* ಬಂಟ್ವಾಳ: ಆ್ಯಂಬುಲೆನ್ಸ್ ಮೂಲಕ ಸೌಹಾರ್ದಯುತ ಜನಸೇವೆ
* ಹೊನ್ನಾವರ: ಅಣ್ಣ ತಂಗಿ ಈಗ ಪ್ರಸಿದ್ಧ ಆಹಾರ ತಜ್ಞರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
* ಬಂಟ್ವಾಳ: ಆ್ಯಂಬುಲೆನ್ಸ್ ಮೂಲಕ ಸೌಹಾರ್ದಯುತ ಜನ ಸೇವೆ.
ಬಂಟ್ವಾಳ: ಕಡೇಶಿವಾಲಯದ ನಿವಾಸಿಯಾದ ಮಹೇಶ್ ಕುಲಾಲ್ ಎನ್ನುವ ವ್ಯಕ್ತಿಯು ತನ್ನ ತಂದೆ ಅನಾರೋಗ್ಯದಿಂದ ನರಳುತ್ತಿದ್ದ ಸಂದರ್ಭದಲ್ಲಿ, ಸಮಯಕ್ಕೆ ಸರಿಯಾಗಿ ತುರ್ತು ವಾಹನ ಲಭಿಸದೇ, ತಂದೆಯನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ, ಬೇರೆ ಯಾರಿಗೂ ಈ ರೀತಿಯ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಆ್ಯಂಬುಲೆನ್ಸ್ ಅನ್ನು ಕಲ್ಲಡ್ಕ ಮತ್ತು ಕಡೇಶಿವಾಲಯದ ಮಾರ್ಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದು ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಚಾಲಕರ ತಂಡದ ಮೂಲಕ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ಸೌಹಾರ್ದ ಆ್ಯಂಬುಲೆನ್ಸ್ ಎನ್ನುವ ಹೆಸರನ್ನು ಪಡೆದುಕೊಂಡಿದೆ. ವೃತ್ತಿಯಲ್ಲಿ ಸ್ಪ್ರೇ ಪೇಂಟರ್ ಆಗಿರುವ ಮಹೇಶ್ ಕುಲಾಲ್ ಅವರಿಗೆ ಆ್ಯಂಬುಲೆನ್ಸ್ ನಿರ್ವಹಣೆಗೆ ಪ್ರತಿ ತಿಂಗಳು 9000 ರೂಪಾಯಿ ವೆಚ್ಚ ತಗುಲುತ್ತಿದ್ದು, ತಮ್ಮ ನೃತ್ಯ ಮತ್ತು ನಿರೂಪಣಾ ಕೆಲಸದಿಂದ ಬರುವ ಹಣವನ್ನು ಅದಕ್ಕಾಗಿ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಮಹೇಶ್ ಅವರ ಸ್ನೇಹಿತರಾದ, ಉದ್ಯಮಿಯಾದ ಕಿಶೋರ್ ಕಟ್ಟೆಮರ, ಪ್ರಿಯರಂಜನ್, ರೂಪೇಶ್ ಗೌಡ ಅವರು ಆರ್ಥಿಕವಾಗಿ ಸಹಕಾರ ನೀಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸ್ನೇಹಿತರೆಲ್ಲ ಸೇರಿ ಸುಮಾರು 5 ಲಕ್ಷ ರೂಪಾಯಿಗೆ ಆ್ಯಂಬುಲೆನ್ಸ್ ಖರೀದಿಸಿದ್ದಾರೆ. ಕಡೇಶಿವಾಲಯದಲ್ಲಿ ಮಹೇಶ್ ಮತ್ತು ಪ್ರಿಯರಂಜನ್ ಅವರು ತುರ್ತು ವಾಹನವನ್ನು ಓಡಿಸುತ್ತಿದ್ದು, ಕಲ್ಲಡ್ಕ ಭಾಗದಲ್ಲಿ ಇರ್ಫಾನ್, ಕಿಶನ್ ಮತ್ತು ತಿಲಕ್ ಅವರು ನಡೆಸುತ್ತಾರೆ. “ಹಿಂದೂ ಮತ್ತು ಮುಸಲ್ಮಾನರು ಒಟ್ಟಿಗೆ ಸೇರಿ ಈ ಸೇವೆಯನ್ನು ನಿರ್ವಹಿಸುತಿದ್ದೇವೆ. ದುರಸ್ತಿ ಮೊದಲಾದ ಸಂದರ್ಭದಲ್ಲಿ ಚಾಲಕರಾದ ನಾವೇ ಹೇಗಾದರೂ ಹಣವನ್ನು ಹೊಂದಿಸಿಕೊಂಡು ಸರಿಪಡಿಸಿ, ಜನರಿಗೆ ತುರ್ತು ಸೇವೆಯನ್ನು ಒದಗಿಸುತ್ತೇವೆ” ಎಂದಿದ್ದಾರೆ ಮಹೇಶ್ ಕುಲಾಲ್ ಅವರು.
