ಕರಾವಳಿ ಟಾಪ್ ನ್ಯೂಸ್
ಧರ್ಮಸ್ಥಳ ಪ್ರಕರಣ; ಆ್ಯಂಬುಲೆನ್ಸ್ ಚಾಲಕರ ವಿಚಾರಣೆ!
* ಸುಳ್ಯ: ಯುವಕ ನಾಪತ್ತೆ
* ಕಡಬ: ತಂಬಾಕು ಉತ್ಪನ್ನ ಮಾರಾಟಗಾರರಿಗೆ ದಂಡ
* ಪುತ್ತೂರು: ಕೊಲೆ ಆರೋಪಿಯ ಜಾಮೀನು ಅರ್ಜಿ ವಜಾ
* ಉಡುಪಿ: ಜುಗಾರಿ ಅಡ್ಡೆ ಮೇಲೆ ದಾಳಿ
* ಕುಂದಾಪುರ: ಮಹಿಳೆಗೆ ಹಣದ ವಂಚನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಂದುವರಿಸಿರುವ ವಿಶೇಷ ತನಿಖಾ ದಳವು, ಇದೀಗ ಆ್ಯಂಬುಲೆನ್ಸ್ ಚಾಲಕರನ್ನು ವಿಚಾರಣೆಗೆ ಒಳಪಡಿಸಿದೆ. ಅಕ್ಟೋಬರ್ 4ರ ಶನಿವಾರದಂದು, ಬೆಳ್ತಂಗಡಿಯಲ್ಲಿ ಸುಮಾರು 20 ವರ್ಷಗಳಿಂದ ಆ್ಯಂಬುಲೆನ್ಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಜಲೀಲ್ ಮತ್ತು ಹಮೀದ್ ಅವರನ್ನು ಕರೆಸಿ, ರಾತ್ರಿ ಸುಮಾರು 9 ಗಂಟೆಯವರೆಗೆ ವಿಚಾರಣೆ ನಡೆಸಿದರು ಎನ್ನಲಾಗಿದೆ. ಭಾನುವಾರ ರಜಾದಿನವಾದ್ದರಿಂದ, ಸೋಮವಾರದಿಂದ ಮತ್ತೆ ವಿಚಾರಣೆಯನ್ನು ಮುಂದುವರಿಸಿತು ವಿಶೇಷ ತನಿಖಾ ದಳ. “ಪೊಲೀಸರ ಆದೇಶದ ಮೇರೆಗೆ ನಾವು ಮೃತದೇಹಗಳನ್ನು ರವಾನಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಪೊಲೀಸರ ಬಳಿ ದಾಖಲೆಗಳಿವೆ. ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಮೃತದೇಹಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರವಾನಿಸಲಾಗಿದೆಯಾದರೂ, ಅವು ಆತ್ಮಹತ್ಯೆ ಮಾಡಿಕೊಂಡವರು, ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದವರು, ಅನಾಥ ಶವಗಳಾಗಿವೆ” ಎಂದು ಆ್ಯಂಬುಲೆನ್ಸ್ ಚಾಲಕರು ಹೇಳಿಕೆ ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಮತ್ತೆ ಮಾಹಿತಿಗಳು ಬೇಕಾದಲ್ಲಿ ಪುನಃ ವಿಚಾರಣೆಗೆ ಕರೆಸಲಾಗುತ್ತದೆ ಎಂದು ವಿಶೇಷ ತನಿಖಾ ದಳವು ತಿಳಿಸಿದೆ.
