ಕರಾವಳಿ ಟಾಪ್ ನ್ಯೂಸ್
* ಪುತ್ತೂರು: ಅಕ್ರಮ ಗೋಸಾಗಾಟ; ಆರೋಪಿಯ ಕಾಲಿಗೆ ಗುಂಡು
* ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ವಂಚನೆ
* ಸುಳ್ಯ: ಆಟೋ ಚಾಲಕನ ಅನುಮಾನಾಸ್ಪದ ಸಾವು
* ಕಾರ್ಕಳ: ನಕಲಿ ಚಿನ್ನ ಅಡವಿಟ್ಟು ಸಾಲ: ಕೇಸ್
* ಬ್ರಹ್ಮಾವರ: ಬೈಕ್ ಗೆ ಅಡ್ಡ ಬಂದ ಚಿರತೆ
* ಬೈಂದೂರು: ಆಟೋಗೆ ಢಿಕ್ಕಿ ಹೊಡೆದ ಕಾರ್; ಹಲವರಿಗೆ ಗಾಯ
* ಕುಮಟಾ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ
* ಅಂಕೋಲಾ: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ
* ಕಾಸರಗೋಡು: 12 ವರ್ಷಗಳಿಂದ ನಾಪತ್ತೆ: ಆರೋಪಿ ಬಂಧನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳಲ್ಲಿ ಓರ್ವ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಮತ್ತೊಬ್ಬ ಆರೋಪಿ ಪರಾರಿಯಾದ ಘಟನೆ ನಡೆದಿದೆ.ಈಚರ್ ವಾಹನದಲ್ಲಿ ಹತ್ತು ಜಾನುವಾರಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಪೊಲೀಸರನ್ನು ನಿರ್ಲಕ್ಷಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಈಚರ್ ಅನ್ನು ಹತ್ತು ಕಿಲೋಮೀಟರ್ ದೂರದವರೆಗೆ ಬೆನ್ನಟ್ಟಿದ್ದು, ವಾಹನವನ್ನು ನಿಧಾನಗತಿಯಲ್ಲಿ ಚಲಿಸಿದ ಚಾಲಕ, ಪೊಲೀಸರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ. ಆಗ ಪಿಎಸ್ಐ ಅವರು ಎರಡು ಗುಂಡುಗಳನ್ನು ಹಾರಿಸಿದ್ದು, ಒಂದು ಈಚರ್ ವಾಹನಕ್ಕೆ ತಗುಲಿದ್ದು, ಮತ್ತೊಂದು ವಾಹನದ ಚಾಲಕನಾದ ಆರೋಪಿಯ ಕಾಲಿಗೆ ತಗುಲಿದೆ. ಆರೋಪಿಯನ್ನು ಕಾಸರಗೋಡು ಮೂಲದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಪರಾರಿಯಾದ ಆರೋಪಿ ಯಾರು ಎನ್ನುವುದರ ಕುರಿತು ಮಾಹಿತಿ ಲಭಿಸಿಲ್ಲ. ಗಾಯಗೊಂಡ ಅಬ್ದುಲ್ಲಾನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಬ್ದುಲ್ಲಾನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನುವ ಸಂಗತಿ ತಿಳಿದುಬಂದಿದೆ.
* ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ವಂಚನೆ
ಮಂಗಳೂರು: ಅಪರಿಚಿತರು ಮಹಿಳೆಯೊಬ್ಬರಿಗೆ ಕರೆ ಮಾಡಿ, 42 ಲಕ್ಷ ರೂಪಾಯಿಯಷ್ಟು ಹಣವನ್ನು ಆನ್ ಲೈನ್ ಮೂಲಕ ದೋಚಿದ ಘಟನೆ ನಡೆದಿದೆ. ಅಕ್ಟೋಬರ್ 7ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತರು, ಮುಂಬೈನ ಕೊಲಾಬ ಪೊಲೀಸ್ ಠಾಣೆಯಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ವೊಂದನ್ನು ಖರೀದಿಸಲಾಗಿದೆ, ಅದಕ್ಕೆ ನಿಮ್ಮ ದೃಢೀಕರಣ ಪತ್ರ ಬೇಕಿದೆ, ಮುಂಬೈಗೆ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮಹಿಳೆಯು ಮುಂಬೈಗೆ ಬರಲು ನಿರಾಕರಿಸಿದ್ದರಿಂದ, ಅಪರಿಚಿತರು ಪತ್ರವೊಂದನ್ನು ಬರೆದು ವಾಟ್ಸಾಪ್ ಮೂಲಕ ಕಳುಹಿಸಿ ಎಂದಿದ್ದಾರೆ. ಬಳಿಕ ವಾಟ್ಸಾಪ್ ಕರೆ ಮಾಡಿ, ಸಿಬಿಐ ಅಧಿಕಾರಿ, ಆರ್ಬಿಐ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಕುರಿತು ಪ್ರಸ್ತಾಪಿಸಿ, ಮಹಿಳೆಯ ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ನಿಜವೆಂದು ನಂಬಿದ ಮಹಿಳೆಯು ಅಕ್ಟೋಬರ್ 8 ರಿಂದ 17ರ ವರೆಗೆ ಹಂತಹಂತವಾಗಿ ಅಪರಿಚಿತರಿಗೆ ಹಣವನ್ನು ವರ್ಗಾಯಿಸಿದ್ದಾರೆ. ಆಗಲೇ 42 ಲಕ್ಷದಷ್ಟು ಹಣ ವರ್ಗಾವಣೆಯಾಗಿತ್ತು. ಅಪರಿಚಿತರು ಮತ್ತೆ ಹಣದ ಬೇಡಿಕೆ ಇಟ್ಟಾಗ, ಅನುಮಾನಗೊಂಡ ಮಹಿಳೆಯು ತನ್ನ ಮಕ್ಕಳು ಮತ್ತು ಸಹೋದರಿಯ ಬಳಿ ವಿಚಾರಿಸಿದ್ದಾರೆ. ಆಗ ತಾನು ಮೋಸ ಹೋಗಿರುವ ಕುರಿತು ಮಹಿಳೆಗೆ ಅರಿವಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ತನ್ನಿಂದ ಆನ್ ಲೈನ್ ಮೂಲಕ ಹಣವನ್ನು ದೋಚಿದ್ದಾರೆ ಎಂದು ಮಹಿಳೆಯು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
* ಸುಳ್ಯ: ಆಟೋ ಚಾಲಕನ ಅನುಮಾನಾಸ್ಪದ ಸಾವು
ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ ಬೆಟ್ಟಂಪಾಡಿಯ ಆಟೋ ಚಾಲಕ ಜಬ್ಬಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಕುಟುಂಬಸ್ಥರು ಸೂಕ್ತ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಪಶ್ಚಿಮ ವಲಯದ ಐಜಿಪಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಜಬ್ಬಾರ್ ಕುಟುಂಬದ ಸದಸ್ಯರು ಸೂಕ್ತ ತನಿಖೆಯ ಮೂಲಕ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಎಂದು ಮನವಿಯನ್ನು ಸಲ್ಲಿಸಿದರು.
* ಕಾರ್ಕಳ: ನಕಲಿ ಚಿನ್ನ ಅಡವಿಟ್ಟು ಸಾಲ.
