ವಿಜಯ ದಶಮಿಯಂದು ಬರಲಿದೆ ಕಾಂತಾರ- 1
– ವಿಶ್ವ ಸಿನಿಮಾ ಲೋಕದಲ್ಲಿ ಭಾರೀ ಕುತೂಹಲ
– ರಿಷಬ್ ಶೆಟ್ಟಿ ನಟನೆಗೆ ಎಲ್ಲೆಡೆ ಭಾರೀ ಮೆಚ್ಚುಗೆ
NAMMUR EXPRESS NEWS
ಕನ್ನಡ ಚಿತ್ರರಂಗದ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿಗೆ ಭಾಜನವಾದ, ಕಾಂತಾರ ಚಿತ್ರದ ಎರಡನೇ ಭಾಗ ಈಗ ಕೋಟಿ ಕೋಟಿ ಜನರ ನಿರೀಕ್ಷೆಯ ಚಿತ್ರವಾಗಿದೆ.
ಹಲವಾರು ಅಡೆತಡೆ, ಅಪಘಾತ, ಅವಘಡಗಳನ್ನು ಎದುರಿಸಿ, ಕೊನೆಗೂ ಬಿಡುಗಡೆಗೆ ಸಿದ್ಧಗೊಂಡಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವಿಭಿನ್ನ ಸೆಟ್ ಹಾಕಿ ನಿರ್ಮಿಸಿರುವ ಈ ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.
ಕನ್ನಡ ಅಷ್ಟೇ ಅಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಯಾರಾದ ಈ ಚಿತ್ರವು ಚೀನಾವನ್ನು ಹೊರತುಪಡಿಸಿ, ಪ್ರಪಂಚದಾದ್ಯಂತ ಅಕ್ಟೋಬರ್ 2ರ ಗಾಂಧಿಜಯಂತಿ ಮತ್ತು ವಿಜಯದಶಮಿ ದಿನದಂದು ಬಿಡುಗಡೆಗೊಳ್ಳಲಿದೆ.
ಕಾಂತಾರ ಚಿತ್ರ ಬಿಡುಗಡೆಗೊಂಡು, ಮೂರು ವರ್ಷಗಳು ಕಳೆದ ನಂತರ, ಅದರ ಎರಡನೇ ಭಾಗ ಬಿಡುಗಡೆಗೊಳ್ಳುತ್ತಿರುವುದು ಚಿತ್ರರಸಿಕರಲ್ಲಿ ಕುತೂಹಲವನ್ನು ಕೆರಳಿಸಿದೆ. ಕಾಂತಾರ ಚಿತ್ರಕ್ಕಿಂತ ಈ ಚಿತ್ರವು ದೊಡ್ಡಮಟ್ಟದಲ್ಲಿ ನಿರ್ಮಾಣಗೊಂಡಿದೆ ಎಂಬ ಸುದ್ಧಿ ಎಲ್ಲೆಡೆ ಹರಿದಾಡುತ್ತಿದೆ.
ಹೊಂಬಾಳೆ ನಿರ್ಮಾಣ ಸಂಸ್ಥೆಯು ಕಾಂತಾರ -1 ಚಿತ್ರವನ್ನು ನಿರ್ಮಿಸಿದ್ದು, ಕ್ರಿ.ಶ.ನಾಲ್ಕನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ಚಿತ್ರ ಒಳಗೊಂಡಿದೆ ಎನ್ನಲಾಗಿದೆ. ಬಿಡುಗಡೆ ಪೂರ್ವ ತಯಾರಿ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಚಿತ್ರದ ಪ್ರಚಾರ ಪ್ರಾರಂಭವಾಗಲಿದೆ. ಆದರೆ, ಚಿತ್ರದ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸದೆ, ಚಿತ್ರರಸಿಕರು ತುದಿಗಾಲಿನಲ್ಲಿ ನಿಂತು ಬಿಡುಗಡೆಗೆ ಕಾಯುವಂತೆ ಮಾಡಿದೆ ಚಿತ್ರತಂಡ.
ಇನ್ನು ಗೀತೆಗಳು ಮತ್ತು ಟ್ರೈಲರ್ ಬಿಡುಗಡೆಗೊಂಡರೆ ಪ್ರೇಮಿಗಳ ಕಾತರತೆ ಮತ್ತಷ್ಟು ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಮತ್ತು ಚಿತ್ರವು ಸಾವಿರ ಕೋಟಿ ಲಾಭವನ್ನು ಗಳಿಸಬಹುದು ಎಂದು ಚಿತ್ರತಂಡವು ಅಭಿಪ್ರಾಯಪಟ್ಟಿದೆ.
ಬಿಡುಗಡೆಗೂ ಮೊದಲೇ, ದೇಶದ ವಿವಿಧ ಭಾಗಗಳಲ್ಲಿ ಕಾಂತಾರದ ಹಕ್ಕುಗಳನ್ನು ಪಡೆಯಲಾಗಿದ್ದು, ನೂರು ಕೋಟಿ ರೂಪಾಯಿಗೆ ಮಾರಾಟವಾಗಿ ದಾಖಲೆ ನಿರ್ಮಿಸುವ ಮೂಲಕ ವಾರ್-2 ಚಿತ್ರವನ್ನು ಹಿಂದಿಕ್ಕಿದೆ.
ಕೇರಳದಲ್ಲಿ ಪೃಥ್ವಿರಾಜ್ ಸುಕುಮಾರನ್, ಉತ್ತರ ಭಾರತ ಮತ್ತು ನೇಪಾಳದಲ್ಲಿ ಎಎ ಫಿಲಮ್ಸ್, ಪಾರ್ಸ್ ಫಿಲಂ ಕೋ ಎಲ್ಎಲ್ ಸಿ ಸಂಸ್ಥೆಗೆ ಓವರ್ ಸೀಸ್ ಹಕ್ಕನ್ನು ನೀಡಲಾಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿನ ಚಿತ್ರದ ಹಕ್ಕನ್ನು ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಕನ್ನಡದ ಹೆಮ್ಮೆಯ ಸಿನಿಮಾ ಇದಾಗಿದ್ದು ಕನ್ನಡದ ಅನೇಕ ನಟ ನಟಿಯರು ನಟನೆ ಮಾಡಿದ್ದಾರೆ.








