ಮಾಜಿ ಶಾಸಕನ ಅಳಿಯನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ಆರೋಪ
* ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅಳಿಯ ಸಂದೇಶ್ ಕುಮಾರ್
* ರಾತ್ರೋರಾತ್ರಿ ಠಾಣೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
NAMMMUR EXPRESS NEWS
ಕಡೂರು: ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಅಳಿಯ ಸಂದೇಶ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಮತ್ತು ಅವನ ಸಂಗಡಿಗರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
* ಕಾರು ಓವರ್ಟೇಕ್ ವಿಚಾರಕ್ಕೆ ಹಲ್ಲೆ ಎಂಬ ಆರೋಪ
ಈ ಹಲ್ಲೆಯು ಕಾರು ಓವರ್ಟೇಕ್ ವಿಚಾರಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ. ಸಂದೇಶ್ ಕುಮಾರ್ ಮತ್ತು ಸಂತೋಷ್ ನಡುವೆ ಗಲಾಟೆ ಉಂಟಾಗಿ ಹಲ್ಲೆಗೆ ದಾರಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಡೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಸುದ್ದಿ ಹರಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಮಧ್ಯರಾತ್ರಿ ಕಡೂರು ಪೊಲೀಸ್ ಠಾಣೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು.
* ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಆಕ್ರೋಶ
ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಠಾಣೆ ಬಳಿ ಘೋಷಣೆಗಳನ್ನು ಕೂಗಿ ಬಿಜೆಪಿ ನಾಯಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾತ್ರೋರಾತ್ರಿ ನಡೆದ ಈ ಪ್ರತಿಭಟನೆಯಿಂದ ಕಡೂರು ಪಟ್ಟಣದಲ್ಲಿ ಉದ್ವಿಗ್ನತೆ ಉಂಟಾಯಿತು.
* 24 ಗಂಟೆಗಳ ಒಳಗೆ ಬಂಧಿಸುವುದಾಗಿ ಎಸ್ಪಿ ಭರವಸೆ
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಚಿಕ್ಕಮಗಳೂರು ಎಸ್ಪಿ ವಿಕ್ರಂ ಆಮಟೆ ಕಾರ್ಯಕರ್ತರನ್ನು ಮನವೊಲಿಸಲು ಯತ್ನಿಸಿದರು. 24 ಗಂಟೆಗಳ ಒಳಗೆ ಹಲ್ಲೆಕೋರರನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಈ ಭರವಸೆ ಬಳಿಕ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟು ಹಿಂದಿರುಗಿದರು.
ಬೆಳ್ಳಿ ಪ್ರಕಾಶ್ ಬಿಜೆಪಿ ಹಿರಿಯ ನಾಯಕರಾಗಿದ್ದು, ಕಡೂರು ಕ್ಷೇತ್ರದಲ್ಲಿ ಬಲಿಷ್ಠ ಪ್ರಭಾವ ಹೊಂದಿದ್ದಾರೆ. ಅವರ ಅಳಿಯನ ಮೇಲೆ ನಡೆದ ಹಲ್ಲೆ ರಾಜಕೀಯ ದ್ವೇಷದಿಂದಲೇ ಎಂಬ ಆರೋಪ ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂತೋಷ್ ಮತ್ತು ಸಂಗಡಿಗರನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯ ಸಿಸಿಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ.








