ಕರಾವಳಿಯಲ್ಲಿ ಅದ್ದೂರಿ ದಸರಾಗೆ ತೆರೆ!
– ಕುದ್ರೋಳಿ, ಉಚ್ಚಿಲ ಸೇರಿ ಎಲ್ಲೆಡೆ ಹಬ್ಬದ ವಾತಾವರಣ
– ಪ್ರತಿ ತಾಲೂಕಲ್ಲೂ ವಿಜಯ ದಶಮಿ ಸಡಗರ
– ಹುಲಿ ವೇಷ, ವಿವಿಧ ಕಲಾ ತಂಡಗಳ ಮೆರವಣಿಗೆ
ವಿಶೇಷ ವರದಿ: ರಚನಾ ಕಾಮತ್
NAMMUR EXPRESS NEWS
ಉಡುಪಿ/ ಮಂಗಳೂರು: ದಸರಾಗೆ ಗುರುವಾರದಂದು ತೆರೆ ಬಿದ್ದಿದ್ದು, ನಾಡಹಬ್ಬವನ್ನು ರಾಜ್ಯದ್ಯಂತ ವೈಭವಯುತವಾಗಿ ಆಚರಿಸಲಾಯಿತು. ಹಾಗೆಯೇ ದೇವರ ನಾಡು ಕರಾವಳಿಯಲ್ಲೂ ದಸರಾವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಭವ್ಯ ಮೆರವಣಿಗೆಯಲ್ಲಿ ಭಕ್ತಿ ಮತ್ತು ಸಂಭ್ರಮದ ಭಾವಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕೇಂದ್ರದ ಮಾಜಿ ಸಚಿವರಾದ ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ನಡೆದ, ದಸರಾ ಪ್ರಯುಕ್ತ ನಡೆದ ಈ ಮೆರವಣಿಗೆಯಲ್ಲಿ ಪೂಜಿಸಲ್ಪಟ್ಟ ಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಗಳನ್ನು ನಗರದ ಜನರು ಕಣ್ತುಂಬಿಕೊಂಡರು. ಗೋಕರ್ಣನಾಥೇಶ್ವರ ದೇವಾಲಯದಿಂದ ಹೊರಟ ಮೆರವಣಿಗೆಯು, ಲೇಡಿ ಹಿಲ್, ಹಂಪನಕಟ್ಟೆ, ಗಣಪತಿ ಪ್ರೌಢಶಾಲೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಸಂಚರಿಸಿ ಶ್ರೀಕ್ಷೇತ್ರವನ್ನು ತಲುಪಿತು. ಸುಮಾರು ಒಂಭತ್ತು ಕಿಲೋಮೀಟರ್ ನಷ್ಟು ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಲಂಕೃತ ಕೊಡೆಗಳು, ವಿವಿಧ ಜಾನಪದ ಕಲಾತಂಡಗಳು, ಭಜನಾ ತಂಡ, ದೇಶದ ಪರಂಪರೆಯನ್ನು ಬಿಂಬಿಸುವ ಟ್ಯಾಬ್ಲೋಗಳು, ಕರಾವಳಿಯ ಪ್ರಮುಖ ಕಲೆ ಹುಲಿವೇಷದ ತಂಡ ಮೊದಲಾದವುಗಳು ನಗರದ ಜನರ ಕಣ್ಮನ ಸೆಳೆಯಿತು. ಇದಕ್ಕೂ ಮೊದಲು ಕುದ್ರೋಳಿಯ ಶ್ರೀಶಾರದಾ ದೇವಿಯ ಸನ್ನಿಧಾನದಲ್ಲಿ ಸೇವಾಕಾರ್ಯಕರ್ತರಿಗೆ ಕ್ಷೇತ್ರದ ಪರವಾಗಿ ಗೌರವವನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಕುದ್ರೋಳಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್, ಸೋಮಸುಂದರಂ, ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್, ಕಾರ್ಯದರ್ಶಿಗಳಾದ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಪೂಜಾರಿ ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಉಡುಪಿಯಲ್ಲೂ ವಿಜೃಭಣೆಯಿಂದ ನಡೆಯಿತು ದಸರಾ
ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ, ಉಡುಪಿ ಜಿಲ್ಲೆಯ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಾಲಯದಲ್ಲಿ ನಾಲ್ಕನೇ ವರ್ಷದ ದಸರಾ ಆಚರಣೆಯು ವೈಭವಯುತವಾಗಿ ಜರುಗಿತು. ಉಡುಪಿ-ಉಚ್ಚಿಲ ದಸರಾದ ರೂವಾರಿ ಜಿ.ಶಂಕರ್ ಅವರ ನೇತೃತ್ವದಲ್ಲಿ, ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿದ ಬಳಿಕ, ದೇವಾಲಯದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಅವರು ಮಂಗಳಾರತಿಯನ್ನು ಬೆಳಗಿ, ಶಾರದಾ ಮಾತೆಯ ವಿಗ್ರಹವನ್ನು ಸೇರಿದಂತೆ, ನವದುರ್ಗೆಯರ ವಿಗ್ರಹಗಳನ್ನು ಟ್ಯಾಬ್ಲೋ ವಾಹನಕ್ಕೆ ಸ್ಥಳಾಂತರಿಸಲಾಯಿತು. ಮಹಾಲಕ್ಷ್ಮೀಯನ್ನು ಹೊತ್ತ ಆನೆಗೆ ದಸರಾ ರೂವಾರಿಗಳಾದ ಜಿ. ಶಂಕರ್ ಮತ್ತು ಶಾಲಿನಿ ದಂಪತಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ರಥಬೀದಿಯ ಮಾರ್ಗವಾಗಿ ದೇವಾಲಯವನ್ನು ಪ್ರದಕ್ಷಿಣೆ ಹಾಕಿದ ಬಳಿಕ, ನಗರದ ತುಂಬಾ ಮೆರವಣಿಗೆ ನಡೆಯಿತು. ಬಳಿಕ ರಾಜಗೋಪುರದ ಬಳಿಗೆ ವಿಗ್ರಹಗಳನ್ನು ತರಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಗಪೂರ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷರಾದ ಗಿರಿಧರ ಸುವರ್ಣ, ದಸರಾ ಸಮಿತಿಯ ಅಧ್ಯಕ್ಷರಾದ ವಿನಯ್ ಕರ್ಕೇರ ಮೊದಲಾದವರು ಪಾಲ್ಗೊಂಡಿದ್ದರು. ಐವತ್ತಕ್ಕೂ ಹೆಚ್ಚು ಟ್ಯಾಬ್ಲೋಗಳು, ಹದಿನೈದಕ್ಕೂ ಹೆಚ್ಚು ಕುಣಿತ ಭಜನಾ ತಂಡಗಳು, ವಾದ್ಯ ಬ್ಯಾಂಡ್, ಕೊಂಬು ಕಹಳೆ ತಂಡಗಳು ಮೆರವಣಿಗೆಯ ರಂಗನ್ನು ಹೆಚ್ಚಿಸಿತು. ಬಳಿಕ ಶಾರದಾಮಾತೆಯ ವಿಗ್ರಹ ಮತ್ತು ನವದುರ್ಗೆಯರ ವಿಗ್ರಹಗಳನ್ನು ಕಾಪು ಕಡಲ ತಡಿಗೆ ತೆಗೆದುಕೊಂಡು ಹೋಗಿ, ಜಲಸ್ತಂಭನ ಮಾಡಲಾಯಿತು. ಸಂಜೆ ಹೊರಟ ಮೆರವಣಿಗೆಗೆ, ವಿಗ್ರಹಗಳ ಜಲಸ್ತಂಭನದ ಮೂಲಕ ಮಧ್ಯರಾತ್ರಿ ತೆರೆ ಬಿದ್ದಿತು.








