Categories
ಉತ್ತರ ಕನ್ನಡ ಪ್ರಶಸ್ತಿ ರಾಜ್ಯ

ಉತ್ತರ ಕನ್ನಡ ಜಿಲ್ಲಾ ಪ್ರಮುಖ ಸುದ್ದಿ

ಉತ್ತರ ಕನ್ನಡ ಜಿಲ್ಲಾ ಪ್ರಮುಖ ಸುದ್ದಿ

ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ
– ಮಲೆನಾಡಿನ ಪ್ರಸಿದ್ಧ ಕಾರಣಿಕ ಕ್ಷೇತ್ರದ ಮಹಿಮೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊನ್ನಾವರ: ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟ್ ತಂಡದ ತಾರೆ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಕ್ಷೇತ್ರಕ್ಕೆ ಆಗಮಿಸಿದ ಅವರು, ಇಲ್ಲಿನ ಆರಾಧ್ಯ ದೈವ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿಯವರನ್ನು ಖುದ್ದಾಗಿ ಭೇಟಿ ಮಾಡಿದ ರಾಹುಲ್, ಅವರೊಟ್ಟಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದುಕೊಂಡರು. ಸ್ಟಾರ್ ಕ್ರಿಕೆಟಿಗನ ಭೇಟಿ ಕ್ಷೇತ್ರದ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ನವ ದೆಹಲಿಯಲ್ಲಿ ಚಿನ್ನ ಗೆದ್ದ ಕನ್ನಡದ ಹುಡುಗ!
– ಸಮರ್ಥ್ ಜೆ ರಾವ್ ಅವರಿಗೆ ಅಖಿಲ ಭಾರತ ನಾಗರಿಕ ಸೇವಾ ಚೆಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ

ನವದೆಹಲಿ: ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಸಮರ್ಥ್ ಜೆ ರಾವ್ ಅವರು ನವದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಇತ್ತೀಚಿಗೆನಡೆದ ಅಖಿಲ ಭಾರತ ನಾಗರಿಕ ಸೇವಾ ಚೆಸ್(AICS2025-26) ಪಂದ್ಯಾವಳಿಯಲ್ಲಿ ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರು ತಂಡವನ್ನು ಪ್ರತಿನಿಧಿಸಿ ಭಾಗವಹಿಸಿದರು.

ತಂಡ ಚಾಂಪಿಯನ್‌ಶಿಪ್‌ನಲ್ಲಿ ಅವರು 6 ಸುತ್ತುಗಳಲ್ಲಿ 5.5 ಅಂಕಗಳನ್ನು ಗಳಿಸಿದರು ಮತ್ತು ಅವರ ತಂಡ 13ನೇ ಸ್ಥಾನವನ್ನು ಪಡೆದುಕೊಂಡಿತು. ವೈಯಕ್ತಿಕ ಚಾಂಪಿಯನ್‌ಶಿಪ್‌ನಲ್ಲಿ, ಸಮರ್ಥ್ 9 ಸುತ್ತುಗಳಲ್ಲಿ 7 ಅಂಕಗಳನ್ನು ಗಳಿಸಿ ಅಂತಿಮ ಶ್ರೇಯಾಂಕದಲ್ಲಿ 5ನೇ ಸ್ಥಾನವನ್ನು ಪಡೆದರು.

ಇದಲ್ಲದೆ, ಅವರು ಅತ್ಯುತ್ತಮ ವಿಶೇಷ ಸಾಮರ್ಥ್ಯವುಳ್ಳ ಆಟಗಾರನಿಗೆ ನೀಡಲಾಗುವ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಸಮರ್ಥ್ ಅವರ ಈ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಚೆಸ್ ಆಟದ ಬಗ್ಗೆ ಅವರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಈ ಯಶಸ್ಸು ಕರ್ನಾಟಕ ರಾಜ್ಯಕ್ಕೆ ಮತ್ತು ಪ್ರಾದೇಶಿಕ ಕ್ರೀಡಾ ಮಂಡಳಿ ಬೆಂಗಳೂರಿಗೆ ಹೆಮ್ಮೆ ತಂದಿದೆ.

Categories
ಉಡುಪಿ ಉತ್ತರ ಕನ್ನಡ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಸುಳ್ಯ: ಚಪ್ಪಲಿಯೊಳಗಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ!

* ಮಂಗಳೂರು: ಸಂಕಷ್ಟಕ್ಕೆ ಸಿಲುಕಿದ 31 ಮಂದಿ ಮೀನುಗಾರರ ರಕ್ಷಣೆ
* ಕುಂದಾಪುರ: ಸಾಗುವಾನಿ ಮರ ಕಳ್ಳರೀಗ ದೋಷಮುಕ್ತ
* ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
* ಮೂಡಬಿದರೆ: ಮಹಿಳೆಗೆ ಕತ್ತಿಯಿಂದ ಇರಿದ ಯುವಕ
* ಪುತ್ತೂರು: ಬಸ್ ಚಾಲಕನ ಮೇಲೆ ಹಣಕ್ಕಾಗಿ ಹಲ್ಲೆ
* ಕಡಬ: ಎರಡು ಕಾರುಗಳ ನಡುವೆ ಡಿಕ್ಕಿ
* ಬ್ರಹ್ಮಾವರ: ಸಾಲ ದೊರಕಿಸಿಕೊಡುವುದಾಗಿ ವಂಚನೆ
* ಹೊನ್ನಾವರ: ಯುವತಿ ಆತ್ಮಹತ್ಯೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮೀನುಗಾರಿಕಾ ದೋಣಿಯೊಂದು ಸ್ಟೀಯರಿಂಗ್ ಗೆ ದೋಷದ ಪರಿಣಾಮವಾಗಿ ನಿಯಂತ್ರಣ ತಪ್ಪಿ, 31 ಮಂದಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ರಕ್ಷಿಸಿದ ಘಟನೆ ನಡೆದಿದೆ. ಗೋವಾ ಮೂಲದ ಐಎಫ್ ಬಿ ಸಂತ್ ಅಂಟಾನ್ -1 ಎಂಬ ಹೆಸರಿನ ದೋಣಿಯು ಮಂಗಳೂರಿನ ಕರಾವಳಿ ಭಾಗದಿಂದ ಸುಮಾರು 185 ಕಿಲೋಮೀಟರ್ ದೂರದಲ್ಲಿ, ಸಮುದ್ರದ ನಡುವೆಯೇ 11 ದಿನಗಳಿಂದ ತೇಲಾಡುತ್ತಿತ್ತು. ಹವಾಮಾನ ವೈಪರೀತ್ಯದ ನಡುವೆಯೂ, ಐಸಿಜಿಎಸ್ ಕಸ್ತೂರ್ ಬಾ ಗಾಂಧಿ ನೌಕೆ ಹಾಗೂ ಕೊಚ್ಚಿಯಿಂದ ಕರಾವಳಿ ರಕ್ಷಣಾ ದಳದ ಡೊರ್ನಿಯರ್ ವಿಮಾನದ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರಾವಳಿ ರಕ್ಷಣಾ ದಳದ ಸಿಬ್ಬಂದಿಗಳು ಸಮುದ್ರದ ನಡುವೆ ತೇಲಾಡುತ್ತಿದ್ದ ಮೀನುಗಾರಿಕಾ ದೋಣಿಗೆ ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವನ್ನು ನೀಡಿದರು. ಈ ಮೂಲಕ ಸ್ಟೀರಿಂಗ್ ದೋಷವು ನಿವಾರಣೆಯಾಗಿ, ದೋಣಿಯನ್ನು ಹೊನ್ನಾವರದ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸುಮಾರು 31 ಜನ ಮೀನುಗಾರರು ಕೋಸ್ಟ್ ಗಾರ್ಡ್ ಅವರ ಕಾರ್ಯಾಚರಣೆಯ ನೆರವಿನಿಂದ ರಕ್ಷಣೆ ಪಡೆದುಕೊಂಡರು ಎನ್ನಲಾಗಿದೆ.

* ಕುಂದಾಪುರ: ಸಾಗುವಾನಿ ಮರ ಕಳ್ಳರೀಗ ದೋಷಮುಕ್ತ

ಕುಂದಾಪುರ: ನೇರಳೆಕಟ್ಟೆ ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ, ಸಾಗುವಾನಿ ಜಾತಿಯ ಮರಗಳನ್ನು ಕಡಿದು, ಸಾಗಾಟ ಮಾಡಿರುವ ಕುರಿತು ಕುಂದಾಪುರ ವಲಯ ಅರಣ್ಯಾಧಿಕಾರಿಗಳು ಆರೋಪಿಗಳ ವಿರುದ್ಧ ದೂರು ನೀಡಿದ್ದರು.ಆರೋಪಿಗಳಾದ ಆನಗಳ್ಳಿಯ ದಿನೇಶ್ ಗಾಣಿಗ, ಸಂತೋಷ್ ಮತ್ತು ಶಾಂತರಾಮ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗಿತ್ತು. ಕುಂದಾಪುರದ ಜೆಎಂಎಫ್ ಸಿ ನ್ಯಾಯಾಲಯವು ವಿಚಾರಣೆಯನ್ನು ನಡೆಸುವ ಸಂದರ್ಭದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಿಗಳನ್ನು ದೋಷಮುಕ್ತ ಎಂದು ಆದೇಶವನ್ನು ಹೊರಡಿಸಿದೆ.‌

* ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು

ಉಡುಪಿ: ತೆಂಗಿನಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಅಲೆವೂರು ಗ್ರಾಮದ ಪಡುಅಲೆವೂರಿನಲ್ಲಿ ನಡೆದಿದೆ. ಮನೆಯ ಬಳಿಯ ಸರ್ಕಾರಿ ಜಾಗದಲ್ಲಿದ್ದ ತೆಂಗಿನಮರವನ್ನು ಹತ್ತಿದ ಸಂದರ್ಭದಲ್ಲಿ, ಸುರೇಶ್ ಅವರು ಬಿದ್ದಿದ್ದಾರೆ. ಇದರ ಪರಿಣಾಮವಾಗಿ ತಲೆ, ಬೆನ್ನು ಮತ್ತು ಕಣ್ಣಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಸುರೇಶ್ ಅವರನ್ನು ಪರೀಕ್ಷಿಸಿದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದರು. ಬಳಿಕ ಅಲ್ಲಿಂದ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಅವರು ಸಾವನ್ನಪ್ಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುರೇಶ್ ಅವರ ಸಹೋದರಿ ಸುಜಾತ ದೇವಾಡಿಗ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.‌ ಹೇಳಿಕೆಯ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮೂಡಬಿದರೆ: ಮಹಿಳೆಗೆ ಕತ್ತಿಯಿಂದ ಇರಿದ ಯುವಕ

