ರಾಘವ್ ಕೊಡಚಾದ್ರಿ, ಭಾಗ್ಯ ಗೌಡ, ಗಾಯತ್ರಿ ಶೇಷಗಿರಿ ಸಾಧನೆ ಪಯಣ
– ಕಾಂತಾರದಲ್ಲಿ ಹೊಸನಗರದ ‘ರಾಘವ್ ಕೊಡಚಾದ್ರಿ’ ನಟನೆ
– ಪತ್ರಕರ್ತೆ ಗಾಯತ್ರಿ ಶೇಷಗಿರಿ ಬರೆದ ಪುಸ್ತಕ ಅ.26ರಂದು ಬಿಡುಗಡೆ
– ಚಂದನ ವಾಹಿನಿ ಕಾರ್ಯಕ್ರಮದಲ್ಲಿ ಭಾಗ್ಯ ಗೌಡ ಹಾಡಿನ ಮೋಡಿ
NAMMUR EXPRESS NEWS
ಕಾಂತರ ಚಿತ್ರ ಇಡೀ ವಿಶ್ವದೆಲ್ಲೆಡೆ ಅಬ್ಬರಿಸುತ್ತಿದೆ. ಈ ಚಿತ್ರ ಹೊಸನಗರದ ಅನೇಕ ಭಾಗಗಳಲ್ಲಿ ಚಿತ್ರೀಕರಣವಾಗಿದ್ದು ಗೊತ್ತೆ ಇದೆ. ಸಿನಿಮಾದಲ್ಲಿ ಹೊಸನಗರ ತಾಲ್ಲೂಕಿನ ಅನೇಕರು ಕೆಲಸ ಮಾಡಿದ್ದಾರೆ, ಕ್ಯಾಮೆರಾ ಕೆಲಸ, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಹೊಸನಗರ ಕೊಡುಗೆ ಇದೆ.
ಈ ಚಿತ್ರದಲ್ಲಿ ಹೊಸನಗರದ ಹುಡುಗ ರಾಘವ್ ಕೊಡಚಾದ್ರಿ ಕೂಡ ನಟಿಸಿದ್ದು ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಲು ಹೊರಟಿದ್ದಾರೆ.
ರಾಘವ್ ಹುಟ್ಟಿದ್ದು ಸಾಗರದಲ್ಲಿ, ಬೆಳೆದಿದ್ದು ಸಂಪೆಕಟ್ಟೆಯಲ್ಲಿ. ‘ಕೊಡಚಾದ್ರಿ ರಾಘವ್’ ಈಗಾಗಲೇ ಅನೇಕ ಚಿತ್ರದಲ್ಲಿ ನಟಿಸಿ ಯಶಸ್ಸು ಕಂಡಿದ್ದಾರೆ. ಕಾಂತರದಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇನ್ನಷ್ಟು ಎತ್ತರಕ್ಕೆ ಸಾಗಿ ಹೊಸನಗರದ ಹೆಸರನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಸಾಗಲಿ ಎಂದು ಸ್ನೇಹಿತರು, ಅಭಿಮಾನಿಗಳು ಹಾರೈಸಿದ್ದಾರೆ.
ಗಾಯತ್ರಿ ಶೇಷಗಿರಿ ಬರೆದ ಪುಸ್ತಕ ಅ.26ರಂದು ಬಿಡುಗಡೆ
ತೀರ್ಥಹಳ್ಳಿ: ಪತ್ರಕರ್ತರೂ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳೂ ಆಗಿರುವ ಗಾಯತ್ರಿ ಶೇಷಗಿರಿ ಅವರು ‘ಸ್ತನ ಕ್ಯಾನ್ಸರ್’ನ ಕುರಿತಾಗಿ ಬರೆದಿರುವ “ಜೋಪಾನ ಸಖಿ ಜೋಪಾನ’ ಪುಸ್ತಕದ ಬಿಡುಗಡೆ ಸಮಾರಂಭ ಅಕ್ಟೋಬರ್ 26ರ ಭಾನುವಾರ ಸಂಜೆ 4 ಗಂಟೆಗೆ ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜರುಗಲಿದೆ. ವಿಶ್ರಾಂತ ಪ್ರಾಧ್ಯಾಪಕ ಡಾ.ಸಣ್ಣರಾಮ ಪುಸ್ತಕವನ್ನು ಲೋಕಾರ್ಪಣೆ ಗೊಳಿಸುವರು. ಶಿವಮೊಗ್ಗ ಎನ್.ಹೆಚ್.ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಅಂಕಾಲಜಿಸ್ಟ್ ಡಾ||ಅಪರ್ಣ ಶ್ರೀವತ್ಸ ಸ್ತನಕ್ಯಾನ್ಸರ್ ಕುರಿತು ಮಾತನಾಡುವರು. ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ.ಬಿ.ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಪುಸ್ತಕದ ಲೇಖಕಿ ಗಾಯತ್ರಿ ಶೇಷಗಿರಿ ಉಪಸ್ಥಿತರಿರುವರು. ತೀರ್ಥಹಳ್ಳಿ ಸಾಹಿತ್ಯ ಆಸಕ್ತರ ಬಳಗ ಹಾಗೂ ಶಾಯರಿ ಪ್ರಕಾಶನ ಸರ್ವರನ್ನೂ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.
ಚಂದನ ವಾಹಿನಿ ಕಾರ್ಯಕ್ರಮದಲ್ಲಿ ಹಾಡಿನ ಮೋಡಿ ಮಾಡಿದ ಭಾಗ್ಯ ಗೌಡ
ದೂರದರ್ಶನ ಚಂದನ ವಾಹಿನಿಯ ಅಚ್ಚುಮೆಚ್ಚಿನ ಕಾರ್ಯಕ್ರಮ “ಥಟ್ ಅಂತ ಹೇಳಿ” 5000ನೇ ವಿಶೇಷ ಸಂಚಿಕೆಯ ಸಂಭ್ರಮಾಚರಣೆಯಲ್ಲಿ ಮಲೆನಾಡಿನ ಖ್ಯಾತ ಗಾಯಕಿ ಭಾಗ್ಯ ಗೌಡ ಹಾಡಿದ್ದಾರೆ.
ನಾ.ಸೋಮೇಶ್ವರ ಸರ್ ನಡೆಸಿಕೊಡುವ ಈ ಗಿನ್ನಿಸ್ ದಾಖಲೆಯ ಕಾರ್ಯಕ್ರಮದಲ್ಲಿ ಅವರು ಕೂಡ ಸ್ಸ್ಪರ್ಧಿಯಾಗಿ ಭಾಗವಹಿಸಿದ್ದರು. ವೇಣು ಸುಹಾನಾ ಸಯ್ಯದ್, ನಿಶ್ಚಯ ಜೈನ್, ಅರ್ಪಿತಾ, ವಿಶಾಕ್ ನಗಲಾಪುರ, ಪ್ರವೀಣ್ ಮಲ್ಲಿನಾಥಪುರ ಸೇರಿ ಅನೇಕ ಗಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾಗ್ಯ ಗೌಡ ಎನ್. ಆರ್. ಪುರ ಮೂಲದವರು. ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದ ಅನೇಕ ವೇದಿಕೆಗಳಲ್ಲಿ ಹಾಡಿದ್ದಾರೆ.








