ಮಲೆನಾಡು ಮಿತ್ರ ವೃಂದಕ್ಕೆ ನೂತನ ಸಾರಥಿಗಳು!
– ನೂತನ ಅಧ್ಯಕ್ಷರಾಗಿ ಸಂದೇಶ್ ಗೌಡ ಹಂದಿಗೋಡು, ಉಪಾಧ್ಯಕ್ಷರಾಗಿ ವನಮಾಲಯ್ಯ ಇಳಿಮನೆ ಆಯ್ಕೆ
– ಕಾರ್ಯದರ್ಶಿಯಾಗಿ ನಾಗೇಶ್ ಕೇಳೂರು, ಸಹ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಸ್ಲೆ, ಖಜಾಂಚಿಯಾಗಿ ನಿದರ್ಶನ ಗಾಡಿಗೆರೆ
– 2 ವರ್ಷದ ಅವಧಿಗೆ ನೂತನ ಕಾರ್ಯಕಾರಿಣಿ ಮಂಡಳಿ ಅವಿರೋಧ ಆಯ್ಕೆ
ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡಿನ ಸಮುದಾಯವನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಯಾದ ಮಲೆನಾಡು ಮಿತ್ರ ವೃಂದದ ನೂತನ ಕಾರ್ಯಕಾರಿಣಿ ಮಂಡಳಿಯನ್ನು ಸಂಘದ ನಿರ್ದೇಶಕರ ಸಭೆಯಲ್ಲಿ ಸರ್ವಾನುಮತದಿಂದ ಮತ್ತು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷರಾಗಿ ಸಂದೇಶ್ ಗೌಡ ಹಂದಿಗೋಡು, ಉಪಾಧ್ಯಕ್ಷರಾಗಿ ವನಮಾಲಯ್ಯ ಇಳಿಮನೆ, ಕಾರ್ಯದರ್ಶಿಯಾಗಿ ನಾಗೇಶ್ ಕೇಳೂರು, ಸಹ ಕಾರ್ಯದರ್ಶಿಯಾಗಿ ರಾಘವೇಂದ್ರ ಸಿಸ್ಲೆ, ಖಜಾಂಚಿಯಾಗಿ ನಿದರ್ಶನ ಗಾಡಿಗೆರೆ ಆಯ್ಕೆ ಆಗಿದ್ದಾರೆ.
ಸಂಘದ ಹಿಂದಿನ ಅಧ್ಯಕ್ಷರಾದ ಪ್ರದೀಪ್ ಹೆಗ್ಗೋಡು ಅವರ ಯಶಸ್ವಿ ಕಾರ್ಯಾವಧಿಯು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಸಂಘದ ಮುಂದಿನ ಎರಡು ವರ್ಷಗಳ ಅವಧಿಗಾಗಿ ಈ ಹೊಸ ಕಾರ್ಯಕಾರಿಣಿ ಮಂಡಳಿಯನ್ನು ಅಧಿಕೃತವಾಗಿ ರಚಿಸಲಾಗಿದೆ.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ವಿವರ
ಸಂಘದ ಪ್ರಗತಿ ಮತ್ತು ಮಲೆನಾಡಿಗರ ಸರ್ವತೋಮುಖ ಕಲ್ಯಾಣಕ್ಕಾಗಿ ಶ್ರಮಿಸಲು ಈ ಕೆಳಕಂಡ ಸದಸ್ಯರುಗಳನ್ನು ನೂತನ ಕಾರ್ಯಕಾರಿ ಮಂಡಳಿಗೆ ಆಯ್ಕೆ ಮಾಡಲಾಗಿದೆ:
ಅಧ್ಯಕ್ಷರು -ಶ್ರೀ ಸಂದೇಶ್ ಗೌಡ ಹಂದಿಗೋಡು
ಉಪಾಧ್ಯಕ್ಷರು – ಶ್ರೀ ವನಮಾಲಯ್ಯ ಇಳಿಮನೆ
ಕಾರ್ಯದರ್ಶಿ -ಶ್ರೀ ನಾಗೇಶ್ ಕೇಳೂರು
ಸಹ ಕಾರ್ಯದರ್ಶಿ – ಶ್ರೀ ರಾಘವೇಂದ್ರ ಸಿಸ್ಲೆ
ಖಜಾಂಚಿ – ಶ್ರೀ ನಿದರ್ಶನ ಗಾಡಿಗೆರೆ
ಸಂಘಟನಾ ಕಾರ್ಯದರ್ಶಿಗಳು
ಶ್ರೀ ದಿನೇಶ್ ಹೊಸನಗರ
ಶ್ರೀ ರವೀಶ್ ಕೆ ಪಿ
ಶ್ರೀ ನಿಶ್ಚಿತ್ ಜಾವಗಲ್
ನಿಕಟಪೂರ್ವ ಅಧ್ಯಕ್ಷರಿಗೆ ಕೃತಜ್ಞತೆ
ಮಲೆನಾಡು ಮಿತ್ರ ವೃಂದದ ನಿರ್ದೇಶಕರುಗಳು ಮತ್ತು ಸರ್ವ ಸದಸ್ಯರು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರದೀಪ್ ಹೆಗ್ಗೋಡು ರವರ ದೂರದೃಷ್ಟಿಯ ನಾಯಕತ್ವ ಮತ್ತು ಸಂಘಟನೆಗೆ ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಅವರ ಮಾರ್ಗದರ್ಶನವು ಹೊಸ ಮಂಡಳಿಗೆ ಸ್ಫೂರ್ತಿಯಾಗಲಿದೆ ಎಂದು ನಿರ್ಣಯಿಸಲಾಯಿತು.
ನೂತನ ಅಧ್ಯಕ್ಷರ ಸಂಕಲ್ಪ ಮತ್ತು ಯೋಜನೆಗಳು
ಹೊಸ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಸಂದೇಶ್ ಗೌಡ ಹಂದಿಗೋಡು ಅವರು ಮಾತನಾಡಿ, “ಮಲೆನಾಡು ಮಿತ್ರ ವೃಂದದ ಮುಖ್ಯ ಧ್ಯೇಯವಾದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವುದರ ಜೊತೆಗೆ, ಬೆಂಗಳೂರಿನಲ್ಲಿರುವ ಮಲೆನಾಡಿಗರ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸಬಲೀಕರಣಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಎಲ್ಲಾ ಸದಸ್ಯರು, ಹಿರಿಯ ಗೌರವಾನ್ವಿತ ನಿರ್ದೇಶಕರು ಮತ್ತು ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಶ್ರಮಿಸುತ್ತೇನೆ,” ಎಂದು ತಿಳಿಸಿದರು.
ಜನವರಿ 4ರಂದು ವಾರ್ಷಿಕ ಕ್ರೀಡಾಕೂಟ: ಸರ್ವರಿಗೂ ಸ್ವಾಗತ
ನೂತನ ಕಾರ್ಯಕಾರಿಣಿ ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಾರ್ಯನಿರ್ವಹಿಸಲಿದ್ದು, ಮುಂಬರುವ ದಿನಗಳಲ್ಲಿ ಸಂಘದಿಂದ 04.01.2026 ರಂದು ನಡೆಯಲಿರುವ ವಾರ್ಷಿಕ ಕ್ರೀಡಾಕೂಟ ಸೇರಿದಂತೆ ಇತರೆ ಕಾರ್ಯಕ್ರಮಗಳ ಕುರಿತು ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು.








