ಕರಾವಳಿ ಟಾಪ್ ನ್ಯೂಸ್
* ಕಾಪು: ಅಪರಿಚಿತ ಯುವಕನ ಶವ ಪತ್ತೆ
* ಕಾರ್ಕಳ: ಮಾರಕಾಸ್ತ್ರಗಳಿಂದ ಬೆದರಿಸಿ ದನ ಕಳ್ಳತನ
* ಬೆಳ್ತಂಗಡಿ: ನಾಲ್ವರು ಮಾಜಿ ಅಧ್ಯಕ್ಷರಿಗೆ ಎಸ್ಐಟಿ ಅಧಿಕಾರಿಗಳಿಂದ ಕರೆ
* ಸುಳ್ಯ: ಬೆಳೆ ಸಮೀಕ್ಷೆ ಮಾಡಲು ಲಂಚ
* ಮಂಗಳೂರು: ಚಿನ್ನಾಭರಣ ಕಳುವು
* ಬಂಟ್ವಾಳ: ಕಾಣೆಯಾಗಿದ್ದ ಉದ್ಯಮಿ ಮಂತ್ರಾಲಯದಲ್ಲಿ ಪತ್ತೆ
* ಪುತ್ತೂರು: ನಕಲಿ ಆರ್ ಟಿಸಿ ನೀಡಿ ವಂಚನೆ
* ಉಡುಪಿ: ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಕಾಪು: ಅಪರಿಚಿತ ಯುವಕನ ಶವ ಪತ್ತೆ
ಕಾಪು: ಪಣಿಯೂರು ಮೇಲ್ಸೇತುವೆಯ ತಳಭಾಗದ ರೈಲ್ವೆ ಟ್ರ್ಯಾಕ್ ನಲ್ಲಿ ಅಂಗಾತನೆ ಬಿದ್ದಿರುವ ಸ್ಥಿತಿಯಲ್ಲಿ, ಅಪರಿಚಿತ ಯುವಕನ ಶವವೊಂದು ಸೋಮವಾರ ಪತ್ತೆಯಾಗಿದೆ. ಮುಖಕ್ಕೆ ಮತ್ತು ಬಲಗಾಲಿಗೆ ಗಾಯಗಳಾಗಿದ್ದು, ಆತನ ಚಪ್ಪಲಿಗಳು ಮತ್ತು ಮೊಬೈಲ್ ಶವದ ಪಕ್ಕದಲ್ಲಿಯೇ ಬಿದ್ದಿರುವುದು ಕಂಡುಬಂದಿದೆ. ನಂದಿಕೂರು ರೈಲ್ವೆ ಸ್ಟೇಷನ್ ನಿಂದ, ಉಡುಪಿ ರೈಲ್ವೆ ಸ್ಟೇಷನ್ ಗೆ ಲೋಕೋ ಇಂಜಿನ್ ಹಾದು ಹೋಗುವ ಸಮಯದಲ್ಲಿ ಯುವಕನಿಗೆ ಢಿಕ್ಕಿ ಹೊಡೆದು, ಆತ ಮೃತಪಟ್ಟಿದ್ದಾನೆ ಎಂದು ಕೊಂಕಣ ರೈಲ್ವೆ ಟ್ರ್ಯಾಕ್ ಮ್ಯಾನ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಯುವಕನ ಮೃತದೇಹವನ್ನು ಇರಿಸಲಾಗಿದ್ದು, ಟ್ರ್ಯಾಕ್ ಮ್ಯಾನ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
* ಕಾರ್ಕಳ: ಮಾರಕಾಸ್ತ್ರಗಳಿಂದ ಬೆದರಿಸಿ ದನ ಕಳ್ಳತನ