* ಸುಳ್ಯ: ಯುವಕ ನಾಪತ್ತೆ
ಸುಳ್ಯ: ಮಂಗಳೂರಿನಲ್ಲಿ ಡಾಟಾ ಎಂಟ್ರಿ ಕೆಲಸ ಮಾಡಿಕೊಂಡಿದ್ದ ಯುವಕನೊಬ್ಬ ಮನೆಗೆ ಹೋಗಿಬರುವುದಾಗಿ ತಿಳಿಸಿ, ಪಿಜಿಯಿಂದ ತೆರಳಿದ್ದು ನಾಪತ್ತೆಯಾಗಿರುವ ಘಟನೆ, ಕೆಲವು ದಿನಗಳ ಹಿಂದೆ ನಡೆದಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಮಡಪಾಡಿ ಗ್ರಾಮದ ನಿವಾಸಿಯಾಗಿರುವ ಸೃಜನ್ ಎನ್ನುವವರು ಮನೆಗೂ ತೆರಳದೆ, ಪಿಜಿಗೂ ಮರಳಿ ಬಾರದೆ ಕಾಣೆಯಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪೊಲೀಸರಿಗೆ ದೂರನ್ನು ನೀಡಲಾಗಿದೆ.
* ಕಡಬ: ತಂಬಾಕು ಉತ್ಪನ್ನ ಮಾರಾಟಗಾರರಿಗೆ ದಂಡ
ಕಡಬ: ಸುಬ್ರಹ್ಮಣ್ಯ ಗ್ರಾಮವನ್ನು ತಂಬಾಕು ಮುಕ್ತ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ, ಅಲ್ಲಿನ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದು, ಹಲವಾರು ಅಂಗಡಿಗಳ ಮೇಲೆ ದಾಳಿ ನಡೆಸಿ ಕೆಲವು ಅಂಗಡಿಗಳ ಮಾಲೀಕರಿಂದ ದಂಡವನ್ನು ವಸೂಲಿ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ಕಲ್ಲಾಜೆ, ಪಿಡಿಒ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಿರೀಶ್ ಆಚಾರ್ಯ ಮೊದಲಾದವರು ಸೇರಿ ಪರಿಶೀಲನೆ ನಡೆಸಿ, ರಥಬೀದಿಯಲ್ಲಿ ಗುಟ್ಕಾ, ಬೀಡಿ, ಸಿಗರೇಟು, ಪಾನ್ ಪರಾಗ್ ಮುಂತಾದ ಅನಾರೋಗ್ಯಕರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ, ಅಲ್ಲದೆ ಅಂಗಡಿಯ ಕಸಗಳನ್ನು ಸರಿಯಾಗಿ ವಿಲೇವಾರಿ ಮಾಡದ ಅಂಗಡಿ ಮಾಲೀಕರಿಗೆ ಸುಮಾರು 500 ರೂಪಾಯಿಯಷ್ಟು ದಂಡವನ್ನು ವಿಧಿಸಿದ್ದಾರೆ ಎನ್ನಲಾಗಿದೆ.
* ಪುತ್ತೂರು: ಕೊಲೆ ಆರೋಪಿಯ ಜಾಮೀನು ಅರ್ಜಿ ವಜಾ
ಪುತ್ತೂರು: ಕಲ್ಲೇಗ ಟೈಗರ್ ಮುಖ್ಯಸ್ಥರಾದ ಅಕ್ಷಯ್ ಅವರ ಕೊಲೆ, ಪುತ್ತೂರಿನ ನೆಹರು ನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದರು. ಅವರಲ್ಲಿ ಮೂರನೇ ಆರೋಪಿಯಾದ ಮಂಜುನಾಥ್ ತನ್ನ ಅನಾರೋಗ್ಯದ ಕಾರಣದಿಂದ ಜಾಮೀನು ಅರ್ಜಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದನು. ಈ ಹಿನ್ನೆಲೆಯಲ್ಲಿ ಸರ್ಕಾರಿ ಅಭಿಯೋಜಕರಾದ ಜಯಂತಿ ಸತೀಶ್ ಭಟ್ ಅವರು ಆರೋಪಿಗೆ ಜಾಮೀನನ್ನು ನೀಡದಂತೆ ವಾದವನ್ನು ಮಂಡಿಸಿದ್ದರು. ಇದೀಗ ನ್ಯಾಯಾಲಯವು ಜಯಂತಿ ಅವರ ವಾದವನ್ನು ಪುರಸ್ಕರಿಸಿ, ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
