ಮಹಾಕುಂಭ ಮೇಳ ಸಂಭ್ರಮ!
– ಮಹಾಕುಂಭದ ಮೊದಲ ಅಮೃತ ಸ್ನಾನ: 4.5 ಕೋಟಿ ಜನ ಭಾಗಿ
– ಸಂಕ್ರಾಂತಿ ದಿನದಂದೇ ಅಮೃತ ಸ್ನಾನ, ಜ.29ರಂದು ಎರಡನೇ ಅಮೃತ ಸ್ನಾನ
NAMMUR EXPRESS NEWS
ಹಿಂದೂ ಗ್ರಂಥಗಳಲ್ಲಿ, ಕುಂಭಮೇಳವನ್ನು ‘ಅಮರತ್ವದ ಜಾತ್ರೆ’ ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ತಮ್ಮ ಆತ್ಮವನ್ನು ಶುದ್ದೀಕರಿಸಲು ಈ ಪವಿತ್ರ ಸ್ಥಳದಲ್ಲಿ ಸ್ನಾನ ಮಾಡಲು ಬರುತ್ತಾರೆ, ಪ್ರಪಂಚದಾದ್ಯಂತದ ಸಂತರು ಮತ್ತು ಭಕ್ತರು ನಂಬಿಕೆಯ ಸ್ನಾನ ಮಾಡುತ್ತಾರೆ. ಕುಂಭಮೇಳದಲ್ಲಿ ಅಮೃತಾ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಈಗಾಗಲೇ ಕೋಟಿ ಕೋಟಿ ಜನ ಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಮಹಾಕುಂಭದ ಮೊದಲ ಅಮೃತ ಸ್ನಾನ ಅಥವಾ ಶಾಹಿ ಸ್ನಾನವನ್ನು ಜನವರಿ 14 ರಂದು ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ನಡೆಯಿತು. ಕುಂಭದಲ್ಲಿ ಈ ಅಮೃತ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ, ನಾಗಾ ಸಾಧುಗಳು ಮತ್ತು ಇತರ ಸಂತರು ಅಮೃತ ಸ್ನಾನ ಮಾಡುತ್ತಾರೆ. ಮಹಾಕುಂಭದ ಮೊದಲ ರಾಜ ಸ್ನಾನ ಜನವರಿ 14ರ ನಡೆದಿದೆ. ಈ ದಿನ ಸೂರ್ಯ ದೇವನು ಧನು ರಾಶಿಯಿಂದ ಮಕರ ರಾಶಿಗೆ ತೆರಳುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ದಿನದಂದು ಗಂಗಾ ನದಿಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಫಲ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಅಲ್ಲದೆ, ಈ ದಿನ ಪೂಜೆ ಪುನಸ್ಕಾರ ಮತ್ತು ಎಳ್ಳು, ಬೆಲ್ಲ ದಾನ ಮಾಡುವುದು ತುಂಬಾ ಒಳ್ಳೆಯದು. ಮಹಾಕುಂಭದ ಎರಡನೇ ಅಮೃತ ಸ್ನಾನವು 29 ಜನವರಿ 2025 ರಂದು ನಡೆಯಲಿದೆ. ಈ ದಿನ ಮೌನಿ ಅಮವಾಸ್ಯೆ ಬರುತ್ತದೆ. ಹಿಂದೂ ಧರ್ಮದಲ್ಲಿ ಮೌನಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಮೌನಿ ಅಮವಾಸ್ಯೆಯಂದು ಸ್ನಾನ, ದಾನ, ಮೌನ ವ್ರತ ಮಾಡುವ ಸಂಪ್ರದಾಯವಿದೆ. ಮೌನಿ ಅಮಾವಾಸ್ಯೆಯಂದು ಮಹಾಕುಂಭದಲ್ಲಿ ಸ್ನಾನ ಮಾಡುವುದರಿಂದ ದುಪಟ್ಟು ಹೆಚ್ಚು ಮಂಗಳಕರ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ. ಮಹಾಕುಂಭದ ಮೂರನೇ ಮತ್ತು ಕೊನೆಯ ಅಮೃತ ಸ್ನಾನವು 3 ಫೆಬ್ರವರಿ 2025 ರಂದು ನಡೆಯಲಿದೆ. ಈ ದಿನ ವಸಂತ ಪಂಚಮಿ ಹಬ್ಬ ಬರುತ್ತಿದೆ. ವಸಂತ ಪಂಚಮಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಪೂಜೆ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ವಸಂತ ಪಂಚಮಿಯ ದಿನದಂದು ಜ್ಞಾನದ ದೇವತೆಯಾದ ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ.
ಮಹಾಕುಂಭದ ಮೊದಲ ಅಮೃತ ಸ್ನಾನ: 4.5 ಕೋಟಿ ಜನ ಭಾಗಿ
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎರಡು ದಿನದಲ್ಲಿ 4.5 ಕೋಟಿಗೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಸೋಮವಾರದಿಂದ ಕುಂಭಮೇಳ ಆರಂಭವಾಗಿದ್ದು ಮೊದಲ ದಿನವೇ ಸುಮಾರು 1.6 ಕೋಟಿ ಜನರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಮುಳೆಗೆದ್ದು ಸ್ನಾನ ಮಾಡಿದ್ದರು. ಮಕರ ಸಂಕ್ರಾಂತಿ ದಿನವಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮುಳುಗಿ ಪ್ರಥಮ ಶಾಹಿ ಸ್ನಾನ ಮಾಡಿದ್ದಾರೆ. ಮೊದಲಿಗೆ ಶ್ರೀ ಪಂಚಯತಿ ಅಖಾಡ ಮಹಾನಿರ್ವಾಣಿ ಹಾಗೂ ಶ್ರೀ ಶಂಭು ಪಂಚ ಯತಿ ಆಟಲ್ ಅಖಾಡದವರು ಅಮೃತ ಸ್ನಾನ ಮಾಡಿದರು. ಬಳಿಕ ಅನ್ಯ ಅಖಾಡದವರು, ಭಸ್ಮಲೇಪಿತ ನಾಗಸಾಧುಗಳು, ಸಂತರು, ಕಲ್ಪವಾಸಿಗಳು ಹಾಗೂ ಭಕ್ತರು ಸ್ನಾನ ಮಾಡಿದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಲಾಯಿತು.