ಕರಾವಳಿ ಟಾಪ್ ನ್ಯೂಸ್
* ಉಡುಪಿ: ಇನೋವಾ ಕಾರು ಡಿಕ್ಕಿ; ಮೂವರ ಸಾವು
* ಉಳ್ಳಾಲ: ನಾಯಿಯ ದಾಳಿಗೆ ವ್ಯಕ್ತಿ ಸಾವು!
* ಮೂಡಬಿದರೆ: ಉದ್ಯೋಗ ಹೆಸರಿನಲ್ಲಿ ಕೋಟ್ಯಂತರ ಮೋಸ
* ಬೆಳ್ತಂಗಡಿ: ಮನೆಗೆ ತಗುಲಿದ ಬೆಂಕಿ
* ಕಾಪು: ಮೂವರು ವ್ಯಕ್ತಿಗಳಿಂದ ಮಹಿಳೆಗೆ ಬೆದರಿಕೆ
* ಬ್ರಹ್ಮಾವರ: ಮರದಿಂದ ಬಿದ್ದು ವ್ಯಕ್ತಿ ಸಾವು
* ಕುಂದಾಪುರ: ತಂಗಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಸಹೋದ
* ಕಾರವಾರ: ಆರೋಪಿಯಾಗಿರುವ ಶಾಸಕರಿಗೆ ರಿಲೀಫ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಬೆಂಗಳೂರಿನಿಂದ ಉಡುಪಿಯ ಕಡೆಗೆ ತೆರಳುತ್ತಿದ್ದ ಇನೋವಾ ಕಾರೊಂದು ಅಪಘಾತಕ್ಕೆ ಒಳಗಾಗಿ, ಮೂವರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಬಿ.ಸಿ ರಸ್ತೆಯ ನಾರಾಯಣ ಗುರು ವ್ರತ್ತದ ಬಳಿ ನಡೆದಿದೆ.
ಮೃತಪಟ್ಟವರನ್ನು ಬೆಂಗಳೂರಿನ ನಿವಾಸಿಗಳಾದ ರವಿ, ನಂಜಮ್ಮ ಮತ್ತು ರಮ್ಯಾ ಎಂದು ಗುರುತಿಸಲಾಗಿದೆ. ಸುಶೀಲಾ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಮತ್ತು ಕಾರು ಚಾಲಕರಾದ ಸುಬ್ರಹ್ಮಣ್ಯ ಅವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಉಳ್ಳಾಲ: ನಾಯಿಯ ದಾಳಿಗೆ ವ್ಯಕ್ತಿ ಸಾವು!
ಉಳ್ಳಾಲ: ಅಂಗಡಿಯ ಎದುರಿನಲ್ಲಿ ಮದ್ಯಪಾನ ಮಾಡಿ ಮಲಗಿದ್ದ ವ್ಯಕ್ತಿಯ ಮೇಲೆ ನಾಯಿಯೊಂದು ದಾಳಿ ನಡೆಸಿ, ವ್ಯಕ್ತಿ ಮೃತಪಟ್ಟಿರುವ ಘಟನೆ, ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ಬೆಳಕಿಗೆ ಬಂದಿದೆ.ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ್ ಎಂದು ಗುರುತಿಸಲಾಗಿದೆ. ನಾಯಿ ದಾಳಿ ನಡೆಸಿದ ಸಂದರ್ಭದಲ್ಲಿ ದಯಾನಂದ್ ಆ ಜಾಗದಿಂದ ರಸ್ತೆಯ ಮತ್ತೊಂದು ಭಾಗದಲ್ಲಿ ಮನೆಯತ್ತ ಓಡಿದ್ದಾರೆ. ಆದರೆ ಅಲ್ಲಿಯೂ ಬೆನ್ನಟ್ಟಿದ ನಾಯಿ ದಯಾನಂದ್ ಅವರ ಮೇಲೆ ಮತ್ತೊಮ್ಮೆ ದಾಳಿ ನಡೆಸಿ, ಕೊಂದು ಹಾಕಿದೆ. ಮೊದಲಿಗೆ ರಸ್ತೆ ಬದಿಯಲ್ಲಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಕೊಲೆ ಎಂದು ಭಾವಿಸಿದ್ದರು. ನಂತರ ದೇಹದ ಮೇಲಿನ ಗಾಯದ ಗುರುತುಗಳನ್ನು ಕಂಡು ಯಾವುದೋ ಪ್ರಾಣಿ ದಾಳಿ ನಡೆಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ವ್ಯಕ್ತಿಯ ಕಣ್ಣು ಸೇರಿದಂತೆ ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಜ್ಞರು ಇದು ಪ್ರಾಣಿಯೊಂದು ದಾಳಿ ನಡೆಸಿರುವುದು ಹೌದೆಂದು ತಿಳಿಸಿದ್ದು, ಬಳಿಕ ಅದು ನಾಯಿ ಎಂದು ಖಚಿತಪಡಿಸಿದರು. ಈ ಹಿನ್ನೆಲೆಯಲ್ಲಿ ನಾಯಿಗಾಗಿ ಹುಡುಕಾಟ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು, ಪರಿಶೀಲನೆಯನ್ನು ನಡೆಸಿದರು.