ಕಾರ್ಕಳ: ನಾಗರಾಜ್ ಹಾಗೂ ರೇಣುಕಾ ಎನ್ನುವ ದಂಪತಿಗಳು ನಕಲಿ ಚಿನ್ನವನ್ನು ಅಡವಿಟ್ಟು, ಕಾರ್ಕಳದ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ವಂಚಿಸಿದ ಘಟನೆ ನಡೆದಿದೆ. ನಾಗರಾಜ್ ಮತ್ತು ರೇಣುಕಾ ಕಳೆದ ವರ್ಷ ಅಕ್ಟೋಬರ್ 24 ರಿಂದ, 2025ರ ಸೆಪ್ಟೆಂಬರ್ 30ರವರೆಗೆ ಹಂತಹಂತವಾಗಿ ತಮ್ಮ ಬಳಿಯಿದ್ದ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಸಾಲ ಪಡೆಯುತ್ತಾ ಬಂದಿದ್ದರು. ಆಗ ಬ್ಯಾಂಕಿನ ಅಧಿಕೃತ ಚಿನ್ನ ಪರೀಕ್ಷಕರಾದ ಸತೀಶ್ ಆಚಾರ್ಯ ಅವರ ಬಳಿ ನಾಗರಾಜ್ ಮತ್ತು ರೇಣುಕಾ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದು ಅಸಲಿ ಎನ್ನುವುದು ದೃಢಪಟ್ಟಿತ್ತು. ಹೀಗಾಗಿ ಅವರಿಗೆ ಬ್ಯಾಂಕಿನವರು ಚಿನ್ನಾಭರಣಗಳ ಮೇಲೆ ಸಾಲವನ್ನು ನೀಡಿದ್ದರು. ಆಗ ನಾಗರಾಜ್ ತಮ್ಮ ಸಾಲದ ಖಾತೆಯಿಂದ 5.26 ಲಕ್ಷ ಮತ್ತು ರೇಣುಕಾ ತಮ್ಮ ಚಿನ್ನಾಭರಣ ಅಡವಿಟ್ಟು 5.32 ಲಕ್ಷದಷ್ಟು ಹಣವನ್ನು ಸಾಲ ಪಡೆದಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಸ್ವಲ್ಪವೂ ಅನುಮಾನ ಬಾರದ ರೀತಿಯಲ್ಲಿ ದಂಪತಿಗಳು 10.58ಲಕ್ಷದಷ್ಟು ಹಣವನ್ನು ಸಾಲ ಮಾಡಿದ್ದರು. ಅಕ್ಟೋಬರ್ 9ರಂದು ರೇಣುಕಾ ಬ್ಯಾಂಕಿಗೆ ಬಂದು ತನ್ನ ಗಂಡ ನಾಗರಾಜ್ ಅವರು ಅಡವಿರಿಸಿದ ಚಿನ್ನಾಭರಣವನ್ನು ಮತ್ತೆ ಅಡವಿರಿಸುತ್ತೇನೆ, ಪುನಃ ನನಗೆ ಅದರ ಆಧಾರದ ಮೇಲೆ ಒಂದು ಲಕ್ಷ ಹಣವನ್ನು ಸಾಲವಾಗಿ ನೀಡಿ ಎಂದು ಕೇಳಿದ್ದರು. ಪದೇ ಪದೇ ಚಿನ್ನಾಭರಣ ಅಡವಿರಿಸಿ ಸಾಲವನ್ನು ಪಡೆಯುತ್ತಿರುವುದನ್ನು ಕಂಡು, ಅನುಮಾನಗೊಂಡ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಆದ ಲಕ್ಷ್ಮಣ್ ಶೇಟ್ ಅವರು, ದಂಪತಿಗಳು ಅಡವಿರಿಸಿದ 19276 ಸಂಖ್ಯೆಯ ಚಿನ್ನಾಭರಣಗಳನ್ನು ಮರುಪರಿಶೀಲಿಸಲು ಸತೀಶ್ ಆಚಾರ್ಯ ಅವರಿಗೆ ತಿಳಿಸಿದಾಗ, ಚಿನ್ನದ ಎರಡು ಗುಂಡುಗಳನ್ನು ಕರಗಿಸಿ ಭಾರತ್ ಟೆಸ್ಟಿಂಗ್ ಸೆಂಟರ್ ನಲ್ಲಿ ಪರೀಕ್ಷಿಸಿದಾಗ ಅದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಅದೇ ರೀತಿ ನಾಗರಾಜ್ ರೇಣುಕಾ ಅಡವಿರಿಸಿದ ಎಲ್ಲಾ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎನ್ನುವುದು ದೃಢಪಟ್ಟಿದೆ. ಸತೀಶ್ ಆಚಾರ್ಯ ಕೂಡ ದಂಪತಿಗಳೊಂದಿಗೆ ಸೇರಿ ಬ್ಯಾಂಕ್ ಗೆ ವಂಚಿಸಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾಗರಾಜ್, ರೇಣುಕಾ ಅವರೊಂದಿಗೆ ಸತೀಶ್ ಆಚಾರ್ಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬ್ರಹ್ಮಾವರ: ಬೈಕ್ ಗೆ ಅಡ್ಡ ಬಂದ ಚಿರತೆ