ಮೂಡಬಿದರೆ: ಕಳೆದೆರಡು ದಿನಗಳ ಹಿಂದೆ ಮಹಿಳೆಯೊಬ್ಬರಿಗೆ ಯುವಕನೋರ್ವ ಕತ್ತಿಯಿಂದ ಇರಿದ ಘಟನೆ, ವರ್ಣಬೆಟ್ಟುವಿನಲ್ಲಿ ನಡೆದಿದೆ. ಕೆರೆಕೋಡಿ ನಿವಾಸಿಯಾದ ಸಂಜೀವಿ ಅಥವಾ ನಯನಾ ನಾಯ್ಕ ಅವರಿಗೆ, ರಾಮ್ ಮೋಹನ ನಗರದ ನಿವಾಸಿಯಾದ ರಾಜೇಶ್ ನಾಯ್ಕ ಕತ್ತಿಯಿಂದ ಇರಿದಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಇದರ ಪರಿಣಾಮವಾಗಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ತಲೆ, ಕೈ ಮತ್ತು ಕಾಲುಗಳಿಗೆ ತೀವ್ರವಾಗಿ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಚಾರ ತಿಳಿಯುತ್ತಿದ್ದ ಹಾಗೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕರಾದ ಸಂದೇಶ್ ಪಿ.ಜಿ ಅವರು, ರಾಜೇಶ್ ನಾಯ್ಕನನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಮೂಲಕ ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭಿಸಬೇಕಿದೆ ಎನ್ನಲಾಗಿದೆ.‌

* ಪುತ್ತೂರು: ಬಸ್ ಚಾಲಕನ ಮೇಲೆ ಹಣಕ್ಕಾಗಿ ಹಲ್ಲೆ

ಪುತ್ತೂರು: ಕೊಕ್ಕಡ ಗ್ರಾಮದ ನಿವಾಸಿಯಾದ ಮ್ಯಾಕ್ಸಿಮ್ ಪಿಂಟೋ ಎನ್ನುವವರು ಬಸ್ ಚಾಲಕರಾಗಿದ್ದು, ತಮ್ಮ ಕರ್ತವ್ಯವನ್ನು ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಅವರ ಮೇಲೆ ಹಲ್ಲೆಯಾದ ಘಟನೆ ಇಳಂತಿಲ ಗ್ರಾಮದ ಅಲೆಕ್ಕಿ ಎಂಬಲ್ಲಿ ನಡೆದಿದೆ. ಬೈಕ್ ವೊಂದರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮ್ಯಾಕ್ಸಿನ್ ಅವರ ಬೈಕ್ ಗೆ ಅಡ್ಡಗಟ್ಟಿ ಹಲ್ಲೆ ನಡೆಸಿ, ಬಳಿಕ ನಾಲ್ಕು ಸಾವಿರ ರೂಪಾಯಿಯಷ್ಟು ಹಣವನ್ನು ದೋಚಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು, ಮಹಜರು ನಡೆಸುವ ಮೂಲಕ ತನಿಖೆಯನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

* ಕಡಬ: ಎರಡು ಕಾರುಗಳ ನಡುವೆ ಢಿಕ್ಕಿ

ಕಡಬ: ಬದಿಯಡ್ಕ ಕಡೆಯಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ, ಕೇರಳ ಮೂಲದ ವ್ಯಾಗನಾರ್ ಮತ್ತು ಸುಬ್ರಹ್ಮಣ್ಯದಿಂದ ಮಡಿಕೇರಿಯ ಕಡೆಗೆ ತೆರಳುತ್ತಿದ್ದ, ಚಿತ್ರದುರ್ಗ ಮೂಲದ ಕಾರುಗಳ ನಡುವೆ ಢಿಕ್ಕಿ ಸಂಭವಿಸದ ಘಟನೆ, ಭಾನುವಾರದಂದು ನಡೆದಿದೆ. ಕೇರಳ ಮೂಲದವರ ಕಾರಿನಲ್ಲಿದ್ದ ಮಗು ಮತ್ತು ಮಹಿಳೆ ಸೇರಿದಂತೆ ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿತ್ರದುರ್ಗ ಮೂಲದವರ ಕಾರಿನಲ್ಲಿದ್ದ ಓರ್ವ ಪ್ರಯಾಣಿಕನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಪರಿಶೀಲನೆಯನ್ನು ನಡೆಸಿದರು.‌

* ಬ್ರಹ್ಮಾವರ: ಯೋಜನೆ ಅಡಿಯಲ್ಲಿ ಸಾಲ ದೊರಕಿಸಿಕೊಡುವುದಾಗಿ ವಂಚನೆ

ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಅಡಿಯಲ್ಲಿ, ಸಬ್ಸಿಡಿ ಸಾಲ ಕೊಡಿಸುವುದಾಗಿ ನಂಬಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಲಪಟಾಯಿಸಿದ ಘಟನೆ, ಬ್ರಹ್ಮಾವರ ಉಡುಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಜನರು ಉಡುಪಿ ಮತ್ತು ಬ್ರಹ್ಮಾವರ ಠಾಣೆಗಳಲ್ಲಿ ದೂರು ನೀಡಿದ್ದು, ಪೊಲೀಸರು ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಂಚನೆಯ ಜಾಲದ ಕಿಂಗ್ ಪಿನ್ ಆಗಿರುವ, ಬ್ರಹ್ಮಾವರ ತಾಲ್ಲೂಕಿನ ಆಲೂರು ಗ್ರಾಮದ ಕೌಸಲ್ಯಾ ಎನ್ನುವ ಮಹಿಳೆಯನ್ನು ಬಂಧಿಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಜೊತೆಗೆ ಇನ್ನಿಬ್ಬರು ವಂಚಕರಾದ ಕೊಕ್ಕರ್ಣೆ ಮತ್ತು ಬೈಂದೂರಿನ ವ್ಯಕ್ತಿಗಳನ್ನು ಸೆರೆಹಿಡಿದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆರಾಡಿ ಗ್ರಾಮದ ಸರಿತಾ ಲೂಯಿಸ್ ಎನ್ನುವವರು ಯೋಜನೆ ಅಡಿಯಲ್ಲಿ ಸಬ್ಸಿಡಿ ಸಾಲವನ್ನು ಕೊಡಿಸುವುದಾಗಿ, ತಮ್ಮಿಂದ 80,72,000 ಮತ್ತು ತಮ್ಮ ಸಂಬಂಧಿಕರಾದ ಅಂಜಲಿನ್ ಡಿಸಿಲ್ವಾ ಅವರಿಂದ 65,೦೦,೦೦೦ ರೂಪಾಯಿಯಷ್ಟು ಹಣವನ್ನು ಲಪಟಾಯಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಕೌಸಲ್ಯಾ , ಆಕೆಯ ಪತಿ ಸಂದೇಶ್, ಪ್ರಕಾಶ್, ಆಶೀಶ್ ಶೆಟ್ಟಿ, ರಾಜೇಂದ್ರ ಬೈಂದೂರು, ಗೀತಾ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್ ಹರಿಪ್ರಸಾದ್, ನಾಗರಾಜ್ ಮತ್ತು ಭಾರತಿ ಸಿಂಗ್ ಎನ್ನುವವರು ತಮ್ಮ ತಮ್ಮ ಖಾತೆಗಳಿಗೆ ಹಂತಹಂತವಾಗಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 218/2025ರಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಸುಳ್ಯ: ಚಪ್ಪಲಿಯೊಳಗಿದ್ದ ಹಾವು ಕಚ್ಚಿ ಮಹಿಳೆ ಅಸ್ವಸ್ಥ.‌

ಸುಳ್ಯ: ಚಪ್ಪಲಿಯೊಳಗೆ ಅಡಗಿ ಕುಳಿತಿದ್ದ ಹಾವೊಂದು ಕಚ್ಚಿ, ಮಹಿಳೆಯೊಬ್ಬರು ಅಸ್ವಸ್ಥರಾದ ಘಟನೆ ಆಲೆಟ್ಟಿ ಗ್ರಾಮದ ಕೊಲ್ಚಾರಿನಲ್ಲಿ ಭಾನುವಾರದಂದು ನಡೆದಿದೆ. ಕೊಲ್ಚಾರಿನ ನಿವಾಸಿಯಾದ ವಿನುತಾ ಎನ್ನುವವರು, ಬೆಳಗಿನ ಸಮಯದಲ್ಲಿ ಮನೆಯ ಹೊರಗಡೆ ಇರಿಸಿದ್ದ ಚಪ್ಪಲಿಯನ್ನು ಹಾಕಿಕೊಳ್ಳಲು ಹೋದ ಸಂದರ್ಭದಲ್ಲಿ, ಚಪ್ಪಲಿಯ ಒಳಗಡೆ ಸೇರಿಕೊಂಡಿದ್ದ ಹಾವು ಅವರ ಕಾಲಿಗೆ ಕಚ್ಚಿದೆ. ತಕ್ಷಣ ಮನೆಯವರು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

* ಹೊನ್ನಾವರ: ಯುವತಿ ಆತ್ಮಹತ್ಯೆ

ಹೊನ್ನಾವರ: ನರ್ಸಿಂಗ್ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ, ಭಾನುವಾರದಂದು ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ನಲ್ಲಿ ನಡೆದಿದೆ. ಯಾವುದೋ ವಿಷಯವೊಂದನ್ನು ಮನಸ್ಸಿಗೆ ಹಚ್ಚಿಕೊಂಡು, ಬದುಕಿನ ಬಗ್ಗೆ ಬೇಸರಗೊಂಡು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
ಉತ್ತರ ಕನ್ನಡ ಕರಾವಳಿ ಕಾರ್ಕಳ ದಕ್ಷಿಣ ಕನ್ನಡ ಪುತ್ತೂರು ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಪುತ್ತೂರು: ಅಕ್ರಮ ಗೋಸಾಗಾಟ; ಆರೋಪಿಯ ಕಾಲಿಗೆ ಗುಂಡು
* ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ವಂಚನೆ
* ಸುಳ್ಯ: ಆಟೋ ಚಾಲಕನ ಅನುಮಾನಾಸ್ಪದ ಸಾವು
* ಕಾರ್ಕಳ: ನಕಲಿ ಚಿನ್ನ ಅಡವಿಟ್ಟು ಸಾಲ: ಕೇಸ್
* ಬ್ರಹ್ಮಾವರ: ಬೈಕ್ ಗೆ ಅಡ್ಡ ಬಂದ ಚಿರತೆ
* ಬೈಂದೂರು: ಆಟೋಗೆ ಢಿಕ್ಕಿ ಹೊಡೆದ ಕಾರ್; ಹಲವರಿಗೆ ಗಾಯ
* ಕುಮಟಾ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ
* ಅಂಕೋಲಾ: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ
* ಕಾಸರಗೋಡು: 12 ವರ್ಷಗಳಿಂದ ನಾಪತ್ತೆ: ಆರೋಪಿ ಬಂಧನ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳಲ್ಲಿ ಓರ್ವ ಪೊಲೀಸರಿಗೆ ಸೆರೆ ಸಿಕ್ಕಿದ್ದು, ಮತ್ತೊಬ್ಬ ಆರೋಪಿ ಪರಾರಿಯಾದ ಘಟನೆ ನಡೆದಿದೆ.ಈಚರ್ ವಾಹನದಲ್ಲಿ ಹತ್ತು ಜಾನುವಾರಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಚಾಲಕ ಪೊಲೀಸರನ್ನು ನಿರ್ಲಕ್ಷಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸರು ಈಚರ್ ಅನ್ನು ಹತ್ತು ಕಿಲೋಮೀಟರ್ ದೂರದವರೆಗೆ ಬೆನ್ನಟ್ಟಿದ್ದು, ವಾಹನವನ್ನು ನಿಧಾನಗತಿಯಲ್ಲಿ ಚಲಿಸಿದ ಚಾಲಕ, ಪೊಲೀಸರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ. ಆಗ ಪಿಎಸ್ಐ ಅವರು ಎರಡು ಗುಂಡುಗಳನ್ನು ಹಾರಿಸಿದ್ದು, ಒಂದು ಈಚರ್ ವಾಹನಕ್ಕೆ ತಗುಲಿದ್ದು, ಮತ್ತೊಂದು ವಾಹನದ ಚಾಲಕನಾದ ಆರೋಪಿಯ ಕಾಲಿಗೆ ತಗುಲಿದೆ. ಆರೋಪಿಯನ್ನು ಕಾಸರಗೋಡು ಮೂಲದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಪರಾರಿಯಾದ ಆರೋಪಿ ಯಾರು ಎನ್ನುವುದರ ಕುರಿತು ಮಾಹಿತಿ ಲಭಿಸಿಲ್ಲ. ಗಾಯಗೊಂಡ ಅಬ್ದುಲ್ಲಾನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಅಬ್ದುಲ್ಲಾನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಆತನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನುವ ಸಂಗತಿ ತಿಳಿದುಬಂದಿದೆ.

