ವಿಶ್ವ ಕ್ಯಾನ್ಸರ್ ದಿನ ಜಾಗೃತಿ ವಿಶೇಷ
ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿದೆ..!
– ಗರ್ಭಕಂಠದ ಕ್ಯಾನ್ಸರ್ ಗೆ ಕಾರಣಗಳೇನು… ಚಿಕಿತ್ಸೆ ಏನು?
– ಮಹಿಳೆಯರು ಜಾಗೃತಿ ಮಾಡಬೇಕಾದ್ದು ಏನು?
ವಿಶೇಷ ಲೇಖನ:ಡಾ. ನಿವೇದಿತಾ ಹೆಗಡೆ
ಸ್ತ್ರೀ ರೋಗ, ಪ್ರಸೂತಿ ತಜ್ಞರು
ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಒಂದೊಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು, ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿರುತ್ತದೆ. ಅದೇ ರೀತಿ ಈ ವರ್ಷದ ಧ್ಯೇಯ ವಾಕ್ಯವು united by unique ಎನ್ನುವುದಾಗಿದೆ. ಕ್ಯಾನ್ಸರ್ ರೋಗಿಗಳಿಗೆ ವೈಯಕ್ತಿಕಗೊಳಿಸಿದ ಮತ್ತು ರೋಗಿ ಕೇಂದ್ರಿತ ಆರೈಕೆಯನ್ನು ನೀಡಬೇಕೆಂಬುದು ಈ ಧ್ಯೇಯ ವಾಕ್ಯದ ಉದ್ದೇಶವಾಗಿದೆ.
ಕ್ಯಾನ್ಸರ್ ಬಗೆಗೆ ಜನರಲ್ಲಿ ಭಯ ಮತ್ತು ಅಪನಂಬಿಕೆಯೇ ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಮಹಿಳೆಯರಿಗೆ ಸಂಬಂಧಿಸಿದಂತೆ ಸ್ತನದ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಎರಡು ಸಮಸ್ಯೆಗಳು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಮೊದಲೇ ಅದನ್ನು ಪರಿಹರಿಸಿಕೊಳ್ಳಲು ಸಾಕಷ್ಟು ವಿಧಾನಗಳಿವೆ ಎನ್ನುವ ಅರಿವು ಮಹಿಳೆಯರಿಗೆ ಇಲ್ಲದಂತಾಗಿದೆ. ಇಂತಹ ಮಾರಕ ರೋಗದ ಲಕ್ಷಣಗಳನ್ನು ತಡೆಗಟ್ಟುವ ವಿಧಾನಗಳು, ರೋಗ ನಿರ್ಣಯ ವಿಧಾನ ಮತ್ತು ಚಿಕಿತ್ಸೆಯ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿದೆ.
ಗರ್ಭಕಂಠದ ಕ್ಯಾನ್ಸರ್ ಪ್ರತಿ ವರ್ಷ ಸುಮಾರು 127 ಲಕ್ಷದಷ್ಟು ಜನರಲ್ಲಿ ಹೊಸದಾಗಿ ಕಂಡುಬರುತ್ತದೆ. ಭಾರತದಲ್ಲಿ ಪ್ರತಿ ವರ್ಷ 77.೦೦೦ದಷ್ಟು ಜನರು ಇದರಿಂದ ಮೃತಪಟ್ಟಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ಗೆ ಕಾರಣಗಳು
HPV ಅಂದರೆ Human papilloma virus ಶೇಕಡಾ 80 ರಷ್ಟು ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಿದೆ. ಬಹಳ ಬೇಗ ಮದುವೆಯಾಗುವುದು, ಜನನೇಂದ್ರಿಯ ಸ್ವಚ್ಛತೆ ಕಾಪಾಡದೇ ಇರುವುದು, ಒಂದಕ್ಕಿಂತ ಹೆಚ್ಚಿನ ಜನರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಇದಕ್ಕೆ ಕಾರಣವಾಗಿದೆ.
