ತೀರ್ಥಹಳ್ಳಿ ಪಟ್ಟಣ, ತಾಲೂಕಲ್ಲಿ ವಾಹನ ವೇಗದ ಹುಚ್ಚಾಟ.!
* ಅತಿವೇಗದ ಪರಿಣಾಮ, ಜೀವ-ಜೀವನ ಹೋಗುತ್ತೆ ಹುಷಾರು
* ರಸ್ತೆ ಮೇಲೆ ನೀವು ಬದುಕಿ…ಬೇರೆಯವರನ್ನೂ ಬದುಕಿಸಿ..!
* ತಳುವೆ ಬಳಿ ಲಾರಿ ಅಡಿ ಹಾರಿದ ವ್ಯಕ್ತಿಯ ಕಾಲು ತುಂಡು!
NAMMUR EXPRESS NEWS
ತೀರ್ಥಹಳ್ಳಿ: ಶಾಂತ, ಹಸಿರು, ಸಾಹಿತ್ಯದ ನೆಲೆಯಾದ ತೀರ್ಥಹಳ್ಳಿ ಪಟ್ಟಣ ಇತ್ತೀಚಿನ ದಿನಗಳಲ್ಲಿ ವಾಹನಗಳನ್ನು ಅತಿಯಾದ ವೇಗದಲ್ಲಿ ಚಲಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆಯ ಕನಸು ಕೇವಲ ಘೋಷಣೆಯಾಗಿ ಉಳಿದಂತಾಗಿದೆ.
ಮಕ್ಕಳು ಶಾಲೆಗೆ ತೆರಳುವ ವೇಳೆಯಲ್ಲಿ, ವಯೋವೃದ್ಧರು ಆಸ್ಪತ್ರೆಗಳಿಗೆ ತೆರಳುವ ವೇಳೆಯಲ್ಲಿ, ಮತ್ತು ಮಹಿಳೆಯರು ಮಾರ್ಕೆಟ್ ಕಡೆ ಹೋಗುವ ಸಂದರ್ಭಗಳಲ್ಲಿ ಈ ವೇಗದ ವಾಹನಗಳು ಆತಂಕ ಹುಟ್ಟಿಸುತ್ತಿವೆ.
ಅತಿವೇಗ ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ, ಜೀವದ ವಿರುದ್ಧದ ಅಪರಾಧವಾಗಿದೆ. ಕಳೆದ ಕೆಲವು ತಿಂಗಳಲ್ಲೇ ತೀರ್ಥಹಳ್ಳಿಯಲ್ಲಿ ಸಂಭವಿಸಿದ ಹಲವು ಅಪಘಾತಗಳು ಅನೇಕರ ಬಲಿ ಪಡೆದಿವೆ. ಇನ್ನು ನೂರಾರು ಮಂದಿ ಬದುಕು ಕಳೆದುಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಕೊಪ್ಪ ಸರ್ಕಲ್ ಬಳಿ ಬಸ್ ಚಾಲಕ ವೇಗದ ಅತಿಯಾದ ನಿಯಂತ್ರಣ ಕಳೆದುಕೊಂಡು ಬ್ಯಾರಿಕೆಟ್ ಗೆ ಬಸ್ ಹೊಡೆದ ಘಟನೆ ಇನ್ನೂ ನೆನಪಿನಿಂದ ಮಾಯವಾಗಿಲ್ಲ.
ರಸ್ತೆಗಳಲ್ಲಿ ನಿಯಂತ್ರಣದ ಕೊರತೆ
ತೀರ್ಥಹಳ್ಳಿಯ ಮುಖ್ಯ ಮಾರ್ಗಗಳು ದಿನಪೂರ್ತಿ ವಾಹನ ಸಂಚಾರದಿಂದ ಗಿಜಿಗುಡುತ್ತಿವೆ. ಆದರೆ ಟ್ರಾಫಿಕ್ ನಿಯಂತ್ರಣದ ಅಧಿಕಾರಿಗಳ ಕೊರತೆ ಮತ್ತು ಸಾರ್ವಜನಿಕ ಶಿಸ್ತುಗಳ ಅಲಕ್ಷ್ಯದಿಂದ ಪರಿಸ್ಥಿತಿ ಹದಗೆಟ್ಟಿದೆ. ವೇಗ ನಿಯಂತ್ರಣ ಫಲಕಗಳು ಇದ್ದರೂ, ಅವು ಕೇವಲ ಶೃಂಗಾರದ ಬೋರ್ಡುಗಳಂತಾಗಿವೆ.
