ಹೊಸ ವರ್ಷಕ್ಕೆ ಹೊಸ ನಿಯಮ: ಜನರೇ ಸಿದ್ಧರಾಗಿ…!
– ಕಾರು, ಎಲ್ಪಿಜಿ ಗ್ಯಾಸ್, ಇಂಟರ್ನೆಟ್ ಡೇಟಾ ದರ ಹೆಚ್ಚಳ
– ಪಡಿತರ ವಿತರಣೆ ನಿಯಮ ಬದಲು, ಹಳೆ ಮೊಬೈಲ್ ಅಲ್ಲಿ ವಾಟ್ಸಪ್ ಬರಲ್ಲ
– ಹೊಸ ನಿಯಮಗಳು ಜ.1 ರಿಂದಲೇ ಜಾರಿ: ಏನೇನಿದೆ ನೋಡಿ!
NAMMUR EXPRESS NEWS
ನವದೆಹಲಿ: 2024 ವರ್ಷವು ಕಳೆದು ಹೊಸ ವರ್ಷ ಬರಲು ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆ ಹೊಸ ವರ್ಷದ ಖುಷಿಯಾದರೆ ಇನ್ನೊಂದು ಕಡೆ ಹಲವು ನಿಯಮಗಳು ಜನರ ಜೇಬಿಗೆ ಕತ್ತರಿ ಹಾಕಲಿವೆ. ಹಲವು ಕಾರು ಕಂಪನಿಗಳು ತಮ್ಮ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದಲ್ಲದೇ ಜಿಎಸ್ಟಿ ಪೋರ್ಟಲ್’ನಲ್ಲಿ ಮೂರು ಪ್ರಮುಖ ಬದಲಾವಣೆಗಳಾಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್, ಸ್ಥಿರ ಠೇವಣಿಗಳಿಗೆ ಸಂಬಂಧಿಸಿದ ನೀತಿಗಳಲ್ಲಿ ಬದಲಾವಣೆಗಳನ್ನ ಮಾಡಿದೆ.
– ಜಿಎಸ್ಟಿ ನಿಯಮ ಕಟ್ಟುನಿಟ್ಟು ತೆರಿಗೆದಾರರು ಜ.1ರಿಂದ ಕಟ್ಟುನಿಟ್ಟಾದ ಜಿಎಸ್ಟಿ ನಿಯಮ ಪಾಲಿಸಬೇಕು. ಮಲ್ಟಿ ಫ್ಯಾಕ್ಟರ್ ಅಥೆಂಟಿಕೇಷನ್ (ಎಂಎಫ್ಎ) ಜಿಎಸ್ಟಿ ಪೋರ್ಟಲ್ ಪ್ರವೇಶಿಸುವ 20 ಕೋಟಿ ರೂ.ಗಿಂತ ಹೆಚ್ಚು ವಾರ್ಷಿಕ ವಹಿವಾಟು ನಡೆಸುವ ಗ್ರಾಹಕರಿಗೆ ಈ ನಿಯಮ ಅನ್ವಯಿಸಲಿದೆ. ಹಾಗೆಯೇ 180 ದಿನಗಳಿಗಿಂತ ಹಳೆಯದಾದ ಮೂಲ ದಾಖಲೆಗಳಿಗೆ ಮಾತ್ರ ಇನ್ಮುಂದೆ ಇ-ವೇ ಬಿಲ್ ರಚಿಸಲು ಅವಕಾಶ ಸಿಗಲಿದೆ.
– ಎಲ್ ಪಿ ಜಿ ತುಟ್ಟಿ ಸಾಧ್ಯತೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಬ್ಯಾರೆಲ್ಗೆ 73.58 ಡಾಲರ್ ತಲುಪಿದೆ. ಹೀಗಾಗಿ ಜ.1ರಿಂದಲೇ ಎಲ್ಪಿಜಿ ಸಿಲಿಂಡರ್ ದರ ಏರಿಕೆ ಆಗುವುದು ಬಹುತೇಕ ನಿಶ್ಚಿತ ಆಗಿದೆ. ಇನ್ನು ಎಲ್ಪಿಜಿ ಸಿಲಿಂಡರ್ ದರವನ್ನು ಯುಪಿಐನಲ್ಲೇ ಪಾವತಿಸುವ ಅವಕಾಶವೂ ಗ್ರಾಹಕರಿಗೆ ಲಭಿಸಲಿದೆ.