Human papilloma virus ಗಳಲ್ಲಿ 2೦೦ಕ್ಕು ಹೆಚ್ಚು ಪ್ರಭೇದಗಳಿದ್ದು, ಟೈಪ್ 16 ಮತ್ತು ಟೈಪ್ 18 ಕ್ಯಾನ್ಸರ್ ಅನ್ನು ಉಂಟುಮಾಡುವ ಪ್ರಭೇದಗಳಾಗಿವೆ. ಚರ್ಮ ಮತ್ತು ಜನನಾಂಗದ ಒಳ ಪದರಗಳಿಗೆ ಸೋಂಕು ತಗುಲಿ ಒಬ್ಬರಿಂದ ಒಬ್ಬರಿಗೆ ಲೈಂಗಿಕ ಕ್ರಿಯೆಯಿಂದ ಹೆಚ್ಚುತ್ತದೆ. ಇದರ ಸೋಂಕು ತಗುಲಿದ ನಂತರ ವ್ಯಕ್ತಿಗೆ ಯಾವುದೇ ರೀತಿಯಾದ ರೋಗಲಕ್ಷಣಗಳು ಕಂಡುಬರುವುದಿಲ್ಲ. ಇವು ವಾರ್ಟ್ಸ್ ಗಳು ಅಥವಾ ಗರ್ಭಕಂಠದ ಕ್ಯಾನ್ಸರ್ ಅನ್ನು ಉಂಟು ಮಾಡಬಹುದಾಗಿದೆ.
ರೋಗ ಲಕ್ಷಣಗಳು
ಇದು 47ರಿಂದ 56ನೇ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. HPV ಸೋಂಕಿನ 10 ವರ್ಷದ ನಂತರ ರೋಗಲಕ್ಷಣಗಳು ಕಂಡು ಬರಬಹುದು. ಗರ್ಭಕಂಠದ ಇನ್ಫೆಕ್ಷನ್, ಬಿಳಿ ಮುಟ್ಟು ಹೋಗುವುದು, ಸಂಭೋಗದ ನಂತರ ರಕ್ತಸ್ರಾವವಾಗುವುದು ಮುಟ್ಟಿನ ಮಧ್ಯದಲ್ಲೂ ಕೆಂಪು ಕಾಣಿಸಿಕೊಳ್ಳುವುದು, ಋತುಚಕ್ರ ನಿಂತಿದ್ದರೂ ಮತ್ತೆ ರಕ್ತಸ್ರಾವ ಅಥವಾ ಬಿಳಿ ಮುಟ್ಟು ಆಗುವುದು ರೋಗದ ಪ್ರಮುಖ ಲಕ್ಷಣವಾಗಿದೆ.
ರೋಗ ಪರಿಶೀಲನೆ
HPVಯಿಂದ ಗರ್ಭಕಂಠವು ಸೋಂಕುಗೊಂಡು ನಂತರ ಸುಮಾರು 10 ವರ್ಷದವರೆಗೆ ಇದು ಕ್ಯಾನ್ಸರ್ ಆಗುವುದಿಲ್ಲ. ಈ ಸಮಯದಲ್ಲಿ pap smear ಎಂಬ ಪರೀಕ್ಷೆಗೆ ಒಳಪಟ್ಟರೆ ಕ್ಯಾನ್ಸರ್ ಆಗಿ ಮಾರ್ಪಡುವ ಮೊದಲೇ ಕಂಡುಹಿಡಿಯಬಹುದು. ಇಂತಹ ಸ್ಥಿತಿಯಿಂದ ಶೇಕಡ 100ರಷ್ಟು ಗುಣಪಡಿಸಬಹುದಾಗಿದೆ. pap smear ಎನ್ನುವುದು ಹೊರರೋಗಿ ವಿಭಾಗದಲ್ಲೇ ಮಾಡಲಾಗುವ ಒಂದು ಸರಳ ಪರೀಕ್ಷೆಯಾಗಿದೆ. ಇದರ ವೆಚ್ಚವು ಕೇವಲ 500ರಿಂದ1000 ರೂಪಾಯಿ ಒಳಗೆ ಇದ್ದು, ಪ್ರತಿ ಮಹಿಳೆಯರು 35 ವರ್ಷ ದಾಟಿದ ನಂತರ ಪ್ರತಿ ವರ್ಷವೂ ಮಾಡಿಸತಕ್ಕದ್ದು. ಗರ್ಭಕಂಠದಿಂದ ಕೆಲವು ಜೀವಕೋಶಗಳನ್ನು ತೆಗೆದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆಗೆ ಒಳಪಡಿಸುತ್ತಾರೆ. ಇದರಲ್ಲಿ pre-cancerous ಅಥವಾ cancerous ಜೀವಕೋಶಗಳು ಕಂಡುಬಂದಲ್ಲಿ ಗರ್ಭಕಂಠದ ತುಣುಕನ್ನು ತೆಗೆದು ಪರೀಕ್ಷೆಗೆ ಒಳಪಡಿಸುತ್ತಾರೆ.
