ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ…!
– ಮುಂದಿನ ದಿನಗಳಲ್ಲಿ ಅಡಿಕೆ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ
– ಬೆಲೆ ಏರಿಕೆಯಾಗಿದೆ ಆದರೆ ಈ ಬಾರಿ ಫಸಲು ಕಡಿಮೆ.. ತೂಕನೂ ಕಡಿಮೆ…!
NAMMUR EXPRESS NEWS
ಅಡಿಕೆ ಬೆಳೆಯಲ್ಲಿ ಬಂಪರ್ ಏರಿಕೆಯಾಗಿರುವುದರಿಂದ ರೈತರಿಗೆ ಒಂದು ಸಂತಸದ ಸುದ್ದಿ ಎಂದೇ ಹೇಳಬಹದು. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾದ ಕಾರಣ ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 50ರಿಂದ 55 ಸಾವಿರ ರೂ.ಗಡಿ ದಾಟುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಮಲೆನಾಡಿನಲ್ಲಿ ಈ ಭಾರಿ ಫಸಲು ಕಡಿಮೆ ಆಗಿದೆ. ಆದ್ದರಿಂದ ಬೆಲೆ ಏರಿದರೂ ಅಡಿಕೆ ಇಲ್ಲವಾಗಿದೆ. ಬೆಲೆ ಏರಿಕೆ ಆಗಿದೆ ಎಂದು ರೈತರು ಸಂತಸ ಪಡಬೇಕು ಅಥವಾ ಪಸಲು ಕಡಿಮೆ ಎಂದು ಸಂಕಷ್ಟ ಪಡಬೇಕು ಎಂಬುದು ರೈತರಿಗೆ ಚಿಂತೆಯಾಗಿದೆ.
ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಅಡಿಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಬೆಲೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,549 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇತ್ತೀಚಿನ ಅಡಿಕೆ ಬೆಲೆ ಏರಿಳಿತ ಉಂಟಾಗಿದೆ.
ಅಡಿಕೆ ತೂಕ ಕಡಿಮೆ: ರೈತರಿಗೆ ಭಾರಿ ನಷ್ಟ!
ಒಂದು ಕಡೆ ಅಡಿಕೆ ದರ ಏರಿಕೆಯಾದರೆ ಇನ್ನೊಂದು ಕಡೆ ವಿವಿಧ ರೋಗಗಳ ಕಾರಣ ಅಡಿಕೆಯ ತೂಕ ತುಂಬಾ ಕಡಿಮೆಯಾಗಿದೆ. ಅಡಿಕೆಗೆ ಬಂದಿರುವ ರೋಗಗಳಿಂದಾಗಿ ಅಡಿಕೆ ತೂಕ ಕಡಿಮೆಯಾಗಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಅಡಿಕೆ ಸಂಶೋಧನ ಕೇಂದ್ರ ಮತ್ತು ಕೃಷಿ ಇಲಾಖೆ ಸಂಶೋಧನೆ ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಸಂಶೋಧನಾ ವರದಿಯನ್ನು ಶೀಘ್ರವೇ ಸುಪ್ರೀಂಕೋರ್ಟಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಸಚಿವರು ಭರವಸೆಯನ್ನು ಕೂಡ ನೀಡಿದ್ದರು. ಅಡಿಕೆ ಪುರಾತನ ಕಾಲದಿಂದಲೂ ಬಳಕೆಯಲ್ಲಿದೆ ಆದರೆ ಅದು ಕ್ಯಾನ್ಸರ್ ಕಾರಕ ಎಂಬ ಮಾತುಗಳು ಇತ್ತೀಚಿಗೆ ಕೇಳಿ ಬರುತ್ತಾ ಇದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ಹೇಳಿಕೆ ನೀಡಿರುವುದರಿಂದ ಇದು ಮತ್ತಷ್ಟು ರೈತರಿಗೆ ಸಂತಸ ಎಂದೇ ಹೇಳಬಹುದು.
ಇಂದಿನ ಅಡಿಕೆ ದರ ಹೀಗಿದೆ….
ಬೆಟ್ಟೆ: 40366 – 56919
ಸರಕು: 55119 – 82600
ಗೊರಬಲು: 18000 – 33089
ರಾಶಿ: 36366 – 51549