– ಪಡಿತರ ವಿತರಣೆ ನಿಯಮ ಬದಲು
ಪಡಿತರ ವಿತರಣಾ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಆಗಲಿದೆ. ಹಿಂದುಳಿದ ಕುಟುಂಬಗಳಿಗೆ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಜ.1 ರಿಂದ ಪಡಿತರದ ಜತೆಗೆ 1 ಸಾವಿರ ರೂ. ಹೆಚ್ಚುವರಿ ಆರ್ಥಿಕ ನೆರವು ನೀಡುವ ನಿಯಮ ಜಾರಿಯಾಗಲಿದೆ. ಸರಿ ಸುಮಾರು 80 ಕೋಟಿ ಜನರು ಈ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಇದೇ ವೇಳೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸದವರ ಕಾರ್ಡ್ ಗಳು ರದ್ದಾಗಲಿವೆ. ಇದಿಷ್ಟೇ ಅಲ್ಲ ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂ.ಗೆ ನಿಗದಿಯಾಗಲಿದೆ.
– ಡೇಟಾ ಶುಲ್ಕ ಹೆಚ್ಚಳ
ಮೊಬೈಲ್ ಡೇಟಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ ಹಳೆಯ ಆಂಡ್ರಾಯ್ಡ್ ಸ್ಮಾಟ್ ೯ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.
– ಪಿಎಫ್ ವಿತ್ ಡ್ರಾ ಇನ್ನಷ್ಟು ಸುಲಭ
ಜ.1ರಿಂದ ಪಿಂಚಣಿದಾರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮ ಜಾರಿಗೊಳಿಸಲಿದೆ. ಇದರನ್ವಯ ಪಿಂಚಣಿದಾರರು ದೇಶದ ಯಾವುದೇ ಮೂಲೆಯಿಂದಾದರೂ ಪಿಎಫ್ ವಿತ್ ಡ್ರಾ ಮಾಡಿಕೊಳ್ಳಬಹುದು. ಯಾವುದೇ ಬ್ಯಾಂಕ್ನಿಂದಾದರೂ ಈ ಸೌಲಭ್ಯ ಪಡೆದುಕೊಳ್ಳುವ ಅವಕಾಶ ನೌಕರರಿಗೆ ಸಿಗಲಿದೆ.
– RBI FD ನಿಯಮಗಳಲ್ಲಿ ಬದಲಾವಣೆಗಳು.!
ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ 1, 2025 ರಿಂದ NBFC ಗಳು ಮತ್ತು HFC ಗಳ ಸ್ಥಿರ ಠೇವಣಿಗಳ (FD) ನೀತಿಗಳನ್ನು ಬದಲಾಯಿಸಿದೆ. ಇವುಗಳಲ್ಲಿ ಸಾರ್ವಜನಿಕರಿಂದ ಠೇವಣಿಗಳನ್ನು ತೆಗೆದುಕೊಳ್ಳುವ ನಿಯಮಗಳಲ್ಲಿನ ಬದಲಾವಣೆಗಳು, ದ್ರವ ಆಸ್ತಿಯನ್ನು ಹೊಂದಿರುವ ಶೇಕಡಾವಾರು ಮತ್ತು ಠೇವಣಿಗಳನ್ನ ವಿಮೆ ಮಾಡುತ್ತವೆ.
– ಕಾರುಗಳ ಬೆಲೆ ಹೆಚ್ಚಳ .!
ಹೊಸ ವರ್ಷ ಬಂತೆಂದರೆ ಕಾರುಗಳ ಬೆಲೆ ಹೆಚ್ಚಾಗಲಿದೆ. ಹಲವಾರು ಪ್ರಮುಖ ಕಾರು ಕಂಪನಿಗಳು ಬೆಲೆ ಏರಿಕೆಯನ್ನು ಘೋಷಿಸಿವೆ. ಇವುಗಳಲ್ಲಿ ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ, ಮರ್ಸಿಡಿಸ್ ಬೆಂಜ್, BMW ಮತ್ತು ಆಡಿ ಸೇರಿವೆ. ಈ ಕಂಪನಿಗಳು ಬೆಲೆಯನ್ನು ಸುಮಾರು 3% ಹೆಚ್ಚಿಸುತ್ತವೆ. ಹೊಸ ವರ್ಷಕ್ಕೆ ಸಜ್ಜಾಗುತ್ತಿರುವ ಭಾರತ ಹೊಸ ಹೊಸ ಬದಲಾವಣೆಗೂ ಸಜ್ಜಾಗುತ್ತಿದೆ. ಮಧ್ಯಮ ವರ್ಗದ ಮೇಲೆ ಪರಿಣಾಮ ಬೀರುವಂತಹ ಹಲವು ಹೊಸ ನಿಯಮಗಳು ಜ.1ರಿಂದಲೇ ಜಾರಿಯಾಗಲಿವೆ.