ಫ್ಯಾಷನ್ ಜಗತ್ತಲ್ಲಿ ಕರಾವಳಿಯ ನಿಶಾಲಿ ಉಮೇಶ್ ಕುಂದರ್
– 2025ನೇ ಸಾಲಿನ ‘ಮಿಸ್ ಇಂಡಿಯಾ ಪ್ರೈಡ್ ಆಫ್ ಇಂಡಿಯಾ’ ಗೆಲುವು
– ಉದ್ಯಮಿ ಉಮೇಶ್ ಕುಂದರ್ ಪುತ್ರಿ ಸಾಧನೆ
NAMMUR EXPRESS
ಉಡುಪಿ ಜಿಲ್ಲೆ ಕುಂದಾಪುರ ಮೂಲದ ನಿಶಾಲಿ ಉಮೇಶ್ ಕುಂದರ್ ಅವರು 2025ನೇ ಸಾಲಿನ ‘ಮಿಸ್ ಇಂಡಿಯಾ ಪ್ರೈಡ್ ಆಫ್ ಇಂಡಿಯಾ’ ಎಂಬ ಹೆಸರಿನ ಕಿರೀಟವನ್ನು ತನ್ನ ಶಿರದಲಿ ಧರಿಸುವ ಮೂಲಕ, ಕರ್ನಾಟಕಕ್ಕೆ ಕೀರ್ತಿಯನ್ನು ತಂದಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬರೆಕಟ್ಟು ಎಂಬ ಸಣ್ಣ ಊರಿನವರಾದ ನಿಶಾಲಿ ಅವರು, ಕಳೆದ ಆರು ತಿಂಗಳಿನಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದು, ಭಾಗವಹಿಸಿದ 44 ಮಂದಿ ಸ್ಪರ್ಧಿಗಳನ್ನು ಹಿಂದಿಕ್ಕಿ ಜಯಶಾಲಿಯಾಗಿದ್ದಾರೆ. ಅಲ್ಲದೆ ಟ್ಯಾಲೆಂಟ್ ಎನ್ನುವ ವಿಶೇಷ ಸುತ್ತಿನಲ್ಲಿ ಕರಾವಳಿ ಭಾಗದ ಮತ್ತು ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಪ್ರದರ್ಶಿಸುವ ಮೂಲಕ ತೀರ್ಪುಗಾರರ ಮತ್ತು ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.
ದೆಹಲಿಯ ಪ್ರತಿಷ್ಠಿತ ಡಿ.ಕೆ ಪೆಜೆನ್ಟ್ ಸಂಸ್ಥೆಯಿಂದ ಆಯೋಜಿಸಿರುವ ಈ ಸ್ಪರ್ಧೆಯನ್ನು, ಸೋಮವಾರದಂದು ದೆಹಲಿಯ ರಾಡಿಸನ್ ಬ್ಲೂ ಹೊಟೇಲ್ ನಲ್ಲಿ ನಡೆಸಲಾಯಿತು. ನಜ್ಮಿ ಸಯೀದ್ ಮತ್ತು ಡಾ. ಜಿಮ್ಮಿ ಗರಿಮಾ ಅವರಿಂದ ನಿಶಾಲಿ ಕುಂದರ್ ಅವರು ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು.
ಬೆಂಗಳೂರಿನ ಶ್ರೀನಿಧಿ ಕಾರ್ಪೊರೇಷನ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಉಮೇಶ್ ಕುಂದರ್ ಮತ್ತು ಜಾನಕಿ ಅವರ ಮಗಳಾದ ನಿಶಾಲಿ ಅವರು, ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ.
ಈಕೆಯ ಸಾಧನೆಗೆ ಶುಭಾಶಯಗಳು.