* ಮಂಗಳೂರು: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಮಹಿಳೆಗೆ ವಂಚನೆ

ಮಂಗಳೂರು: ಅಪರಿಚಿತರು ಮಹಿಳೆಯೊಬ್ಬರಿಗೆ ಕರೆ ಮಾಡಿ, 42 ಲಕ್ಷ ರೂಪಾಯಿಯಷ್ಟು ಹಣವನ್ನು ಆನ್ ಲೈನ್ ಮೂಲಕ ದೋಚಿದ ಘಟನೆ ನಡೆದಿದೆ.‌ ಅಕ್ಟೋಬರ್ 7ರಂದು ಮಹಿಳೆಗೆ ಕರೆ ಮಾಡಿದ ಅಪರಿಚಿತರು, ಮುಂಬೈನ ಕೊಲಾಬ ಪೊಲೀಸ್ ಠಾಣೆಯಿಂದ ಮಾತನಾಡುತ್ತಿದ್ದು, ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ವೊಂದನ್ನು ಖರೀದಿಸಲಾಗಿದೆ, ಅದಕ್ಕೆ ನಿಮ್ಮ ದೃಢೀಕರಣ ಪತ್ರ ಬೇಕಿದೆ, ಮುಂಬೈಗೆ ಬರಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಮಹಿಳೆಯು ಮುಂಬೈಗೆ ಬರಲು ನಿರಾಕರಿಸಿದ್ದರಿಂದ, ಅಪರಿಚಿತರು ಪತ್ರವೊಂದನ್ನು ಬರೆದು ವಾಟ್ಸಾಪ್ ಮೂಲಕ ಕಳುಹಿಸಿ ಎಂದಿದ್ದಾರೆ. ಬಳಿಕ ವಾಟ್ಸಾಪ್ ಕರೆ ಮಾಡಿ, ಸಿಬಿಐ ಅಧಿಕಾರಿ, ಆರ್‌ಬಿಐ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಕುರಿತು ಪ್ರಸ್ತಾಪಿಸಿ, ಮಹಿಳೆಯ ವೈಯಕ್ತಿಕ ಮತ್ತು ಬ್ಯಾಂಕ್ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ನಿಜವೆಂದು ನಂಬಿದ ಮಹಿಳೆಯು ಅಕ್ಟೋಬರ್ 8 ರಿಂದ 17ರ ವರೆಗೆ ಹಂತಹಂತವಾಗಿ ಅಪರಿಚಿತರಿಗೆ ಹಣವನ್ನು ವರ್ಗಾಯಿಸಿದ್ದಾರೆ. ಆಗಲೇ 42 ಲಕ್ಷದಷ್ಟು ಹಣ ವರ್ಗಾವಣೆಯಾಗಿತ್ತು. ಅಪರಿಚಿತರು ಮತ್ತೆ ಹಣದ ಬೇಡಿಕೆ ಇಟ್ಟಾಗ, ಅನುಮಾನಗೊಂಡ ಮಹಿಳೆಯು ತನ್ನ ಮಕ್ಕಳು ಮತ್ತು ಸಹೋದರಿಯ ಬಳಿ ವಿಚಾರಿಸಿದ್ದಾರೆ. ಆಗ ತಾನು ಮೋಸ ಹೋಗಿರುವ ಕುರಿತು ಮಹಿಳೆಗೆ ಅರಿವಾಗಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ತನ್ನಿಂದ ಆನ್ ಲೈನ್ ಮೂಲಕ ಹಣವನ್ನು ದೋಚಿದ್ದಾರೆ ಎಂದು ಮಹಿಳೆಯು ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

* ಸುಳ್ಯ: ಆಟೋ ಚಾಲಕನ ಅನುಮಾನಾಸ್ಪದ ಸಾವು

ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಅನುಮಾನಾಸ್ಪದವಾಗಿ ಸಾವಿಗೀಡಾದ ಬೆಟ್ಟಂಪಾಡಿಯ ಆಟೋ ಚಾಲಕ ಜಬ್ಬಾರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಕುಟುಂಬಸ್ಥರು ಸೂಕ್ತ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಪಶ್ಚಿಮ ವಲಯದ ಐಜಿಪಿ ಮತ್ತು ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಜಬ್ಬಾರ್ ಕುಟುಂಬದ ಸದಸ್ಯರು ಸೂಕ್ತ ತನಿಖೆಯ ಮೂಲಕ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಿ ಎಂದು ಮನವಿಯನ್ನು ಸಲ್ಲಿಸಿದರು.

* ಕಾರ್ಕಳ: ನಕಲಿ ಚಿನ್ನ ಅಡವಿಟ್ಟು ಸಾಲ.

ಕಾರ್ಕಳ: ನಾಗರಾಜ್ ಹಾಗೂ ರೇಣುಕಾ ಎನ್ನುವ ದಂಪತಿಗಳು ನಕಲಿ ಚಿನ್ನವನ್ನು ಅಡವಿಟ್ಟು, ಕಾರ್ಕಳದ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದು, ವಂಚಿಸಿದ ಘಟನೆ ನಡೆದಿದೆ. ನಾಗರಾಜ್ ಮತ್ತು ರೇಣುಕಾ ಕಳೆದ ವರ್ಷ ಅಕ್ಟೋಬರ್ 24 ರಿಂದ, 2025ರ ಸೆಪ್ಟೆಂಬರ್ 30ರವರೆಗೆ ಹಂತಹಂತವಾಗಿ ತಮ್ಮ ಬಳಿಯಿದ್ದ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಸಾಲ ಪಡೆಯುತ್ತಾ ಬಂದಿದ್ದರು.‌ ಆಗ ಬ್ಯಾಂಕಿನ ಅಧಿಕೃತ ಚಿನ್ನ ಪರೀಕ್ಷಕರಾದ ಸತೀಶ್ ಆಚಾರ್ಯ ಅವರ ಬಳಿ ನಾಗರಾಜ್ ಮತ್ತು ರೇಣುಕಾ ಅಡವಿಟ್ಟ ಚಿನ್ನವನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದು ಅಸಲಿ ಎನ್ನುವುದು ದೃಢಪಟ್ಟಿತ್ತು.‌ ಹೀಗಾಗಿ ಅವರಿಗೆ ಬ್ಯಾಂಕಿನವರು ಚಿನ್ನಾಭರಣಗಳ ಮೇಲೆ ಸಾಲವನ್ನು ನೀಡಿದ್ದರು.‌ ಆಗ ನಾಗರಾಜ್ ತಮ್ಮ ಸಾಲದ ಖಾತೆಯಿಂದ 5.26 ಲಕ್ಷ ಮತ್ತು ರೇಣುಕಾ ತಮ್ಮ ಚಿನ್ನಾಭರಣ ಅಡವಿಟ್ಟು 5.32 ಲಕ್ಷದಷ್ಟು ಹಣವನ್ನು ಸಾಲ ಪಡೆದಿದ್ದರು ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಸ್ವಲ್ಪವೂ ಅನುಮಾನ ಬಾರದ ರೀತಿಯಲ್ಲಿ ದಂಪತಿಗಳು 10.58ಲಕ್ಷದಷ್ಟು ಹಣವನ್ನು ಸಾಲ ಮಾಡಿದ್ದರು. ಅಕ್ಟೋಬರ್ 9ರಂದು ರೇಣುಕಾ ಬ್ಯಾಂಕಿಗೆ ಬಂದು ತನ್ನ ಗಂಡ ನಾಗರಾಜ್ ಅವರು ಅಡವಿರಿಸಿದ ಚಿನ್ನಾಭರಣವನ್ನು ಮತ್ತೆ ಅಡವಿರಿಸುತ್ತೇನೆ, ಪುನಃ ನನಗೆ ಅದರ ಆಧಾರದ ಮೇಲೆ ಒಂದು ಲಕ್ಷ ಹಣವನ್ನು ಸಾಲವಾಗಿ ನೀಡಿ ಎಂದು ಕೇಳಿದ್ದರು. ಪದೇ ಪದೇ ಚಿನ್ನಾಭರಣ ಅಡವಿರಿಸಿ ಸಾಲವನ್ನು ಪಡೆಯುತ್ತಿರುವುದನ್ನು ಕಂಡು, ಅನುಮಾನಗೊಂಡ ಗೋಕರ್ಣನಾಥ ಕೋ ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಆದ ಲಕ್ಷ್ಮಣ್ ಶೇಟ್ ಅವರು, ದಂಪತಿಗಳು ಅಡವಿರಿಸಿದ 19276 ಸಂಖ್ಯೆಯ ಚಿನ್ನಾಭರಣಗಳನ್ನು ಮರುಪರಿಶೀಲಿಸಲು ಸತೀಶ್ ಆಚಾರ್ಯ ಅವರಿಗೆ ತಿಳಿಸಿದಾಗ, ಚಿನ್ನದ ಎರಡು ಗುಂಡುಗಳನ್ನು ಕರಗಿಸಿ ಭಾರತ್ ಟೆಸ್ಟಿಂಗ್ ಸೆಂಟರ್ ನಲ್ಲಿ ಪರೀಕ್ಷಿಸಿದಾಗ ಅದು ನಕಲಿ ಎನ್ನುವುದು ಬೆಳಕಿಗೆ ಬಂದಿದೆ. ಅದೇ ರೀತಿ ನಾಗರಾಜ್ ರೇಣುಕಾ ಅಡವಿರಿಸಿದ ಎಲ್ಲಾ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ಎಲ್ಲವೂ ನಕಲಿ ಎನ್ನುವುದು ದೃಢಪಟ್ಟಿದೆ. ಸತೀಶ್ ಆಚಾರ್ಯ ಕೂಡ ದಂಪತಿಗಳೊಂದಿಗೆ ಸೇರಿ ಬ್ಯಾಂಕ್ ಗೆ ವಂಚಿಸಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ.‌ ಈ ಹಿನ್ನೆಲೆಯಲ್ಲಿ ನಾಗರಾಜ್, ರೇಣುಕಾ ಅವರೊಂದಿಗೆ ಸತೀಶ್ ಆಚಾರ್ಯ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬ್ರಹ್ಮಾವರ: ಬೈಕ್ ಗೆ ಅಡ್ಡ ಬಂದ ಚಿರತೆ

ಬ್ರಹ್ಮಾವರ: ಭಾಸ್ಕರ್ ಶೆಟ್ಟಿ ಎನ್ನುವವರು ಬೈಕ್ ನಲ್ಲಿ ತಮ್ಮ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಅಡ್ಡ ಬಂದ ಘಟನೆ, ಕಳೆದೆರಡು ದಿನಗಳ ಹಿಂದೆ ನಾಲ್ಕೂರು ಗ್ರಾಮದ ನಂಚಾರಿನಲ್ಲಿ ನಡೆದಿದೆ.‌ ಚಿರತೆ ಅಡ್ಡ ಬಂದಿದುದರಿಂದ ಭಾಸ್ಕರ್ ಶೆಟ್ಟಿ ಅವರಿಗೆ ಬೈಕ್ ನ ಮೇಲಿನ ನಿಯಂತ್ರಣ ತಪ್ಪಿ, ಚಿರತೆಗೆ ಢಿಕ್ಕಿ ಹೊಡೆದು, ಪಲ್ಟಿ ಹೊಡೆದಿದ್ದಾರೆ. ಇದರ ಪರಿಣಾಮವಾಗಿ ಚಿರತೆ ಸಾವನ್ನಪ್ಪಿದ್ದು, ಭಾಸ್ಕರ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಗಾಯಗೊಂಡ ಭಾಸ್ಕರ್ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕಳುಹಿಸಿದರು.‌ ಸ್ಥಳಕ್ಕೆ ಆಗಮಿಸಿದ ಹೆಬ್ರಿ ಅರಣ್ಯ ಇಲಾಖೆಯವರು, ಮೃತಪಟ್ಟ ಚಿರತೆಯನ್ನು ಪರಿಶೀಲಿಸಿದರು. ಅಪಘಾತಕ್ಕೆ ಸಂಬಂಧಿಸಿದಂತೆ ಕುಂದಾಪುರದ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೈಂದೂರು: ಆಟೋಗೆ ಢಿಕ್ಕಿ ಹೊಡೆದ ಕಾರ್; ಹಲವರಿಗೆ ಗಾಯ

ಬೈಂದೂರು: ಕುಂದಾಪುರದ ಕಡೆಯಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ಕಾರೊಂದು ಆಟೋಗೆ ಢಿಕ್ಕಿ ಹೊಡೆದ ಘಟನೆ, ಕಳೆದೆರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ನಾಯಕಕಟ್ಟೆ ಫ್ಲೈ ಓವರ್ ಬಳಿ ನಡೆದಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಕಾರು, ಮುಂದೆ ಹೋಗುತ್ತಿದ್ದ ಆಟೋಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.‌ ಇದರ ಪರಿಣಾಮವಾಗಿ ಕಾರು ಮತ್ತು ಆಟೋ ಪಲ್ಟಿ ಹೊಡೆದಿದ್ದು, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮರ್ಲಿ, ಸವಿತಾ ಖಾರ್ವಿ, ಯಶೋಧಾ, ಶ್ರದ್ಧಾ, ಮಕ್ಕಳಾದ ಹರ್ಷಿತಾ, ರಿಷಾನ್ ಮತ್ತು ಆಟೋ ಚಾಲಕರಾದ ಜಲಂದರ ಅವರು ಗಾಯಗೊಂಡಿದ್ದಾರೆ.‌ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕುಮಟಾ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರ ರಕ್ಷಣೆ

ಕುಮಟಾ: ಬೆಂಗಳೂರಿನ ನೌಕರರ ಸಮಾಜದಿಂದ 9 ಜನರು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ ಸಂದರ್ಭದಲ್ಲಿ, ಈಜಾಡಲೆಂದು ಸಮುದ್ರಕ್ಕೆ ಇಳಿದ ಇಬ್ಬರು ಸುಳಿಗೆ ಸಿಲುಕಿದ ಘಟನೆ, ಮಂಗಳವಾರದಂದು ನಡೆದಿದೆ.‌ ನಾಗೇಶ್ ಸುಬ್ರಹ್ಮಣ್ಯ ಮತ್ತು ಗಣೇಶ್ ಕೃಷ್ಣಪ್ಪ ಎನ್ನುವವರು ಈಜಾಡಲು ಹೋಗಿ ಸುಳಿಗೆ ಸಿಲುಕಿದ್ದಾರೆ.‌ ಇದನ್ನು ತಕ್ಷಣ ಗಮನಿಸಿದ ಕರ್ತವ್ಯನಿರತ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಾಂತ ಅವರು ತಕ್ಷಣಕ್ಕೆ ಧಾವಿಸಿ, ಇಬ್ಬರನ್ನೂ ಹರಸಾಹಸಪಟ್ಟು ದಡಕ್ಕೆ ತಂದು, ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.‌ ಸಿಬ್ಬಂದಿಗಳಿಗೆ ನಾಗೇಶ್ ಸುಬ್ರಮಣ್ಯ ಮತ್ತು ಗಣೇಶ್ ಕೃಷ್ಣಪ್ಪ ಅವರೊಂದಿಗೆ ಬಂದಿದ್ದ, ನೌಕರರ ಸಮಾಜದ ಮಿತ್ರರಾದ ಶೇಖರ್ ಮತ್ತು ಗೋಕರ್ಣ ಮೈ ಸ್ಟಿಕ್ ಅಡ್ವೆಂಚರ್ಸ್ ಸಿಬ್ಬಂದಿಗಳು ಸಹಕಾರ ನೀಡಿದರು. ತಮ್ಮ ಜೀವದ ಹಂಗನ್ನು ತೊರೆದು, ಇಬ್ಬರ ಪ್ರಾಣವನ್ನು ಉಳಿಸಿದ ಜೀವರಕ್ಷಕ ಸಿಬ್ಬಂದಿಗಳ ಸಾಹಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

* ಅಂಕೋಲಾ: ಸಾಲ ಬಾಧೆಯಿಂದ ಕೂಲಿ ಕಾರ್ಮಿಕ ಆತ್ಮಹತ್ಯೆ

ಅಂಕೋಲಾ: ಸಾಲಬಾಧೆ ಮತ್ತು ದೀಪಾವಳಿ ಹಬ್ಬಕ್ಕೆ ಹೆಂಡತಿ ಮನೆಗೆ ಬಾರದ ಕಾರಣ ನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾವಿಕೇರಿ ಗ್ರಾಮದಲ್ಲಿ ನಡೆದಿದೆ. ಶಿವಾನಂದ ಶಂಕರ ಆಗರ ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ವ್ಯವಹಾರದ ಕಾರಣಕ್ಕಾಗಿ ಸಾಲ ಮಾಡಿದ್ದರು.‌ ಆರ್ಥಿಕ ದುಸ್ಥಿತಿಯ ಬಿಸಿ ಸಂಸಾರಕ್ಕೂ ತಟ್ಟಿದ್ದು, ಇದರ ಪರಿಣಾಮವಾಗಿ ಹೆಂಡತಿಯು ತವರುಮನೆಗೆ ತೆರಳಿದ್ದಳು ಎನ್ನಲಾಗಿದೆ.‌ ಸಾಲ ತೀರಿಸಲಾಗದೆ ಚಿಂತೆಗೊಳಗಾಗಿದ್ದ ಶಿವಾನಂದ ಶಂಕರ ಅವರು, ದೀಪಾವಳಿ ಹಬ್ಬಕ್ಕೂ ಪತ್ನಿ ಮನೆಗೆ ಹಿಂತಿರುಗಿ ಬಂದಿಲ್ಲವೆಂಬ ಕಾರಣದಿಂದ ಮಾನಸಿಕವಾಗಿ ನೊಂದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರದಂದು ಮನೆಯ ಬಾಗಿಲು ಹಾಕಿಕೊಂಡು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಅವರ ಸಹೋದರಿ ಭಾರತಿಯವರು ಹೇಳಿಕೆ ನೀಡಿದ್ದಾರೆ. ಹೇಳಿಕೆಯ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

* ಕಾಸರಗೋಡು: 2014ರಲ್ಲಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಕಾಸರಗೋಡು ಮೂಲದ ಕೆ.ಚಂದ್ರಶೇಖರನ್ ನನ್ನು ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಪೊಲೀಸರು ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿ ಬಂಧಿಸಿದ್ದಾರೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿದೆ.

Categories
ಉತ್ತರ ಕನ್ನಡ ರಾಜ್ಯ ಹಾವೇರಿ

ಟಾಪ್ 4 ನ್ಯೂಸ್ ಕರ್ನಾಟಕ

ಟಾಪ್ 4 ನ್ಯೂಸ್ ಕರ್ನಾಟಕ

-ಹೋರಿ ಹಬ್ಬದಲ್ಲಿ ಹಾರಿ ಹೋಯ್ತು ಮೂರು ಜೀವ…!!
– ಕುಮಟಾ : ಪೊಲೀಸ್ ಚೆಕ್ ಪೋಸ್ಟ್ ಮೇಲೆ ಹರಿದ ಲಾರಿ..!!
– ಯಾದಗಿರಿ : ನವಜಾತ ಶಿಶು ಅದಲು-ಬದಲು
– ಚಿತ್ರದುರ್ಗ: ವಿದ್ಯಾರ್ಥಿಗೆ ಥಳಿಸಿದ್ದ ಶಿಕ್ಷಕ ಅರೆಸ್ಟ್

NAMMUR EXPRESS NEWS
ಹಾವೇರಿ: ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಬುಧವಾರ (ಅ.22) ಹಮ್ಮಿಕೊಂಡಿದ್ದ ‘ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ’ ಹಾಗೂ ಹೋರಿಗಳ ಮೆರವಣಿಗೆ ಸಂದರ್ಭದಲ್ಲಿ ಹೋರಿ ಗುದ್ದಿ ಮೂವರು ಮೃತಪಟ್ಟಿದ್ದಾರೆ. ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (70), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75) ಹಾಗೂ ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24) ಮೃತರು. ಹೆಸ್ಕಾಂನ ನಿವೃತ್ತ ನೌಕರ ಚಂದ್ರಶೇಖರ್ ಕೋಡಿಹಳೊ ಅವರು ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಹಾವೇರಿಯ ವೀರಭದ್ರೇಶ್ವರ ದೇವಸ್ಥಾನ ಎದುರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡಿದ ಹೋರಿ, ಹಳೇ ಪಿ.ಬಿ. ರಸ್ತೆಗೆ ಬಂದಿತ್ತು. ಇದೇ ಹೋರಿ, ಚಂದ್ರಶೇಖರ್ ಅವರಿಗೆ ಗುದ್ದಿ ಈ ಅವಘಡ ನಡೆದಿದೆ. ದೇವಿಹೊಸೂರು ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಎತ್ತುಗಳನ್ನು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿದ್ದ ಎತ್ತು ಬೆದರಿ ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆ ಮೇಲೆ ಕುಳಿತಿದ್ದ ಘನಿಸಾಬ ಅವರ ಕುತ್ತಿಗೆ ಮತ್ತು ಎದೆಗೆ ಕೊಂಬಿನಿಂದ ತಿವಿದಿತ್ತು. ಅವರನ್ನು ಚಿಕಿತ್ಸೆಗಾಗಿ ಹಾವೇರಿಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

– ಕುಮಟಾ : ಪೊಲೀಸ್ ಚೆಕ್ ಪೋಸ್ಟ್ ಮೇಲೆ ಹರಿದ ಲಾರಿ..!!

ಕುಮಟಾ : ರಾಷ್ಟ್ರೀಯ ಹೆದ್ದಾರಿ 66 ರ ಕುಮಟಾ-ಅಂಕೋಲ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಹರಿದು ಬಿದ್ದಿದ್ದು, ಚೆಕ್ ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಅತೀ ವೇಗದಲ್ಲಿ ಬಂದ ಲಾರಿ ಚಾಲಕನ ನಿದ್ದೆ ಗಣ್ಣಿನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದ್ದು, ಚೆಕ್ ಪೋಸ್ಟ್ ಬಳಿಯೇ ಇದ್ದ ಪೊಲೀಸರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ಪೂರ್ಣ ಗೊಂಡಿಲ್ಲ ದ್ವಿಮುಖ ರಸ್ತೆ ನಿರ್ಮಾಣವಾಗಿದ್ದು ಒಂದು ಭಾಗ ಬಂದ್ ಮಾಡಲಾಗಿದೆ. ಆದರೇ ವೇಗವಾಗಿ ಬರುವ ವಾಹನಗಳಿಗೆ ಈ ರಸ್ತೆಯಲ್ಲಿ ಸಾಗುವಾಗ ಸಮರ್ಪಕ ನಾಮಫಲಕ ಇಲ್ಲದ ಕಾರಣ ಗೊಂದಲಕ್ಕೆ ಒಳಗಾಗುವ ಸವಾರರು ಈ ಭಾಗದಲ್ಲಿ ಹೇಗೆಬೇಕೋ ಹಾಗೆ ನುಗ್ಗುತಿದ್ದಾರೆ. ಹೀಗಾಗಿ ಈ ರೀತಿಯ ಘಟನೆ ನಡೆಯುತಿದ್ದು , ಈ ಅಪಘಾತಗಳಿಗೆ IRB ಕಂಪನಿ ನೇರ ಹೊಣೆ ಎಂಬುದು ಸ್ಥಳೀಯರ ಆರೋಪ. ಸಧ್ಯ ಘಟನೆ ಸಂಬಂಧ ಗೋಕರ್ಣ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

– ಯಾದಗಿರಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು..!!

ಯಾದಗಿರಿ: ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಲಿನ ನರ್ಸ್ ನವಜಾತ ಶಿಶುಗಳನ್ನು ಅದಲು-ಬದಲು ಮಾಡಿದ ಆರೋಪ ಕೇಳಿ ಬಂದಿದೆ. ನಗರದ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿ ಆಕೆಗೆ ಹೆರಿಗೆಯಾಗಿದ್ದು ಹೆಣ್ಣು ಮಗುವಾದರೂ, ಗೀತಾ ಎಂಬ ನರ್ಸ್ ‘ನಿಮಗೆ ಗಂಡು ಮಗು ಜನಿಸಿದೆ’ ಎಂದು ತಿಳಿಸಿದ್ದರು. ಆದರೆ, ತಾಯಿ ಕಾರ್ಡ್‌ನಲ್ಲಿ ಹೆಣ್ಣು ಮಗು ಅಂತ ನಮೂದು ಮಾಡಲಾಗಿತ್ತು. ಬಳಿಕ ಕುಟುಂಬಸ್ಥರು ಜಿಲ್ಲಾ ಸರ್ಜನ್ ಕಚೇರಿಗೆ ಆಗಮಿಸಿ, ದೂರು ನೀಡಿದರು. ಬಳಿಕ ನೈಟ್ ಡ್ಯೂಟಿಯಲ್ಲಿದ್ದ ನರ್ಸ್ ಗೀತಾಳನ್ನು ಕರೆಸಿದ ಜಿಲ್ಲಾ ಸರ್ಜನ್‌ ವಿಚಾರಣೆ ನಡೆಸಿದಾಗ ಅಜಾಗರೂಕತೆಯಿಂದ ಈ ರೀತಿಯಾಗಿದೆ ಎಂದು ತಿಳಿದು ಬಂದಿತು.

ವಿದ್ಯಾರ್ಥಿಗೆ ಥಳಿಸಿದ್ದ ಶಿಕ್ಷಕ ಅರೆಸ್ಟ್!

ವಿದ್ಯಾರ್ಥಿ ಮೇಲೆ ಮನಸ್ಸೋ ಇಚ್ಛೆ ಥಳಿಸಿ, ಕಾಲಿನಿಂದ ಒದ್ದು, ಅಮಾನವೀಯವಾಗಿ ವರ್ತಿಸಿದ್ದ ಶಿಕ್ಷಕ ಕೊನೆಗೂ ಅರೆಸ್ಟ್ ಆಗಿದ್ದಾನೆ. ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ 9 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಚಿತ್ರದುರ್ಗ ಜಿಲ್ಲೆ‌ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ ಸಂಸ್ಕೃತ ವೇದಾಧ್ಯಯನ ಶಾಲೆಯಲ್ಲಿ ಶಿಕ್ಷಕ ವೀರೇಶ್ ಹೀರೇಮಠ್ ಎಂಬಾತ ತಲೆ, ಬೆನ್ನ ಮೇಲೆ ಹೊಡೆದು, ಕಾಲಿನಿಂದ ಹೀನಾಯವಾಗಿ ಒದ್ದು ರಾಕ್ಷಸನಂತೆ ವರ್ತಿಸಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಸರ್ಕಾರದ ಪ್ರಮುಖರು ಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಲಬುರಗಿಯಲ್ಲಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಶಿಕ್ಷಕ ಅರೆಸ್ಟ್, ನ್ಯಾಯಾಂಗ ಬಂಧನ
ವೇದಾಧ್ಯಯನ ಶಾಲೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪಿ ಶಿಕ್ಷಕನನ್ನು ಅರೆಸ್ಟ್ ಮಾಡಲಾಗಿದೆ. ಕಲಬುರಗಿಯಲ್ಲಿ ಶಿಕ್ಷಕ ವಿರೇಶ್ ಹೀರೇಮಠ್‌ನನ್ನು ಬಂಧಿಸಲಾಗಿದೆ. ಕಾರ್ಯಾಚರಣೆ ನಡೆಸಿ ಚಿತ್ರದುರ್ಗ ಪೊಲೀಸರು, ಆತನನ್ನು ಬಂಧಿಸಿ ನಾಯಕನಹಟ್ಟಿಗೆ ಕರೆತಂದರು. ಬಳಿಕ ಚಳ್ಳಕೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯ್ತು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ವೀರೇಶ್ ಹೀರೇಮಠ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶಿಸಿದರು. ಇದೀಗ ಆರೋಪಿಯನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Categories
ಅಪಘಾತ ಅಪರಾಧ ಉಡುಪಿ ಉತ್ತರ ಕನ್ನಡ ಕರಾವಳಿ ಕಾರ್ಕಳ ಕುಂದಾಪುರ ದಕ್ಷಿಣ ಕನ್ನಡ ಪುತ್ತೂರು ಬೆಳ್ತಂಗಡಿ ಮಂಗಳೂರು ಮುಲ್ಕಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಕುಂದಾಪುರ: ಬೈಕ್ ಸವಾರನ ಮೇಲೆ ಎರಗಿದ ಚಿರತೆ!
* ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ
* ಬಂಟ್ವಾಳ: ಮಹಿಳೆಯ ಚಿನ್ನದ ಸರ ಕಳುವು
* ಕಡಬ: ಕಾರಿಗೆ ಹಾನಿಗೊಳಿಸಿದ ಆರೋಪಿ ಸೆರೆ
* ಪುತ್ತೂರು: ಬೈಕ್ ಮತ್ತು ಕಾರಿನ ನಡುವೆ ಅಪಘಾತ
* ಮಂಗಳೂರು: ಮದ್ಯಪಾನ ಮಾಡಿ ಕಾರು ಚಲಾಯಿಸಿದವ ಅರೆಸ್ಟ್!
* ಭಟ್ಕಳ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಸರ್ಕಾರಿ ಬಸ್

 

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕುಂದಾಪುರ: ಕಟ್ಕೆರೆ ನಿವಾಸಿ ಮತ್ತು ಉದ್ಯಮಿಯಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರು, ಕುಂದಾಪುರದ ಕಚೇರಿಯಿಂದ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಚಿರತೆಯೊಂದು ಎರಗಿದ ಘಟನೆ ಕಟ್ಕೆರೆ ಮುಖ್ಯ ರಸ್ತೆಯ ಸಮೀಪದ ಕೈಗಾರಿಕಾ ವಲಯದಲ್ಲಿ ನಡೆದಿದೆ. ಪರಿಣಾಮವಾಗಿ ಬೈಕ್ ನಿಯಂತ್ರಣ ತಪ್ಪಿ, ಪ್ರವೀಣ್ ಕುಮಾರ್ ಅವರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿರತೆಯು ಸಮೀಪದಲ್ಲಿದ್ದ ಕಾಡಿನೊಳಗೆ ಮರೆಯಾಯಿತು ಎನ್ನುವ ಸಂಗತಿ ತಿಳಿದುಬಂದಿದೆ.

* ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ

ಬೆಳ್ತಂಗಡಿ: ಮೂಲವ್ಯಾಧಿ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ, ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲುಕಟ್ಟೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ತೆಂಕಕಜೆಕಾರು ಗ್ರಾಮದ ನಿವಾಸಿ ದಿನೇಶ್ ಎಂದು ಹೇಳಲಾಗಿದ್ದು, ಅವರ ಸಹೋದರ ದಯಾನಂದ್ ಅವರು ನೀಡಿದ ಹೇಳಿಕೆಯ ಆಧಾರದ ಮೇಲೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

* ಬಂಟ್ವಾಳ: ಮಹಿಳೆಯ ಚಿನ್ನದ ಸರ ಕಳುವು

ಬಂಟ್ವಾಳ: ಬಾಳ್ತಿಲ ಗ್ರಾಮದ ಚೆಂಡೆ ನಿವಾಸಿಯಾದ ಸರಸ್ವತಿ ಅವರು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ, ಬೈಕ್ ಸವಾರನೊಬ್ಬ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು, ಪರಾರಿಯಾದ ಘಟನೆ ದಾಸಕೋಡಿಯ ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿ ನಡೆದಿದೆ. ಆತ ದಾಸಕೋಡಿಯಿಂದ ಮಾಣಿ ಕಡೆ ತೆರಳಿದ ಎಂದು ಸರಸ್ವತಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಕಡಬ: ಕಾರಿಗೆ ಹಾನಿಗೊಳಿಸಿದ ಆರೋಪಿ ಸೆರೆ

ಕಡಬ: ಕೊಣಾಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯಾದ ರಮಣಿ ಎನ್ನುವವರು, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಗೆ ತೆರಳಿದ್ದ ಸಂದರ್ಭದಲ್ಲಿ, ಕಾರನ್ನು ಗಣತಿ ಮಾಡಲು ತೆರಳಿದ ಮನೆಯ ಸಮೀಪ ನಿಲ್ಲಿಸಿದಾಗ, ಶಂಕರ ಪಾಜೋವು ಎನ್ನುವವರು ಕಾರಿಗೆ ಕಬ್ಬಿಣದ ರಾಡ್ ನಿಂದ ಹೊಡೆದು, ಕಾರಿನ ಹಿಂಬದಿಯ ಗಾಜನ್ನು ಪುಡಿ ಮಾಡಿ ಹಾನಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕಿಯಾದ ರಮಣಿಯವರು ಕಡಬ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