ಕಾರ್ಕಳ: ಜಯಶ್ರೀ ಎಂಬ ಹೆಸರಿನ ಮಹಿಳೆಯೊಬ್ಬರು ಮನೆಯಲ್ಲಿ ಒಂಟಿಯಾಗಿ ಇದ್ದ ಸಂದರ್ಭದಲ್ಲಿ, ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ, ಆಕೆಯನ್ನು ಬೆದರಿಸಿ, ದನಗಳನ್ನು ಕದ್ದೊಯ್ದ ಘಟನೆ ಸೋಮವಾರ ಬೆಳಿಗಿನ ಜಾವ ಶಿರ್ಲಾಲಿಯಲ್ಲಿ ನಡೆದಿದೆ. ವಾಹನದ ಸದ್ದು ಕೇಳಿ ಹೊರಬಂದು ನೋಡಿದ ಜಯಶ್ರೀ ಅವರನ್ನು ಹೆದರಿಸಿ, ಮನೆಯ ಹಟ್ಟಿಗೆ ನುಗ್ಗಿದ ದುಷ್ಕರ್ಮಿಗಳು, ಮೂರು ದನಗಳನ್ನು ಕದ್ದೊಯ್ದಿದ್ದಾರೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಜೇಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
* ಬೆಳ್ತಂಗಡಿ: ನಾಲ್ವರು ಮಾಜಿ ಅಧ್ಯಕ್ಷರಿಗೆ ಎಸ್ಐಟಿ ಅಧಿಕಾರಿಗಳಿಂದ ಕರೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ಐಟಿ ಅಧಿಕಾರಿಗಳು ನಾಲ್ಕು ಜನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಿಗೆ ಕರೆ ಕಳುಹಿಸಿದ್ದಾರೆ. ಈ ನಾಲ್ಕು ಜನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಯುಡಿಆರ್ ಪ್ರಕರಣದಲ್ಲಿ ಶವಗಳನ್ನು ಹೂತು ಹಾಕಿರುವ ವಿಚಾರ ಕುರಿತು, ತನಿಖೆ ನಡೆಸಲು ಕರೆ ನೀಡಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೇಶವ್ ಬೆಳಾಲ್, ಪ್ರಭಾಕರ್, ಗೀತಾ ಮತ್ತು ಚಂದನ್ ಕಾಮತ್ ಅವರು ವಿಚಾರಣೆಗೆ ಹಾಜರಾದರು. ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1986 ರಿಂದ 2014ರ ವರೆಗೆ ಒಟ್ಟು 279 ಯುಡಿಆರ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 219 ಪುರುಷರು, 46 ಮಹಿಳೆಯರು ಮತ್ತು ಒಂದು ನವಜಾತ ಶಿಶುವಾಗಿದ್ದು, 13 ಜನರ ಲಿಂಗಪತ್ತೆ ದೃಢಪಟ್ಟಿಲ್ಲ ಎನ್ನುವ ದಾಖಲೆಗಳು ಪಂಚಾಯಿತಿಯಲ್ಲಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಯುವ ಸಾಧ್ಯತೆ ಇದೆ.
