ಕರಾವಳಿಯ ಎಲ್ಲೆಡೆ ನವರಾತ್ರಿ ರಂಗು!
– ಕುದ್ರೋಳಿ, ಉಚ್ಚಿಲ, ಕೊಲ್ಲೂರು, ಮಂದಾರ್ತಿ ಸೇರಿ ಎಲ್ಲೆಡೆ ವಿಶೇಷ ಪೂಜೆ
– ಉಡುಪಿ, ಬಪ್ಪನಾಡುಸೇರಿ ಎಲ್ಲೆಡೆ ದಸರಾ ವಿಶೇಷ
NAMMUR EXPRESS NEWS
ಉಡುಪಿ/ ಮಂಗಳೂರು: ಕರಾವಳಿಯ ಬಹುತೇಕ ಭಾಗದಲ್ಲಿ ನವ ರಾತ್ರಿ ಸಂಭ್ರಮ ಜೋರಾಗಿದೆ. ಎಲ್ಲಾ ಅಮ್ಮನವರ ದೇವಾಲಯಗಳಲ್ಲಿ ನವ ರಾತ್ರಿ ಹಬ್ಬ ಆಚರಣೆ ಮಾಡಲಾಗುತ್ತಿದೆ. ಕುದ್ರೋಳಿ, ಉಚ್ಚಿಲ, ಕೊಲ್ಲೂರು, ಮಂದಾರ್ತಿ ಸೇರಿ ಎಲ್ಲೆಡೆ ದಸರಾಗೆ ಚಾಲನೆ ಸಿಕ್ಕಿದೆ.
‘ಮಂಗಳೂರು ದಸರಾ’ ಎಂದೇ ಖ್ಯಾತಿ ಪಡೆದ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ಸೋಮವಾರದಂದು ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪ್ರಮುಖರ ಸಮ್ಮುಖದಲ್ಲಿ ಕ್ಷೇತ್ರದ ದರ್ಬಾರ್ ಮಂಟಪದಲ್ಲಿ ಶಾರದೆ, ಆದಿಶಕ್ತಿ, ಗಣಪತಿ ಸಹಿತವಾಗಿ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಮೈಸೂರು ದಸರಾಕ್ಕೆ ಜಂಬುಸವಾರಿ ಹೇಗೋ ಹಾಗೆಯೇ ಮಂಗಳೂರು ದಸರಾಕ್ಕೆ ಹುಲಿವೇಷ ಅತ್ಯಂತ ಪ್ರಮುಖ ಮತ್ತು ಆಕರ್ಷಣೀಯ ಅಂಶ. ಇದು ಕರಾವಳಿಗರ ಅಸ್ಮಿತೆಯ ಕುರುಹು ಮತ್ತು ಆ ಭಾಗದ ಪ್ರಮುಖ ಜನಪದ ಕಲೆಯಾಗಿದೆ. ರಾತ್ರಿಯ ಸಮಯದಲ್ಲಿ ವಿದ್ಯುತ್ ದೀಪಗಳ ಅಲಂಕಾರದ ನಡುವೆ ಹುಲಿವೇಷ ಸಾರ್ವಜನಿಕರಲ್ಲಿ ದಸರಾ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಸುಳ್ಯ, ಪುತ್ತೂರು, ಕಡಬ ತಾಲ್ಲೂಕಿನ ಇಪ್ಪತ್ತೊಂದು ಗ್ರಾಮಗಳ ಮಾಗಣೆ ಕ್ಷೇತ್ರವಾದ ಜಲದುರ್ಗಾ ದೇವಿಯ ದೇವಾಲಯದಲ್ಲಿ ನವರಾತ್ರಿ ಉತ್ಸವವು ಬಲಿವಾಡು, ಅರ್ಪಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು. ಸಾಮಾನ್ಯವಾಗಿ ಭಕ್ತರು ಬೇರೆ ದೇವಾಲಯಗಳಲ್ಲಿ ಹೊರೆ ಕಾಣಿಕೆ ಮತ್ತು ಬಲಿವಾಡುವನ್ನು ತಮ್ಮಿಚ್ಛೆಯಂತೆ ಸಮರ್ಪಿಸುತ್ತಾರೆ. ಆದರೆ ಜಲದುರ್ಗದೇವಿಯ ದೇವಾಲಯದಲ್ಲಿ ಅದಕ್ಕೆಂದೇ ಒಂದು ಧಾರ್ಮಿಕ ಚೌಕಟ್ಟಿದೆ. ನವರಾತ್ರಿ ಸಮಯದಲ್ಲಿ ಪ್ರತಿ ಮನೆಯಿಂದ ಒಂದು ಕಾಯಿ, ಒಂದು ಸೇರು ಬೆಳ್ತಿಗೆ ಅಕ್ಕಿ, ಶುದ್ಧವಾದ ಎಳ್ಳೆಣ್ಣೆ, ಒಂದು ಎಳನೀರು, ಎಲೆ ಅಡಿಕೆ ಮತ್ತು 