- ಕಾಂಗ್ರೆಸ್ನಿಂದ ಸಭಾತ್ಯಾಗ
NAMMUR EXPRESS NEWS
ಹೊಸದಿಲ್ಲಿ: ಲೋಕಸಭೆಯಲ್ಲಿ ಸೋಮವಾರ ಬೆಲೆಏರಿಕೆ ಕುರಿತು ಚರ್ಚೆಗೆ ಉತ್ತರಿಸಿದ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕತೆಯ ವೌಲ್ಯಮಾಪನಕ್ಕಾಗಿ ಎಲ್ಲ ಮಾನದಂಡಗಳ ವಿವರಗಳನ್ನು ನೀಡಿ, ದೇಶವು ಆರ್ಥಿಕ ಹಿಂಜರಿತ ಅಥವಾ ಸ್ಥಗಿತತೆಯತ್ತ ಸಾಗುವ ಸಾಧ್ಯತೆಯಿಲ್ಲ ಎಂದು ಹೇಳಿದರು. ವಿತ್ತಸಚಿವೆಯ ಉತ್ತರವು ತಮಗೆ ತೃಪ್ತಿ ನೀಡಿಲ್ಲ ಎಂದು ಹೇಳಿದ ಕಾಂಗ್ರೆಸ್ ಸದಸ್ಯರು ಉತ್ತರದ ನಡುವೆಯೇ ಸಭಾತ್ಯಾಗ ನಡೆಸಿದರು.
‘ಸಾಂಕ್ರಾಮಿಕ,ಕೋವಿಡ್ ಎರಡನೇ ಅಲೆ,ಒಮೈಕ್ರಾನ್ ಮತ್ತು ರಶ್ಯಾ ಉಕ್ರೇನ್ ಬಿಕ್ಕಟ್ಟುಗಳ ಹೊರತಾಗಿಯೂ ನಾವು ಹಣದುಬ್ಬರವನ್ನು ಶೇ.7ಕ್ಕಿಂತ ಕಡಿಮೆ ಮಟ್ಟದಲ್ಲಿ ಕಾಯ್ದುಕೊಂಡಿದ್ದೇವೆ. ಇದನ್ನು ಗುರುತಿಸಬೇಕು’ ಎಂದು ಹೇಳಿದ ಸೀತಾರಾಮನ್,ಪ್ರಸ್ತುತ ಚಿಲ್ಲರೆ ಹಣದುಬ್ಬರವು ಶೇ.7ರಷ್ಟಿದೆ. 2004ರಿಂದ 2014ರವರೆಗಿನ ಯುಪಿಎ ಆಡಳಿತದಲ್ಲಿ ಹಣದುಬ್ಬರವು ಎರಡಂಕಿಗಳಿಗೆ ತಲುಪಿತ್ತು. ಆ ಅವಧಿಯಲ್ಲಿ ಸತತ 22 ತಿಂಗಳುಗಳ ಕಾಲ ಹಣದುಬ್ಬರವು ಶೇ.9ಕ್ಕಿಂತ ಮೇಲೆಯೇ ಇತ್ತು ಎಂದರು.
ಹೆಚ್ಚಿನ ಹಣದುಬ್ಬರವು ಆಹಾರ ಮತ್ತು ಇಂಧನಗಳಲ್ಲಿ ಉಂಟಾಗಿದೆ. ವಿಶ್ವದಲ್ಲಿ ಆಹಾರ ಹಣದುಬ್ಬರವು ಇಳಿಯುತ್ತಿದೆ ಮತ್ತು ಅದು ಭಾರತದಲ್ಲಿಯೂ ಇಳಿಯಲಿದೆ ಎಂದು ಅವರು ಹೇಳಿದರು.