ರೂಲ್ಸ್ ಮರೆತು ಒನ್ ವೇ ಅಲ್ಲಿ ಪ್ರಯಾಣ,ಪಾದಚಾರಿ ದಾರಿಯಲ್ಲಿ ವಾಹನ ಸಂಚಾರ, ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸುವುದು, ಜನರಲ್ಲಿ ಮನೋವೈಜ್ಞಾನಿಕ ಬದಲಾವಣೆ ಅಗತ್ಯವಿದೆ ಎಂದು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಈ ಸಮಸ್ಯೆಗೆ ಕೇವಲ ಕಾನೂನು ಕ್ರಮಗಳೇ ಸಾಕಾಗುವುದಿಲ್ಲ. ಜನಜಾಗೃತಿ, ಟ್ರಾಫಿಕ್ ಶಿಕ್ಷಣ, ಮತ್ತು ಸಣ್ಣ ವಯಸ್ಸಿನಿಂದಲೇ ರಸ್ತೆ ಸುರಕ್ಷತಾ ಸಂಸ್ಕಾರ ಅಗತ್ಯ.ಪ್ರತಿಯೊಂದು ಮುಖ್ಯ ಬೀದಿಗಳಲ್ಲಿ ವೇಗ ನಿಯಂತ್ರಣ ಹಂಪ್ ಹಾಗೂ ಟ್ರಾಫಿಕ್ ಕ್ಯಾಮೆರಾ ಅಳವಡಿಕೆ,ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ನಿಯಂತ್ರಣ ಕ್ರಮಗಳು ಇವು ಜಾರಿಗೆ ಬಂದರೆ ಮಾತ್ರ ಬದಲಾವಣೆ ಸಾಧ್ಯ.ವಾಹನ ಚಾಲಕರು ನೀವು ಬದುಕಿ, ಬೇರೆಯವರನ್ನೂ ಬದುಕಿಸಿ ಎಂಬ ಘೋಷಣೆಯನ್ನು ಮನದಟ್ಟಾಗಿಸಿಕೊಂಡು ಚಲಿಸಬೇಕಾಗಿದೆ. ಒಂದು ಕ್ಷಣದ ಅತಿಯಾದ ವೇಗ ಜೀವವನ್ನು ಕಳೆದುಹಾಕಬಹುದು ಎಂಬ ಅರಿವು ಪ್ರತಿಯೊಬ್ಬರಲ್ಲೂ ಹುಟ್ಟಬೇಕಾಗಿದೆ. ಯುವ ಜನರ ಶೋಕಿ ಹುಚ್ಚು ಕೂಡ ಅನೇಕರ ಬದುಕನ್ನೇ ತೆಗೆದಿದೆ.
ರಸ್ತೆಯು ಕೇವಲ ವಾಹನಗಳಿಗಲ್ಲ, ಪಾದಚಾರಿಗಳು, ಮಕ್ಕಳು, ಹಿರಿಯರು ಎಲ್ಲರಿಗೂ ಸೇರಿದ ಸಾರ್ವಜನಿಕ ಆಸ್ತಿ. ಸಮಾಜದ ಪ್ರತಿಯೊಬ್ಬರೂ ಶಿಸ್ತು ಪಾಲನೆಗೆ ತೊಡಗಿದರೆ ಮಾತ್ರ ರಸ್ತೆ ಸುರಕ್ಷಿತವಾಗಿರುತ್ತದೆ. ಶಾಲೆಗಳು, ಯುವಸಂಘಗಳು, ಹಾಗೂ ಸಾಮಾಜಿಕ ಸಂಸ್ಥೆಗಳು ಸೇರಿ ವೇಗದ ವಿರುದ್ಧ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಪ್ರತಿಯೊಬ್ಬ ವಾಹನ ಚಾಲಕನು ತನ್ನ ಹೊಣೆಗಾರಿಕೆಯನ್ನು ಅರಿತುಕೊಂಡಾಗ ಮಾತ್ರ ರಸ್ತೆಗಳು ಜೀವದ ಹಾದಿಯಾಗಿರುತ್ತವೆ, ಸಾವಿನ ತಾಣವಲ್ಲ. ಈ ಬಗ್ಗೆ ದೊಡ್ಡ ಅಭಿಯಾನ ಶುರುವಾಗಬೇಕಿದೆ.
* ತಳುವೆ ಬಳಿ ಲಾರಿ ಅಡಿ ಹಾರಿದ ವ್ಯಕ್ತಿಯ ಕಾಲು ತುಂಡು
ತೀರ್ಥಹಳ್ಳಿ : ವ್ಯಕ್ತಿಯೊರ್ವ ಏಕಾಏಕಿ ರಸ್ತೆಗೆ ಬಂದ ಕಾರಣ ಲಾರಿಯ ಚಕ್ರಕ್ಕೆ ಸಿಲುಕಿ ಎರಡು ಕಾಲು ತುಂಡು ಆಗಿರುವ ಘಟನೆ ತಳುವೆ ಸಮೀಪ ಬುಧವಾರ ಸಂಜೆ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ತಳುವೆ ಬಳಿ ಮೇಲಿನಕುರುವಳ್ಳಿಯ ಲಾರಿಯ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಕಾಲು ತುಂಡು ಆಗಿದೆ. ಆದರೆ ಈ ಅಪಘಾತಕ್ಕೆ ಆ ವ್ಯಕ್ತಿಯೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಸಂಜೆ ಲಾರಿ ಬರುತ್ತಿದ್ದದ್ದನ್ನು ನೋಡಿ ಏಕಾಏಕಿ ರಸ್ತೆಗೆ ಹಾರಿದ್ದಾನೆ. ಈ ವೇಳೆ ಲಾರಿ ಚಾಲಕ ಎಷ್ಟೇ ತಪ್ಪಿಸಿದರು ಲಾರಿ ಹಿಂದಿನ ಚಕ್ರಕ್ಕೆ ಸಿಲುಕಿ ಕಾಲು ತುಂಡು ಮಾಡಿಕೊಂಡಿದ್ದಾನೆ.








