ಕರಾವಳಿ ಟಾಪ್ ನ್ಯೂಸ್
• ಕುಂದಾಪುರ: ಆವೆಮಣ್ಣಿನ ವ್ಯವಹಾರದಲ್ಲಿ ವ್ಯಕ್ತಿಗೆ ಜೀವ ಬೆದರಿಕೆ
• ಕಾರ್ಕಳ: ಅಪಘಾತ ನಡೆಸಿ ಬುಲೆಟ್ ಸವಾರ ಪರಾರಿ
• ಬಂಟ್ವಾಳ: ವಿದ್ಯಾರ್ಥಿಗಳ ನಡುವೆ ಘರ್ಷಣೆ; ಓರ್ವನಿಗೆ ಚೂರಿ ಇರಿತ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಕುಂದಾಪುರ: ಆವೆಮಣ್ಣಿನ ವ್ಯವಹಾರದಲ್ಲಿ ವ್ಯಕ್ತಿಗೆ ಜೀವ ಬೆದರಿಕೆ
ಕುಂದಾಪುರ: ಆವೆಮಣ್ಣು ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ, ಕೋಟದಲ್ಲಿ ನಡೆದಿದೆ. ಮಣೂರಿನ ಸಂದೀಪ್ ಕುಮಾರ್ ಹೆಗ್ಡೆ ಎನ್ನುವವರು 2021 ರಿಂದ ಆವೆಮಣ್ಣಿನ ವ್ಯಾಪಾರ ಮಾಡುತ್ತಿದ್ದು, ಇತ್ತೀಚೆಗೆ ವಡ್ಡರ್ಸೆ ಯಾಳಕ್ಲುವಿನ ನಿವಾಸಿಯಾದ ಅಜಿತ್ ಶೆಟ್ಟಿ ಎನ್ನುವ ವ್ಯಕ್ತಿ ಸಂದೀಪ್ ಅವರೊಂದಿಗೆ ವ್ಯವಹಾರ ಸಂಪರ್ಕ ಹೊಂದಿದ್ದು, ಸಂದೀಪ್ ಅವರ ಬಳಿ ಪದೇ ಪದೇ ಹಣವನ್ನು ಕೇಳುತ್ತಿದ್ದ. ಅಲ್ಲದೆ ವಾಟ್ಸ್ ಆಪ್ ಸಂದೇಶವನ್ನು ಕಳುಹಿಸಿ ಪ್ರತಿ ತಿಂಗಳ ವ್ಯವಹಾರದಲ್ಲಿ ತನಗೆ 35.000 ರೂಪಾಯಿ ನೀಡಬೇಕೆಂದು ಒತ್ತಾಯ ಪಡಿಸುತ್ತಿದ್ದ ಎನ್ನಲಾಗಿದೆ. ಇದನ್ನು ಸಂದೀಪ್ ಅವರು ನಿರಾಕರಿಸಿದ್ದರಿಂದ ಸಂದೀಪ್ ಅವರ ಮನೆಯ ಹತ್ತಿರವೇ ಬಂದು ಅಜಿತ್ ಶೆಟ್ಟಿ ಜೀವ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಕಾರ್ಕಳ: ಅಪಘಾತ ನಡೆಸಿ, ಬುಲೆಟ್ ಸವಾರ ಪರಾರಿ
ಕಾರ್ಕಳ: ಮಡಾಮಕ್ಕಿ ಗ್ರಾಮದ ನಿವಾಸಿಯಾದ ಉಮೇಶ್ ಶೆಟ್ಟಿ ಅವರು ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಬುಲೇಟ್ ಸವಾರನೊಬ್ಬ ಸ್ಕೂಟಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ, ಕಳೆದೆರಡು ದಿನಗಳ ಹಿಂದೆ ಮಾಂಡಿ ಮೂರು ಕೈ ರಸ್ತೆಯ ಹಾಲೆಕೊಡ್ಲು ಎನ್ನುವಲ್ಲಿ ನಡೆದಿದೆ. ಉಮೇಶ್ ಶೆಟ್ಟಿ ಅವರು ತಮ್ಮ ಬಾವನಾದ ಸಂತೋಷ್ ಶೆಟ್ಟಿ ಅವರನ್ನು ಸ್ಕೂಟಿಯಲ್ಲಿ ಕುಳ್ಳಿರಿಸಿಕೊಂಡು ಹೆಬ್ರಿಯತ್ತ ತೆರಳುತ್ತಿದ್ದಾಗ, ಹೆಬ್ರಿ ಕಡೆಯಿಂದ ಬಂದ ಬುಲೆಟ್ ಗಾಡಿಯೊಂದು ಸ್ಕೂಟಿಗೆ ಢಿಕ್ಕಿ ಹೊಡೆದು, ಅಲ್ಲಿಂದ ಪರಾರಿಯಾಗಿದ್ದಾನೆ. ಪರಿಣಾಮವಾಗಿ ಸಂತೋಷ್ ಶೆಟ್ಟಿ ಅವರು ಗಾಯಗೊಂಡಿದ್ದು, ತಕ್ಷಣ ಅವರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪ್ರಥಮ ಚಿಕಿತ್ಸೆಯನ್ನು ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬಂಟ್ವಾಳ: ವಿದ್ಯಾರ್ಥಿಗಳ ನಡುವೆ ಘರ್ಷಣೆ; ಓರ್ವನಿಗೆ ಚೂರಿ ಇರಿತ
ಬಂಟ್ವಾಳ: ಖಾಸಗಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟು, ಓರ್ವ ವಿದ್ಯಾರ್ಥಿಗೆ ಚೂರಿ ಇರಿದ ಘಟನೆ ಬುಧವಾರದಂದು ವಿಟ್ಲದಲ್ಲಿ ನಡೆದಿದೆ. ಸಣ್ಣದೊಂದು ಕಾರಣಕ್ಕಾಗಿ ಖಾಸಗಿ ಐಟಿಐ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟಿದ್ದು, ಇಬ್ಬರ ವಾಗ್ವಾದದ ನಡುವೆ ಓರ್ವ ವಿದ್ಯಾರ್ಥಿಗೆ ಚೂರಿ ಇರಿತ ಸಂಭವಿಸಿದೆ. ಕಲಹವನ್ನು ನಿಲ್ಲಿಸಲು ಮುಂದೆ ಬಂದ ಬೇರೊಬ್ಬ ವಿದ್ಯಾರ್ಥಿಯೂ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳನ್ನು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು ಎನ್ನುವ ಸಂಗತಿ ತಿಳಿದುಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ವಿಟ್ಲದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಪ್ರಕಾಶ್ ದೇವಾಡಿಗ ಮತ್ತವರ ನೇತೃತ್ವದ ತಂಡವು ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಿ, ಕ್ರಮವನ್ನು ಕೈಗೊಂಡಿದ್ದಾರೆ.








