ಸ್ತನ ಕ್ಯಾನ್ಸರ್ ಹೇಗೆ ಬರುತ್ತೆ..? ಚಿಕಿತ್ಸೆ ಏನು?
– ಸ್ತನದ ಕ್ಯಾನ್ಸರ್ ಗೆ ನಿಯಮಿತವಾಗಿ ಪರೀಕ್ಷೆಯೇ ಪರಿಹಾರ
– ಅರೋಗ್ಯ ಕಾಳಜಿ ಮಾಡಲೇಬೇಕು
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಪ್ರಕಟಗೊಂಡಿದ್ದ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಲೇಖನದ ಎರಡನೇ ಭಾಗವಾಗಿ ಇದನ್ನು ಹಂಚಿಕೊಳ್ಳಲಾಗಿದೆ. ಈ ಲೇಖನದಲ್ಲಿ ಸ್ತನದ ಕ್ಯಾನ್ಸರ್ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಲೇಖನ: ಡಾ.ನಿವೇದಿತಾ ಹೆಗಡೆ
ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞರು
ಅನುರಾಧ ನರ್ಸಿಂಗ್ ಹೋಂ, ತೀರ್ಥಹಳ್ಳಿ
ಪ್ರತಿ ವರ್ಷ ಸುಮಾರು ಎರಡು ಲಕ್ಷದಷ್ಟು ಮಹಿಳೆಯರು ಸ್ತನದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ. ಸುಮಾರು 30 ರಿಂದ 50 ವರ್ಷದ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
Risk factors (ಅಪಾಯಕಾರಿ ಅಂಶಗಳು)
ಜೀವನಶೈಲಿಯಲ್ಲಿ ಬದಲಾವಣೆ, ಬೊಜ್ಜುತನ, ಅಪೌಷ್ಟಿಕ ಆಹಾರ, ಮದ್ಯಪಾನ ಇವುಗಳಿಗೆ ಕಾರಣವಾಗಿರಬಹುದು. ಅಷ್ಟೇ ಅಲ್ಲದೆ ಕುಟುಂಬದಲ್ಲಿರುವ ಅನುವಂಶಿಕತೆಯಿಂದಲೂ ಇದು ಬರಬಹುದು. ಸ್ತನಪಾನ ಮಾಡದಿರುವುದು, ತಡವಾಗಿ ಮಕ್ಕಳಾಗುವುದು ಸ್ತನದ ಕ್ಯಾನ್ಸರ್ ಗೆ ಕಾರಣ. ಇದು High risk ಎಂದು ಪರಿಗಣಿಸಲ್ಪಡುತ್ತದೆ.
ರೋಗ ಪರಿಶೀಲನೆ
• ಕ್ರಮವಾದ, ನಿಯಮಿತವಾದ ರೋಗ ಪರಿಶೀಲನೆಯ ಮೂಲಕ ಇದನ್ನು ತಡೆಗಟ್ಟಬಹುದು. ಮತ್ತು ಸರಿಯಾದ ಚಿಕಿತ್ಸೆಯನ್ನು ಕೊಡಬಹುದು.
• ಕುಟುಂಬದಲ್ಲಿ ಸ್ತನದ ಕ್ಯಾನ್ಸರ್ ನ ರೋಗಿಗಳಿದ್ದರೆ, ಇತರ ರಕ್ತ ಸಂಬಂಧಿ ಮಹಿಳೆಯರು mammography ಯನ್ನು ನಿಯಮಿತ ಕಾಲಕ್ಕೆ ಮಾಡಿಸಬೇಕಾಗುತ್ತದೆ.
• ತಿಂಗಳಿಗೊಮ್ಮೆಯಾದರೂ ಪ್ರತಿ ಮಹಿಳೆಯರು ಸ್ತನದ ಪರೀಕ್ಷೆಯನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ಗಂಟು ಅಥವಾ ಚರ್ಮದಲ್ಲಿ ಬದಲಾವಣೆ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡತಕ್ಕದ್ದು.
ರೋಗಲಕ್ಷಣಗಳು
ಸ್ತನದಲ್ಲಿ ಗಂಟು ಕಾಣಿಸಿಕೊಳ್ಳುವುದು ಅಥವಾ ಕಂಕುಳಿನಲ್ಲಿ ಗಂಟು, ಕಿತ್ತಳೆ ಹಣ್ಣಿನ ಸಿಪ್ಪೆಯ ರೀತಿ ಸ್ತನದ ಚರ್ಮ ಬದಲಾಗುವುದು, ಮೊಲೆ ತೊಟ್ಟಿನಿಂದ ರಕ್ತಸ್ರಾವ, ಸ್ತನದ ಗಾತ್ರದಲ್ಲಿ/ಆಕಾರದಲ್ಲಿ ಹಠಾತ್ ಬದಲಾವಣೆ, ಸ್ತನದ ಮೇಲೆ ಡಿಂಪಲ್ ಬೀಳುವುದು ಇತ್ಯಾದಿ.
ಬಹಳಷ್ಟು ಮಂದಿ ಸಂಕೋಚದಿಂದ ಈ ತೊಂದರೆಗಳಿಗೆ ವೈದ್ಯರನ್ನು ಸಂಪರ್ಕಿಸುವುದಿಲ್ಲ. ಇದೇ ಕಾರಣದಿಂದ ರೋಗವು ಉಲ್ಬಣಗೊಂಡು ಚಿಕಿತ್ಸೆಯು ಕಷ್ಟವಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಮೊದಲನೇ ಹಂತದಲ್ಲೇ ಪರಿಶೀಲಿಸಿ ಚಿಕಿತ್ಸೆ ನೀಡಿದರೆ, ಶೇಕಡ 80 ರಿಂದ 90 ರಷ್ಟು ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಇದರ ಬದಲು ರೋಗ ಪರಿಶೀಲನೆಗೆ ತಡವಾಗಿ ಬಂದರೆ ಅಂದರೆ ಸ್ತನದ ಕ್ಯಾನ್ಸರ್ ರೋಗಿಗಳು ರೋಗವು ನಾಲ್ಕನೇ ಹಂತದಲ್ಲಿರುವಾಗ ಚಿಕಿತ್ಸೆ ಪಡೆದುಕೊಂಡರೆ ಬದುಕುಳಿಯುವ ಪ್ರಮಾಣ ಕಡಿಮೆಯಾಗುತ್ತದೆ.
ಚಿಕಿತ್ಸೆ
ಸ್ತನದ ಕ್ಯಾನ್ಸರ್ ಯಾವ ಹಂತದಲ್ಲಿದೆ ಎನ್ನುವುದರ ಮೇಲೆ ಮೊದಲು ಯಾವ ಚಿಕಿತ್ಸೆಯನ್ನು ಕೊಡಬೇಕು ಅನ್ನುವುದನ್ನು ನಿರ್ಧರಿಸುತ್ತಾರೆ. ಸ್ತನದ ಗಂಟು ಇದ್ದಲ್ಲಿ ಅದರ ತುಣುಕನ್ನು ತೆಗೆದು ಪರೀಕ್ಷೆಗೆ ಒಳಪಡಿಸುತ್ತಾರೆ. ಇದರಿಂದ ಯಾವ ರೀತಿಯ ಸ್ತನ ಕ್ಯಾನ್ಸರ್ ಎಂದು ನಿಗದಿಪಡಿಸಿಕೊಳ್ಳುತ್ತಾರೆ. ಆಪರೇಷನ್, ರೇಡಿಯೋಥೆರಫಿ ಮತ್ತು ಕಿಮೋಥೆರಫಿ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ.
BRCA ಜೀನ್
BRCA ಜೀನ್ ಅನುವಂಶಿಕವಾಗಿ ಬರುವಂತಹ ಜೀನ್. ಈ ಜೀನ್ ನಲ್ಲಿ mentation ಆದರೆ ಸ್ತನದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಮಹಿಳೆಯರು ತಮ್ಮ ಗರ್ಭಧಾರಣೆಯು ಮುಗಿದ ನಂತರ ಸ್ತನದ ಮತ್ತು ಅಂಡಾಶಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ.
ಪುರುಷರಲ್ಲಿ ಸ್ತನದ ಕ್ಯಾನ್ಸರ್
ಇದು ಮಹಿಳೆಯರಲ್ಲಿ ಮಾತ್ರ ಬರುವ ಕಾಯಿಲೆ ಎಂದು ಪುರುಷರು ಕಡೆಗಣಿಸುವಂತಿಲ್ಲ. ಅತಿ ವಿರಳವಾದರೂ ಇದು ಪುರುಷರಲ್ಲಿ ಕಾಣಬಹುದಾದ ತೊಂದರೆಯಾಗಿದೆ.
ಸಾಮಾಜಿಕ ಬದಲಾವಣೆ
ನಮ್ಮ ಆರೋಗ್ಯಕ್ಕೆ ನಾವೇ ಜವಾಬ್ದಾರರು. ಹಾಗಾಗಿ ಸುಲಭದಲ್ಲಿ ಕಂಡುಹಿಡಿಯಬಹುದಾದ ಸ್ತನದ ಕ್ಯಾನ್ಸರ್ ಗೆ ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೂ ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಭೇಟಿ ಮಾಡಬೇಕು.