* ಪುತ್ತೂರು: ಬೈಕ್ ಮತ್ತು ಕಾರಿನ ನಡುವೆ ಅಪಘಾತ

ಪುತ್ತೂರು: ದರ್ಶನ್ ಎನ್ನುವವರು ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ಮಂಗಳೂರಿಗೆ ಪ್ರವಾಸಕ್ಕೆಂದು ಕಾರಿನಲ್ಲಿ ಬಂದ ಸಂದರ್ಭದಲ್ಲಿ, ಬೆಂಗಳೂರು ಕಡೆಯಿಂದ ಬೈಕ್ ನಲ್ಲಿ ಬರುತ್ತಿದ್ದ ಸುಭಾಷ್ ಎನ್ನುವವರು ಢಿಕ್ಕಿ ಹೊಡೆದ ಘಟನೆ, ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಸಮೀಪದಲ್ಲಿ ನಡೆದಿದೆ. ಬೈಕ್ ಸವಾರ ಸುಭಾಷ್ ಮತ್ತೊಂದು ಕಾರನ್ನು ಓವರ್ ಟೇಕ್ ಮಾಡಿಕೊಂಡು ಬರುತ್ತಿದ್ದ ಕಾರಣ, ಎದುರಿನಿಂದ ಬಂದ ದರ್ಶನ್ ಅವರ ಕಾರಿಗೆ ಗುದ್ದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರ ಪರಿಣಾಮವಾಗಿ ಎರಡು ವಾಹನಗಳು ಜಖಂಗೊಂಡಿದ್ದು, ಬೈಕ್ ಸವಾರ ಸುಭಾಷ್ ಮತ್ತು ಅವರ ಜೊತೆಗಿದ್ದ ಸಹಸವಾರ ಅನಿಲ್ ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ತೊಂದರೆ ಸಂಭವಿಸಿಲ್ಲ ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

* ಮಂಗಳೂರು: ಮದ್ಯಪಾನ ಮಾಡಿ, ಕಾರು ಚಲಾಯಿಸಿದ ಆರೋಪಿಯ ವಿರುದ್ಧ ಪ್ರಕರಣ ದಾಖಲು.

ಮಂಗಳೂರು: ವ್ಯಕ್ತಿಯೊಬ್ಬ ಕುಡಿದು ಕಾರು ಚಲಾಯಿಸಿ ಪೊಲೀಸರಿಗೆ ಸೆರೆ ಸಿಕ್ಕ ಘಟನೆ, ನಂತೂರು ಜಂಕ್ಷನ್ ಬಳಿ ನಡೆದಿದೆ. ಕದ್ರಿ ಸಂಚಾರ ಠಾಣೆಯ ಪೊಲೀಸರು ಗಸ್ತಿನಲ್ಲಿರುವಾಗ ಕಾರೊಂದು ವೇಗವಾಗಿ ಬಂದಿದ್ದು, ಪೊಲೀಸರಿಗೆ ಚಾಲಕನ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಕಾರನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ಚಾಲಕನಾದ ಶಿವಪ್ರಸನ್ನ ಉಡಾಫೆಯಿಂದ ಪೊಲೀಸರನ್ನು ನಿರ್ಲಕ್ಷಿಸಿ ಮುಂದಕ್ಕೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಕಾನ್ಸ್ಟೇಬಲ್ ಕಾರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಮತ್ತೋರ್ವ ಪೊಲೀಸ್ ಕಾನ್ಸ್ಟೇಬಲ್ ತನ್ನ ಮೊಬೈಲ್ ನಿಂದ ಬಡಿದು, ಕಾರಿನ ಗಾಜು ಒಡೆದಿದೆ. ಚಾಲಕನನ್ನು ಪರೀಕ್ಷೆಗೆ ಒಳಪಡಿಸಿದಾಗ ಪೊಲೀಸರ ಅನುಮಾನದಂತೆ ಆತ ಕುಡಿದು, ಕಾರು ಚಲಾಯಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಚಾಲಕನಿಗೆ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಕಳುಹಿಸಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

* ಭಟ್ಕಳ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಸರ್ಕಾರಿ ಬಸ್

ಭಟ್ಕಳ: ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಮೂಡಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಮಾರ್ಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಣಿ ಅಪಘಾತಗಳು ನಡೆದು ಹಲವರು ಸಾವನ್ನಪ್ಪಿದ್ದರೂ, ಸಂಬಂಧಿತ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಿನ್ನೆಯ ದಿನ ಮತ್ತೊಂದು ಅಪಘಾತ ಸಂಭವಿಸಿದ್ದು, ಪುರವರ್ಗದ ಸುಂದರ ಲಕ್ಷ್ಮಣ ಪೂಜಾರಿ ಎನ್ನುವ ವ್ಯಕ್ತಿ ಮೃತಪಟ್ಟಿದ್ದಾರೆ. ಸುಂದರ್ ಅವರು ಪುರವರ್ಗದಿಂದ ಭಟ್ಕಳಕ್ಕೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಮಣಿಪಾಲದಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಹಿಂದಿನಿಂದ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಸುಂದರ್ ಅವರು ರಸ್ತೆಗೆ ಬಿದ್ದಿದ್ದು, ತಕ್ಷಣ ಅವರ ತಲೆಯ ಮೇಲೆಯೇ ಬಸ್ಸಿನ ಚಕ್ರ ಹರಿದು, ತಲೆ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಥಳಕ್ಕೆ ಆಗಮಿಸಿದ ನಗರದ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್, ಸಬ್ ಇನ್ಸ್ಪೆಕ್ಟರ್ ನವೀನ್ ನಾಯಕ ಹಾಗೂ ಪೊಲೀಸ್ ಸಿಬ್ಬಂದಿಗಳು ಸಂಚಾರವನ್ನು ಸುಗಮಗೊಳಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕು ಆಸ್ಪತ್ರೆಗೆ ರವಾನಿಸಿದರು. ಬಳಿಕ ಸುಂದರ್ ಅವರ ಮೃತದೇಹವನ್ನು ಕುಟುಂಬ ವರ್ಗದವರಿಗೆ ಹಸ್ತಾಂತರಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories
agumbe ಉಡುಪಿ ಉತ್ತರ ಕನ್ನಡ ಕಡೂರು ಕರಾವಳಿ ಕಲಬುರಗಿ ಕಾರವಾರ ಕಾರ್ಕಳ ಕುಂದಾಪುರ ಕೊಪ್ಪ ಗದಗ ಚಿಕ್ಕಬಳ್ಳಾಪುರ ಚಿಕ್ಕಮಗಳೂರು ತೀರ್ಥಹಳ್ಳಿ ತುಮಕೂರು ದಕ್ಷಿಣ ಕನ್ನಡ ಪುತ್ತೂರು ಬೆಂಗಳೂರು ಬೆಳಗಾವಿ ಬೆಳ್ತಂಗಡಿ ಮಂಗಳೂರು ಮಲ್ನಾಡ್ ಮುಲ್ಕಿ ಮೈಸೂರು ರಾಜ್ಯ ವಿಜಯನಗರ ವಿಜಯಪುರ ಶಿವಮೊಗ್ಗ ಶೃಂಗೇರಿ ಸಾಗರ ಹಾವೇರಿ ಹಾಸನ ಹೊಸನಗರ

ಅಯ್ಯೋ ದೇವ್ರೇ..ಈ ವಾರವೂ ಮಳೆ!

ಅಯ್ಯೋ ದೇವ್ರೇ..ಈ ವಾರವೂ ಮಳೆ!
– ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸಾಧ್ಯತೆ
– ಅಕ್ಟೋಬರ್ 8ರವರೆಗೂ ಗಾಳಿ ಜತೆಗೆ ಮಳೆ ಅಲರ್ಟ್
– ದಸರಾಕ್ಕೂ ಮಳೆ ಅಡ್ಡಿ: ಅಡಿಕೆ ಬೆಳೆಗೆ ಸಂಕಷ್ಟ

 

NAMMUR EXPRESS NEWS
ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದರಿಂದಾಗಿ ಕರ್ನಾಟಕ, ಒಡಿಶಾ, ಆಂಧ್ರಪ್ರದೇಶ ಸೇರಿ ಹಲವೆಡೆ ಮಳೆಯಾಗಲಿದೆ. ಈಗಾಗಲೇ ಕಳೆದ 6 ತಿಂಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಆಗಿದ್ದು, ರೈತರು ಹೈರಾಣಾಗಿದ್ದಾರೆ. ಇದೀಗ ಮತ್ತೆ ಮೋಡ, ಮಳೆ ಜನ ಜೀವನಕ್ಕೆ ಭಾರೀ ತೊಂದರೆ ಆಗಿದೆ.
ಚಂಡಮಾರುತದ ಪ್ರಭಾವದಿಂದಾಗಿ ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತ ಪ್ರಭಾವ ಕರ್ನಾಟಕದ ಮೇಲೂ ಆಗಲಿದ್ದು, ಅಕ್ಟೋಬರ್ 8ರವರೆಗೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.
ಯಲ್ಲಾಪುರದಲ್ಲಿ ಭಾರಿ ಮಳೆಯಾಗಿದೆ, ಹೊನ್ನಾವರ, ಆಗುಂಬೆ, ಅಂಕೋಲಾ, ಕ್ಯಾಸಲ್​ರಾಕ್, ಗೇರುಸೊಪ್ಪ, ಮಂಕಿ, ಕದ್ರಾ, ಕಾರವಾರ, ಕೋಟಾ, ಕೊಟ್ಟಿಗೆಹಾರ, ಕುಮಟಾ, ಕುಂದಾಪುರ, ಲೋಂಡಾ, ಮಂಗಳೂರು, ಮುಂಡಗೋಡಿನಲ್ಲಿ ಮಳೆಯಾಗಿದೆ.
ಅಡಿಕೆ ಸೀಸನ್ ಆಗಿರುವುದರಿಂದ ಅಡಿಕೆ ಬೆಳೆ ಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಈ ಬಾರಿ ದಸರಾಕ್ಕೂ ಮಳೆ ಹಲವೆಡೆ ಅಡ್ಡಿ ಮಾಡಿದೆ.

Categories
ಅಪಘಾತ ಉತ್ತರ ಕನ್ನಡ ಕರಾವಳಿ ವಿಜಯಪುರ

ಉತ್ತರ ಕನ್ನಡ ಟಾಪ್ ನ್ಯೂಸ್

ಉತ್ತರ ಕನ್ನಡಟಾಪ್ನ್ಯೂಸ್

* ಶಿರಸಿ: ಗ್ಯಾಸ್ ಸಿಲೆಂಡರ್ ಸ್ಪೋಟ; ಯುವತಿ ಸಾವು!
* ಯಲ್ಲಾಪುರ: ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿರಸಿ: ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ, ರಂಜನಾ ನಾಗಪ್ಪ ದೇವಾಡಿಗ ಎನ್ನುವ ವಿದ್ಯಾರ್ಥಿನಿಯು, ಗ್ಯಾಸ್ ಸಿಲಿಂಡರ್ ಸ್ಪೋಟದಲ್ಲಿ ಮೃತಪಟ್ಟ ಘಟನೆ ಮಂಗಳವಾರದಂದು ಮುರ್ಕಿಕೊಡ್ಲಾದಲ್ಲಿ ನಡೆದಿದೆ. ತಲೆ ನೋವು ಇದ್ದ ಕಾರಣ, ವಿಶ್ರಾಂತಿ ಪಡೆಯಲೆಂದು ಕಾಲೇಜಿಗೆ ರಜೆ ಹಾಕಿ, ಮನೆಯಲ್ಲಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಿಪಿಐ ಶಶಿಕಾಂತ ವರ್ಮಾ ಮತ್ತು ಪಿಎಸ್ಐ ಅಶೋಕ್ ರಾಥೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

* ಯಲ್ಲಾಪುರ: ಪ್ರವಾಸಕ್ಕೆ ತೆರಳಿದ ವಿದ್ಯಾರ್ಥಿ ನೀರುಪಾಲು

ಯಲ್ಲಾಪುರ: ಹಳಿಯಾಳದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಾನೂರು ಜಲಪಾತಕ್ಕೆ ಪ್ರವಾಸಕ್ಕೆಂದು ತೆರಳಿದ ಸಂದರ್ಭದಲ್ಲಿ, ಆ ಗುಂಪಿನ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ. ಮಲವಳ್ಳಿಯಲ್ಲಿ ಮಂಗಳವಾರದಂದು ನಡೆದಿದೆ. ಈಜಲೆಂದು ನೀರಿಗೆ ಇಳಿದಿರುವ ಸಮಯದಲ್ಲಿ, ಆಕಸ್ಮಿಕವಾಗಿ ನೀರಿನಲ್ಲಿ ತೇಲಿ ಹೋಗಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಯನ್ನು ಧಾರವಾಡದ ಸೋಹಿಲ್ ಸೈಯದ್ ಅಲಿ ಖಾನ್ ಎಂದು ಹೇಳಲಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಶೋಧನಾ ಕಾರ್ಯವನ್ನು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ.

