ಫೆ. 18ರಿಂದ 5 ದಿನ ಹೊರನಾಡು ಜಾತ್ರೆ!
– ಫೆಬ್ರವರಿ 18ರಿಂದ 22ರವರೆಗೆ ಅಮ್ಮನವರ ಜಾತ್ರೆ
– ರಾಜ್ಯದ ಮೂಲೆ ಮೂಲೆಯಿಂದ ಭಕ್ತರ ಆಗಮನ
– ಸರ್ವರನ್ನು ಸ್ವಾಗತಿಸಿದ ಧರ್ಮದರ್ಶಿ ಡಾ. ಭೀಮೇಶ್ವರ ಜೋಷಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಳಸ: ಕರ್ನಾಟಕದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಾಲಯದ ಜಾತ್ರಾ ಮಹೋತ್ಸವವೂ ಫೆ. 18ರ ಬುಧವಾರದಿಂದ 22ರ ಭಾನುವಾರದವರೆಗೆ ಐದು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ. ಪ್ರಸಿದ್ಧ ದೇವಾಲಯವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವಾರು ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಗಣಪತಿ ಪೂಜೆ, ಧ್ವಜಾರೋಹಣ ಮತ್ತು ಬ್ರಹ್ಮ ರಥೋತ್ಸವಗಳು ನಡೆಯಲಿವೆ.
ಅನ್ನಪ್ರಾಶನ ನಡೆಸಲು ಮತ್ತು ಅನ್ನಪ್ರಸಾದಕ್ಕೆ ಹೆಸರುವಾಸಿಯಾಗಿರುವ ಹೊರನಾಡಿನ ಅನ್ನಪೂರ್ಣೇಶ್ವರಿ ಜಾತ್ರೆಗೆ ರೈತರು ತಾವು ಬೆಳೆದ ಭತ್ತ, ಅಡಿಕೆ, ಕಾಫಿ, ಏಲಕ್ಕಿ ಮುಂತಾದವುಗಳನ್ನು ತಂದು ದೇವಿಗೆ ಕಾಣಿಕೆಯಾಗಿ ಅರ್ಪಿಸುವುದು ರೂಢಿಗತವಾಗಿದೆ. ಜೊತೆಗೆ ಅಕ್ಕಿ ಅಡಿಕೆಯಂತಹ ಮಲೆನಾಡಿನ ಪ್ರಮುಖ ಬೆಳೆಗಳನ್ನು ಅನ್ನಪೂರ್ಣೇಶ್ವರಿಗೆ ಅರ್ಪಿಸಿದರೆ ಉತ್ತಮ ಬೆಳೆ ಲಭಿಸುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ರಥೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ನೃತ್ಯ, ಸಂಗೀತ ಮತ್ತು ವೀರಗಾಸೆಯಂತಹ ಜನಪದ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಸಮಸ್ತ ಭಕ್ತರನ್ನು ಧರ್ಮದರ್ಶಿ ಡಾ. ಭೀಮೇಶ್ವರ ಜೋಷಿ ಮತ್ತು ದೇವಸ್ಥಾನ ಆಡಳಿತ ಮಂಡಳಿ ಸ್ವಾಗತಿಸಿದೆ.