ಈಗಲೂ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ಘೋಷಿಸಿದ ಸೀತಾರಾಮನ್,ಮೊದಲ ತ್ರೈಮಾಸಿಕದಲ್ಲಿ ಶೇ.1.9ಕ್ಕೆ ತಲುಪಿದ್ದ ಅಮೆರಿಕದ ಜಿಡಿಪಿ ದ್ವಿತೀಯ ತ್ರೈಮಾಸಿಕದಲ್ಲಿ ಶೇ.0.7ರಷ್ಟು ಕುಸಿದಿದೆ. ಅವರು ಅದನ್ನು ಅನಧಿಕೃತ ಆರ್ಥಿಕ ಹಿಂಜರಿತ ಎಂದು ಬಣ್ಣಿಸಿದ್ದಾರೆ. ಭಾರತವು ಆರ್ಥಿಕ ಹಿಂಜರಿತಕ್ಕೆ ತುತ್ತಾಗುವ ಪ್ರಶ್ನೆಯೇ ಇಲ್ಲ. ಭಾರತವು ಹಿಂಜರಿತಕ್ಕೆ ಜಾರುವ ಸಾಧ್ಯತೆಯು ಶೇ.ಶೂನ್ಯದಷ್ಟಿದೆ ಎಂದು ಬ್ಲೂಮ್ಬರ್ಗ್ ಸಮೀಕ್ಷೆಯು ಹೇಳಿದೆ ಎಂದು ತಿಳಿಸಿದರು.
ಆರ್ಥಿಕತೆಯ ಇತರ ಮಾನದಂಡಗಳನ್ನು ಉಲ್ಲೇಖಿಸಿದ ಅವರು, ವಾಣಿಜ್ಯ ಬ್ಯಾಂಕುಗಳ ಅನುತ್ಪಾದಕ ಆಸ್ತಿ (ಎನ್ಸಿಎ) ಆರು ವರ್ಷಗಳ ಕನಿಷ್ಠ ಮಟ್ಟದಲ್ಲಿದೆ. ಸತತ ಐದು ತಿಂಗಳುಗಳಿಂದ ಜಿಎಸ್ಟಿ ಸಂಗ್ರಹ 1.4 ಲ.ಕೋ.ರೂ.ಗಿಂತ ಮೇಲೆಯೇ ಇದೆ ಎಂದರು.
ಬೆಲೆಏರಿಕೆ ಕುರಿತು ಚರ್ಚೆಯಾಗಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯಿಂದಾಗಿ ಸಂಸತ್ತಿನಲ್ಲಿ 10 ದಿನಗಳ ಗದ್ದಲ,ಕೋಲಾಹಲಗಳ ಬಳಿಕ ವಿತ್ತಸಚಿವೆಯ ಉತ್ತರವು ಹೊರಬಿದ್ದಿದೆ. ಸೋಮವಾರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿಯವರು ನಾಲ್ವರು ಕಾಂಗ್ರೆಸ್ ಸಂಸದರ ಅಮಾನತನ್ನು ಹಿಂದೆಗೆದುಕೊಳ್ಳುವ ನಿರ್ಣಯವನ್ನು ಮಂಡಿಸಿದ ಬಳಿಕ ಲೋಕಸಭೆಯಲ್ಲಿ ಬೆಲೆಏರಿಕೆ ಕುರಿತು ಚರ್ಚಿಸಲು ಆಡಳಿತ ಮತ್ತು ಪ್ರತಿಪಕ್ಷ ಸಂಸದರು ಒಪ್ಪಿಕೊಂಡರು.
ವಿವಿಧ ಪಕ್ಷಗಳಿಗೆ ಸೇರಿದ ಸುಮಾರು 20 ಸಂಸದರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್ನಂತಹ ಸಮಾನ ಮನಸ್ಕ ಪಕ್ಷಗಳು ಸಹ ಹಣದುಬ್ಬರವನ್ನು ತಡೆಯಲು ಮಧ್ಯಪ್ರವೇಶಿಸುವಂತೆ ಸರಕಾರವನ್ನು ಆಗ್ರಹಿಸಿದವು. ಚರ್ಚೆಯನ್ನು ಆರಂಭಿಸಿದ ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು,ಬಿಜೆಪಿ ನೇತೃತ್ವದ ಸರಕಾರವು ನೋಟು ನಿಷೇಧ ಮತ್ತು ಕೆಟ್ಟ ಪರಿಕಲ್ಪನೆಯ ಜಿಎಸ್ಟಿ ಮೂಲಕ ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸುತ್ತಿದೆ. ಇತ್ತೀಚಿನ ಜಿಎಸ್ಟಿ ಏರಿಕೆಯೊಂದಿಗೆ ಸರಕಾರವು ತನ್ನ ಬಜೆಟ್ ಅನ್ನು ಬಲಪಡಿಸಿಕೊಂಡಿದೆ, ಆದರೆ 25 ಕೋಟಿ ಭಾರತೀಯರ ಬಜೆಟ್ ಅನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.