ಬ್ರಹ್ಮಾವರ: ಭಾಸ್ಕರ್ ಶೆಟ್ಟಿ ಎನ್ನುವವರು ಬೈಕ್ ನಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಅಡ್ಡ ಬಂದ ಘಟನೆ, ಕಳೆದೆರಡು ದಿನಗಳ ಹಿಂದೆ ನಾಲ್ಕೂರು ಗ್ರಾಮದ ನಂಚಾರಿನಲ್ಲಿ ನಡೆದಿದೆ. ಚಿರತೆ ಅಡ್ಡ ಬಂದಿದುದರಿಂದ ಭಾಸ್ಕರ್ ಶೆಟ್ಟಿ ಅವರಿಗೆ ಬೈಕ್ ನ ಮೇಲಿನ ನಿಯಂತ್ರಣ ತಪ್ಪಿ, ಚಿರತೆಗೆ ಢಿಕ್ಕಿ ಹೊಡೆದು, ಪಲ್ಟಿ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ಚಿರತೆ ಸಾವನ್ನಪ್ಪಿದ್ದು, ಭಾಸ್ಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಭಾಸ್ಕರ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕಳುಹಿಸಿದರು. ಸ್ಥಳಕ್ಕೆ ಆಗಮಿಸಿದ ಹೆಬ್ರಿ ಅರಣ್ಯ ಇಲಾಖೆಯವರು, ಮೃತಪಟ್ಟ ಚಿರತೆಯನ್ನು ಪರಿಶೀಲಿಸಿದರು. ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬೈಂದೂರು: ಆಟೋಗೆ ಢಿಕ್ಕಿ ಹೊಡೆದ ಕಾರ್; ಹಲವರಿಗೆ ಗಾಯ
ಬೈಂದೂರು: ಕುಂದಾಪುರದ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಕಾರೊಂದು ಆಟೋಗೆ ಢಿಕ್ಕಿ ಹೊಡೆದ ಘಟನೆ, ಕಳೆದೆರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ನಾಯಕಕಟ್ಟೆ ಫ್ಲೈ ಓವರ್ ಬಳಿ ನಡೆದಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಕಾರು, ಮುಂದೆ ಹೋಗುತ್ತಿದ್ದ ಆಟೋಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಕಾರು ಮತ್ತು ಆಟೋ ಪಲ್ಟಿ ಹೊಡೆದಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮರ್ಲಿ, ಸವಿತಾ ಖಾರ್ವಿ, ಯಶೋಧಾ, ಶ್ರದ್ಧಾ, ಮಕ್ಕಳಾದ ಹರ್ಷಿತಾ, ರಿಷಾನ್ ಮತ್ತು ಆಟೋ ಚಾಲಕರಾದ ಜಲಂದರ ಅವರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಮಟಾ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ
