ಕರಾವಳಿ 3 ಪ್ರೈಮ್ ನ್ಯೂಸ್
* ಮಂಗಳೂರು ನಗರಕ್ಕೆ ಬಂತು ಹೊಸ ಟ್ರಾಫಿಕ್ ಸಿಗ್ನಲ್..!
* ಬೆಳ್ತಂಗಡಿ: ಕಾಡಾನೆಗಳ ಪ್ರವೇಶ: ಜನರಿಗೆ ಜೀವ ಭಯ
* ಉಡುಪಿ: ದೆಹಲಿ ಕಾರು ಸ್ಪೋಟ ಹಿನ್ನೆಲೆ; ಕರಾವಳಿ ಅಲರ್ಟ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ, ನಗರದಲ್ಲಿ ಸಂಚಾರ ಸುಧಾರಣೆ ಮತ್ತು ವಾಹನಗಳ ಸುಗಮ ಸಂಚಾರದ ಉದ್ದೇಶದಿಂದ, ವಿವಿಧ ಜಂಕ್ಷನ್ ಗಳಲ್ಲಿ ಕಳೆದ ವರ್ಷ ಹೊಸ ಟ್ರಾಫಿಕ್ ಸಿಗ್ನಲ್ ಗಳನ್ನು ಅಳವಡಿಸಲಾಗಿದೆ. ಆದರೆ ಒಂದೆರಡು ಬಾರಿ ಪ್ರಾಯೋಗಿಕವಾಗಿ ಕಾರ್ಯಾಚರಣೆಯನ್ನು ನಡೆಸಿರುವುದು ಹೊರತುಪಡಿಸಿದರೆ, ಪೂರ್ಣಪ್ರಮಾಣದಲ್ಲಿ ಇನ್ನೂ ಬಳಕೆಗೊಂಡಿಲ್ಲ. ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ, ಹೊಸದಾಗಿ ಅಳವಡಿಸಿರುವ ಎಲ್ಲಾ ಸಿಗ್ನಲ್ ಗಳಲ್ಲಿ ಕಿತ್ತಳೆ ಬಣ್ಣದ ಲೈಟ್ ಮಾತ್ರ ಕಾಣಬರುತ್ತಿದ್ದು, ಉಳಿದ ಯಾವುದೇ ಸಿಗ್ನಲ್ ಗಳು ಉಪಯೋಗಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಜಂಕ್ಷನ್, ಬಲ್ಲಾಳ್ ಬಾಗ್, ಬಂಟರ ವಸತಿನಿಲಯ ಮತ್ತು ಬಲ್ಮಠ ಜಂಕ್ಷನ್ ಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಪರಿಣಾಮ ಏಕಾಏಕಿ ವಾಹನಗಳ ದಟ್ಟಣೆ ಹೆಚ್ಚಾಗಿ, ವಾಹನ ಸವಾರರು ಸಿಗ್ನಲ್ ನಲ್ಲಿ ಸಿಲುಕಿ ಸಮಸ್ಯೆ ಎದುರಿಸುವಂತಾಯಿತೇ ವಿನಃ, ಬೇರೆ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಹೀಗಾಗಿ ಸಮಯಾವಕಾಶದಲ್ಲಿ ಕೆಲವೊಂದು ಬದಲಾವಣೆಗಳನ್ನು ತರಲು ನಿರ್ಧರಿಸಲಾಯಿತು. ಆದರೆ ಇದುವರೆಗೂ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಸ್ತುತ ಲಾಲ್ ಬಾಗ್ ವೃತ್ತ, ಪಿವಿಎಸ್ ವೃತ್ತ, ಹಂಪನಕಟ್ಟೆ, ಕಂಕನಾಡಿಯ ಕರಾವಳಿ ವೃತ್ತ, ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ವೃತ್ತಿಗಳಲ್ಲಿ ಮಾತ್ರ ಸಿಗ್ನಲ್ ಗಳು ಕಾರ್ಯ ನಿರ್ವಹಿಸುತ್ತಿವೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ರವಿಶಂಕರ್ ಅವರು “ಹೊಸದಾಗಿ ಅಳವಡಿಸಿರುವ ಸಿಗ್ನಲ್ ಗಳಲ್ಲಿ ಪ್ರಾಯೋಗಿಕ ಕಾರ್ಯಾಚರಣೆಯನ್ನು ಈಗಾಗಲೇ ನಡೆಸಲಾಗಿದೆ. ಇದರಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅವಶ್ಯಕತೆ ಇರುವುದರಿಂದ, ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಶೀಘ್ರದಲ್ಲೇ ಬಂಟರ ವಸತಿನಿಲಯ ಮತ್ತು ಬೆಂದೂರು ತೋಟಗಾರಿಕಾ ಕಛೇರಿ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು. ಹಾಗೆಯೇ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಜಂಕ್ಷನ್ ನಲ್ಲಿ ಮತ್ತೆ ಟ್ರಾಫಿಕ್ ಸಿಗ್ನಲ್ ಅನ್ನು ಆರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.