* ಸುಳ್ಯ: ಬೆಳೆ ಸಮೀಕ್ಷೆ ಮಾಡಲು ಲಂಚ
ಸುಳ್ಯ: ತಾಲ್ಲೂಕಿನ ಸುತ್ತಮುತ್ತಲ ಪ್ರದೇಶಗಳಿಗೆ ಬೆಳೆ ಸಮೀಕ್ಷೆಗೆಂದು ತೆರಳುತ್ತಿರುವ ಸಿಬ್ಬಂದಿಗಳು, ಕೃಷಿಕರ ಬಳಿ 500 ರೂಪಾಯಿ ನೀಡುವಂತೆ ಕೇಳುತ್ತಿರುವುದು, ಕೊಡುವುದಿಲ್ಲ ಎಂದಾದರೆ ಬೆಳೆ ಸಮೀಕ್ಷೆ ಮಾಡುವುದಿಲ್ಲ ಎಂದು ಹೇಳುತ್ತಿರುವುದು ಕೃಷಿಕರಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ರೈತರು ಪತ್ರಿಕೆಯ ಮೂಲಕ ದೂರು ನೀಡಿದ್ದಾರೆ. ಈ ರೀತಿಯ ದೂರುಗಳು ಹೆಚ್ಚಿನ ಪ್ರಮಾಣದಲ್ಲಿ ಕೇಳಿ ಬರುತ್ತಿರುವುದರಿಂದ ಸಾರ್ವಜನಿಕರು ಸುಳ್ಯದ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದಾಗ “ಬೆಳೆ ಸಮೀಕ್ಷೆಗೆಂದು ಆಗಮಿಸುವ ಸಿಬ್ಬಂದಿಗಳಿಗೆ ಸರ್ಕಾರ ವೇತನ ನೀಡುತ್ತದೆ. ಹೀಗಾಗಿ ಬೆಳೆ ಸಮೀಕ್ಷೆಗೆ ಯಾವುದೇ ಹೆಚ್ಚುವರಿ ಹಣವನ್ನು ಕೃಷಿಕರು ಸಿಬ್ಬಂದಿಗಳಿಗೆ ಪಾವತಿಸುವ ಅಗತ್ಯವಿಲ್ಲ. ತಿಳಿಯುವಂತಿದ್ದರೆ ಕೃಷಿಕರು ಆ್ಯಪ್ ಮೂಲಕ ತಾವೇ ಬೆಳೆ ಸಮೀಕ್ಷೆ ಕೂಡ ಮಾಡಿಕೊಳ್ಳಬಹುದು”ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
* ಮಂಗಳೂರು: ಚಿನ್ನಾಭರಣ ಕಳುವು
ಮಂಗಳೂರು: ಚಿನ್ನಾಭರಣ ಅಂಗಡಿಯ ಸಿಬ್ಬಂದಿಯೊಬ್ಬನನ್ನು ಅಪಹರಿಸಿ, ಚಿನ್ನದ ಗಟ್ಟಿಯನ್ನು ದರೋಡೆ ಮಾಡಿದ ಘಟನೆ ಹಂಪನಕಟ್ಟೆಯಲ್ಲಿ ಸೋಮವಾರದಂದು ನಡೆದಿದೆ. ಶುಕ್ರವಾರ ರಾತ್ರಿ ಅಂಗಡಿಯ ಸಿಬ್ಬಂದಿಯಾದ ಮುಸ್ತಾಫ, ಅಂಗಡಿಯಲ್ಲಿ ಒಂದು ವಾರದಿಂದ ಶೇಖರಣೆಗೊಂಡಿದ್ದ, ಕರಗಿಸಿದ ಸುಮಾರು 1.5 ಕೋಟಿ ರೂಪಾಯಿ ಬೆಲೆಬಾಳುವ,1.650 ಗ್ರಾಂ ತೂಕದ ಚಿನ್ನವನ್ನು ತೆಗೆದುಕೊಂಡು, ಸಂತೋಷ್ ಎನ್ನುವವರ ಅಂಗಡಿಗೆ ಹೋಗಿ ಶುದ್ಧ ಚಿನ್ನವನ್ನಾಗಿ ಪರಿವರ್ತಿಸಲು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮುಸ್ತಾಫ ಅವರ ಸ್ಕೂಟರ್ ಗೆ ಅಡ್ಡಗಟ್ಟಿ, ತಮ್ಮ ವಾಹನಕ್ಕೆ ಯಾಕೆ ಢಿಕ್ಕಿ ಹೊಡೆದೆ ಎಂದು, ವಿನಾಕಾರಣ ಜಗಳ ತೆಗೆದಿದ್ದಾರೆ. ಇದೇ ವೇಳೆಗೆ ಕಾರಿನಲ್ಲಿ ಆಗಮಿಸಿದ ನಾಲ್ವರು ದುಷ್ಕರ್ಮಿಗಳು ಮುಸ್ತಾಫ ಅವರನ್ನು ಅಪಹರಿಸಿಕೊಂಡು ಹೋಗಿ, ಎಕ್ಕೂರು ಬಳಿ ಬಿಟ್ಟು, ಅವರ ಬಳಿಯಿದ್ದ ಚಿನ್ನದ ಗಟ್ಟಿಯನ್ನು ಲಪಟಾಯಿಸಿ, ಪರಾರಿಯಾಗಿದ್ದಾರೆ. ಇದೊಂದು ಪೂರ್ವ ಯೋಜಿತ ಕೃತ್ಯ ಎನ್ನುವುದು ದೃಢಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರದ ಪೊಲೀಸರು, ಕಾರ್ಯಾಚರಣೆಯ ಮೂಲಕ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಓರ್ವ ಬಾಲಕನನ್ನು ಮತ್ತು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಉಳ್ಳಾಲ ಕೋಟೆಕಾರು ನಿವಾಸಿ ಫಾರಿಶ್, ಉಳ್ಳಾಲದ ಮುಕ್ಕಚೇರಿ ನಿವಾಸಿ ಸಫ್ವಾನ್, ಉಳ್ಳಾಲದ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಅಲಿ, ಉಳ್ಳಾಲ ದರ್ಗಾ ಬಳಿಯ ಫರಾಝ್ ಎಂದು ಗುರುತಿಸಲಾಗಿದೆ. ಇವರೊಂದಿಗೆ ಬಾಲಕನು ಸೇರಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವ ಸಂದರ್ಭದಲ್ಲಿ, ಅವರು ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದು, ಕಾರ್ ಮತ್ತು ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
* ಬಂಟ್ವಾಳ: ಕಾಣೆಯಾಗಿದ್ದ ಉದ್ಯಮಿ ಮಂತ್ರಾಲಯದಲ್ಲಿ ಪತ್ತೆ
ಬಂಟ್ವಾಳ: ಸಜಿನಪಡದ ಕಂದೂರಿನಲ್ಲಿ ಎಸ್. ಕೆ. ಸುವರ್ಣ ಸೌಂಡ್ಸ್ ಆ್ಯಂಡ್ ಲೈಟಿಂಗ್ ಎಂಬ ಅಂಗಡಿಯನ್ನು ನಡೆಸುತ್ತಿರುವ, ಉದ್ಯಮಿಯಾದ ಸದಾನಂದ ಅವರು ಸೆಪ್ಟೆಂಬರ್ ಹದಿನಾರರಂದು ಮನೆಯಿಂದ ನಾಪತ್ತೆಯಾಗಿದ್ದು, ಅವರನ್ನು ಪೊಲೀಸರು ಮಂತ್ರಾಲಯದಲ್ಲಿ ಸೋಮವಾರದಂದು ಪತ್ತೆ ಹಚ್ಚಿದ್ದಾರೆ. ಸೆಪ್ಟೆಂಬರ್ ಹದಿನಾರರಂದು ಸಂಜೆ, ಸದಾನಂದ ಅವರು ತಮ್ಮ ಮೊಬೈಲ್ ಅನ್ನು ಮನೆಯ ಬಳಿಯಿದ್ದ ಟೆಂಪೊದಲ್ಲಿ ಇಟ್ಟು, ಮನೆಯವರಿಗೆ ತಿಳಿಸದೇ ಹೊರಟು ಹೋಗಿದ್ದರು. ಇದರಿಂದ ಗಾಬರಿಗೊಂಡ ಸದಾನಂದ ಅವರ ಪತ್ನಿ ರೋಹಿಣಿ ಅವರು ಬಂಟ್ವಾಳದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸದಾನಂದ ಅವರ ಮೊಬೈಲ್ ಲಭಿಸಿದ್ದು, ಅದರಲ್ಲಿ ಕಂಡುಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಟಿಕೆಟ್ ಬುಕ್ಕಿಂಗ್ ಕುರಿತ ಮಾಹಿತಿಯ ಮೇರೆಗೆ, ಸದಾನಂದ ಅವರು ಮಂತ್ರಾಲಯಕ್ಕೆ ಪ್ರಯಾಣ ಬೆಳೆಸಿದ್ದಾರೆ ಎನ್ನುವುದು ಪೊಲೀಸರಿಗೆ ಖಚಿತವಾಗಿದೆ. ಮಂತ್ರಾಲಯದಲ್ಲಿದ್ದ ಸದಾನಂದ ಅವರನ್ನು ಪೊಲೀಸರು ಪತ್ತೆ ಹಚ್ಚಿ, ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದಾರೆ.