ಕುಮಟಾ: ಬೆಂಗಳೂರಿನ ನೌಕರರ ಸಮಾಜದಿಂದ 9 ಜನರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಈಜಾಡಲೆಂದು ಸಮುದ್ರಕ್ಕೆ ಇಳಿದ ಇಬ್ಬರು ಸುಳಿಗೆ ಸಿಲುಕಿದ ಘಟನೆ, ಮಂಗಳವಾರದಂದು ನಡೆದಿದೆ. ನಾಗೇಶ್ ಸುಬ್ರಹ್ಮಣ್ಯ ಮತ್ತು ಗಣೇಶ್ ಕೃಷ್ಣಪ್ಪ ಎನ್ನುವವರು ಈಜಾಡಲು ಹೋಗಿ ಸುಳಿಗೆ ಸಿಲುಕಿದ್ದಾರೆ. ಇದನ್ನು ತಕ್ಷಣ ಗಮನಿಸಿದ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಾಂತ ಅವರು ತಕ್ಷಣಕ್ಕೆ ಧಾವಿಸಿ, ಇಬ್ಬರನ್ನೂ ಹರಸಾಹಸಪಟ್ಟು ದಡಕ್ಕೆ ತಂದು, ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಗಳಿಗೆ ನಾಗೇಶ್ ಸುಬ್ರಮಣ್ಯ ಮತ್ತು ಗಣೇಶ್ ಕೃಷ್ಣಪ್ಪ ಅವರೊಂದಿಗೆ ಬಂದಿದ್ದ, ನೌಕರರ ಸಮಾಜದ ಮಿತ್ರರಾದ ಶೇಖರ್ ಮತ್ತು ಗೋಕರ್ಣ ಮೈ ಸ್ಟಿಕ್ ಅಡ್ವೆಂಚರ್ಸ್ ಸಿಬ್ಬಂದಿಗಳು ಸಹಕಾರ ನೀಡಿದರು. ತಮ್ಮ ಜೀವದ ಹಂಗನ್ನು ತೊರೆದು, ಇಬ್ಬರ ಪ್ರಾಣವನ್ನು ಉಳಿಸಿದ ಜೀವರಕ್ಷಕ ಸಿಬ್ಬಂದಿಗಳ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
* ಅಂಕೋಲಾ: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ
ಅಂಕೋಲಾ: ಸಾಲಬಾಧೆ ಮತ್ತು ದೀಪಾವಳಿ ಹಬ್ಬಕ್ಕೆ ಹೆಂಡತಿ ಮನೆಗೆ ಬಾರದ ಕಾರಣ ನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾವಿಕೇರಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಶಂಕರ ಆಗರ ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ವ್ಯವಹಾರದ ಕಾರಣಕ್ಕಾಗಿ ಸಾಲ ಮಾಡಿದ್ದರು. ಆರ್ಥಿಕ ದುಸ್ಥಿತಿಯ ಬಿಸಿ ಸಂಸಾರಕ್ಕೂ ತಟ್ಟಿದ್ದು, ಇದರ ಪರಿಣಾಮವಾಗಿ ಹೆಂಡತಿಯು ತವರುಮನೆಗೆ ತೆರಳಿದ್ದಳು ಎನ್ನಲಾಗಿದೆ. ಸಾಲ ತೀರಿಸಲಾಗದೆ ಚಿಂತೆಗೊಳಗಾಗಿದ್ದ ಶಿವಾನಂದ ಶಂಕರ ಅವರು, ದೀಪಾವಳಿ ಹಬ್ಬಕ್ಕೂ ಪತ್ನಿ ಮನೆಗೆ ಹಿಂತಿರುಗಿ ಬಂದಿಲ್ಲವೆಂಬ ಕಾರಣದಿಂದ ಮಾನಸಿಕವಾಗಿ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮನೆಯ ಬಾಗಿಲು ಹಾಕಿಕೊಂಡು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರಿ ಭಾರತಿಯವರು ಹೇಳಿಕೆ ನೀಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
* ಕಾಸರಗೋಡು: 2014ರಲ್ಲಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಕಾಸರಗೋಡು ಮೂಲದ ಕೆ.ಚಂದ್ರಶೇಖರನ್ ನನ್ನು ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಪೊಲೀಸರು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.