* ಹೊನ್ನಾವರ: ಅಣ್ಣ ತಂಗಿ ಈಗ ಪ್ರಸಿದ್ಧ ಆಹಾರ ತಜ್ಞರು.
ಹೊನ್ನಾವರ: ಹಳದಿಪುರ ಮೂಲದ ಅಣ್ಣ ತಂಗಿ ಇಬ್ಬರು, ಕಳೆದ ವರ್ಷ ಬೆಂಗಳೂರಿನ ಕಲ್ಯಾಣನಗರದಲ್ಲಿ ಫಯರ್ ಸೈಡ್ ಎಂಬ ಹೆಸರಿನ ಹೊಟೇಲ್ ವೊಂದನ್ನು ಆರಂಭಿಸಿದ್ದು, ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಹಣ್ಣುಗಳನ್ನು ಬೆಳೆದು, ಪ್ರಸಿದ್ಧರಾಗಿರುವ ಜಯಪ್ರಕಾಶ್ ಆಳ್ವೆ ಅವರ ಮಕ್ಕಳಾದ ರಜತ್ ಮತ್ತು ಪ್ರಿಯಾಂಕ ಈ ಖ್ಯಾತಿಯನ್ನು ಪಡೆದವರು. ರಾಷ್ಟ್ರಮಟ್ಟದಲ್ಲಿ ವಿಶೇಷ ಆಹಾರ ತಜ್ಞರನ್ನು ಗುರುತಿಸುವ ಸಲುವಾಗಿ, ಅದಕ್ಕೆ ಸಂಬಂಧಿಸಿದ ಸಂಘಟನೆಯು ಇವರಿಬ್ಬರಿಗೆ ತಿಳಿಯದಂತೆ ಹಲವಾರು ಬಾರಿ ಫಯರ್ ಸೈಡ್ ನಲ್ಲಿ ಆಹಾರವನ್ನು ಸೇವಿಸಿದ್ದರು ಮತ್ತು ಆಹಾರ ತಯಾರಿಕೆಯ ಕ್ರಮವನ್ನು ಕೂಡ ಕಂಡಿದ್ದರು ಎನ್ನಲಾಗಿದೆ. ಕೆಲವೇ ತಿಂಗಳುಗಳಲ್ಲಿ ಈ ಪರಿಯಾದ ಖ್ಯಾತಿ ಗಳಿಸಿರುವ ಫಯರ್ ಸೈಡ್ ಕುರಿತು ಇಂಗ್ಲಿಷ್ ಪತ್ರಿಕೆಗಳಲ್ಲಿ ಸುದ್ಧಿ ಮತ್ತು ಲೇಖನಗಳು ಪ್ರಕಟವಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಜತ್ ಮತ್ತು ಪ್ರಿಯಾಂಕ ಹವ್ಯಾಸಕ್ಕಾಗಿ ಬಾಣಸಿಗರಾಗಿ ರೂಪುಗೊಂಡು, ಹೊಟೇಲ್ ಆರಂಭಿಸಿದ್ದರು. ಇದೀಗ ನಳಪಾಕಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಗಳನ್ನು ಪಡೆದು, ಪೂರ್ಣಾವಧಿ ಬಾಣಸಿಗರಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೇ ತಿಂಗಳ 26ರಂದು ಕಲ್ಕತ್ತಾದಲ್ಲಿ ನಡೆಯುವ ಫುಡ್ ಸೂಪರ್ ಸ್ಟಾರ್ ನೆಕ್ಸ್ಟ್ ಗೆ ಆಯ್ಕೆಯಾಗುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.