HPV ವ್ಯಾಕ್ಸಿನ್
ಕಳೆದ ಹತ್ತು ವರ್ಷಗಳಲ್ಲಿ ಈ HPV ಸೋಂಕಿನ ಲಸಿಕೆಯ ಮೇಲೆ ಬಹಳಷ್ಟು ಸಂಶೋಧನೆಗಳಾಗಿ, ಮಾರುಕಟ್ಟೆಯಲ್ಲಿ ಲಭ್ಯವಿದೆ. 9ರಿಂದ15 ವರ್ಷದವರೆಗೆ ಎರಡು ಲಸಿಕೆ, 15 ವರ್ಷ ಮೇಲ್ಪಟ್ಟವರಿಗೆ ಮೂರು ಲಸಿಕೆಯನ್ನು ಹಾಕಲಾಗುತ್ತದೆ. ಯಾವ ಹೆಣ್ಣು ಮಕ್ಕಳು ಲಸಿಕೆಯನ್ನು ತೆಗೆದುಕೊಳ್ಳುತ್ತಾರೋ ಅವರಿಗೂ 35 ವರ್ಷ ವಯಸ್ಸಿನ ನಂತರ pap smear ಅನ್ನೂ ಮಾಡಿಸುವುದು ಉತ್ತಮ. ಲಸಿಕೆ ತೆಗೆದುಕೊಂಡರೂ pap smear ಅನ್ನು ತಪ್ಪಿಸುವಂತಿಲ್ಲ.
WHO 90-70-90 rule
ವಿಶ್ವಸಂಸ್ಥೆಯು 2030ರ ಹೊತ್ತಿಗೆ 90 70 90 rule ಅನ್ನು ಹಾಕಿಕೊಂಡಿದೆ. ಅಂದರೆ ಶೇಕಡ 90ರಷ್ಟು 15 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ HPV ಲಸಿಕೆಯನ್ನು ಹಾಕಿಸುವುದು, 70ರಷ್ಟು ಮಹಿಳೆಯರಿಗೆ pap smear ಮೂಲಕ cancer screening ಮಾಡುವುದು. ಈಗಾಗಲೇ ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿರುವ 90 ಮಹಿಳೆಯರಿಗೆ ಚಿಕಿತ್ಸೆಯನ್ನು ನೀಡುವುದು ವಿಶ್ವಸಂಸ್ಥೆಯ ಧ್ಯೇಯವಾಗಿದೆ. ಭಾರತವನ್ನು ಗರ್ಭಕಂಠದ ಕ್ಯಾನ್ಸರ್ ಮುಕ್ತ ರಾಷ್ಟ್ರವಾಗಲೂ ನಾವೆಲ್ಲ ಸಹಕರಿಸಬೇಕಿದೆ.