* ಉಡುಪಿ: ಜುಗಾರಿ ಅಡ್ಡೆ ಮೇಲೆ ದಾಳಿ
ಉಡುಪಿ: ಅಂದರ್ ಬಾಹರ್ ಜುಗಾರಿ ಆಟವಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ, ಬಡಗುಬೆಟ್ಟು ಗ್ರಾಮದ ಬಸ್ ನಿಲ್ದಾಣದ ಬಳಿಯ, ನೀರಿನ ಟ್ಯಾಂಕ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ನಡೆದಿದೆ. ಆರೋಪಿಗಳನ್ನು ಕುಂದಾಪುರ ಹಳ್ಳಿಹೊಳೆ ಗ್ರಾಮದ ಜಯಂತ್, ಬಡಗುಬೆಟ್ಟು ಗ್ರಾಮದ ಶರಣಪ್ಪ, ಈಶ ಮತ್ತು ಹಾಲೇಶ್ ಎಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸೆರೆಹಿಡಿಯುವ ಸಂದರ್ಭದಲ್ಲಿ ಆಟಕ್ಕೆ ಬಳಸಿದ 2.100 ರೂಪಾಯಿ ನಗದು ಹಣ, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಂದಾಪುರ: ಮಹಿಳೆಗೆ ಹಣದ ವಂಚನೆ
ಕುಂದಾಪುರ: ಕೃಷಿ ತೋಟದ ಖರ್ಚಿಗೆಂದು ತೆರೇಸಾ ಮೆಂಡೊನ್ಸಾ ಅವರಿಂದ ಹಣ ಪಡೆದು ವಂಚನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಹರ್ಬಲ್ ಲೈಫ್ ನ್ಯೂಟ್ರಿಷನ್ ವಸ್ತುಗಳನ್ನು ಮಾರಾಟ ಮಾಡುವ ಕಾರ್ಯನಿರ್ವಹಿಸುತ್ತಿದ್ದಾಗ ಸಂತೋಷ್ ಎನ್ನುವ ವ್ಯಕ್ತಿಯ ಪರಿಚಯವಾಗಿದೆ. ಮೂರು ವರ್ಷಗಳ ಹಿಂದೆ ತೆರೇಸಾ ಅವರಿಂದ ಸಂತೋಷ್ ಕೃಷಿ ಖರ್ಚಿಗೆ ಹಣವನ್ನು ನೀಡಿದರೆ, ಬೆಳೆ ಮಾರಾಟವಾದ ಬಳಿಕ ನೀಡಿದ ಹಣದೊಂದಿಗೆ, ಹೆಚ್ಚುವರಿ ಹಣವನ್ನು ಸೇರಿಸಿ ನೀಡುವುದಾಗಿ ನಂಬಿಸಿ, ಅವರಿಂದ 4.50 ಲಕ್ಷದಷ್ಟು ಹಣವನ್ನು ಪಡೆದುದಲ್ಲದೆ ತೆರೇಸಾ ಅವರ ಚಿನ್ನದ ಸರವನ್ನು ಪಡೆದು, ಅದನ್ನು ಬ್ಯಾಂಕಿನಲ್ಲಿ ಅಡವಿಟ್ಟು ಮತ್ತಷ್ಟು ಹಣವನ್ನು ಪಡೆದುಕೊಂಡಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ, ತೆರೇಸಾ ಅವರಿಗೆ ಚಿನ್ನದ ಮೇಲೆ ಪಡೆದ ಸಾಲದ ಬಡ್ಡಿಯನ್ನು ಕಟ್ಟಲು ಹಣದ ಅವಶ್ಯಕತೆ ಉಂಟಾಗಿದ್ದು, ಸಂತೋಷ್ ಅವರ ಬಳಿ ಕೇಳಿದಾಗ ನನ್ನ ಬಳಿ ಹಣವಿಲ್ಲ ಎಂದು ಹೇಳಿ, ತಕ್ಷಣ ತೆರೇಸಾ ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ತೆರೇಸಾ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ







