ಟಾಪ್ 3 ನ್ಯೂಸ್ ತೀರ್ಥಹಳ್ಳಿ
– ಗೀತ ಗಾಯನದಲ್ಲಿ ಸಹ್ಯಾದ್ರಿ ಶಾಲೆ ಮಕ್ಕಳ ಗೆಲುವು!
– ನಾಳೆ ತೀರ್ಥಹಳ್ಳಿ ಸುತ್ತಮುತ್ತ ಕರೆಂಟ್ ಇಲ್ಲ…!
– ತೀರ್ಥಹಳ್ಳಿ : ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತ ಕಾಡಾನೆ ಸಂಚಾರ..!
NAMMUR EXPRESS NEWS
– ಗೀತ ಗಾಯನದಲ್ಲಿ ಸಹ್ಯಾದ್ರಿ ಶಾಲೆ ಮಕ್ಕಳ ಗೆಲುವು.
ದಿನಾಂಕ: 01/9/2025 ರಂದು ಭಾರತೀಯ ಜೀವ ವಿಮಾ ನಿಗಮ, ತೀರ್ಥಹಳ್ಳಿ ವತಿಯಿಂದ ನಡೆಸಿದ “ವಿಮಾ ಸಪ್ತಾಹ 2025” ರ ಗೀತಗಾಯನ ಸ್ಪರ್ಧೆಯಲ್ಲಿ ಕುಶಾವತಿ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿಗಳಾದ ಅಕ್ಷರ ಎನ್ ಸಿ 6ನೇ ತರಗತಿ ಪ್ರಥಮ, ಜ್ಞಾನಿ 7ನೇ ತರಗತಿ ತೃತೀಯ ಸ್ಥಾನ ಪಡೆದಿರುತ್ತಾರೆ. ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಶ್ರೀರಾಮ್ ಕಾರ್ತಿಕ್ 4ನೇ ತರಗತಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಶಾಲೆಗೆ ಕೀರ್ತಿ ತಂದಿರುವ ಮೇಲ್ಕಂಡ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರುಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯಿನಿಯವರು. ಶಿಕ್ಷಕ ವೃಂದ ಹಾಗೂ ಪೋಷಕರು ಶುಭಕೋರಿ ಅಭಿನಂದಿಸಿರುತ್ತಾರೆ.
– ನಾಳೆ ತೀರ್ಥಹಳ್ಳಿ ಸುತ್ತಮುತ್ತ ಕರೆಂಟ್ ಇಲ್ಲ…!
ತೀರ್ಥಹಳ್ಳಿ: ಸೆ.20ರ ಶನಿವಾರದಂದು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ, ಬೆಟ್ಟಮಕ್ಕಿ ತೀರ್ಥಹಳ್ಳಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ವಿದ್ಯುತ್ ಕಡಿತಗೊಳ್ಳಲಿದೆ.
ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯ ಪ್ರದೇಶಗಳು ಹಾಗೂ ಮುಳುಬಾಗಿಲು, ಹೊಸಳ್ಳಿ ಹಾರೋಗೊಳಿಗೆ, ಮೇಲಿನಕುರುವಳ್ಳಿ, ದೇವಂಗಿ, ಬಸವಾನಿ, ಮೇಳಿಗೆ, ಕಟ್ಟೆಹಕ್ಕಲು, ಶೇಡ್ಗರ್ , ನೆರಟೂರು, ಆರಗ, ಸಾಲೂರು, ನೊಣಬೂರು, ಅರಳಸುರಳಿ, ಹೊದಲ ಅರಳಾಪುರ, ತ್ರಿಯಂಭಕಪುರ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಗ್ಗೆ 9-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಎಂದು ಮೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ.
– ತೀರ್ಥಹಳ್ಳಿ : ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತ ಕಾಡಾನೆ ಸಂಚಾರ..!
ತೀರ್ಥಹಳ್ಳಿ : ತಾಲೂಕಿಗೆ ಕಾಡಾನೆ ಬಂದಿರುವ ಸುದ್ದಿ ಬೆನ್ನಲ್ಲೇ ಈಗ ಪಟ್ಟಣದ ಕೂಗಳತೆ ದೂರದಲ್ಲಿ ಕಾಡಾನೆಗಳು ಸಂಚಾರ ನಡೆಸುತ್ತಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ. ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂದೂರು, ಹೊನ್ನೇಕಣ, ಹೊರಣೆಬೈಲು ಬಳಿ ತಡ ರಾತ್ರಿ ಆನೆಗಳು ಓಡಾಟ ನಡೆಸಿದ್ದು ಹೊನ್ನೆ ಕಣದಲ್ಲಿ ನಾಗರಾಜ್ ಭಟ್ ಎಂಬುವರ ಮನೆಯ ಗೇಟ್ ಪುಡಿ ಪುಡಿ ಮಾಡಿದೆ. ಈಗಿನ ಮಾಹಿತಿ ಪ್ರಕಾರ ಒಂದು ಆನೆ ಬ್ರಹ್ಮನ ಗುಡ್ಡದ ಕಡೆ ಹೋಗಿದ್ದರೆ ಮತ್ತೊಂದು ಆನೆ ಕೂದೂರು ಪಕ್ಕದ ಕಂತು ಗದ್ದೆಯ ಹತ್ತಿರ ಹೋಗಿದೆ ಎನ್ನಲಾಗಿದೆ. ಬುಕ್ಲಾಪುರ ಹಾಗು ಮೇಳಿಗೆ ಭಾಗಕ್ಕೆ ಕಾಡಾನೆ ಬರುವ ಸಾಧ್ಯತೆ ಇದ್ದು ಒಂದು ವೇಳೆ ರಸ್ತೆ ಮಾರ್ಗಕ್ಕೆ ಬಂದರೆ ತೀರ್ಥಹಳ್ಳಿ ಪಟ್ಟಣಕ್ಕೂ ಬರುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಾಗೃತಿಗೊಳ್ಳಬೇಕಿದೆ.








