದೆ. ಹೀಗಾಗಿ ಮೊದಲ ಸುತ್ತಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಹೋರಾಟಕ್ಕೆ ಸಜ್ಜಾಗಿದ್ದಾರೆ. ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು. ಇಲ್ಲವಾದಲ್ಲಿ ಬಿಎಸ್ಎನ್ಎಲ್ ತೀರ್ಥಹಳ್ಳಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಯುವ ಮುಖಂಡ, ಹೋರಾಟಗಾರ ಹೊದಲ ಶಿವು ಎಚ್ಚರಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಶಾಸಕರು, ಸಂಸದರು ಈ ಬಗ್ಗೆ ಗಮನಿಸಬೇಕಿದೆ.
ತೀರ್ಥಹಳ್ಳಿ, ಹೊಸನಗರ ತಾಲೂಕಲ್ಲಿ ಬಗೆಹರಿಯದ ಸಮಸ್ಯೆ!
ತೀರ್ಥಹಳ್ಳಿಯ ಹಲವು ಹಳ್ಳಿಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಇದೆ. ಟವರ್ ಇದ್ದರೂ ಅದರ ನಿರ್ವಹಣೆ ಇಲ್ಲ. ಬಿಎಸ್ಎನ್ಎಲ್ ಇಲಾಖೆಗೆ ದೂರು ಕೊಟ್ಟರೂ ಗಮನಿಸುವವರಿಲ್ಲ. ತಾಲೂಕು ಹಾಗೂ ಹೊಸನಗರ ಭಾಗದ ಜನ ಈ ಸಮಸ್ಯೆಯಿಂದ ದಿನವಿಡೀ ಸಮಸ್ಯೆಗೆ ಒಳಗಾಗಿದ್ದಾರೆ. ಆದರೆ ಇತ್ತೀಚೆಗೆ ಸಂಸದರು ಹಾಗೂ ಶಾಸಕರು ಬಿಎಸ್ಎನ್ಎಲ್ ಕುಂದು ಕೊರತೆ ಸಭೆಯನ್ನು ನಡೆಸಿದ್ದಾರೆ. ಸಭೆಯಲ್ಲಿ ಈ ಬಗ್ಗೆ ದೂರುಗಳನ್ನು ನೀಡಿದರರೂ ಕೂಡ ಸರಿಯಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಹೀಗಾಗಿ ತಕ್ಷಣ ಸಂಸದರು ಮತ್ತು ಶಾಸಕರು ಬಿಎಸ್ಎನ್ಎಲ್ ಸಮಸ್ಯೆಯನ್ನು ಪರಿಹರಿಸಬೇಕು. ಇಲ್ಲವಾದಲ್ಲಿ ಹಳ್ಳಿಗಳ ಜನ ಸಂಕಷ್ಟದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದ ಕಾರಣ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಹಾಗೂ ಸರ್ಕಾರಿ ಕಚೇರಿಗಳು ಕೆಲಸ ಮಾಡುತ್ತಿಲ್ಲ. ಬ್ಯಾಂಕ್ ಹಾಗೂ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದಾಗಿ ಮೂಲ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು ಬಿಎಸ್ಎನ್ಎಲ್ ಗ್ರಾಹಕರ ಒತ್ತಾಯವಾಗಿದೆ.