• ಮೂಡಬಿದರೆ: ವಿದೇಶದಲ್ಲಿ ಉದ್ಯೋಗ ಹೆಸರಿನಲ್ಲಿ ವಂಚನೆ
ಮೂಡಬಿದರೆ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿನ ಉದ್ಯೋಗಾಕಾಂಕ್ಷಿಗಳಿಗೆ ವಿದೇಶಗಳಲ್ಲಿ ಉದ್ಯೋಗ ಮತ್ತು ವೈದ್ಯಕೀಯ ಉದ್ಯೋಗ ಪಡೆದುಕೊಳ್ಳಲು ವೀಸಾ ಕೊಡಿಸುವುದಾಗಿ ನಂಬಿಸಿ, ಕೋಟ್ಯಂತರ ರೂಪಾಯಿ ವಂಚಿಸಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ಬೆಂಗಳೂರು ಮೂಲದ ಪ್ರಕೃತಿ ಯು ಮತ್ತು ಕುಂದಾಪುರದ ಗಂಗೊಳ್ಳಿಯ ಚರ್ಚ್ ರಸ್ತೆಯ ನಿವಾಸಿಯಾದ ಅಲ್ಟನ್ ರೆಬೆಲ್ಲೋ ಎಂದು ಗುರುತಿಸಲಾಗಿತ್ತು. ಕಳೆದೆರಡು ದಿನಗಳ ಹಿಂದೆ ಮೂಡಬಿದರೆಯ ನ್ಯಾಯಾಲಯವು ಓರ್ವ ಆರೋಪಿಯಾದ ಪ್ರಕೃತಿಗೆ ಜಾಮೀನು ಮಂಜೂರು ಮಾಡಿದೆ. ವಿದೇಶದಲ್ಲಿ ಉದ್ಯೋಗ ಮತ್ತು ವೈದ್ಯಕೀಯ ಉದ್ಯೋಗ ಪಡೆಯಲು ಬಯಸಿದ ಸ್ಥಳೀಯರು ಆರೋಪಿಗಳ ಖಾತೆಗೆ ಹಣವನ್ನು ವರ್ಗಾಯಿಸುತ್ತಿದ್ದರು. ಈ ರೀತಿ ಹಣ ಪಡೆದುಕೊಂಡ ಆರೋಪಿಗಳು ಒಂದು ಕೋಟಿಗೂ ಅಧಿಕ ಮೊತ್ತವನ್ನು ಸಂಗ್ರಹ ಮಾಡಿದ್ದರು ಎನ್ನಲಾಗಿದೆ. ಉದ್ಯೋಗ ದೊರೆಯದೇ, ಹಣ ಕೂಡ ಹಿಂತಿರುಗಿಸದಿದ್ದಾಗ, ಹಣ ವರ್ಗಾವಣೆ ಮಾಡಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಕಿನ್ನಿಗೋಳಿಯ ವ್ಯಕ್ತಿಯಾದ ಕೆವಿನ್ ಪಿಂಟೊ ಅವರ ಮಗನಿಗೆ ನೆದರ್ ಲ್ಯಾಂಡ್ ನಲ್ಲಿ ವೈದ್ಯಕೀಯ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಹಣ ಪಡೆದುಕೊಂಡು ವಂಚಿಸಿದ್ದಾರೆ. ವೀಸಾ ಸಿಗದಿದ್ದಾಗ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಪ್ರಕೃತಿ ಒಂದು ವಾರದಲ್ಲಿ ಹಣವನ್ನು ನೀಡುತ್ತೇನೆ ಎನ್ನುವ ಭರವಸೆ ನೀಡಿದ್ದಾಳೆ. ನಂತರ ಹಣ ಬಾರದಿದ್ದಾಗ, ಮಾಹಿತಿ ಕಲೆ ಹಾಕಿದಾಗ ಪ್ರಕೃತಿ ಮತ್ತು ಆಕೆಯ ಸಹವರ್ತಿ ಮೂಡಬಿದರೆಯ ಸುತ್ತಮುತ್ತ ಸಾಕಷ್ಟು ಜನರಿಗೆ ಇದೇ ರೀತಿ ವಂಚಿಸಿರುವುದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವಂಚನೆಗೆ ಒಳಗಾದವರು ಮೂಡಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
* ಬೆಳ್ತಂಗಡಿ: ಮನೆಗೆ ತಗುಲಿದ ಬೆಂಕಿ