ತಿವಾರಿಯವರಿಗೆ ತಿರುಗೇಟು ನೀಡಲು ಮುಂದಾದ ಜಾರ್ಖಂಡ್ನ ಬಿಜೆಪಿ ಸಂಸದ ನಿಶಿಕಾಂತ ದುಬೆಯವರು ಎಲ್ಪಿಜಿ ಬೆಲೆಗಳ ಕುರಿತು ಆಲ್ಡ್ ನ್ಯೂಸ್ ನ ಮುಹಮ್ಮದ್ ಝುಬೈರ್ ಅವರ ಟ್ವಿಟ್ ಅನ್ನು ಉಲ್ಲೇಖಿಸಿ, 2013ರಲ್ಲಿ ಎಲ್ಪಿಜಿ ಬೆಲೆ 1,000 ರೂ.ಗಿಂತ ಅಧಿಕವಿತ್ತು, ಅದು ಈಗ ಕಡಿಮೆಯಿದೆ ಎಂದು ಹೇಳಿದರು.
ನೋಟು ನಿಷೇಧಕ್ಕಿಂತ ಮೊದಲಿನ ಅವಧಿಗೆ ಹೋಲಿಸಿದರೆ ಚಲಾವಣೆಯಲ್ಲಿರುವ ನಗದು ಹಣದ ಪ್ರಮಾಣ ಈಗ ದುಪ್ಪಟ್ಟಾಗಿದೆ ಎಂದು ಹೇಳಿದ ಬಿಜೆಡಿಯ ಪಿನಾಕಿ ಮಿಶ್ರಾ,ತನ್ನ ನೀತಿಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸರಕಾರಕ್ಕೆ ಸೂಚಿಸಿದರು. ಕಾಂಗ್ರೆಸ್ ಸರಕಾರವು ಖರೀದಿಸಿದ್ದ ಇಂಧನ ಬಾಂಡ್ಗಳಿಂದಾಗಿ ಇಂಧನಗಳ ಬೆಲೆಗಳು ಹೆಚ್ಚುತ್ತಿವೆ ಎಂಬ ಕೇಂದ್ರದ ಸಮರ್ಥನೆಯನ್ನು ತಳ್ಳಿಹಾಕಿದ ಮಿಶ್ರಾ,ಕೇಂದ್ರವು ಇಂಧನ ತೆರಿಗೆಗಳ ಮೂಲಕ 27.27 ಲ.ಕೋ.ರೂ.ಗಳನ್ನು ಸಂಗ್ರಹಿಸಿದೆ. ಯುಪಿಎ ಸರಕಾರ ಖರೀದಿಸಿದ್ದ ಇಂಧನ ಬಾಂಡ್ಗಳಿಗೆ ತಾವು ಹಣ ಪಾವತಿಸುತ್ತಿದ್ದೇವೆ ಎಂದು ಪ್ರತಿಸಲವೂ ಅವರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅವರು ಕೇವಲ 93,600 ಕೋ.ರೂ.ಗಳನ್ನು ಅಂದರೆ ಕೇವಲ ಶೇ.3.4ರಷ್ಟನ್ನು ಪಾವತಿಸಿದ್ದಾರೆ ಎಂದು ಬೆಟ್ಟು ಮಾಡಿದರು.
ಟಿಎಂಸಿಯ ಕಾಕೋಲಿ ಘೋಷ ದಸ್ತಿದಾರ್ ಅವರು,’ಕಳೆದ ಕೆಲವು ತಿಂಗಳುಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆಗಳನ್ನು ನಾಲ್ಕು ಬಾರಿ ಹೆಚ್ಚಿಸಲಾಗಿದೆ. 600 ರೂ.ಇದ್ದುದು ಈಗ 1,100 ರೂ.ಆಗಿದೆ. ನಾವು ಹಸಿ ತರಕಾರಿಗಳನ್ನು ತಿನ್ನಬೇಕು ಎಂದು ಸರಕಾರವು ಬಯಸಿದೆಯೇ’ ಎಂದು ಹಸಿ ಬದನೆಯನ್ನು ತಿನ್ನುತ್ತಲೇ ಪ್ರಶ್ನಿಸಿದರು.