ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಮೂರನೇ ಸ್ಥಾನ
- 2023 ರಲ್ಲಿ ಕೋಟಿ ಕೋಟಿ ಉದ್ಯೋಗ ಸೃಷ್ಟಿ, ಮಹಿಳಾ ಪದವೀಧರರೇ ಹೆಚ್ಚು
- 21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು
NAMMUR EXPRESS NEWS
ಹುಬ್ಬಳ್ಳಿ : ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಭಾಗ್ಯದ ಬಾಗಿಲಾಗಿದೆ. ಅಮೆರಿಕ ದೇಶವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಈಟಿ ಕ್ಷೇತ್ರದ ಬೆಳವಣಿಗೆ ಭಾರತದಲ್ಲೆ ನಡೆಯುತ್ತಿದ್ದು, ಸದ್ಯ ನಮ್ಮ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ.
ವಿಶ್ವದಲ್ಲಿಯೇ ಸೂಪರ್ ಐಟಿ ಎಕ್ಸಪರ್ಟಗಳನ್ನು ಹೊಂದಿರುವ ದೇಶ ನಮ್ಮದು, ಭಾರತದ ಬೃಹತ್ ಪ್ರತಿಭೆಗಳು ವಿದೇಶದಲ್ಲಿ ಐಟಿ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಿದ್ದಾರೆ. ಐಐಟಿ, ಐಐಐಟಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳು ಹೆಚ್ಚಿನ ತಂತ್ರಜ್ಞರನ್ನು ತಯಾರಿಸುತ್ತಿದ್ದು, ಡಿಜಿಟಲ್ ಕ್ಷೇತ್ರದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಇದು ಭಾರತದ ಪ್ರಗತಿಗೆ ಪೂರಕವಾಗಿದೆ.
ಪ್ರತಿ ವರ್ಷ 3.8 ಕೋಟಿ ಪದವೀಧರರು : ಪ್ರಸ್ತುತ ಭಾರತದಲ್ಲಿ 1,100 ವಿಶ್ವವಿದ್ಯಾಲಯ ಹಾಗೂ 54 ಸಾವಿರ ತಾಂತ್ರಿಕ ಕ್ಷೇತ್ರದ ಉನ್ನತ ಶಿಕ್ಷಣ ಸಂಸ್ಥೆಗಳಿವೆ, ಪ್ರತಿ ವರ್ಷ 3.8 ಕೋಟಿ ಪದವೀಧರರು ಹೊರ ಬರುತ್ತಿದ್ದು, ಮಾಹಿತಿ ತಂತ್ರಜ್ಞಾನ ಸಂಸ್ಥೆ ಗುಣಮಟ್ಟದ. ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಗೆ ಪಣತೊಟ್ಟಿದೆ. 2021ರಲ್ಲಿ 5 ಲಕ್ಷ ತಂತ್ರಜ್ಞರಿಗೆ ಉದ್ಯೋಗ ಲಭಿಸಿದ್ದು, ಪ್ರಸಕ್ತ ಸಾಲಿನಲ್ಲಿ 15 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, 2032 ರ ಹೊತ್ತಿಗೆ 1.5 ಕೋಟಿ ಸಾಫ್ಟ್ ವೇರ್ ತಂತ್ರಜ್ಞರಿಗೆ ಉದ್ಯೋಗ ನೀಡುವ ದೂರ ದೃಷ್ಟಿ ಹೊಂದಲಾಗಿದೆ.
ನಾರಿ ಶಕ್ತಿಗೆ ಮುನ್ನಡೆ : 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಉದ್ಯೋಗ ಸೃಜನೆಗೆ ಬುನಾದಿ, ಭಾರತದ ಅತಿ ದೊಡ್ಡ ಉದ್ಯೋಗದಾತರಾಗಿ ಐಟಿ ಕ್ಷೇತ್ರ ಹೊರಹೊಮ್ಮಿದೆ. ಇನ್ನು ದೇಶಾದ್ಯಂತ ಪುರುಷರಿಗಿಂತ ಮಹಿಳೆಯರ ಜನಸಂಖ್ಯೆ ಕಡಿಮೆ ಇದ್ದರೂ ಪದವೀಧರರಲ್ಲಿ ಮಾತ್ರ ನಾರಿಯರ ಸಂಖ್ಯೆ ಹೆಚ್ಚಿದ್ದು, ಹೆಚ್ಚು ಉದ್ಯೋಗಗಳು ಅವರ ಪಾಲಾಗುತ್ತಿವೆ ಎನ್ನುವುದು ಇಲ್ಲಿ ಗಮನಾರ್ಹ. ಬಹುತೇಕ ಐಟಿ ಕ್ಷೇತ್ರದ ಪ್ರಮುಖ ಹುದ್ದೆಗಳಲ್ಲಿ ನಾರಿ ಶಕ್ತಿ ಮನ್ನಣೆ ಪಡೆದುಕೊಳ್ಳುತ್ತಿದೆ.
21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು : ಅಮೇರಿಕಾ, ಚೀನಾ, ಜರ್ಮನ್ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಉದ್ಯೋಗದಲ್ಲಿ ಭಾರತೀಯರದ್ದೆ ಸಿಂಹ ಪಾಲು, ರಾಜ್ಯ ರಾಜಧಾನಿ ಬೆಂಗಳೂರು ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಣಿವೆ ಎಂದು ಗುರುತಿಸಿಕೊಂಡಿದ್ದು, ಇಲ್ಲಿ 21 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ಭಾರತದ ಐಟಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳು, ನ್ಯಾನೋ, ಸಣ್ಣ ಕೈಗಾರಿಕೆ, ಬೃಹತ್ ಉದ್ಯಮ, ಕೃತಕ ಬುದ್ದಿಮತ್ತೆ, ಆರ್ಥಿಕತೆಯ ಜ್ಞಾನಗಳನ್ನು ತಾಂತ್ರಿಕತೆಗೆ ಅಳವಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದಲ್ಲಿ ಇನ್ನು ಹೆಚ್ಚಿನ ಉದ್ಯೋಗ ಸೃಷ್ಟಿಗೊಂಡು ದೇಶ ಪ್ರಗತಿಯತ್ತ ಸಾಗುವುದರಲ್ಲಿ ಸಂದೇಹವೇ ಇಲ್ಲ.