ಮಳೆ, ಬಿಸಿಲು ನಡುವೆ ಚುಮು ಚುಮು ಚಳಿ!
– ಬಿಸಿಲಿನ ಝಳ ಈ ಬಾರಿ ಹೆಚ್ಚಾಗುವ ಸಾಧ್ಯತೆ
– ಅರೋಗ್ಯ ಹಾಳಾಗಬಹುದು ಹುಷಾರ್
ವಿಶೇಷ ವರದಿ: ಉಮೇಶ್ ದೇಮ್ಲಾಪುರ
ನವೆಂಬರ್ ಮಾಸದ ಪ್ರಾರಂಭದೊಂದಿಗೆ ಕರ್ನಾಟಕದ ವಿವಿಧೆಡೆ ಚುಮು ಚುಮು ಚಳಿಯ ಅಬ್ಬರ ಆರಂಭವಾಗಿದೆ. ಮುಂಜಾನೆ ಮಂಜು, ಸಂಜೆ ಗಾಳಿ, ಮಧ್ಯಾಹ್ನದ ಸೂರ್ಯನ ಕಿಡಿಗಳು ಮೃದುವಾಗಿದ್ದು, ಚಳಿಗಾಲದ ಛಾಯೆ ರಾಜ್ಯದಾದ್ಯಂತ ಕಾಣಿಸುತ್ತಿದೆ. ಜನರು ಈಗಾಗಲೇ ಮಡಚಿಟ್ಟಿದ್ದ ಕಂಬಳಿ, ಸ್ವೆಟರ್, ಮಾಫ್ಲರ್ಗಳನ್ನು ಹೊರತೆಗೆದು ಬಳಕೆ ಮಾಡಲಾರಂಭಿಸಿದ್ದಾರೆ. ಚಳಿಯ ಮೊದಲ ವಾರವೇ ಜನ ಚಳಿ ಇಂದ ತತ್ತರಿಸಿದ್ದಾರೆ. ಅತೀ ಹೆಚ್ಚು ಮಳೆ ಆಗಿರುವ ಮಲೆನಾಡಲ್ಲಿ ಚಳಿ ಜೋರಾಗಿದೆ.
ಎಲ್ಲೆಂದರಲ್ಲಿ ಬೆಳ್ಳಂ ಬೆಳಗ್ಗೆ ಮಂಜು ಕವಿದ ದೃಶ್ಯಗಳು, ರಸ್ತೆಗಳ ತುದಿಯಲ್ಲಿ ಗಾಳಿ ಬೀಸಿದ ಶಬ್ದಗಳು ಚಳಿಗಾಲದ ಬರುವಿಕೆಯ ಸುಳಿವು ನೀಡುತ್ತಿವೆ. ತೀರ್ಥಹಳ್ಳಿ,ಆಗುಂಬೆ, ಸಾಗರ, ಹೊಸನಗರ,ಮಡಿಕೇರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಾಪಮಾನವು 16 ರಿಂದ 18 ಡಿಗ್ರಿ ಸೆಲ್ಸಿಯಸ್ವರೆಗೆ ಇಳಿದಿದ್ದು, ಜನರು ಮುಂಜಾನೆ ಕೆಲಸಕ್ಕೆ ತೆರಳುವಾಗ ಜಾಕೆಟ್ ಹಾಗೂ ಶಾಲು ಧರಿಸುವಂತಾಗಿದೆ. ಸಂಜೆ 6:00 ನಂತರ ಮತ್ತೆ ಇದೆ ಚಳಿಯ ವಾತಾವರಣ ಅನುಭವ ಮಾಡಿಸುತ್ತಿದೆ.
ನಗರ ಪ್ರದೇಶಗಳಲ್ಲಿ ಬೆಳಗಿನ ವೇಳೆಯ ಯೋಗಾ ಹಾಗೂ ಜಾಗಿಂಗ್ ಪ್ರಿಯರು ಚಳಿಯಿಂದ ರಕ್ಷಿಸಿಕೊಳ್ಳಲು ಹೆಡ್ ಕ್ಯಾಪ್ ಮತ್ತು ಗ್ಲೌಸ್ ಧರಿಸುತ್ತಿರುವುದು ಕಂಡುಬರುತ್ತಿದೆ. ವಾಹನ ಸವಾರರು ಕೂಡ ಚಳಿ ತಾಳಲಾರದ ಪರಿಸ್ಥಿತಿಯಿಂದ ಜಾಕೆಟ್ ಧರಿಸಿ ಅಲ್ಲಲ್ಲಿ ಪ್ರಯಾಣ ನಿಲ್ಲಿಸಿ ಚಹಾ ಸವಿದು ಪುನಃ ಪ್ರಯಾಣಿಸುತ್ತಿದ್ದಾರೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ವಾರಗಳಲ್ಲಿ ಚಳಿಯ ತೀವ್ರತೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಕರ್ನಾಟಕದ ಉತ್ತರ ಭಾಗಗಳಲ್ಲಿ ತಾಪಮಾನವು 13 ಡಿಗ್ರಿವರೆಗೆ ಇಳಿಯುವ ನಿರೀಕ್ಷೆಯಿದ್ದು, ತೀರ್ಥಹಳ್ಳಿ, ಆಗುಂಬೆ, ಮಡಿಕೇರಿ, ಚಿಕ್ಕಮಗಳೂರು ಭಾಗಗಳಲ್ಲಿ ದಟ್ಟ ಮಂಜು ಆವರಿಸುವ ಸಂಭವವಿದೆ.
ರೈತ ಸಮುದಾಯಕ್ಕೂ ಚಳಿಗಾಲ ಹೊಸ ನಿರೀಕ್ಷೆ ಮತ್ತು ಸವಾಲು ತರುತ್ತಿದೆ. ಈ ಅವಧಿಯಲ್ಲಿ ತರಕಾರಿ ಬೆಳೆಗಳು ಚೆನ್ನಾಗಿ ಬೆಳೆಯುವ ಸಾಧ್ಯತೆ ಇದ್ದರೂ, ಅತಿಚಳಿಯಿಂದ ಕೆಲವು ಬೆಳೆಗಳಿಗೆ ಹಾನಿ ಸಂಭವವಿದೆ, ತರಕಾರಿ ಹಣ್ಣುಗಳ ಮೇಲೆ ರೋಗ ಉತ್ಪತ್ತಿಯಾಗಲು ಈ ಮಂಜು ಕವಿದ ವಾತಾವರಣ ಕಾರಣವಾಗುತ್ತದೆ.
ಹೋಟೆಲ್ಗಳು ಮತ್ತು ಟೀ ಅಂಗಡಿಗಳಲ್ಲಿ ಬಿಸಿ ಟೀ, ಕಾಫಿ ಹಾಗೂ ಬೋಂಡಾ ಬಜ್ಜಿಗಳ ಮಾರಾಟ ಏರಿಕೆಯಾಗಿದೆ. ಚಳಿಗಾಲದ ಈ ವಾತಾವರಣವು ಜನರ ಮನಸ್ಸಿಗೆ ಹರ್ಷ ತಂದಿದ್ದರೂ, ಹಿರಿಯ ಜೀವಗಳ ಮೇಲೆ ಮತ್ತು ಮಕ್ಕಳು ಆರೋಗ್ಯದ ಕಡೆ ಹೆಚ್ಚು ಜಾಗ್ರತೆ ವಹಿಸ ಬೇಕಾದ ಅವಶ್ಯಕತೆ ಅನಿವಾರ್ಯದಂತೆ ಕಂಡು ಬರುತ್ತಿದೆ.








