ಬೆಳ್ತಂಗಡಿ: ವಿದ್ಯುತ್ ಶಾಕ್ ನಿಂದ ಯುವಕ ಸಾವು!
– ಉಡುಪಿ, ದಕ್ಷಿಣ ಕನ್ನಡದಲ್ಲಿ ಪ್ರವಾಹ ಭೀತಿ?!
– ಕಾರವಾರ ತಾಲೂಕಿನಾದ್ಯಂತ ಮಳೆಗೆ ಪ್ರವಾಹ ಸೃಷ್ಟಿ
– ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಬೋಟ್ ಮೂಲಕ ರಕ್ಷಣೆ!
NAMMUR EXPRESS NEWS
ಬೆಳ್ತಂಗಡಿ : ವಿದ್ಯುತ್ ಶಾಕ್ ಹೊಡೆದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಇಳಂತಿಲ ಗ್ರಾಮದಲ್ಲಿ ಜು.15 ರಂದು ಬೆಳಿಗ್ಗೆ 8 ಗಂಟೆಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಗೋಳಿದಡಿ ತಿಮ್ಮಪ್ಪಗೌಡ ಎಂಬವರ ಪುತ್ರ ಹರೀಶ್ ಗೌಡ(35) ಎಂಬಾತ ಸಾವನ್ನಪ್ಪಿದ ಯುವಕ. ಮನೆಯ ಸಮೀಪವೇ ವಿದ್ಯುತ್ ಆಘಾತಕ್ಕೆ ಒಳಗಾದ ಇವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಉಡುಪಿ, ದಕ್ಷಿಣ ಕನ್ನಡದಲ್ಲಿ ಪ್ರವಾಹ ಭೀತಿ?!
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ನೇತ್ರಾವತಿ ಸೇರಿ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಕರಾವಳಿ ಈಗಾಗಲೇ 10ಕ್ಕೂ ಹೆಚ್ಚು ಮಂದಿ ಮಳೆ ಕಾರಣಕ್ಕೆ ಮೃತಪಟ್ಟಿದ್ದಾರೆ. ಈಗ ಎಲ್ಲೆಡೆ ಪ್ರವಾಹ ಭೀತಿ ಎದುರಾಗಿದೆ.
ಕಾರವಾರ ತಾಲೂಕಿನಾದ್ಯಂತ ಮಳೆಗೆ ಪ್ರವಾಹ ಸೃಷ್ಟಿ
ಕಾರವಾರ: ಕಳೆದ ನಾಲ್ಕು ದಿನದಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಅಬ್ಬರಿಸ್ತಿದೆ. ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ನಿತ್ಯ ಸುರಿಯುತ್ತಿರೋ ರಣ ಮಳೆ, ಕಾರಾವಾರ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಕಾರಾವಾರ ತಾಲೂಕಿನ ಚಂಡಿಯಾ, ಕೋಲ್ ಚಂಡಿಯಾ, ಇಳಸೂರು ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಮನೆ, ರಸ್ತೆ ಕೃಷಿ ಜಮೀನು ಜಲಾವೃತವಾಗಿದೆ.
ಐಸ್ ಫ್ಯಾಕ್ಟರಿ ಬಳಿ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೂರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಮನೆಗಳಿಗೂ ನೀರು ನುಗ್ಗಿ, ಮನೆಯಿಂದಾಚೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಕಂಗಲಾಗಿರೋ ಜನರು, ನಮ್ಮ ಕಷ್ಟ ಕೇಳರೋ ಯಾರು ಇಲ್ಲ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ.ಅರಗ ಗ್ರಾಮದಲ್ಲೂ ಭಾರೀ ಮಳೆಯಾಗಿದ್ದು, ಡಾಬಾಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಹೋಗಲು ಜಾಗವಿಲ್ಲದೇ ಡಾಬಾಗೆ ನುಗ್ಗುತ್ತಿದೆ. ಇನ್ನೂ ಗೋಕರ್ಣದ ತಾರಮಕ್ಕಿ ಸರ್ಕಾರಿ ಶಾಲೆ ಬಳಿ ಗುಡ್ಡ ಕುಸಿತವಾಗಿದೆ. ರಸ್ತೆಯಲ್ಲಿ ಮಣ್ಣು ಕುಸಿತು ಸಂಚಾರ ಅಸ್ತವ್ಯಸ್ತಗೊಂಡಿದೆ.
ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಬೋಟ್ ಮೂಲಕ ರಕ್ಷಣೆ!
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ವ್ಯಾಪ್ತಿಯಲ್ಲಿ ಪ್ರವಾಹದಲ್ಲಿ ಜನರು ಸಿಲುಕಿದ್ದರು. ಮನೆಗಳಲ್ಲಿ ಸಿಲುಕಿದ್ದ 5 ಕುಟುಂಬಗಳನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯ ಅಂದಾಜು ಗೊತ್ತಾಗದೆ ನಿವಾಸಿಗಳು ಮನೆಯಲ್ಲೇ ಉಳಿದಿದ್ರು. ಕಳೆದ 4 ದಿನಗಳ ಹಿಂದೆ ಸುರಿದ ಮಳೆಗೆ ಇಷ್ಟೊಂದು ನೀರು ಬಂದಿರಲಿಲ್ಲ. ಆದ್ರೆ ಇಂದು ಹೆಚ್ಚು ನೀರು ಬಂದಿದ್ದರಿಂದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ರಸ್ತೆಗಳು ಹಾಗೂ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾದ ಹಿನ್ನೆಲೆ ರಸ್ತೆ ಯಾವುದು ಅಂತಾ ಗೊತ್ತಾಗದೆ ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು. ಚಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು ಆತಂಕದಲ್ಲೇ ಕಾಲ ಕಳೆಯುತ್ತಿದ್ದರು. ಗ್ರಾಮಸ್ಥರಿಗೆ ವಿಷಯ ತಿಳಿಯುತ್ತಿದ್ದಂತೆ ಬೋಟ್ ಮೂಲಕ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳೀಯರು ಕರೆತಂದಿದ್ದಾರೆ.