ಬೆಳ್ತಂಗಡಿ: ಮನೆಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ ಘಟನೆ, ಕಳೆದೆರಡು ದಿನಗಳ ಹಿಂದೆ ರೇಖ್ಯ ಗ್ರಾಮದ ಕೊಲಾರು ಎಂಬಲ್ಲಿ ನಡೆದಿದೆ. ಕೊಲಾರು ನಿವಾಸಿಯಾದ ಬಾಲಕೃಷ್ಣ ಅವರ ಮನೆಗೆ ಬೆಂಕಿ ತಗುಲಿರುವುದು ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಮನೆಯಲ್ಲಿದ್ದ ಹಣ, ಒಡವೆ, ಪುಸ್ತಕಗಳು, ಬಟ್ಟೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದಿದ್ದ ಕಾರಣ, ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಗ್ರಾಮ ಪಂಚಾಯಿತಿಯ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಾಹುತಕ್ಕೆ ಕಾರಣವೇನು ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.
* ಕಾಪು: ಮೂವರು ವ್ಯಕ್ತಿಗಳಿಂದ ಮಹಿಳೆಗೆ ಬೆದರಿಕೆ
ಕಾಪು: ಕಳೆದ ಕೆಲವು ದಿನಗಳ ಹಿಂದೆ ಸ್ಕೂಟಿಯಲ್ಲಿ ಬಂದ ಮೂವರು ವ್ಯಕ್ತಿಗಳು, ಮಹಿಳೆ ಮತ್ತು ಆಕೆಯ ಮನೆಯವರಿಗೆ ಬೆದರಿಕೆಯೊಡ್ಡಿದ ಘಟನೆ, ಮಲ್ಲಾರು ಕೋಟೆ ರಸ್ತೆಯಲ್ಲಿ ನಡೆದಿದೆ. ಆರೋಪಿಗಳನ್ನು ಚಂದ್ರನಗರದ ನಿವಾಸಿ ಯೂಸುಫ್ ಮತ್ತವನ ಸ್ನೇಹಿತರು ಎಂದು ಗುರುತಿಸಲಾಗಿದೆ. ಅಸ್ಮಾ ಎನ್ನುವವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಕೋಟೆ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದು, ರಾತ್ರಿ ಎಂಟರ ಸುಮಾರಿಗೆ ಸ್ಕೂಟಿಯಲ್ಲಿ ಬಂದ ಯೂಸುಫ್ ಮತ್ತವನ ಸ್ನೇಹಿತರು, ಅಸ್ಮಾ ಅವರ ಮನೆಯಂಗಳದಲ್ಲಿ ನಿಂತು ಅವಾಚ್ಯ ಶಬ್ದಗಳಿಂದ ಬೈದು, ಬಾಗಿಲು ತೆರೆಯಿರಿ ಇಲ್ಲದಿದ್ದರೆ ಬಾಗಿಲನ್ನು ಮುರಿದು ಒಳಗೆ ಬಂದು ನಿಮ್ಮೆಲ್ಲರನ್ನು ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
* ಬ್ರಹ್ಮಾವರ: ಮರದಿಂದ ಬಿದ್ದು ವ್ಯಕ್ತಿ ಸಾವು
ಬ್ರಹ್ಮಾವರ: ಹಾರಾಡಿ ಗ್ರಾಮದ ಕುಕ್ಕುಡೆಯ ಉಮೇಶ್ ಎನ್ನುವ ವ್ಯಕ್ತಿಯು ತಾಳೆ ಬೊಂಡ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಗುರುವಾರದಂದು ತಾಳೆ ಮರ ಹತ್ತಿ ಬೊಂಡ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಇಪ್ಪತ್ತು ಅಡಿ ಎತ್ತರದಿಂದ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ಕುತ್ತಿಗೆಯ ಮೂಳೆ ಮುರಿತಕ್ಕೊಳಗಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಂದಾಪುರ: ತಂಗಿ ಮನೆಯಲ್ಲಿ ಆತ್ಮಹತ್ಯೆ ಶರಣಾದ ಸಹೋದರ