* ಪುತ್ತೂರು: ನಕಲಿ ಆರ್ ಟಿಸಿ ನೀಡಿ ವಂಚನೆ
ಪುತ್ತೂರು: ಆರೋಪಿಯೊಬ್ಬನಿಗೆ ಜಾಮೀನು ನೀಡುವ ಉದ್ದೇಶದಿಂದ, ಬೇರೆಯವರ ಆರ್ ಟಿಸಿಯನ್ನು ತನ್ನದೆಂದು ನಂಬಿಸಿ, ನ್ಯಾಯಾಲಯಕ್ಕೆ ವಂಚಿಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಅಬೂಬಕ್ಕರ್ ಗುನುನಾರ್ ಈ ರೀತಿಯ ಕೃತ್ಯವೆಸಗಿದ್ದು, ಇದಕ್ಕೆ ಸಂಬಂಧಿಸಿದಂತೆ ನೆಕ್ಕಿಲಾಡಿ ಅಬೂಬಕ್ಕರ್ ಎನ್ನುವವರು “ನನ್ನ ಹೆಸರಿನಲ್ಲಿರುವ ಆರ್ ಟಿಸಿಯನ್ನು ತನ್ನ ಹೆಸರಿನಲ್ಲಿರುವ ಜಮೀನಿನ ಆರ್ ಟಿಸಿ ಎಂದು ಹೇಳಿ ನಂಬಿಸಿ, ವಂಚನೆ ಮಾಡಿದ್ದಾರೆ” ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನೆಕ್ಕಿಲಾಡಿ ಅಬೂಬಕ್ಕರ್ ಅವರು ನೀಡಿದ ದೂರಿನ ಆಧಾರದ ಮೇಲೆ ಅಬೂಬಕ್ಕರ್ ಗೂನೂನಾರ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 48/2025 ಹಾಗೂ ಕಾಲಂ 417, 419 ಐಪಿಸಿ ಅನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
* ಉಡುಪಿ: ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ
ಉಡುಪಿ: ಸುಮಂತ್ ಕುಮಾರ್ ಎಂಬ ಯುವಕನಿಗೆ ಅಪರಿಚಿತರು ಹೂಡಿಕೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ಸುಮಂತ್ ಅವರಿಗೆ ಜುಲೈ ತಿಂಗಳಿನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಬರುತ್ತದೆ ಎಂದು, ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದ್ದು, ಬಳಿಕ ಸುಮಂತ್ ಅವರನ್ನು ವಾಟ್ಸಪ್ ಗ್ರೂಪ್ ಒಂದಕ್ಕೆ ಸೇರಿಸಲಾಯಿತು. ಆ ಗುಂಪಿನಲ್ಲಿ ಅಂಜಲಿ ಮೆಹ್ತಾ ಮತ್ತು ಶ್ರೀಧರ್ ರಂಗರಾಜನ್ ಎನ್ನುವವರ ಪರಿಚಯವಾಗಿದೆ. ಇವರಿಬ್ಬರು ಒಳ್ಳೆಯ ಆಫರ್ ನೀಡುವುದಾಗಿ ಸುಮಂತ್ ಅವರನ್ನು ನಂಬಿಸಿ, 16.99.605 ರೂಪಾಯಿ ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