Categories
ಅಪಘಾತ ಉತ್ತರ ಕನ್ನಡ ಕರಾವಳಿ ಮಂಗಳೂರು ಮಾಹಿತಿ ಸುದ್ದಿ ವಿಜಯಪುರ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಯಲ್ಲಾಪುರ : ಕಾರಿಗೆ ತಗುಲಿದ ಬೆಂಕಿ

* ಹೊನ್ನಾವರ: ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಪ್ರತಿಭಟನೆ.

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಯಲ್ಲಾಪುರ: ಕಾರಿಗೆ ತಗುಲಿದ ಬೆಂಕಿ

ಯಲ್ಲಾಪುರ: ದೆಹಲಿ ಮೂಲದ ಕಾರೊಂದು ಯಲ್ಲಾಪುರದಿಂದ ಅಂಕೋಲಕ್ಕೆ ಹೊರಟಿದ್ದ ಸಮಯದಲ್ಲಿ, ಕಾರಿಗೆ ಬೆಂಕಿ ತಗುಲಿದ ಘಟನೆ, ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ತಕ್ಷಣ ಕಾರಿನಲ್ಲಿದ್ದವರು ಹೊರಬಂದಿರುವುದರಿಂದ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಲಿಲ್ಲ. ಈ ಸಂದರ್ಭದಲ್ಲಿ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ, ಬೆಂಕಿಯನ್ನು ಆರಿಸಿದರಾದರೂ, ಕಾರು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.

* ಹೊನ್ನಾವರ: ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಪ್ರತಿಭಟನೆ

ಹೊನ್ನಾವರ: ಕಳೆದ ಕೆಲವು ದಶಕಗಳ ಹಿಂದೆ ಕಾಸರಕೋಡು ಟೊಂಕ ವಾಣಿಜ್ಯ ಬಂದರು ಸಮೀಪ, ಹಡಗುಗಳ ಮೂಲಕ ಮ್ಯಾಂಗನೀಸ್ ಅನ್ನು ರಫ್ತು ಮಾಡಲಾಗುತ್ತಿತ್ತು. ಆಗ ಬಾಕ್ಸೈಟ್ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಲಾಭ ನಷ್ಟದ ಉದ್ದೇಶದಿಂದ, ಅದಕ್ಕೆ ಸಂಬಂಧಿಸಿದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ಈ ಯೋಜನೆಯ ಬಗ್ಗೆ, ಸರ್ವೇ ಸಹಿತ ಕಾಮಗಾರಿಗೆ ಅಗತ್ಯವಿರುವ ಸಿದ್ಧತೆಗಳನ್ನು ಗಣಿ ಮತ್ತು ಭೂ ಇಲಾಖೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Categories
ಆರೋಗ್ಯ ಉಡುಪಿ ಉತ್ತರ ಕನ್ನಡ ಕರಾವಳಿ ಕಾರವಾರ ಕಾರ್ಕಳ ಮಂಗಳೂರು

* ಬಂಟ್ವಾಳ: ಆ್ಯಂಬುಲೆನ್ಸ್ ಮೂಲಕ ಸೌಹಾರ್ದಯುತ ಜನಸೇವೆ

* ಬಂಟ್ವಾಳ: ಆ್ಯಂಬುಲೆನ್ಸ್ ಮೂಲಕ ಸೌಹಾರ್ದಯುತ ಜನಸೇವೆ

* ಹೊನ್ನಾವರ: ಅಣ್ಣ ತಂಗಿ ಈಗ ಪ್ರಸಿದ್ಧ ಆಹಾರ ತಜ್ಞರು

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಬಂಟ್ವಾಳ: ಆ್ಯಂಬುಲೆನ್ಸ್ ಮೂಲಕ ಸೌಹಾರ್ದಯುತ ಜನ ಸೇವೆ.

ಬಂಟ್ವಾಳ: ಕಡೇಶಿವಾಲಯದ ನಿವಾಸಿಯಾದ ಮಹೇಶ್ ಕುಲಾಲ್ ಎನ್ನುವ ವ್ಯಕ್ತಿಯು ತನ್ನ ತಂದೆ ಅನಾರೋಗ್ಯದಿಂದ ನರಳುತ್ತಿದ್ದ ಸಂದರ್ಭದಲ್ಲಿ, ಸಮಯಕ್ಕೆ ಸರಿಯಾಗಿ ತುರ್ತು ವಾಹನ ಲಭಿಸದೇ, ತಂದೆಯನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ, ಬೇರೆ ಯಾರಿಗೂ ಈ ರೀತಿಯ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ಆ್ಯಂಬುಲೆನ್ಸ್ ಅನ್ನು ಕಲ್ಲಡ್ಕ ಮತ್ತು ಕಡೇಶಿವಾಲಯದ ಮಾರ್ಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದು ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಚಾಲಕರ ತಂಡದ ಮೂಲಕ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ಸೌಹಾರ್ದ ಆ್ಯಂಬುಲೆನ್ಸ್ ಎನ್ನುವ ಹೆಸರನ್ನು ಪಡೆದುಕೊಂಡಿದೆ. ವೃತ್ತಿಯಲ್ಲಿ ಸ್ಪ್ರೇ ಪೇಂಟರ್ ಆಗಿರುವ ಮಹೇಶ್ ಕುಲಾಲ್ ಅವರಿಗೆ ಆ್ಯಂಬುಲೆನ್ಸ್ ನಿರ್ವಹಣೆಗೆ ಪ್ರತಿ ತಿಂಗಳು 9000 ರೂಪಾಯಿ ವೆಚ್ಚ ತಗುಲುತ್ತಿದ್ದು, ತಮ್ಮ ನೃತ್ಯ ಮತ್ತು ನಿರೂಪಣಾ ಕೆಲಸದಿಂದ ಬರುವ ಹಣವನ್ನು ಅದಕ್ಕಾಗಿ ವ್ಯಯಿಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಮಹೇಶ್ ಅವರ ಸ್ನೇಹಿತರಾದ, ಉದ್ಯಮಿಯಾದ ಕಿಶೋರ್ ಕಟ್ಟೆಮರ, ಪ್ರಿಯರಂಜನ್, ರೂಪೇಶ್ ಗೌಡ ಅವರು ಆರ್ಥಿಕವಾಗಿ ಸಹಕಾರ ನೀಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಸ್ನೇಹಿತರೆಲ್ಲ ಸೇರಿ ಸುಮಾರು 5 ಲಕ್ಷ ರೂಪಾಯಿಗೆ ಆ್ಯಂಬುಲೆನ್ಸ್ ಖರೀದಿಸಿದ್ದಾರೆ. ಕಡೇಶಿವಾಲಯದಲ್ಲಿ ಮಹೇಶ್ ಮತ್ತು ಪ್ರಿಯರಂಜನ್ ಅವರು ತುರ್ತು ವಾಹನವನ್ನು ಓಡಿಸುತ್ತಿದ್ದು, ಕಲ್ಲಡ್ಕ ಭಾಗದಲ್ಲಿ ಇರ್ಫಾನ್, ಕಿಶನ್ ಮತ್ತು ತಿಲಕ್ ಅವರು ನಡೆಸುತ್ತಾರೆ. “ಹಿಂದೂ ಮತ್ತು ಮುಸಲ್ಮಾನರು ಒಟ್ಟಿಗೆ ಸೇರಿ ಈ ಸೇವೆಯನ್ನು ನಿರ್ವಹಿಸುತಿದ್ದೇವೆ. ದುರಸ್ತಿ ಮೊದಲಾದ ಸಂದರ್ಭದಲ್ಲಿ ಚಾಲಕರಾದ ನಾವೇ ಹೇಗಾದರೂ ಹಣವನ್ನು ಹೊಂದಿಸಿಕೊಂಡು ಸರಿಪಡಿಸಿ, ಜನರಿಗೆ ತುರ್ತು ಸೇವೆಯನ್ನು ಒದಗಿಸುತ್ತೇವೆ” ಎಂದಿದ್ದಾರೆ ಮಹೇಶ್ ಕುಲಾಲ್ ಅವರು.‌

* ಹೊನ್ನಾವರ: ಅಣ್ಣ ತಂಗಿ ಈಗ ಪ್ರಸಿದ್ಧ ಆಹಾರ ತಜ್ಞರು.

ಹೊನ್ನಾವರ: ಹಳದಿಪುರ ಮೂಲದ ಅಣ್ಣ ತಂಗಿ ಇಬ್ಬರು, ಕಳೆದ ವರ್ಷ ಬೆಂಗಳೂರಿನ ಕಲ್ಯಾಣನಗರದಲ್ಲಿ ಫಯರ್ ಸೈಡ್ ಎಂಬ ಹೆಸರಿನ ಹೊಟೇಲ್ ವೊಂದನ್ನು ಆರಂಭಿಸಿದ್ದು, ಇದೀಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ದೇಶ ವಿದೇಶಗಳಲ್ಲಿ ಹಣ್ಣುಗಳನ್ನು ಬೆಳೆದು, ಪ್ರಸಿದ್ಧರಾಗಿರುವ ಜಯಪ್ರಕಾಶ್ ಆಳ್ವೆ ಅವರ ಮಕ್ಕಳಾದ ರಜತ್ ಮತ್ತು ಪ್ರಿಯಾಂಕ ಈ ಖ್ಯಾತಿಯನ್ನು ಪಡೆದವರು. ರಾಷ್ಟ್ರಮಟ್ಟದಲ್ಲಿ ವಿಶೇಷ ಆಹಾರ ತಜ್ಞರನ್ನು ಗುರುತಿಸುವ ಸಲುವಾಗಿ, ಅದಕ್ಕೆ ಸಂಬಂಧಿಸಿದ ಸಂಘಟನೆಯು ಇವರಿಬ್ಬರಿಗೆ ತಿಳಿಯದಂತೆ ಹಲವಾರು ಬಾರಿ ಫಯರ್ ಸೈಡ್ ನಲ್ಲಿ ಆಹಾರವನ್ನು ಸೇವಿಸಿದ್ದರು ಮತ್ತು ಆಹಾರ ತಯಾರಿಕೆಯ ಕ್ರಮವನ್ನು ಕೂಡ ಕಂಡಿದ್ದರು ಎನ್ನಲಾಗಿದೆ. ಕೆಲವೇ ತಿಂಗಳುಗಳಲ್ಲಿ ಈ ಪರಿಯಾದ ಖ್ಯಾತಿ ಗಳಿಸಿರುವ ಫಯರ್ ಸೈಡ್ ಕುರಿತು ಇಂಗ್ಲಿಷ್ ಪತ್ರಿಕೆಗಳಲ್ಲಿ ಸುದ್ಧಿ ಮತ್ತು ಲೇಖನಗಳು ಪ್ರಕಟವಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ರಜತ್ ಮತ್ತು ಪ್ರಿಯಾಂಕ ಹವ್ಯಾಸಕ್ಕಾಗಿ ಬಾಣಸಿಗರಾಗಿ ರೂಪುಗೊಂಡು, ಹೊಟೇಲ್ ಆರಂಭಿಸಿದ್ದರು. ಇದೀಗ ನಳಪಾಕಕ್ಕೆ ಸಂಬಂಧಿಸಿದಂತೆ ಸೂಕ್ತ ತರಬೇತಿಗಳನ್ನು ಪಡೆದು, ಪೂರ್ಣಾವಧಿ ಬಾಣಸಿಗರಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೇ ತಿಂಗಳ 26ರಂದು ಕಲ್ಕತ್ತಾದಲ್ಲಿ ನಡೆಯುವ ಫುಡ್ ಸೂಪರ್ ಸ್ಟಾರ್ ನೆಕ್ಸ್ಟ್ ಗೆ ಆಯ್ಕೆಯಾಗುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.

Categories
ಉತ್ತರ ಕನ್ನಡ

ನಾಣಿಕಟ್ಟಾದಲ್ಲಿ ಧರ್ಮ ಸಂರಕ್ಷಣಾ ಸಭೆ

ನಾಣಿಕಟ್ಟಾದಲ್ಲಿ ಧರ್ಮ ಸಂರಕ್ಷಣಾ ಸಭೆ

* ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ವಾಕ್ಯದಡಿ ಜನಜಾಗೃತಿ ಸಭೆ
* ಸಾಮಾಜಿಕ ಹೋರಾಟಗಾರ ಉಪೇಂದ್ರ ಪೈ ಸೇರಿದಂತೆ ಹಲವಾರು ಮಂದಿ ಭಾಗಿ

NAMMMUR EXPRESS NEWS
ಸಿದ್ದಾಪುರ:ತಾಲೂಕಿನ ನಾಣಿಕಟ್ಟಾದಲ್ಲಿ ಸೋಮವಾರ ಬೆಳಿಗ್ಗೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ “ಧರ್ಮದ ಉಳಿವಿಗಾಗಿ ಧರ್ಮಯುದ್ಧ” ಜಾಗೃತಾ ಸಭೆ ನಡೆಯಿತು. ಸುದೀರ್ಘ ಅವಧಿಯವರೆಗೆ ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಹಲವಾರು ರಂಗಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡಿದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆದ ನೋವು ಅಪಾರ. ಧರ್ಮಸ್ಥಳದಲ್ಲಿ ಈ ವಿರೋಧಿಗಳು ನಡೆಸಿದ ಅಪಪ್ರಚಾರದಿಂದ ಅವರಿಗಾದಷ್ಟೆ ನೋವು ಕ್ಷೇತ್ರದ ಎಲ್ಲಾ ಶ್ರದ್ಧಾ ವಂತ ಭಕ್ತರಿಗೂ ಆಗಿದೆ. ಈಗ ನಾವೆಲ್ಲರೂ ಧರ್ಮದ ಪರವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಘಟ್ಟಿಯಾಗಿ ನಿಂತು ಹೋರಾಟ ನಡೆಸಬೇಕು. ಆ ಮೂಲಕ ನಾವು ಹೆಗ್ಗಡೆ ಯವರೊಂದಿಗೆ ಇದ್ದೇವೆ ಎಂದು ಸಾರಿ ಹೇಳಬೇಕು. ದುಷ್ಟ ಶಕ್ತಿಗಳು ಸುಮ್ಮನೆ ಇರುವವರಲ್ಲ. ಇದೆ ಪರಿಸ್ಥಿತಿ ಮುಂದಿನ ದಿನ ನಮ್ಮ ಊರಿನ ದೇವಸ್ಥಾನಗಳಿಗೂ ಬರಬಹುದು. ಹಾಗಾಗಿ ಎಲ್ಲಾ ಹಿಂದೂ ಗಳು ಎಚ್ಚರಿಕೆಯಿಂದ, ಜಾಗೃತರಾಗಿರಬೇಕು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು. ನಾಣಿಕಟ್ಟಾ ಸುತ್ತಮುತ್ತಲಿನ ಗ್ರಾಮಸಮುದಾಯಗಳು ಮತ್ತು ದೇವಸ್ಥಾನಗಳು ಇಂದು ಆಯೋಜಿಸಿದ್ದ ಧರ್ಮಸ್ಥಳ ವಿರುದ್ಧದ ಅಪಪ್ರಚಾರ ನಡೆಸುತ್ತಿರುವುದನ್ನು ಪ್ರತಿಭಟಿಸಿ, ನಾಣಿಕಟ್ಟ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಿದ್ದ ಬೃಹತ್ ಮೆರವಣಿಗೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಸಾಮಾಜಿಕ ಹೋರಾಟಗಾರ ಉಪೇಂದ್ರ ಪೈ ಮಾತನಾಡಿ, ನಮ್ಮ ಹಿಂದುಗಳನ್ನು ಒಡೆಯುವ ಕೆಲಸ ನಿರಂತರ ನಡೆಯುತ್ತಿದೆ, ಹಾಗಾಗಿ ಪ್ರತಿಯೊಂದು ಜಾತಿಗಳನ್ನು ಬೇರ್ಪಡಿಸುತ್ತಾ, ನಮ್ಮಲ್ಲಿ ಬಿರುಕು ಮೂಡಿಸುತ್ತಿದ್ದಾರೆ. ಇವರ ಒಳಸಂಚಿಗೆ ಬಲಿಯಾಗದೆ ನಾವು ಒಗ್ಗಟ್ಟಿನಿಂದ ಇರಬೇಕು. ಹಾಗಾಗಿ ನಮ್ಮ ದೇವಾಲಯಗಳಲ್ಲಿ ವಾರಕ್ಕೋ ಒಮ್ಮೆಯಾದರೂ ಸೇರುತ್ತಾ ಇರಬೇಕು. ಹಾಗಾದಲ್ಲಿ ಮಾತ್ರ ಉಳಿವು ಸಾಧ್ಯ, ನಮ್ಮನ್ನು ನಾವೇ ರಕ್ಷಿಸಿ ಕೊಳ್ಳಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಿ ಅಪವಿತ್ರ ಮಾಡುತ್ತಿರುವವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮವಾಗಬೇಕೆಂದು ರಾಜ್ಯಪಾಲರಿಗೆ ಆಗ್ರಹಿಸಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಸಭಾಭವನ ನಾಣಿಕಟ್ಟಾದಲ್ಲಿ ನಾಣಿಕಟ್ಟಾ ಗ್ರಾಮ ಸಮುದಾಯಗಳ ದೇವಾಲಯಗಳು, ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು , ಹಿಂದೂ ಬಾಂಧವರಿಂದ ಇಂದು ಗ್ರಾಮ ಪಂಚಾಯತಕ್ಕೆ ಭೇಟಿ ನೀಡಿ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮುಖಂಡ ಉಪೇಂದ್ರ ಪೈ ಶಿರಸಿ ಇವರು ಶ್ರೀಕ್ಷೇತ್ರವನ್ನು ಅಪವಿತ್ರಗೊಳಿಸುತ್ತಿರುವ ಸುಜಾತ ಭಟ್,ಸಮೀರ ಮುಲ್ಲಾ,ಗಿರೀಶ ಮೆಟ್ಟಣ್ಣನವರ್,ಮಹೇಶ ಶೆಟ್ಟಿ ತಿಮರೋಡಿ,ಜಯಂತ ಟಿ ಹಾಗೂ ಮುಸುಕುದಾರಿ ಚನ್ನಯ್ಯ ಡಿ ಇವರ ಹಿಂದಿರುವ ಕಾಣದ ಕೈಗಳ ವಿರುದ್ದ ಮೊದಲು ತನಿಕೆ ನಡೆಸಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ವೇದಿಕೆ ಮೇಲೆ ಯುವ ಮುಖಂಡ ಶ್ರೀ ಅನಂತಮೂರ್ತಿ ಹೆಗಡೆ ಶಿರಸಿ, ಶ್ರೀ ಕ್ಷೇತ್ರ ಸ್ವರ್ಣವಲ್ಲೀ ಸೋಂದಾ ಮಠದ ಆಡಳಿತ ಮಂಡಳಿಯ ಸದಸ್ಯರಾದ ಎಂ ಆರ್ ಹೆಗಡೆ ಬಾಳೇಜಡ್ಡಿ ಮತ್ತೀಹಳ್ಳಿ, ಸಭೆಯ ಅಧ್ಯಕ್ಷತೆ ವಹಿಸಿದ ಶ್ರೀ ನಾಗ ಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಇದರ ಮಾಜಿ ಅಧ್ಯಕ್ಷ ಎಂ ಎಂ ಹೆಗಡೆ ಹಂಗಾರಖಂಡ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧಾ ದತ್ತಾತ್ರೇಯ ನಾಯ್ಕ್ ದೊಡ್ಡಜಡ್ಡಿ ,ಶ್ರೀ ಸಿದ್ಧಿವಿನಾಯಕ ದೇವಸ್ಥಾನ ನಾಣಿಕಟ್ಟಾದ ಮುಖ್ಯಸ್ಥ ರಾದ ಗಣಪತಿ ಗಣೇಶ ಹೆಗಡೆ ಸೂರನ್ ಹಿಂದೂ ಮುಖಂಡ ಹರೀಶ್ ಆರ್ ನಾಯ್ಕ ಹಂಗಾರಖಂಡ , ಮಂಜುನಾಥ ಎಂ ಗೌಡ ನಾಣಿಕಟ್ಟ, ಶಂಕರ ನಾರಾಯಣ ಆಡಿದ್ರಾವಿಡ ಜೀಕನಮನೆ ತ್ಯಾಗಲಿ ಹಾಗೂ ಭಾಗೀರಥಿ ಮಂಜುನಾಥ್ ಕುಲಕರ್ಣಿಯವರ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು. ವಿ, ಎಂ ಹೆಗಡೆ ತ್ಯಾಗಲಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಮನವಿಯನ್ನು ನಾಗರಾಜ್ ರಾಮ ನಾಯ್ಕ್ ಹಂಗಾರಖಂಡ ವಾಚಿಸಿದರು. ನಂತರ ರಮೇಶ್ ನಾಯ್ಕ್ ಹಂಗಾರಖಂಡ ವಂದಿಸಿದರು, ವಸಂತ ಕೆ ಹೆಗಡೆ ತ್ಯಾಗಲಿ ಕಾರ್ಯಕ್ರಮ ನಿರೂಪಿಸಿದರು ನೂರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು,ಮಹಿಳೆಯರು ಸೇರಿದ್ದರು.