ಕುಂದಾಪುರ: ತಂಗಿಯ ಮನೆಯಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ, ಐರಬೈಲಿನಲ್ಲಿ ನಡೆದಿದೆ. ಬಸವ ಕುಲಾಲ ಅವರು ಮಂಡಿ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ತಂಗಿಯ ಮನೆಯಲ್ಲಿ ವಾಸವಾಗಿದ್ದರು. ಆದರೆ ವರ್ಷಗಳು ಕಳೆದರೂ ಸಮಸ್ಯೆ ಬಗೆಹರಿಯದೆ, ಯಾತನೆಯನ್ನು ಸಹಿಸಲಾಗದೆ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವ ಕುಲಾಲ ಅವರ ಮಗ ಸಂತೋಷ್ ಕುಲಾಲ ತಂದೆಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಹೇಳಿಕೆಯ ಆಧಾರದ ಮೇಲೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕಾರವಾರ: ಆರೋಪಿಯಾಗಿರುವ ಶಾಸಕರಿಗೆ ರಿಲೀಫ್
ಕಾರವಾರ: ಅಂಕೋಲಾ ಮತ್ತು ಕಾರವಾರದ ಶಾಸಕರಾದ ಸತೀಶ್ ಸೈಲ್ ಅವರು ಕಬ್ಬಿಣದ ಅದಿರು ಅಕ್ರಮ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದು, ಉಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನಿನ ಅವಧಿಯನ್ನು ವಿಸ್ತರಿಸುವ ಮೂಲಕ ತಾತ್ಕಾಲಿಕವಾಗಿ ನಿರಾಳತೆಯನ್ನು ನೀಡಿದೆ. ಇತ್ತೀಚಿಗೆ ವಿಶೇಷ ನ್ಯಾಯಾಲಯವು ಸತೀಶ್ ಸೈಲ್ ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ ಮತ್ತು ಸೂಚಿಸಲಾಗಿರುವ ವೈದ್ಯಕೀಯ ಚಿಕಿತ್ಸೆಗೆ ಬದ್ಧರಾಗಿಲ್ಲ ಎನ್ನುವ ಕಾರಣವನ್ನು ನೀಡಿ ಶಾಸಕರ ವೈದ್ಯಕೀಯ ಜಾಮೀನನ್ನು ರದ್ದುಗೊಳಿಸಿತ್ತು. ಜೊತೆಗೆ ಜಾಮೀನು ರಹಿತ ವಾರೆಂಟ್ ಅನ್ನು ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಶಾಸಕರು ಉಚ್ಚ ನ್ಯಾಯಾಲಯಕ್ಕೆ ಮೇಲ್ ಮನವಿಯನ್ನು ಸಲ್ಲಿಸಿದ್ದರು. ನ್ಯಾಯಾಲಯವು ಶಾಸಕರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನವೆಂಬರ್ 13ರಂದು ನಡೆಸಿತು. ಈ ಹಿನ್ನೆಲೆಯಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಅವಧಿಯನ್ನು ನವೆಂಬರ್ 20ರ ವರೆಗೆ ವಿಸ್ತರಿಸಿರುವುದಲ್ಲದೆ, ನ್ಯಾಯಮೂರ್ತಿಗಳು ಶಾಸಕರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಲು ಅರ್ಹರಾದ ವೈದ್ಯರ ಹೆಸರನ್ನು ಸೂಚಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಆದೇಶವನ್ನು ಹೊರಡಿಸಿದ್ದಾರೆ. ಮತ್ತು ಶಾಸಕರಿಗೆ ಬಂದ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.