* ಬೆಳ್ತಂಗಡಿ: ಕಾಡಾನೆಗಳ ಪ್ರವೇಶ: ಜನರಿಗೆ ಜೀವ ಭಯ!
ಬೆಳ್ತಂಗಡಿ: ಕರಾವಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದೀಗ ನಿಡ್ಲೆ ಹಾಗೂ ಕಲೆಂಜ ಗ್ರಾಮದ ಗಡಿ ಪ್ರದೇಶವಾದ ಒಮಲದಲ್ಲಿ ಮಂಗಳವಾರ ಸಂಜೆ ಎರಡು ಕಾಡಾನೆಗಳು ಕಾಣಿಸಿಕೊಂಡಿವೆ. ಅದೇ ರೀತಿ ಹತ್ಯಡ್ಕ ಗ್ರಾಮದ ತುಂಬೆತ್ತಡ್ಕ ಮಾರಿಗುಡಿಯ ಬಳಿ ಸೋಮವಾರ ರಾತ್ರಿ ಎಂಟು ಗಂಟೆಯ ಸುಮಾರಿಗೆ ಎರಡು ಕಾಡಾನೆಗಳು ಗದ್ದೆಗಳ ಮೂಲಕ ಬಂದು, ಕೃಷಿಗೆ ಹಾನಿಯನ್ನುಂಟು ಮಾಡಿವೆ ಎನ್ನುವ ಮಾಹಿತಿ ಲಭಿಸಿದೆ. .
* ಉಡುಪಿ: ದೆಹಲಿ ಕಾರು ಸ್ಪೋಟ ಹಿನ್ನೆಲೆ; ಕರಾವಳಿ ಅಲರ್ಟ್
ಉಡುಪಿ: ಭಾರತದ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಪೋಟ ಪ್ರಕರಣವು, ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಇದರ ಬಿಸಿ ಕರಾವಳಿಯನ್ನು ತಟ್ಟಿದೆ. ಈ ಕಾರಣಕ್ಕಾಗಿ ಮಲ್ಪೆಯ ಸಮುದ್ರದಲ್ಲಿ ಕರಾವಳಿ ಕಾವಲು ಪೊಲೀಸರು ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಕರಾವಳಿ ಭಾಗದಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಘಟನೆ ನಡೆದ ಕ್ಷಣದಿಂದಲೇ ಅಂದರೆ ಸೋಮವಾರ ರಾತ್ರಿಯಿಂದಲೇ ಕರಾವಳಿ ಕಾವಲು ಪೊಲೀಸರು ಗಸ್ತು ತಿರುಗುವ ಕಾರ್ಯವನ್ನು ಹೆಚ್ಚಿಸಿದ್ದು, ಸಾವಿರಾರು ಹಡಗುಗಳು ಓಡಾಡುವ ಕಡೆ ತೀವ್ರತರವಾಗಿ ನಿಗಾ ವಹಿಸಲಾಗಿದೆ. ಅದರಲ್ಲೂ ಪ್ರಮುಖವಾಗಿ ಆಳಸಮುದ್ರದಲ್ಲಿರುವ ಅಪರಿಚಿತ ಹಡಗುಗಳು ಮತ್ತು ತಮಿಳುನಾಡು ಕೇರಳ ರಾಜ್ಯಗಳ ಹಡಗುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೇವಲ ಕಡಲ ತೀರವಷ್ಟೇ ಅಲ್ಲದೆ ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ರೈಲು ನಿಲ್ದಾಣ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಲ್ದಾಣ, ಮಾಲ್ ಗಳು, ಮಾರುಕಟ್ಟೆ ಪ್ರದೇಶ, ಪ್ರವಾಸಿ ತಾಣಗಳು, ಮೀನುಗಾರಿಕಾ ದಕ್ಕೆ ಸೇರಿದಂತೆ ಹಲವಾರು ಸಾರ್ವಜನಿಕ ಪ್ರದೇಶಗಳಲ್ಲಿ ಮೇಲಧಿಕಾರಿಗಳ ಆದೇಶದಂತೆ ಗುಪ್ತಚರ ವಿಭಾಗ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳಿಂದ ತಪಾಸಣೆಗಳನ್ನು ಕೈಗೊಳ್ಳುವ ಮೂಲಕ ಕಟ್ಟೆಚ್ಚರ ವಹಿಸಲಾಗಿದೆ.