101 ರೂಪಾಯಿಯನ್ನು ತರುತ್ತಾರೆ. ಅವುಗಳನ್ನು ದೇವಾಲಯದ ಸುತ್ತು ಪೌಳಿಯ ಒಂದು ಭಾಗದಲ್ಲಿ ಬಲಿವಾಡು ಅರ್ಪಣೆಗೆಂದು ನವರಾತ್ರಿಯ ಮೊದಲ ದಿನವೇ ಹುಂಡಿಗೆ ಅರ್ಪಣೆ ಮಾಡಲಾಗುತ್ತದೆ. ಈ ದೇವಾಲಯದಲ್ಲಿ ಎಲ್ಲೆಡೆಯಂತೆ ಪ್ರತಿವರ್ಷ ಹತ್ತು ದಿನಗಳ ಕಾಲ ನವರಾತ್ರಿ ಉತ್ಸವ ಆಚರಿಸಲ್ಪಡುತ್ತದೆ. ಆದರೆ ನಾಲ್ಕು ವರ್ಷಗಳಿಗೊಮ್ಮೆ ಹನ್ನೊಂದು ದಿನಗಳ ಕಾಲ ಆಚರಣೆ ನಡೆಸುವುದು ಇಲ್ಲಿನ ವಿಶೇಷ. ಪೊಳಲಿ ರಾಜರಾಜೇಶ್ವರಿ ದೇವಾಲಯದಲ್ಲಿ ನವರಾತ್ರಿಯ ಮೊದಲ ದಿನ ಭಕ್ತರಿಂದ ಹರಕೆಯ ಚಂಡಿಕಾ ಹೋಮ ರಾತ್ರಿ ಸಮಯದಲ್ಲಿ ನೆರವೇರಿತು. ಸಂಜೆಯ ಹೊತ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ತಾಳಮದ್ದಳೆ ಜರುಗಿತು.
ಉಡುಪಿಯಲ್ಲಿ ವಿಶೇಷ ದಸರಾ..!
ಉಡುಪಿಯ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಾಲಯದಲ್ಲಿ ಗಣ್ಯರಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು. ವಿಶೇಷವೆಂಬಂತೆ ಮೊದಲ ಬಾರಿಗೆ ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ‘ಉಡುಪಿ ದಸರಾ’ ಆರಂಭಗೊಂಡಿದೆ. ಇದಕ್ಕೆ ಉಡುಪಿಮಠದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂಂದ್ರ ತೀರ್ಥ ಶ್ರೀಪಾದರಿಂದ ಚಾಲನೆ ನೀಡಿದರು. ಕೊಲ್ಲೂರು ಶ್ರೀಮೂಕಾಂಬಿಕೆ ದೇವಾಲಯದಲ್ಲಿ ಪ್ರಮುಖ ಅರ್ಚಕರಾದ ನಿತ್ಯಾನಂದ ಅಡಿಗರು ಗಣಪತಿ ಪೂಜೆಯನ್ನು ನೆರವೇರಿಸುವ ಮೂಲಕ ನವರಾತ್ರಿ ಉತ್ಸವದ ಪೂಜೆಗೆ ನಾಂದಿ ಹಾಡಿದರು. ದೇಗುಲದ ವ್ಯವಸ್ಥಾಪಕ ಸಮಿತಿಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಶೆಟ್ಟಿ ಅವರು ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ಅಧ್ಯಕ್ಷರಾದ ಬಾಬು ಶೆಟ್ಟಿ ಅವರು ಭರತನಾಟ್ಯ, ಕೂಚುಪುಡಿ, ಭಕ್ತಿ ಗೀತೆ, ಶಾಸ್ತ್ರೀಯ ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮಹಾನವಮಿಯಂದು ಬೆಳಿಗ್ಗೆ 11:30ಕ್ಕೆ ಚಂಡಿಕಾ ಯಾಗ ಹಾಗೂ 1:15ಕ್ಕೆ ರಥೋತ್ಸವ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯು ತಿಳಿಸಿದೆ.








