ಚನ್ನಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಅತೀ ಶೀಘ್ರ ಫುಡ್ ಕೋರ್ಟ್
– ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಅನ್ನಸಂತರ್ಪಣೆ
– ಕಾರ್ಯಕ್ರಮದಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಭರವಸೆ
NAMMUR EXPRESS NEWS
ಹಾಸನ: ಚನ್ನಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ಅತೀ ಶೀಘ್ರವಾಗಿ ಫುಡ್ ಕೋರ್ಟ್ ನಿರ್ಮಾಣ ಮಾಡಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಸ್ವರೂಪ್ ಪ್ರಕಾಶ್ ಭರವಸೆ ನೀಡಿದರು. ಹೊಸ ಬಸ್ ನಿಲ್ದಾಣದ ಬಳಿಯ ಫ್ಲೈ ಓವರ್ ಬಳಿ ಇರುವ ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ದಿ. ಡಾ. ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪುನೀತ್ ರಾಜ್ ಕುಮಾರ್ ಅವರ ಸೇವೆ ಎಲ್ಲರಿಗೂ ಮಾದರಿ, ಅವರ ಸೇವೆಯಿಂದ ಪ್ರೇರೇಪಿತರಾಗಿ ಬೀದಿಬದಿ ವ್ಯಾಪಾರಿಗಳು ಕೂಡ ಅನ್ನದಾನ ದ ಜೊತೆಗೆ ಇನ್ನಿತರ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಅವರ ಸೇವೆಗಳು ಇನ್ನಷ್ಟು ಹೆಚ್ಚಾಗಲಿ ಎಂದರು.ಬೀದಿಬದಿ ವ್ಯಾಪಾರಸ್ಥರ ಹಲವು ದಿನಗಳ ಬೇಡಿಕೆಯಾಗಿರುವ ಫುಡ್ ಕೋರ್ಟ್ ನಿರ್ಮಾಣದ ಬೇಡಿಕೆಯನ್ನು ಅತೀ ಶೀಘ್ರವಾಗಿ ನೆರವೇರಿಸಲಾಗುವುದು. ಈಗಾಗಲೇ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ಜೊತೆಗೆ ಮಾತಾಡಲಾಗಿದ್ದು ಗುಣಮಟ್ಟದ ಕಾಮಗಾರಿಯೊಂದಿಗೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ವಿನೂತನ ಮಾದರಿಯ ಫುಡ್ ಕೋರ್ಟ್ ನಿರ್ಮಾಣ ಮಾಡಲಾಗುವುದು ಎಂದರು. ನಗರಸಭೆ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಅತೀ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಬೀದಿ ಬದಿ ವ್ಯಾಪಾರಿಗಳ ಮನಸ್ಸಿಗೂ ಮಾದರಿಯಾಗುವಂತೆ ಪುನೀತ್ ರಾಜ್ ಕುಮಾರ್ ಮಾಡಿರುವ ಸೇವೆ ಶ್ಲಾಘನೀಯ ಎಂದರು. ಸಂಘದ ಪದಾಧಿಕಾರಿಗಳಾದ ಪ್ರಕಾಶ್, ಕೃಷ್ಣೇಗೌಡ, ಕುಮಾರ್, ಶಾಂತಣ್ಣ, ರಾಜು, ದೀಪಕ್, ಜಯಮ್ಮ, ಅಣ್ಣಾಜಿ ಗೌಡ, ರವಿಕುಮಾರ್, ಜಗದೀಶ್, ಹನುಮಂತ, ಸುನಿಲ್, ಇತರರು ಇದ್ದರು.