ನಾಗಬನಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ
– ನಾಗಬನಗಳಲ್ಲಿ ಅರಿಶಿಣ, ಹೂಗಳಿಂದ ಸಿಂಗಾರ
– ತೀರ್ಥಹಳ್ಳಿ ತಾಲೂಕಿನ ಎಲ್ಲೆಡೆ ಆಚರಣೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನಾದ್ಯಂತ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ. ಭಕ್ತರು ಹಣ್ಣು-ಕಾಯಿ, ಹೂವು, ಅರಿಶಿಣ, ಎಳ್ಳುಂಡೆ, ತಂಬಿಟ್ಟು ಉಂಡೆ, ಎಳೆನೀರು, ಸೇರಿದಂತೆ ವಿಧ ವಿಧದ ಪೂಜಾ ಸಾಮಗ್ರಿಗಳೊಂದಿಗೆ ನಾಗಬನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಬಾಳೆ ಕೊನೆ ತಂದು ದೇವರಿಗೆ ತನು ಎರೆದು ನಾಗದೇವರ ಆಶೀರ್ವಾದ ಪಡೆಯುತ್ತಿದ್ದಾರೆ. ಸೋಮವಾರದ ದಿನ ನಾಗರ ಪಂಚಮಿ ಹಬ್ಬ ಬಂದಿರುವುದರಿಂದ ಭಕ್ತರು ಈಶ್ವರ ದೇವಸ್ಥಾನಗಳಿಗೂ ಭೇಟಿ ನೀಡುತ್ತಿದ್ದಾರೆ. ಬೆಳಿಗ್ಗೆಯಿಂದಲೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಕುಟುಂಬ ಸಮೇತ ಶ್ರದ್ಧಾ ಭಕ್ತಿಯಿಂದ ನಾಗಬನಗಳಿಗೆ ಭೇಟಿ ನೀಡಿ ನಾಗದೇವರ ಕಲ್ಲಿಗೆ ಹಾಲು ಎರೆದು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ನಾಗರ ಪಂಚಮಿಯಂದೇ ಬಂದ ಕಾಳಿಂಗ!
ತೀರ್ಥಹಳ್ಳಿ ತಾಲೂಕು ಬೀಳುಕೊಪ್ಪ ಅಮರಾವತಿ ಕೃಷ್ಣಮೂರ್ತಿ ಇವರ ಮನೆಯ ಸಮೀಪ ನಾಗರಪಂಚಮಿಯ ದಿವಸದಂದು ಸ್ನೇಕ್ ಚಂದ್ರು ಮತ್ತು ಶೌರ್ಯ ಟೀಮ್ ಕೈಮರದ ಸದಸ್ಯರು ಸೇರಿ 6 ಅಡಿ ಉದ್ದದ ಕಾಳಿಂಗ ಸರ್ಪವನ್ನು ಬೆಳಗ್ಗೆ ಹಿಡಿದು ಕಾಡಿಗೆ ಬಿಡಲಾಯಿತು.